ಬೆಂಗಳೂರಿಗೆ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ; 3 ಸ್ಥಳಗಳ ಕಾರ್ಯಸಾಧ್ಯತೆ ಅಧ್ಯಯನ
x

ಬೆಂಗಳೂರಿಗೆ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ; 3 ಸ್ಥಳಗಳ ಕಾರ್ಯಸಾಧ್ಯತೆ ಅಧ್ಯಯನ

ಕನಕಪುರ ಚೂಡಹಳ್ಳಿಯಲ್ಲಿ 4,655.75 ಎಕರೆ ಪ್ರದೇಶ, ಬನ್ನೇರುಘಟ್ಟ ಸೋಮನಹಳ್ಳಿಯಲ್ಲಿ 4,376.65 ಎಕರೆ ಜಾಗದಲ್ಲಿ; ನೆಲಮಂಗಲ-ಕುಣಿಗಲ್ ರಸ್ತೆಯ ಮಧ್ಯೆ 4,695.75 ಎಕರೆ ಜಾಗ ಗುರುತಿಸಲಾಗಿದೆ.


ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಯ ಕನಸು ನನಸಾಗುವತ್ತ ಸಾಗುತ್ತಿದೆ. ವಿಮಾನ ನಿಲ್ದಾಣಕ್ಕಾಗಿ ಮೂರು ಸ್ಥಳಗಳನ್ನು ಅಂತಿಮಗೊಳಿಸಿದ್ದು, ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ಸಿಂಗಾಪುರ ಮೂಲದ ಮೈನ್ ಆರ್ಡೆಟ್-ಕೆಪಿಎಂಜಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಈಗಾಗಲೇ ಆ ಕಂಪನಿ, ತಾಂತ್ರಿಕ ಅಧ್ಯಯನ ಆರಂಭಿಸಿದೆ. ಮೂರು ತಿಂಗಳಲ್ಲಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲು ಗಡುವು ನೀಡಲಾಗಿದೆ. ಆ ಬಳಿಕ ಯಾವ ಸ್ಥಳವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೆ ಸೂಕ್ತ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.

ರಾಜ್ಯ ಸರ್ಕಾರವು ಕನಕಪುರ ರಸ್ತೆಯ ಚೂಡಹಳ್ಳಿಯಲ್ಲಿ 4,655.75ಎಕರೆ ಪ್ರದೇಶವನ್ನು ವಿಮಾನ ನಿಲ್ದಾಣಕ್ಕಾಗಿ ಗುರುತಿಸಿದೆ. ಬನ್ನೇರುಘಟ್ಟ ಸಮೀಪದ ಸೋಮನಹಳ್ಳಿಯಲ್ಲಿ ಒಟ್ಟು 4,376.65 ಎಕರೆ ಜಾಗದಲ್ಲಿ ಎರಡನೇ ಸ್ಥಳ ಗುರುತಿಸಲಾಗಿದೆ. ನೆಲಮಂಗಲ-ಕುಣಿಗಲ್ ರಸ್ತೆಯ ಮಧ್ಯೆ 4,695.75 ಎಕರೆ ಜಾಗವನ್ನು ಮೂರನೇ ಸ್ಥಳವಾಗಿ ಗುರುತಿಸಲಾಗಿದೆ.

ದಕ್ಷಿಣ ಬೆಂಗಳೂರು ಯಾಕೆ ಫೇವರಿಟ್?

