
ಬೊಮ್ಮಸಂದ್ರ–ಜಿಗಣಿ ಲಿಂಕ್ ರಸ್ತೆಯ ದುಸ್ಥಿತಿಗೆ ಉದ್ಯಮಿ ಕಿರಣ್ ಮಜುಮ್ದಾರ್ ಶಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ರಸ್ತೆಗಳ ದುಸ್ಥಿತಿ ಬಗ್ಗೆ ಕಿರಣ್ ಮಜುಮ್ದಾರ್ ಶಾ ಆಕ್ರೋಶ
ಬಯೋಕಾನ್, ಸಿಪ್ಲಾ, ಮೈಕ್ರೋ ಲ್ಯಾಬ್ಸ್, ಎಚ್‌ಸಿಎಲ್ ಟೆಕ್ನಾಲಜೀಸ್ ಸೇರಿದಂತೆ ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳು ಈ ಮಾರ್ಗವನ್ನು ಅವಲಂಬಿಸಿವೆ. ಹೀಗಾಗಿ ರಸ್ತೆ ಹದಗೆಟ್ಟಿರುವುದು ಕೈಗಾರಿಕೆಗಳ ದೈನಂದಿನ ಕಾರ್ಯಾಚರಣೆಗೂ ತೊಂದರೆ ಉಂಟುಮಾಡುತ್ತಿದೆ.
ಬೆಂಗಳೂರು ಹೊರವಲಯದ ಬೊಮ್ಮಸಂದ್ರ–ಜಿಗಣಿ ಲಿಂಕ್ ರಸ್ತೆಯ ದುಸ್ಥಿತಿಗೆ ಉದ್ಯಮಿ ಕಿರಣ್ ಮಜುಮ್ದಾರ್ ಶಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾವಿರಾರು ಉದ್ಯೋಗಿಗಳು ಹಾಗೂ ನೂರಾರು ಕೈಗಾರಿಕೆಗಳು ಅವಲಂಬಿಸಿರುವ ಪ್ರಮುಖ ಸಂಪರ್ಕ ರಸ್ತೆಯಲ್ಲಿ ಮೂಲಸೌಕರ್ಯ ಹದಗೆಟ್ಟಿರುವುದನ್ನು ಎಕ್ಸ್ ಮೂಲಕ ಪ್ರಶ್ನಿಸಿರುವ ಅವರು, ರಸ್ತೆ ದುರಸ್ತಿ ಮತ್ತು ನಿರ್ವಹಣೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಬೊಮ್ಮಸಂದ್ರ ಮತ್ತು ಜಿಗಣಿ ಕೈಗಾರಿಕಾ ಪ್ರದೇಶಗಳನ್ನು ಸಂಪರ್ಕಿಸುವ ಸುಮಾರು 7 ಕಿ.ಮೀ. ಉದ್ದದ ಈ ರಸ್ತೆಯಲ್ಲಿ 350ಕ್ಕೂ ಹೆಚ್ಚು ಗುಂಡಿಗಳು ನಿರ್ಮಾಣವಾಗಿವೆ. ಬಯೋಕಾನ್, ಸಿಪ್ಲಾ, ಮೈಕ್ರೋ ಲ್ಯಾಬ್ಸ್, ಎಚ್‌ಸಿಎಲ್ ಟೆಕ್ನಾಲಜೀಸ್ ಸೇರಿದಂತೆ ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳು ಈ ಮಾರ್ಗವನ್ನು ಅವಲಂಬಿಸಿವೆ. ಹೀಗಾಗಿ ರಸ್ತೆ ಹದಗೆಟ್ಟಿರುವುದು ಕೈಗಾರಿಕೆಗಳ ದೈನಂದಿನ ಕಾರ್ಯಾಚರಣೆಗೂ ತೊಂದರೆ ಉಂಟುಮಾಡುತ್ತಿದೆ.
ವಾಹನ ಸವಾರರಿಗೆ ಹೆಚ್ಚಿದ ಅಪಾಯ
ರಸ್ತೆಯುದ್ದಕ್ಕೂ ಗುಂಡಿಗಳು ಕಾಣಿಸಿಕೊಂಡಿರುವುದರಿಂದ ವಾಹನ ಸವಾರರು ನಿಧಾನವಾಗಿ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಂಚಾರ ದಟ್ಟಣೆ ಹೆಚ್ಚುವುದರ ಜತೆಗೆ ಪ್ರಯಾಣದ ಸಮಯವೂ ವಿಸ್ತರಿಸುತ್ತಿದೆ. ರಸ್ತೆ ಅಪಘಾತಗಳ ಆತಂಕವೂ ಎದುರಾಗಿದೆ. ಮತ್ತೊಂದೆಡೆ, ಪಾದಚಾರಿಗಳಿಗೆ ಅನುಕೂಲವಾಗುವ ಫುಟ್‌ಪಾತ್ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ.
ಕೈಗಾರಿಕಾ ವಲಯಕ್ಕೆ ಮೂಲಸೌಕರ್ಯ ಕೊರತೆ
ಕೈಗಾರಿಕಾ ಚಟುವಟಿಕೆಗಳು ಹೆಚ್ಚಿರುವ ಪ್ರದೇಶದಲ್ಲಿ ಉತ್ತಮ ರಸ್ತೆ ಸಂಪರ್ಕ ಅತ್ಯಗತ್ಯ. ಆದರೆ ಹಲವು ವರ್ಷಗಳಿಂದ ರಸ್ತೆಯ ನಿರ್ವಹಣೆ ಸಮರ್ಪಕವಾಗಿ ನಡೆದಿಲ್ಲ ಎಂಬ ಆರೋಪ ಕೇಳಿಬಂದಿದೆ. ಪ್ರಮುಖ ಕೈಗಾರಿಕಾ ಕಾರಿಡಾರ್‌ನ ಸಂಪರ್ಕ ರಸ್ತೆಯನ್ನೇ ನಿರ್ಲಕ್ಷಿಸಿರುವುದು ಉದ್ಯಮಿಗಳು ಹಾಗೂ ಉದ್ಯೋಗಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಎಂ.ಬಿ. ಪಾಟೀಲ್‌ಗೆ ಮನವಿ
ರಸ್ತೆಯ ಸಮಸ್ಯೆಗೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕಿರಣ್ ಮಜುಮ್ದಾರ್ ಶಾ ಒತ್ತಾಯಿಸಿದ್ದಾರೆ. ಕೈಗಾರಿಕಾ ವಲಯದ ಸುಗಮ ಸಂಚಾರ, ಉದ್ಯೋಗಿಗಳ ಸುರಕ್ಷತೆ ಹಾಗೂ ಸಮಯ ಉಳಿತಾಯಕ್ಕಾಗಿ ರಸ್ತೆ ದುರಸ್ತಿ ಕಾಮಗಾರಿಯನ್ನು ತುರ್ತಾಗಿ ಕೈಗೆತ್ತಿಕೊಳ್ಳುವಂತೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರ ಗಮನಕ್ಕೆ ಅವರು ತಂದಿದ್ದಾರೆ.

