
40 ಕಿ.ಮೀಗೆ ಹಿಗ್ಗಿದ ಬಿಎಂಟಿಸಿ ಬಸ್ ಕಾರ್ಯಾಚರಣೆ; ಬೆಂಗಳೂರು ಹೊರಗೂ ಸಾರಿಗೆ ಸೌಲಭ್ಯ
ಪ್ರಸ್ತುತ, ಬಿಎಂಟಿಸಿಯಲ್ಲಿ ಎಲೆಕ್ಟ್ರಿಕ್ ವಾಹನಗಳು ಸೇರಿ ಒಟ್ಟು 6750 ಬಸ್‌ಗಳಿವೆ. ಪ್ರತಿದಿನ 45 ಲಕ್ಷ ಪ್ರಯಾಣಿಕರು ಬಿಎಂಟಿಸಿ ಸೇವೆಯನ್ನು ಅವಲಂಬಿಸಿದ್ದಾರೆ. ಒಂದು ದಿನಕ್ಕೆ ಬರೋಬ್ಬರಿ ಬಿಎಂಟಿಸಿ ಬಸ್‌ಗಳು ಅಂದಾಜು 13 ಲಕ್ಷ ಕಿ.ಮೀ. ಸಂಚರಿಸುತ್ತಿವೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ತನ್ನ ಕಾರ್ಯಾಚರಣೆ ವ್ಯಾಪ್ತಿಯನ್ನು ಅಧಿಕೃತವಾಗಿ 40 ಕಿ.ಮೀ.ವರೆಗೆ ವಿಸ್ತರಿಸಿದೆ. ಈ ಹಿಂದೆ ಬಿಎಂಟಿಸಿ ಸೇವೆಯು ಕೇವಲ 25 ಕಿ.ಮೀ ವರೆಗೆ ಮಾತ್ರ ಇತ್ತು. ಈಗ ಬೆಂಗಳೂರಿನ ಹೊರಗೂ ಸುಸ್ಥಿರ ಸಾರಿಗೆ ಸೌಲಭ್ಯ ಕಲ್ಪಿಸುವ ಸಲುವಾಗಿ ಬಿಎಂಟಿಸಿ ಬಸ್ಗಳ ಕಾರ್ಯಾಚರಣೆ ವ್ಯಾಪ್ತಿಯನ್ನು ಹಿಗ್ಗಿಸಲಾಗಿದೆ.
ಪ್ರಸ್ತುತ, ಬಿಎಂಟಿಸಿಯಲ್ಲಿ ಎಲೆಕ್ಟ್ರಿಕ್ ವಾಹನಗಳು ಸೇರಿ ಒಟ್ಟು 6750 ಬಸ್‌ಗಳಿವೆ. ಪ್ರತಿದಿನ 45 ಲಕ್ಷ ಪ್ರಯಾಣಿಕರು ಬಿಎಂಟಿಸಿ ಸೇವೆಯನ್ನು ಅವಲಂಬಿಸಿದ್ದಾರೆ. ಒಂದು ದಿನಕ್ಕೆ ಬರೋಬ್ಬರಿ ಬಿಎಂಟಿಸಿ ಬಸ್‌ಗಳು ಅಂದಾಜು 13 ಲಕ್ಷ ಕಿ.ಮೀ. ಸಂಚರಿಸುತ್ತಿವೆ. ಈಗ ಬೆಂಗಳೂರು ನಗರದ ವ್ಯಾಪ್ತಿ ಹಿಗ್ಗಿರುವುದರಿಂದ ಕಾರ್ಯಾಚರಣೆ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ. ಭವಿಷ್ಯದಲ್ಲಿ 80 ಕಿ.ಮೀ ವರೆಗೂ ವಿಸ್ತರಣೆಯಾಗುವ ಸಾಧ್ಯತೆ ಇದೆ ಬಿಎಂಟಿಸಿ ಮೂಲಗಳು ಹೇಳಿವೆ.
ಚನ್ನಪಟ್ಟಣಕ್ಕೂ ಬಿಎಂಟಿಸಿ ಸೇವೆ
ಬಿಎಂಟಿಸಿ ಬಸ್ ಸೇವೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣದವರೆಗೂ ವಿಸ್ತರಿಸಲಾಗಿದೆ. ಮೇ 8 ರಂದು ಬಿಎಂಟಿಸಿ ಬಸ್ ಸೇವೆಗೆ ಚಾಲನೆ ನೀಡಲಾಗಿದೆ. ಈ ಉಪಕ್ರಮದಿಂದ ಪ್ರತಿದಿನ ಬೆಂಗಳೂರಿಗೆ ಕೆಲಸ, ಶಿಕ್ಷಣ ಮತ್ತು ಇತರ ಅಗತ್ಯಗಳಿಗಾಗಿ ರಾಮನಗರ ಹಾಗೂ ಚನ್ನಪಟ್ಟಣದಿಂದ ಬರುವ ಸಾವಿರಾರು ಜನರಿಗೆ ಅನುಕೂಲ ಆಗಲಿದೆ. ಕೆಎಸ್ಆರ್ಟಿಸಿ ಬಸ್ಗಳ ಮೇಲಿನ ಒತ್ತಡವೂ ಕಡಿಮೆಯಾಗಲಿದೆ.