ಪ್ರಸ್ತುತ, ಉತ್ತರ ಬೆಂಗಳೂರಿನ ದೇವನಹಳ್ಳಿಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದರಿಂದ ನಗರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ದಕ್ಷಿಣ ಭಾಗದಲ್ಲಿ ಮತ್ತೊಂದು ನಿಲ್ದಾಣ ಸ್ಥಾಪಿಸಬೇಕು ಎಂಬುದು ಸರ್ಕಾರದ ಉದ್ದೇಶ. ಏಕೆಂದರೆ ದಕ್ಷಿಣ ಭಾಗದಲ್ಲಿ ಪ್ರಯಾಣಿಕರ ಸಂಖ್ಯೆ ಮತ್ತು ಸರಕು ಸಾಗಣೆಯ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಬಿಎಂಐಸಿ ಯೋಜನೆಯ ನೈಸ್ ಕಾರಿಡಾರ್ ಈ ಭಾಗಕ್ಕೆ ಪ್ಲಸ್ ಪಾಯಿಂಟ್ ಆಗಿದ್ದು, ಬಿಡದಿಯ ಸಮೀಪ 18,000 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಟೌನ್‌ಶಿಪ್‌ ನಿರ್ಮಾಣ ಆಗುವುದರಿಂದ ವಿಮಾನ ನಿಲ್ದಾಣ ಸ್ಥಾಪನೆ ಅತ್ಯಗತ್ಯವಾಗಿದೆ. ಈಗಾಗಲೇ ಮೂರು ಸ್ಥಳಗಳ ತಾಂತ್ರಿಕ ಹಾಗೂ ಆರ್ಥಿಕ ಕಾರ್ಯಸಾಧ್ಯತೆಗಳ ಕುರಿತು ಅಧ್ಯಯನ ನಡೆಸುತ್ತಿದೆ. ಸದ್ಯ ಗುರುತಿಸಿರುವ ಜಾಗಗಳು ಸಮತಟ್ಟಾಗಿಲ್ಲ, ಸರಿಸುಮಾರು 60 ಮೀ. ನಿಂದ 90 ಮೀ. ವರೆಗೆ ಏರಿಳಿತ ಹೊಂದಿವೆ. ಇವುಗಳನ್ನು ಸಮತಟ್ಟು ಮಾಡುವುದು ಸರ್ಕಾರದ ಮುಂದಿರುವ ದೊಡ್ಡ ಸವಾಲು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸಮೀಪ ವನ್ಯಪ್ರಾಣಿಗಳ ಮೇಲೆ ಶಬ್ದ ಮಾಲಿನ್ಯದ ಪರಿಣಾಮದ ಬಗ್ಗೆ ಅಧ್ಯಯನ ನಡೆಸಬೇಕಿದೆ. 'ಒಎಲ್ಎಸ್ ಸರ್ವೆ ಅಂದರೆ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದ ಸುರಕ್ಷತೆ ಖಾತ್ರಿಪಡಿಸಿಕೊಳ್ಳಲು ನಡೆಸುವ ಸಮೀಕ್ಷೆಯ ನಂತರವಷ್ಟೇ ಈ ಕುರಿತು ಅಂತಿಮ ತೀರ್ಮಾನ ಹೊರಬೀಳಲಿದೆ.

ಹೊಸ ವಿಮಾನ ನಿಲ್ದಾಣದಿಂದ ಏನೆಲ್ಲಾ ಅನುಕೂಲ

ಚೂಡಹಳ್ಳಿ, ಸೋಮನಹಳ್ಳಿ ಬಳಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸುವುದರಿಂದ ದಕ್ಷಿಣ ಬೆಂಗಳೂರಿಗೆ ಸುಲಭ ಸಂಪರ್ಕ ಸುಲಭವಾಗಲಿದೆ. ಪ್ರಸ್ತುತ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದಕ್ಷಿಣ ಬೆಂಗಳೂರು, ಕನಕಪುರ ರಸ್ತೆ, ಜಯನಗರ, ಜೆ.ಪಿ. ನಗರ ಮತ್ತು ಎಲೆಕ್ಟ್ರಾನಿಕ್ ಸಿಟಿಯಿಂದ ಪ್ರಯಾಣಿಸಲು 2-3 ಗಂಟೆ ಬೇಕು. ಕನಕಪುರ ರಸ್ತೆಯಲ್ಲಿ ಹೊಸ ಏರ್‌ಪೋರ್ಟ್‌ ಬಂದರೆ ತಮಿಳುನಾಡು ಗಡಿ ಭಾಗವಾದ ಹೊಸೂರಿಗೆ ಕೇವಲ ಒಂದೂವರೆ ತಾಸಲ್ಲೇ ಪ್ರಯಾಣಿಸಬಹುದಾಗಿದೆ.

