
ಬಿಟ್‌ಕಾಯಿನ್ ಹಗರಣ; ವಿಚಾರಣೆಗೆ ಹಾಜರಾಗಲು ನಲಪಾಡ್‌ಗೆ ಇಡಿ ಸಮನ್ಸ್
ಕಳೆದ ಶುಕ್ರವಾರವೇ ವಿಚಾರಣೆಗೆ ಹಾಜರಾಗುವಂತೆ ಮೊಹಮ್ಮದ್ ನಲಪಾಡ್ ಅವರಿಗೆ ಇಡಿ ಸಮನ್ಸ್ ನೀಡಿತ್ತು. ಆದರೆ, ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆಗಳು ಹಾಗೂ ಪರಿಸ್ಥಿತಿಗಳನ್ನು ಪರಿಗಣಿಸಿ ಅಧಿಕಾರಿಗಳು ಅವರಿಗೆ ತಾತ್ಕಾಲಿಕ ವಿನಾಯ್ತಿ ನೀಡಿದ್ದರು.
ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಬಹುಕೋಟಿ ಬಿಟ್ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಯುವ ಮುಖಂಡ ಮೊಹಮ್ಮದ್ ನಲಪಾಡ್ ಅವರಿಗೆ ಜಾರಿ ನಿರ್ದೇಶನಾಲಯ ಬಿಗ್ ಶಾಕ್ ನೀಡಿದೆ. ಪ್ರಕರಣದ ತನಿಖೆ ತೀವ್ರಗೊಳಿಸಿರುವ ಇಡಿ ಅಧಿಕಾರಿಗಳು, ಸೋಮವಾರ (ಜೂ.1) ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿದ್ದಾರೆ.
ಕಳೆದ ಶುಕ್ರವಾರವೇ ವಿಚಾರಣೆಗೆ ಹಾಜರಾಗುವಂತೆ ಮೊಹಮ್ಮದ್ ನಲಪಾಡ್ ಅವರಿಗೆ ಇಡಿ ಸಮನ್ಸ್ ನೀಡಿತ್ತು. ಆದರೆ, ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆಗಳು ಹಾಗೂ ಪರಿಸ್ಥಿತಿಗಳನ್ನು ಪರಿಗಣಿಸಿ ಅಧಿಕಾರಿಗಳು ಅವರಿಗೆ ತಾತ್ಕಾಲಿಕ ವಿನಾಯ್ತಿ ನೀಡಿದ್ದರು. ಇದೀಗ ಸೋಮವಾರ ವಿಚಾರಣೆಗೆ ಹಾಜರಾಗಲೇಬೇಕಾದ ಅನಿವಾರ್ಯತೆ ನಲಪಾಡ್ ಗೆ ಎದುರಾಗಿದೆ.
21 ಗಂಟೆಗಳ ಕಾಲ ನಡೆದಿತ್ತು ಇಡಿ ದಾಳಿ
ಇತ್ತೀಚೆಗಷ್ಟೇ ಬೆಂಗಳೂರಿನ ಅಶೋಕನಗರದಲ್ಲಿರುವ ಮೊಹಮ್ಮದ್ ನಲಪಾಡ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಇಡಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದರು. ಕೇಂದ್ರ ಭದ್ರತಾ ಪಡೆಗಳ ಬಿಗಿ ಕಾವಲಿನಲ್ಲಿ ನಡೆದ ಈ ಶೋಧ ಕಾರ್ಯ ಸತತ 21 ಗಂಟೆಗಳ ಕಾಲ ನಡೆದಿತ್ತು.