ಬಿಎಂಟಿಸಿ ಕಾರ್ಯಾಚರಣೆ ವಿಸ್ತರಣೆಯಿಂದಾಗಿ ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ, ರಾಮನಗರ, ಮಾಗಡಿ, ಮಳೂರು, ಚನ್ನಪಟ್ಟಣ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಬಸ್ಪೇಟೆ, ಸೋಲೂರು ಪಟ್ಟಣಕ್ಕೂ ಬಿಎಂಟಿಸಿ ಸೇವೆಯನ್ನು ಈಗ ವಿಸ್ತರಿಸಲಾಗಿದೆ.
ಪ್ರಸ್ತುತ, ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ರಾಮನಗರಕ್ಕೆ, ಬನಶಂಕರಿ ಬಸ್ ನಿಲ್ದಾಣದಿಂದ ಕನಕಪುರಕ್ಕೆ, ಮೆಜಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣದಿಂದ ನೆಲಮಂಗಲ, ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರಕ್ಕೆ ಬಸ್ಸುಗಳು ಸಂಚಾರ ಮಾಡುತ್ತಿವೆ. ಐಟಿ ಕಾರಿಡಾರ್, ವಸತಿ ಪ್ರದೇಶಗಳು, ವಾಣಿಜ್ಯ ಕೇಂದ್ರಗಳು ಮತ್ತು ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವಲ್ಲಿ ಬಿಎಂಟಿಸಿ ಬಸ್‌ಗಳು ಮಹತ್ವದ ಪಾತ್ರ ವಹಿಸುತ್ತಿವೆ.
ಹಬ್ಬ-ಹರಿದಿನ ಸಂದರ್ಭಗಳಲ್ಲಿ ಪ್ರಯಾಣಿಕ ದಟ್ಟಣೆ ನಿಯಂತ್ರಣ ಮಾಡುವ ಸಲುವಾಗಿ ಅಂತರ್ ಜಿಲ್ಲೆಗಳಿಗೂ ಬಿಎಂಟಿಸಿ ಬಸ್ ಸೇವೆ ಒದಗಿಸಲಾಗುತ್ತಿದೆ. ಇದರಿಂದ ದಟ್ಟಣೆ ಕಡಿಮೆಯಾಗುವುದಲ್ಲದೆ, ಪ್ರಯಾಣಿಕರಿಗೂ ಹೆಚ್ಚು ಅನುಕೂಲ ಆಗಲಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯು ಈಗ 700 ಚದರ ಕಿ.ಮೀ.ಗಿಂತಲೂ ಹೆಚ್ಚು ವಿಸ್ತರಿಸಿದೆ. ನಗರ ಯೋಜನೆ, ಸಾರಿಗೆ, ಭೂಮಿಯ ಬಳಕೆ ಮತ್ತು ನಾಗರಿಕ ಸೇವೆಗಳನ್ನು ಸಂಯೋಜಿಸಲು ಹೊರವಲಯದ ಗ್ರಾಮಗಳು ಮತ್ತು ಉಪನಗರಗಳನ್ನು ಜಿಬಿಎ ವ್ಯಾಪ್ತಿಗೆ ಸೇರಿಸಲಾಗಿದೆ.
ಭವಿಷ್ಯದಲ್ಲಿ ಮಾಲೂರಿಗೂ ಬಿಎಂಟಿಸಿ ಬಸ್?
ಮುಂದಿನ ದಿನಗಳಲ್ಲಿ ಬಿಎಂಟಿಸಿ ಬಸ್ ಸೇವೆಯನ್ನು ಕೋಲಾರ ಜಿಲ್ಲೆಯ ಮಾಲೂರು ಮತ್ತು ತಮಿಳುನಾಡು ಗಡಿಗೆ ಸಮೀಪವಿರುವ ಆನೇಕಲ್ನಿಂದ ಸುಮಾರು 10 ರಿಂದ 15 ಕಿ.ಮೀ.ವರೆಗೆ ವಿಸ್ತರಿಸಲು ಉದ್ದೇಶಿಸಲಾಗಿದೆ.
ಪ್ರಸ್ತುತ, 250 ಬಿಎಂಟಿಸಿ ಬಸ್‌ಗಳು ದೂರದ ಮತ್ತು ಎಕ್ಸ್‌ಪ್ರೆಸ್ ಮಾರ್ಗಗಳಲ್ಲೂ ಕಾರ್ಯಾಚರಣೆ ನಡೆಸುತ್ತಿವೆ. ಪಿಎಂ-ಇ-ಡ್ರೈವ್ ಯೋಜನೆಯಡಿ ಹೊಸದಾಗಿ 4,500 ಎಲೆಕ್ಟ್ರಿಕ್ ಬಸ್‌ಗಳನ್ನು ಸೇರ್ಪಡೆ ಮಾಡಲು ಉದ್ದೇಶಿಸಿದ್ದು, ಇದರಿಂದ ಬಿಎಂಟಿಸಿ ಬಸ್‌ಗಳ ಸಂಖ್ಯೆ 7 ಸಾವಿರದಿಂದ 10 ಸಾವಿರಕ್ಕೆ ಹೆಚ್ಚಲಿದೆ.

