
ಎಐ ಮಾನವನ ವಿವೇಚನೆಗೆ ಪೂರಕವಾಗಬೇಕೇ ವಿನಃ ಪರ್ಯಾಯವಾಗಬಾರದು: ಸೌಮ್ಯ ಸ್ವಾಮಿನಾಥನ್
ಜನರ ಜೀವನಮಟ್ಟ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಸುಭದ್ರತೆ, ಪರಿಸರ ಸಂರಕ್ಷಣೆ ಮತ್ತು ಸಮಾಜದಲ್ಲಿ ಎಲ್ಲ ವರ್ಗಗಳಿಗೂ ಸಿಗುವ ಸಮಾನ ಅವಕಾಶಗಳ ಆಧಾರದ ಮೇಲೆ ನೈಜ ಅಭಿವೃದ್ಧಿಯನ್ನು ಅಳೆಯಬೇಕಿದೆ.
“ಕೃತಕ ಬುದ್ಧಿಮತ್ತೆ (ಎಐ) ಸೇರಿದಂತೆ ಆಧುನಿಕ ತಂತ್ರಜ್ಞಾನಗಳು ಎಷ್ಟೇ ವೇಗವಾಗಿ ಬೆಳೆದರೂ, ಅವು ಮಾನವನ ಸಾಮರ್ಥ್ಯವನ್ನು ವೃದ್ಧಿಸುವ ಸಾಧನಗಳಾಗಬೇಕೇ ಹೊರತು, ಮಾನವನ ವಿವೇಚನೆ, ನೈತಿಕ ಪ್ರಜ್ಞೆ ಮತ್ತು ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಆಪೋಶನ ತೆಗೆದುಕೊಳ್ಳಬಾರದು. ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರತಿಯೊಂದು ಹೊಸ ಆವಿಷ್ಕಾರವೂ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಲ್ಯಾಣ, ಸಮಾನತೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಕೇಂದ್ರವಾಗಿಟ್ಟುಕೊಂಡಿರಬೇಕು” ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ಮಾಜಿ ಮುಖ್ಯ ವಿಜ್ಞಾನಿ ಹಾಗೂ ಐಸಿಎಂಆರ್ ಮಾಜಿ ಮಹಾನಿರ್ದೇಶಕಿ ಡಾ. ಸೌಮ್ಯ ಸ್ವಾಮಿನಾಥನ್ ಸ್ಪಷ್ಟಪಡಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸಮೀಪದ ಕೆಐಎಡಿಬಿ ಏರೋಸ್ಪೇಸ್ ಕೈಗಾರಿಕಾ ವಲಯದಲ್ಲಿರುವ ಚಾಣಕ್ಯ ವಿಶ್ವವಿದ್ಯಾಲಯದ ಜಾಗತಿಕ ಕ್ಯಾಂಪಸ್ನಲ್ಲಿ ಆಯೋಜಿಸಲಾಗಿದ್ದ ಮೂರನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಘಟಿಕೋತ್ಸವ ಭಾಷಣ ಮಾಡಿದರು. ದೇಶದ ಪ್ರಗತಿ ಮತ್ತು ಅಭಿವೃದ್ಧಿಯ ಮಾಪನಗಳ ಕುರಿತು ಗಂಭೀರವಾಗಿ ಮಾತನಾಡಿದ ಡಾ. ಸೌಮ್ಯ ಸ್ವಾಮಿನಾಥನ್, “ಇಂದಿನ ಜಗತ್ತಿನಲ್ಲಿ ಅಭಿವೃದ್ಧಿಯನ್ನು ಕೇವಲ ಆರ್ಥಿಕ ಅಂಕಿ-ಅಂಶಗಳು, ಜಿಡಿಪಿ ಬೆಳವಣಿಗೆ ಅಥವಾ ತಾಂತ್ರಿಕ ಆವಿಷ್ಕಾರಗಳ ಮೂಲಕ ಮಾತ್ರವೇ ಅಳೆಯುವುದು ಸರಿಯಾದ ಕ್ರಮವಲ್ಲ. ಜನರ ನಿಜವಾದ ಜೀವನಮಟ್ಟ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಸುಭದ್ರತೆ, ಪರಿಸರ ಸಂರಕ್ಷಣೆ ಮತ್ತು ಸಮಾಜದಲ್ಲಿ ಎಲ್ಲ ವರ್ಗಗಳಿಗೂ ಸಿಗುವ ಸಮಾನ ಅವಕಾಶಗಳ ಆಧಾರದ ಮೇಲೆ ನೈಜ ಅಭಿವೃದ್ಧಿಯನ್ನು ಅಳೆಯಬೇಕಿದೆ” ಎಂದು ಅಭಿಪ್ರಾಯಪಟ್ಟರು.
