ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ವೇಗದ ಮಿತಿ ಗಂಟೆಗೆ 20 ಕಿ.ಮೀ ಗೆ ಸೀಮಿತ ಸಾಧ್ಯತೆ
x

ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ವೇಗದ ಮಿತಿ ಗಂಟೆಗೆ 20 ಕಿ.ಮೀ ಗೆ ಸೀಮಿತ ಸಾಧ್ಯತೆ

ಕ್ಯಾಂಪಸ್ ಒಳಗೆ ಸಂಚರಿಸುವ ವಾಹನಗಳ ಅತಿಯಾದ ವೇಗ, ಸಾರ್ವಜನಿಕರ ಅನಿರ್ಬಂಧಿತ ಸಂಚಾರದಿಂದಾಗಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ಇದನ್ನು ನಿಯಂತ್ರಿಸಲು ಗಂಭೀರವಾಗಿ ಚರ್ಚೆಗಳನ್ನು ನಡೆಸಲಾಗಿದೆ.


Click the Play button to hear this message in audio format

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್, ತನ್ನ ವಿಶಾಲವಾದ ಹಸಿರು ಪರಿಸರ ಮತ್ತು ಶೈಕ್ಷಣಿಕ ವಾತಾವರಣಕ್ಕೆ ಹೆಸರುವಾಸಿ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಕ್ಯಾಂಪಸ್‌ನಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳು ವಿದ್ಯಾರ್ಥಿಗಳು, ಬೋಧಕ ವರ್ಗ ಮತ್ತು ಪೋಷಕರ ಆತಂಕಕ್ಕೆ ಕಾರಣವಾಗಿವೆ. ಕ್ಯಾಂಪಸ್ ಒಳಗೆ ಸಂಚರಿಸುವ ವಾಹನಗಳ ಅತಿಯಾದ ವೇಗ ಮತ್ತು ಸಾರ್ವಜನಿಕರ ಅನಿರ್ಬಂಧಿತ ಸಂಚಾರದಿಂದಾಗಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಲು ವಿಶ್ವವಿದ್ಯಾಲಯ ಆಡಳಿತ ಮಂಡಳಿ ಇದೀಗ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ.

ಇತ್ತೀಚೆಗೆ ಜ್ಞಾನಭಾರತಿ ಆವರಣದಲ್ಲಿ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟ ಘಟನೆಯು ಕ್ಯಾಂಪಸ್ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಕಲಿಯುವ ತಾಣವಾಗಿರಬೇಕೇ ಹೊರತು, ವಾಹನಗಳ ವೇಗದ ಪಥವಾಗಬಾರದು ಎಂಬ ಕೂಗು ವಿದ್ಯಾರ್ಥಿ ಸಂಘಟನೆಗಳಿಂದ ಜೋರಾಗಿ ಕೇಳಿಬಂದಿದೆ. ವಿಶ್ವವಿದ್ಯಾಲಯ ಆವರಣದೊಳಗೆ ಇರುವ ರಸ್ತೆಗಳನ್ನು ಸಾರ್ವಜನಿಕರು ಶಾರ್ಟ್-ಕಟ್ ಮಾರ್ಗವಾಗಿ ಬಳಸುತ್ತಿರುವುದು ಮತ್ತು ಹೊರಗಿನ ವಾಹನಗಳ ಓಡಾಟ ಮಿತಿಮೀರಿರುವುದು ಅಪಘಾತಗಳಿಗೆ ಪ್ರಮುಖ ಕಾರಣವೆಂದು ಗುರುತಿಸಲಾಗಿದೆ.

ಕುಲಪತಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ

ಸಮಸ್ಯೆಯ ಗಂಭೀರತೆಯನ್ನು ಅರಿತ ವಿವಿ ಕುಲಪತಿ ಸಿ. ಶಿವರಾಜು ಅವರು, ಈ ಸಂಬಂಧ ತುರ್ತು ಸಭೆಯನ್ನು ಕರೆದಿದ್ದರು. ಸಭೆಯಲ್ಲಿ ಕುಲಸಚಿವೆ ಕೆ.ಟಿ. ಶಾಂತಲಾ, ಉಪ ಪೊಲೀಸ್ ಆಯುಕ್ತೆ ಅನಿತಾ ಹದ್ದಣ್ಣನವರ್, ಸಂಚಾರ ಪೊಲೀಸ್ ಅಧಿಕಾರಿಗಳು ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಭಾಗವಹಿಸಿದ್ದರು. ಕ್ಯಾಂಪಸ್‌ನಲ್ಲಿ ಶೈಕ್ಷಣಿಕ ವಾತಾವರಣವನ್ನು ಮರಳಿ ತರಲು ಮತ್ತು ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಾತ್ರಿಪಡಿಸಲು ಕೈಗೊಳ್ಳಬೇಕಾದ ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಕ್ಯಾಂಪಸ್‌ನ ಒಳಭಾಗದಲ್ಲಿ ಸಂಚರಿಸುವ ಯಾವುದೇ ವಾಹನವು ಗಂಟೆಗೆ 20 ಕಿಲೋಮೀಟರ್‌ಗಿಂತ ಹೆಚ್ಚಿನ ವೇಗದಲ್ಲಿ ಚಲಿಸಬಾರದು ಎಂಬ ನಿಯಮವನ್ನು ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ. ಇದನ್ನು ಉಲ್ಲಂಘಿಸುವ ವಾಹನ ಸವಾರರಿಗೆ ದಂಡ ವಿಧಿಸುವ ಕುರಿತು ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಲಾಗಿದೆ. ಕ್ಯಾಂಪಸ್‌ನ ಪ್ರಮುಖ ಜಂಕ್ಷನ್‌ಗಳು ಮತ್ತು ಅತಿ ಹೆಚ್ಚು ಅಪಘಾತ ಸಂಭವಿಸುವ ಸ್ಥಳಗಳಲ್ಲಿ ಸಂಚಾರ ಪೊಲೀಸರ ನಿಯೋಜನೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ ವಿವಿಯ ಭದ್ರತಾ ಸಿಬ್ಬಂದಿಯನ್ನೂ ಸಂಚಾರ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗುವುದು.

ಗಾಂಧಿಭವನ ರಸ್ತೆ ಬಂದ್?

ಜ್ಞಾನಭಾರತಿಯನ್ನು ನಾಗರಬಾವಿಗೆ ಸಂಪರ್ಕಿಸುವ ಗಾಂಧಿಭವನ ರಸ್ತೆಯು ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಅತಿ ಹೆಚ್ಚು ಬಳಕೆಯಾಗುತ್ತಿದೆ. ಇದನ್ನು ಶೀಘ್ರವೇ ಬಂದ್ ಮಾಡುವ ಸಂಬಂಧ ಚರ್ಚೆಗಳು ನಡೆದಿವೆ. ಈ ರಸ್ತೆಯು ಕ್ಯಾಂಪಸ್‌ನ ಭದ್ರತೆಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ವಿದ್ಯಾರ್ಥಿಗಳ ಸಂಚಾರಕ್ಕೆ ಮಾತ್ರ ಸೀಮಿತಗೊಳಿಸಲು ಆಲೋಚಿಸಲಾಗಿದೆ. ಒಂದು ಕಾಲದಲ್ಲಿ ಶಾಂತಿಯುತವಾಗಿದ್ದ ಜ್ಞಾನಭಾರತಿ ಕ್ಯಾಂಪಸ್, ಇಂದು ವಾಹನಗಳ ಕರ್ಕಶ ಶಬ್ದ ಮತ್ತು ಅತಿಯಾದ ದಟ್ಟಣೆಯಿಂದಾಗಿ ಶೈಕ್ಷಣಿಕ ಕೇಂದ್ರವಾಗಿ ಉಳಿದಿಲ್ಲ ಎಂಬುದು ಹಿರಿಯ ಪ್ರಾಧ್ಯಾಪಕರ ಅಭಿಪ್ರಾಯ. ಗ್ರಂಥಾಲಯಗಳು, ಬೋಧನಾ ಕಟ್ಟಡಗಳು ಮತ್ತು ಹಾಸ್ಟೆಲ್‌ಗಳ ಸುತ್ತಲೂ ವಾಹನಗಳ ಓಡಾಟವಿರುವುದು ವಿದ್ಯಾರ್ಥಿಗಳ ಏಕಾಗ್ರತೆಗೆ ಭಂಗ ತರುತ್ತಿದೆ. ಸಂಚಾರ ದಟ್ಟಣೆಯನ್ನು ಸಂಪೂರ್ಣವಾಗಿ ನಿಯಂತ್ರಿಸದಿದ್ದರೆ, ಕ್ಯಾಂಪಸ್‌ನ ಮೂಲ ಉದ್ದೇಶವೇ ನಾಶವಾಗಲಿದೆ ಎಂಬ ಆತಂಕ ವ್ಯಕ್ತವಾಗಿದೆ.

Read More
Next Story