ಬೆಂಗಳೂರು ಟೆಕ್ ಸಮಿಟ್ನಲ್ಲಿ ಎಐ ತಂತ್ರಜ್ಞಾನದ ಹೊಸ ಆವಿಷ್ಕಾರಗಳು; ರೋಬೋಟ್ಗಳಿಂದ ಕೃಷಿ, ಕೈಗಾರಿಕೆಗೆ ಹೊಸ ಬಲ
ಬೆಂಗಳೂರಿನಲ್ಲಿ ನಡೆದ 29ನೇ ಟೆಕ್ ಸಮಿಟ್ನಲ್ಲಿ ಎಐ ಆಧಾರಿತ ರೋಬೋಟ್ಗಳು, ಕೃಷಿ ತಂತ್ರಜ್ಞಾನ, ಸ್ಲೀಪ್ ಪಾಡ್ ಸೇರಿದಂತೆ ಹಲವು ಹೊಸ ಆವಿಷ್ಕಾರಗಳು ಗಮನ ಸೆಳೆದವು.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆಯುತ್ತಿರುವ 29ನೇ ಬೆಂಗಳೂರು ಟೆಕ್ ಸಮಿಟ್ನಲ್ಲಿ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಹೊಸ ತಂತ್ರಜ್ಞಾನಗಳು ಮತ್ತು ಆವಿಷ್ಕಾರಗಳು ಗಮನ ಸೆಳೆಯುತ್ತಿವೆ. ನವೆಂಬರ್ 17ರಿಂದ 19ರವರೆಗೆ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ನಡೆಯುತ್ತಿರುವ ಈ ಸಮಾವೇಶದಲ್ಲಿ 1,000ಕ್ಕೂ ಹೆಚ್ಚು ಸ್ಟಾರ್ಟ್ಅಪ್ಗಳು ಹಾಗೂ 70ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಈ ಬಾರಿಯ ಸಮಾವೇಶದ ಪ್ರಮುಖ ವಿಷಯ ‘ಎಐ ಅಂಡ್ ಬಿಯಾಂಡ್’.
ಸಮಾವೇಶದಲ್ಲಿ ವಿವಿಧ ಸಂಸ್ಥೆಗಳು ದೈನಂದಿನ ಬದುಕು, ಕೈಗಾರಿಕೆ, ಕೃಷಿ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ನೆರವಾಗುವ ತಂತ್ರಜ್ಞಾನಗಳನ್ನು ಪ್ರದರ್ಶಿಸಿವೆ.
ಪ್ರಯಾಣಿಕರಿಗೆ ವಿಶ್ರಾಂತಿ ನೀಡುವ ಸ್ಲೀಪ್ ಪಾಡ್
ಸ್ಲೀಪಿಒನ್ ಸಂಸ್ಥೆ ರೈಲು ನಿಲ್ದಾಣ, ವಿಮಾನ ನಿಲ್ದಾಣ ಮತ್ತು ಐಟಿ ಹಬ್ಗಳಲ್ಲಿ ಪ್ರಯಾಣಿಕರು ಹಾಗೂ ಉದ್ಯೋಗಿಗಳಿಗೆ ವಿಶ್ರಾಂತಿ ಪಡೆಯಲು ಅನುಕೂಲವಾಗುವ ಸ್ಲೀಪ್ ಪಾಡ್ ಪರಿಚಯಿಸಿದೆ. ಹವಾನಿಯಂತ್ರಣ, ಪ್ರೊಜೆಕ್ಟರ್, ಎಲ್ಇಡಿ ನಿಯಂತ್ರಣ ವ್ಯವಸ್ಥೆ ಮತ್ತು ಟಚ್ಸ್ಕ್ರೀನ್ ಮೂಲಕ ಬೆಳಕು ಹಾಗೂ ತಾಪಮಾನ ನಿಯಂತ್ರಿಸುವ ಸೌಲಭ್ಯ ಇದರಲ್ಲಿದೆ. ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಇಂತಹ ವ್ಯವಸ್ಥೆ ಅಳವಡಿಸುವ ನಿಟ್ಟಿನಲ್ಲಿ ಸಹಯೋಗದ ಕೆಲಸ ನಡೆಯುತ್ತಿದೆ ಎಂದು ಸಂಸ್ಥೆಯ ಸಹ-ಸ್ಥಾಪಕ ಸುಕೃತ್ ತಿಳಿಸಿದ್ದಾರೆ.
ಕಾರ್ಖಾನೆ ಕೆಲಸಕ್ಕೆ ನೆರವಾಗುವ ಎಐ ರೋಬೋಟ್
ಫುಜಿತ್ಸು ರಿಸರ್ಚ್ ಆಫ್ ಇಂಡಿಯಾ ಪ್ರದರ್ಶಿಸಿರುವ ವರ್ಲ್ಡ್ ಮಾಡೆಲ್ ತಂತ್ರಜ್ಞಾನವು ಸುತ್ತಮುತ್ತಲಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಕೆಲಸಗಳನ್ನು ಯೋಜಿಸಲು ರೋಬೋಟ್ಗಳಿಗೆ ನೆರವಾಗುತ್ತದೆ. ವಸ್ತುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವ ಪಿಕ್ ಆ್ಯಂಡ್ ಪ್ಲೇಸ್ ಕೆಲಸಗಳಲ್ಲಿ ಇದು ಉಪಯುಕ್ತವಾಗಿದೆ. ವಾಹನ ತಯಾರಿಕೆ, ಆಹಾರ ಸಂಸ್ಕರಣೆ ಸೇರಿದಂತೆ ಕೈಗಾರಿಕಾ ಕ್ಷೇತ್ರಗಳಲ್ಲಿ ಇದರ ಬಳಕೆಗೆ ಅವಕಾಶವಿದೆ.
ಅಪಾಯಕಾರಿ ಸ್ಥಳಗಳಲ್ಲಿ ಮಾನವ ಸ್ನೇಹಿ ರೋಬೋಟ್ಗಳು
ದಯಾನಂದ ಸಾಗರ್ ವಿಶ್ವವಿದ್ಯಾಲಯದ ತಂಡ ಮಾನವಾಕಾರದ ರೋಬೋಟ್ ಪ್ರದರ್ಶಿಸಿದೆ. ಅನಿಲ ಸೋರಿಕೆ, ಬೆಂಕಿ ಅವಘಡದಂತಹ ಅಪಾಯಕಾರಿ ಸ್ಥಳಗಳಲ್ಲಿ ಮನುಷ್ಯರ ಬದಲಿಗೆ ಇವುಗಳನ್ನು ಬಳಸುವ ಉದ್ದೇಶ ಹೊಂದಲಾಗಿದೆ. ಕನ್ನಡ, ಇಂಗ್ಲಿಷ್ ಸೇರಿದಂತೆ ವಿವಿಧ ಭಾಷೆಗಳ ಸೂಚನೆಗಳನ್ನು ಅರ್ಥಮಾಡಿಕೊಂಡು ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನೂ ಅಭಿವೃದ್ಧಿಪಡಿಸಲಾಗಿದೆ. ಇದೇ ತಂಡ ಕೃಷಿ ಕ್ಷೇತ್ರಕ್ಕೆ ಆ್ಯಗ್ರಿ ಬಾಟ್ ರೂಪಿಸಿದ್ದು, ಟೊಮೆಟೊ ಹಣ್ಣುಗಳ ಪಕ್ವತೆ ಗುರುತಿಸುವುದು, ಹಣ್ಣುಗಳನ್ನು ಕೊಯ್ಯುವುದು ಹಾಗೂ ಬೆಳೆಗಳ ರೋಗ ಪತ್ತೆಹಚ್ಚುವ ಕೆಲಸಗಳಿಗೆ ಬಳಸುವ ತಂತ್ರಜ್ಞಾನ ಪ್ರದರ್ಶಿಸಿದೆ. ಇದರ ಜೊತೆಗೆ ಮಾನವ ಚಲನವಲನಗಳನ್ನು ನೇರವಾಗಿ ಗ್ರಹಿಸಿ ಅದೇ ರೀತಿಯಲ್ಲಿ ಕಾರ್ಯನಿರ್ವಹಿಸುವ ರೋಬೋಟ್ಗಳು, ಶಿಕ್ಷಣ, ಮನರಂಜನೆ ಮತ್ತು ಕೈಗಾರಿಕಾ ಸ್ವಯಂಚಾಲಿತ ವ್ಯವಸ್ಥೆಗಳಲ್ಲಿ ಬಳಕೆಯಾಗುವ ತಂತ್ರಜ್ಞಾನಗಳೂ ಪ್ರದರ್ಶನಗೊಂಡಿವೆ.