ಎಲೆಕ್ಟ್ರಾನಿಕ್ ಸಿಟಿ ಮತ್ತು ದಕ್ಷಿಣದ ಐಟಿ ಕಾರಿಡಾರ್‌ಗಳಲ್ಲಿ ಕಾರ್ಯನಿರ್ವಹಿಸುವ ಲಕ್ಷಾಂತರ ಐಟಿ ಉದ್ಯೋಗಿಗಳು ಮತ್ತು ಉದ್ಯಮಿಗಳಿಗೆ ಸುಲಭವಾಗಿ ವಿಮಾನ ನಿಲ್ದಾಣ ತಲುಪಲು ಸಾಧ್ಯವಾಗಲಿದೆ. ಕನಕಪುರ ರಸ್ತೆಯು ನೈಸ್ ರಸ್ತೆಗೆ ಹತ್ತಿರವಿರುವುದರಿಂದ, ನಗರದ ವಿವಿಧ ಭಾಗಗಳಿಂದ ವಿಮಾನ ನಿಲ್ದಾಣಕ್ಕೆ ವೇಗವಾಗಿ ತಲುಪಲು ಅನುಕೂಲವಾಗಲಿದೆ.

ಹಾರೋಹಳ್ಳಿ, ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಆಟೋಮೊಬೈಲ್ ಬಿಡಿಭಾಗಗಳ ತಯಾರಕರಿಗೆ ಕಚ್ಚಾ ವಸ್ತುಗಳ ಆಮದು ಮತ್ತು ಸಿದ್ಧ ವಸ್ತುಗಳ ರಫ್ತಿಗೆ ವೇಗ ಸಿಗಲಿದೆ. ಬಿಡದಿಯ ಉದ್ದೇಶಿತ ಎಐ ಸಿಟಿಗೆ ಕೇವಲ 17 ಕಿ.ಮೀ. ಕ್ರಮಿಸಿದರೆ ಸಾಕು. ಬಿಡದಿಯ ಟೊಯೋಟಾದಂತಹ ಕಾರ್ಖಾನೆಗಳಿಗೆ ಅಂತರಾಷ್ಟ್ರೀಯ ಲಾಜಿಸ್ಟಿಕ್ಸ್ ಮತ್ತು ತುರ್ತು ಬಿಡಿಭಾಗಗಳ ಪೂರೈಕೆ ಸುಲಭವಾಗಲಿದೆ. ಈಗಾಗಲೇ ಕನಕಪುರ ರಸ್ತೆಯ ಸಿಲ್ಕ್ ಬೋರ್ಡ್‌ವರೆಗೆ ಮೆಟ್ರೋ ಸಂಪರ್ಕವಿದ್ದು, ಭವಿಷ್ಯದಲ್ಲಿ ಇದನ್ನು ವಿಮಾನ ನಿಲ್ದಾಣದವರೆಗೂ ವಿಸ್ತರಿಸಿದರೆ ಸಾರ್ವಜನಿಕ ಸಾರಿಗೆಗೆ ದೊಡ್ಡ ಉತ್ತೇಜನ ಸಿಗಲಿದೆ.

ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಐಟಿ ಕಂಪನಿಗಳು ಮತ್ತು ಬೊಮ್ಮಸಂದ್ರದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಘಟಕಗಳಿಗೆ ತಾಂತ್ರಿಕ ಉಪಕರಣಗಳ ಸಾಗಾಟವೂ ಸರಳವಾಗಲಿದೆ. ಇನ್ನು ಬಿಡದಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ 'ಎಐ ಸಿಟಿ' ಯೋಜನೆಗೆ ವಿಮಾನ ನಿಲ್ದಾಣವು ಬೆನ್ನೆಲುಬಾಗಲಿದೆ. ಇದು ಚೂಡಹಳ್ಳಿ ಹಾಗೂ ಸೋಮನಹಳ್ಳಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸುವುದರಿಂದ ಆಗುವ ಅನುಕೂಲಗಳಾಗಿವೆ.