“ನಾವು ಇಂದು ಜಾಗತಿಕ ಹವಾಮಾನ ಬಿಕ್ಕಟ್ಟು ಮತ್ತು ಪ್ರಕೃತಿಯ ಅವನತಿಯ ಕಾಲಘಟ್ಟದಲ್ಲಿದ್ದೇವೆ. ಇಂತಹ ಸಂದರ್ಭದಲ್ಲಿ ಮಣ್ಣಿನ ಸತ್ವ, ನೀರಿನ ಶುದ್ಧತೆ, ಅರಣ್ಯ ಸಂಪತ್ತು ಮತ್ತು ಜೀವವೈವಿಧ್ಯದ ಸಂರಕ್ಷಣೆಗೆ ಗರಿಷ್ಠ ಆದ್ಯತೆ ನೀಡುವ ‘ಗ್ರೀನ್ ಜಿಡಿಪಿ’ ಹಾಗೂ ಪರಿಸರ ಆರ್ಥಿಕ ಲೆಕ್ಕಪತ್ರ ವ್ಯವಸ್ಥೆಯನ್ನು ನೀತಿ ನಿರೂಪಣೆಯಲ್ಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯ. ಮಾನವನ ಆರೋಗ್ಯ, ಪ್ರಾಣಿ ಸಂಕುಲದ ಆರೋಗ್ಯ ಮತ್ತು ಪರಿಸರದ ಸಮತೋಲನ ಒಂದಕ್ಕೊಂದು ತಳುಕುಹಾಕಿಕೊಂಡಿವೆ ಎಂಬುದನ್ನು ಸಾರುವ ‘ಒನ್ ಹೆಲ್ತ್’ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತರಬೇಕಿದೆ” ಎಂದು ಅವರು ಕರೆ ನೀಡಿದರು.
ವಿಜ್ಞಾನದ ಮೇಲಿನ ಜನಸಾಮಾನ್ಯರ ವಿಶ್ವಾಸ ಪುನರ್ ಸ್ಥಾಪನೆಯಾಗಲಿ
ಕೋವಿಡ್-19 ಸಾಂಕ್ರಾಮಿಕ ರೋಗದ ಬಿಕ್ಕಟ್ಟಿನ ದಿನಗಳನ್ನು ಸ್ಮರಿಸಿದ ಅವರು, “ಸಾಂಕ್ರಾಮಿಕದ ಕಠಿಣ ಸಂದರ್ಭದಲ್ಲಿ ಭಾರತವು ಅತ್ಯಂತ ಕ್ಷಿಪ್ರವಾಗಿ ಲಸಿಕೆಗಳನ್ನು ಅಭಿವೃದ್ಧಿಪಡಿಸಿ, ಕೈಗೆಟುಕುವ ದರದಲ್ಲಿ ಜಗತ್ತಿಗೆ ಔಷಧಗಳನ್ನು ಒದಗಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಅಗ್ರಪಾತ್ರ ವಹಿಸಿತು. ಇದು ಭಾರತೀಯ ವೈಜ್ಞಾನಿಕ ಸಮುದಾಯದ ಹೆಮ್ಮೆಯ ಸಾಧನೆ. ಆದರೆ, ಇತ್ತೀಚಿನ ದಿನಗಳಲ್ಲಿ ವಿಜ್ಞಾನ ಮತ್ತು ಸಂಶೋಧನೆಗಳ ಮೇಲಿನ ಜನರ ನಂಬಿಕೆ ಹಾಗೂ ವಿಶ್ವಾಸ ಕ್ಷೀಣಿಸುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ವೈಜ್ಞಾನಿಕ ಸಂಶೋಧನೆಗಳಲ್ಲಿ ಅತ್ಯುನ್ನತ ಮಟ್ಟದ ಪಾರದರ್ಶಕತೆ ಇರಬೇಕು. ವಿಜ್ಞಾನವು ಕೇವಲ ಪ್ರಯೋಗಾಲಯಗಳಿಗೆ ಸೀಮಿತವಾಗದೆ, ಅದರ ಸವಲತ್ತುಗಳು ಸಮಾಜದ ದುರ್ಬಲ ವರ್ಗಗಳಿಗೂ ಸುಲಭವಾಗಿ ತಲುಪಿದಾಗ ಮಾತ್ರ ಜನರಲ್ಲಿ ವಿಜ್ಞಾನದ ಬಗೆಗಿನ ನಂಬಿಕೆ ಇಮ್ಮಡಿಯಾಗುತ್ತದೆ” ಎಂದರು.