ಈ ಸಂದರ್ಭದಲ್ಲಿ ಅಧಿಕಾರಿಗಳು ಮನೆಯಲ್ಲಿದ್ದ ಪ್ರಮುಖ ಡಿಜಿಟಲ್ ಸಾಕ್ಷ್ಯಗಳಾದ ಹಾರ್ಡ್‌ಡಿಸ್ಕ್, ಮೊಬೈಲ್ ಫೋನ್‌ಗಳು ಹಾಗೂ ವಿದೇಶಿ ವ್ಯವಹಾರಗಳಿಗೆ ಸಂಬಂಧಿಸಿದ ಪ್ರಮುಖ ಬ್ಯಾಂಕ್ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದರು. ಹ್ಯಾಕರ್ ಶ್ರೀಕಿ ಹಾಗೂ ನಲಪಾಡ್ ನಡುವೆ ನಡೆದಿದೆ ಎನ್ನಲಾದ ಆರ್ಥಿಕ ವಹಿವಾಟು ಹಾಗೂ ವಿದೇಶಿ ಹೂಡಿಕೆಗಳ ಲಿಂಕ್ ಆಧರಿಸಿ ಈ ದಾಳಿ ನಡೆಸಲಾಗಿತ್ತು.
ಮೂವರ ಬಂಧನ: ಬಿಗಿಗೊಂಡ ಇಡಿ ಪಾಶ
ಬಿಟ್‌ಕಾಯಿನ್ ಹಗರಣದ ಕರಾಳ ಮುಖಗಳನ್ನು ಜಾಲಾಡುತ್ತಿರುವ ಇಡಿ, ಅಕ್ರಮ ಹಣ ವರ್ಗಾವಣೆ ಆರೋಪದಡಿ ಈಗಾಗಲೇ ಹ್ಯಾಕರ್ ಶ್ರೀಕಿ ಸೇರಿದಂತೆ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿ ವಶಕ್ಕೆ ಪಡೆದಿದೆ.
ಆರೋಪಿಗಳ ವಿಚಾರಣೆಯ ವೇಳೆ ಸಿಕ್ಕ ಮಹತ್ವದ ಸುಳಿವು ಹಾಗೂ ಹಣದ ವರ್ಗಾವಣೆಯ ಜಾಡು ಹಿಡಿದು ಇಡಿ ಅಧಿಕಾರಿಗಳು ಈಗ ಪ್ರಭಾವಿ ರಾಜಕಾರಣಿಗಳ ಕಡೆಗೆ ತಮ್ಮ ತನಿಖಾ ಹೆಜ್ಜೆ ಇಡುತ್ತಿದ್ದಾರೆ. ಬಿಟ್‌ಕಾಯಿನ್ ಹಗರಣವು ಕೆಲವು ವರ್ಷಗಳ ಹಿಂದೆ ಕರ್ನಾಟಕ ರಾಜಕಾರಣ ಹಾಗೂ ಪೊಲೀಸ್ ಇಲಾಖೆಯಲ್ಲಿ ತೀವ್ರ ಬಿರುಗಾಳಿ ಎಬ್ಬಿಸಿತ್ತು. ಹ್ಯಾಕರ್ ಶ್ರೀಕಿ ಸರ್ಕಾರಿ ವೆಬ್‌ಸೈಟ್‌ಗಳು ಹಾಗೂ ಕ್ರಿಪ್ಟೋ ಎಕ್ಸ್‌ಚೇಂಜ್‌ಗಳನ್ನು ಹ್ಯಾಕ್ ಮಾಡಿ ಕೋಟ್ಯಂತರ ರೂಪಾಯಿ ಲೂಟಿ ಮಾಡಿದ್ದ ಎನ್ನಲಾಗಿತ್ತು.
ಈ ಹಗರಣದಲ್ಲಿ ರಾಜ್ಯದ ಪ್ರಭಾವಿ ರಾಜಕಾರಣಿಗಳು, ಉನ್ನತ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ದಟ್ಟ ವದಂತಿ ಹರಡಿತ್ತು. ಈ ಹಿಂದೆಯೂ ಪೊಲೀಸರು ಶ್ರೀಕಿಯನ್ನು ಬಂಧಿಸಿ ವಿಚಾರಣೆ ನಡೆಸಿ ನಂತರ ಬಿಡುಗಡೆ ಮಾಡಿದ್ದರು. ಆದರೆ, ಈಗ ಇಡಿ ಎಂಟ್ರಿಯಿಂದಾಗಿ ಹಳೆ ಪ್ರಕರಣಕ್ಕೆ ಮರುಜೀವ ಬಂದಂತಾಗಿದ್ದು, ಹಲವರ ಎದೆಯಲ್ಲಿ ನಡುಕ ಶುರುವಾಗಿದೆ.