“ನಮ್ಮ ಪೂರ್ವಜರ ಸಾಂಪ್ರದಾಯಿಕ ಜ್ಞಾನ ಮತ್ತು ಪದ್ಧತಿಗಳನ್ನು ಆಧುನಿಕ ವೈಜ್ಞಾನಿಕ ಒರೆಗಲ್ಲಿಗೆ ಹಚ್ಚಿ ಪರೀಕ್ಷಿಸಬೇಕು. ಅವುಗಳಲ್ಲಿರುವ ಉಪಯುಕ್ತ ಹಾಗೂ ಪರಿಣಾಮಕಾರಿ ಅಂಶಗಳನ್ನು ಗುರುತಿಸಿ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಕೆಲಸವಾಗಬೇಕು. ಹವಾಮಾನ ಬದಲಾವಣೆ, ಸಾಂಕ್ರಾಮಿಕಗಳು ಹಾಗೂ ಆಹಾರ ಭದ್ರತೆಯಂತಹ ಸಂಕೀರ್ಣ ಸವಾಲುಗಳನ್ನು ಎದುರಿಸಲು ವಿವಿಧ ವಿಭಾಗಗಳ ನಡುವಿನ ‘ಅಂತರಶಿಸ್ತೀಯ’ ಸಂಶೋಧನೆಗಳು ಅನಿವಾರ್ಯ” ಎಂದು ಪ್ರತಿಪಾದಿಸಿದರು.
ಕೃಷಿಯಲ್ಲಿ ಮಹಿಳೆಯರ ಪಾತ್ರ ಮತ್ತು ತಂತ್ರಜ್ಞಾನದ ನೈತಿಕತೆ
ಗ್ರಾಮೀಣ ಆರ್ಥಿಕತೆಯಲ್ಲಿ ಮಹಿಳೆಯರ ಪಾತ್ರವನ್ನು ಪ್ರಸ್ತಾಪಿಸಿದ ಡಾ. ಸ್ವಾಮಿನಾಥನ್, “ದೇಶದ ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಕೊಡುಗೆ ಅಪಾರವಾಗಿದ್ದರೂ, ಅವರಿಗೆ ಸಿಗಬೇಕಾದ ಸಾಮಾಜಿಕ ಮತ್ತು ಆರ್ಥಿಕ ಮಾನ್ಯತೆ ದೊರೆಯುತ್ತಿಲ್ಲ. ಮಹಿಳಾ ರೈತರಿಗೆ ಭೂಮಿಯ ಮೇಲಿನ ಕಾನೂನುಬದ್ಧ ಹಕ್ಕು, ಸಾಲ ಸೌಲಭ್ಯಗಳು, ಆರ್ಥಿಕ ಸಬಲೀಕರಣ ಮತ್ತು ಸರ್ಕಾರದ ಯೋಜನೆಗಳ ನೇರ ಪ್ರಯೋಜನಗಳು ಸಿಗುವಂತಾಗಬೇಕು” ಎಂದು ಒತ್ತಿ ಹೇಳಿದರು. ಇದೇ ಸಂದರ್ಭದಲ್ಲಿ ಕೃತಕ ಬುದ್ಧಿಮತ್ತೆಯ ನೈತಿಕ ಆಯಾಮಗಳ ಬಗ್ಗೆ ಎಚ್ಚರಿಸಿದ ಅವರು, “ದತ್ತಾಂಶದ ಗೌಪ್ಯತೆ, ಅಲ್ಗಾರಿದಮ್ಗಳಲ್ಲಿ ಅಡಗಿರುವ ಪೂರ್ವಗ್ರಹಗಳು, ಉದ್ಯೋಗ ನಷ್ಟದ ಭೀತಿ ಮತ್ತು ಡಿಜಿಟಲ್ ಕಂದಕವನ್ನು ತಡೆಯಲು ಸ್ಪಷ್ಟವಾದ ನೈತಿಕ ನೀತಿ-ನಿಯಮಾವಳಿಗಳು ಬೇಕು. ಎಐ ನಿಯಂತ್ರಣದ ಹೊಣೆಗಾರಿಕೆಯನ್ನು ಕೇವಲ ತಂತ್ರಜ್ಞರಿಗೆ ಮಾತ್ರ ಬಿಡದೆ, ಸಮಾಜ ವಿಜ್ಞಾನಿಗಳು, ತತ್ವಜ್ಞಾನಿಗಳು, ಕಾನೂನು ತಜ್ಞರು ಮತ್ತು ನೀತಿ ನಿರೂಪಕರನ್ನು ಒಳಗೊಂಡ ಸಮಗ್ರ ಸಮಿತಿಯು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು” ಎಂದು ಸಲಹೆ ನೀಡಿದರು.
2047ರ ‘ವಿಕಸಿತ ಭಾರತ’ದ ಕನಸು ಮತ್ತು ಪದವೀಧರರಿಗೆ ಸಂದೇಶ
“ವಿಶ್ವವಿದ್ಯಾಲಯದಿಂದ ಹೊರಬರುತ್ತಿರುವ ಪದವೀಧರರು ತಮ್ಮಲ್ಲಿ ಸದಾ ಬೌದ್ಧಿಕ ಕುತೂಹಲ, ಸತ್ಯವನ್ನು ಅನ್ವೇಷಿಸುವ ಪ್ರಶ್ನಿಸುವ ಮನೋಭಾವ ಮತ್ತು ನಿರಂತರ ಕಲಿಯುವ ಹಂಬಲವನ್ನು ಜೀವಂತವಾಗಿರಿಸಿಕೊಳ್ಳಬೇಕು. ವೈಯಕ್ತಿಕ ವೃತ್ತಿಜೀವನದ ಮಹತ್ವಾಕಾಂಕ್ಷೆಯ ಜೊತೆಗೆ ಸಮಾಜದ ಬಗ್ಗೆ ಕರುಣೆ, ಸಹಾನುಭೂತಿ ಮತ್ತು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. 2047ರ ಹೊತ್ತಿಗೆ ನಾವು ಕಟ್ಟಬಯಸುವ ‘ವಿಕಸಿತ ಭಾರತ’ ಎಂದರೆ ಅದು ಕೇವಲ ಹಲವು ಟ್ರಿಲಿಯನ್ ಡಾಲರ್ ಆರ್ಥಿಕತೆಯಷ್ಟೇ ಅಲ್ಲ; ಅದು ಪ್ರತಿಯೊಬ್ಬ ಪ್ರಜೆಯೂ ಆರೋಗ್ಯವಂತನಾಗಿರುವ, ಸರ್ವರನ್ನೂ ಒಳಗೊಳ್ಳುವ, ಜ್ಞಾನಾಧಾರಿತ ಮತ್ತು ಪರಿಸರ ಸುಸ್ಥಿರತೆಯನ್ನು ಮೈಗೂಡಿಸಿಕೊಂಡ ಸಮೃದ್ಧ ಸಮಾಜವಾಗಿರಬೇಕು” ಎಂದು ಕರೆ ನೀಡಿದರು.
371 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಇಸ್ರೊ ಮಾಜಿ ಅಧ್ಯಕ್ಷ ಡಾ. ಎಸ್. ಸೋಮನಾಥ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. “ಚಾಣಕ್ಯ ವಿಶ್ವವಿದ್ಯಾಲಯವು ಸಮಗ್ರ ಹಾಗೂ ಮೌಲ್ಯಾಧಾರಿತ ಶಿಕ್ಷಣಕ್ಕೆ ಮುನ್ನುಡಿ ಬರೆದಿದೆ. ಇಂದಿನ 3ನೇ ಘಟಿಕೋತ್ಸವದಲ್ಲಿ ಆರು ಶೈಕ್ಷಣಿಕ ಶ್ರೇಷ್ಠತಾ ಶಾಲೆಗಳ ಒಟ್ಟು 371 ವಿದ್ಯಾರ್ಥಿಗಳಿಗೆ ಪದವಿ ಮತ್ತು ಡಿಪ್ಲೊಮಾಗಳನ್ನು ಪ್ರದಾನ ಮಾಡಲಾಗಿದೆ. ವಿವಿಧ ವಿಭಾಗಗಳಲ್ಲಿ ಅಪ್ರತಿಮ ಸಾಧನೆ ತೋರಿದ 19 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ಶೈಕ್ಷಣಿಕ ಶ್ರೇಷ್ಠತಾ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ” ಎಂದು ತಿಳಿಸಿದರು.
“ಪ್ರಸ್ತುತ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಸಂಖ್ಯೆ 3,000ಕ್ಕೆ ಏರಿಕೆಯಾಗಿದ್ದು, ದೇಶದ 28 ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿರುವುದು ಇದರ ಶೈಕ್ಷಣಿಕ ವೈವಿಧ್ಯತೆಗೆ ಸಾಕ್ಷಿ. ಬಡತನ ಅಥವಾ ಆರ್ಥಿಕ ಅಡಚಣೆಯ ಕಾರಣಕ್ಕಾಗಿ ಯಾವುದೇ ಒಬ್ಬ ಅರ್ಹ ವಿದ್ಯಾರ್ಥಿಯೂ ಉನ್ನತ ಶಿಕ್ಷಣದಿಂದ ವಂಚಿತನಾಗಬಾರದು ಎಂಬ ದೃಢ ಸಂಕಲ್ಪದೊಂದಿಗೆ ವಿಶ್ವವಿದ್ಯಾಲಯವು ಉದಾರವಾಗಿ ವಿದ್ಯಾರ್ಥಿವೇತನ ಮತ್ತು ಆರ್ಥಿಕ ನೆರವು ನೀಡುತ್ತಿದೆ. ಬಾಹ್ಯಾಕಾಶ ಮತ್ತು ತಂತ್ರಜ್ಞಾನ ಶಿಕ್ಷಣಕ್ಕೆ ಬಲ ತುಂಬಲು ಕ್ಯಾಂಪಸ್ ಆವರಣದಲ್ಲೇ ಅತ್ಯಾಧುನಿಕ ಗ್ರೌಂಡ್ ಸ್ಟೇಷನ್ ಸ್ಥಾಪಿಸಲಾಗಿದೆ. ಏರೋಸ್ಪೇಸ್ ಉದ್ಯಮಗಳ ಸಾಮೀಪ್ಯವನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡಲಾಗುತ್ತಿದೆ. ಜತೆಗೆ, ಬೋಧನೆ ಮತ್ತು ಕಲಿಕಾ ಪ್ರಕ್ರಿಯೆಯನ್ನು ಜಾಗತಿಕ ಗುಣಮಟ್ಟಕ್ಕೇರಿಸಲು ವಿಶ್ವವಿದ್ಯಾಲಯವು ತನ್ನದೇ ಆದ ನೂತನ ಎಐ ನೀತಿಯನ್ನು ಜಾರಿಗೆ ತಂದಿದೆ ಎಂದು ಸೋಮನಾಥ್ ವಿವರಿಸಿದರು.