ಇನ್ನು ನೆಲಮಂಗಲ ಹಾಗೂ ಕುಣಿಗಲ್‌ ರಸ್ತೆಯಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಯಾದರೆ ಪಶ್ಚಿಮ ಮತ್ತು ದಕ್ಷಿಣ ಬೆಂಗಳೂರಿನ ಅಭಿವೃದ್ಧಿಗೆ ಉತ್ತೇಜನ ಸಿಗಲಿದೆ. ನೆಲಮಂಗಲ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್, ಕೈಗಾರಿಕೆಗಳು, ಮತ್ತು ವಾಣಿಜ್ಯ ಚಟುವಟಿಕೆಗಳು ವೇಗವಾಗಿ ಬೆಳೆಯಲಿವೆ. ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ದೊಡ್ಡಬಳ್ಳಾಪುರ ಸಮೀಪ ತಲೆ ಎತ್ತಲಿರುವ ಕ್ವಿನ್ ಸಿಟಿಗೆ ಕೇವಲ 30 ಕಿ.ಮೀ. ದೂರ ಇರಲಿದೆ.

ನೆಲಮಂಗಲವು ತುಮಕೂರು ಹೆದ್ದಾರಿ ಮತ್ತು ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಗೆ ಹತ್ತಿರವಿರುವುದರಿಂದ, ನೆರೆಯ ಜಿಲ್ಲೆಗಳಿಂದ ಬರುವವರು ಸುಲಭವಾಗಿ ವಿಮಾನ ನಿಲ್ದಾಣ ತಲುಪಬಹುದು. ತುಮಕೂರು, ನೆಲಮಂಗಲದಲ್ಲಿ ಆಹಾರ ಸಂಸ್ಕರಣಾ ಘಟಕಗಳು ಹೆಚ್ಚಿವೆ, ಉತ್ಪನ್ನಗಳ ರಫ್ತಿಗೂ ಇದರಿಂದ ಅನುಕೂಲ ಆಗಲಿದೆ. ಹೊಸ ಕೈಗಾರಿಕಾ ಕಾರಿಡಾರ್ಗಳು ಸ್ಥಾಪನೆಯಾಗಲಿವೆ. ನೆಲಮಂಗಲ ರಸ್ತೆಯಲ್ಲಿ ಎಬಿಬಿ ಇಂಡಿಯಾದಂತಹ ಬೃಹತ್ ಸಂಸ್ಥೆಗಳು ತಮ್ಮ ಉತ್ಪನ್ನಗಳ ರಫ್ತು ಮತ್ತು ತಾಂತ್ರಿಕ ಬಿಡಿಭಾಗಗಳ ಆಮದಿಗೆ ನೇರ ವಿಮಾನ ಸಂಪರ್ಕ ಸಿಗಲಿದೆ.

ವೋಲ್ವೋ, ಕೆನ್ನಮೆಟಲ್‌, ವಿಡಿಯಾ, Sansera Engineering ನಂತಹ ಕಂಪನಿಗಳಿಗೆ ಸರಕು ಸಾಗಣೆ ವೆಚ್ಚ ಮತ್ತು ಸಮಯ ಉಳಿತಾಯವಾಗಲಿದೆ. ಹಿಮಾಲಯ ವೆಲ್‌ ನೆಸ್, Micro Labs ನಂತಹ ಔಷಧೀಯ ಕಂಪನಿಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕಳುಹಿಸಲು ಅನುಕೂಲವಾಗಲಿದೆ. ರಿಲಯನ್ಸ್ ಪ್ಯಾಕಿಂಗ್ ಇಂಡಸ್ಟ್ರೀಸ್ ಹಾಗೂ ಸುತ್ತಮುತ್ತಲಿನ ಗಾರ್ಮೆಂಟ್ಸ್ ಕಾರ್ಖಾನೆಗಳಿಗೆ ಜಾಗತಿಕ ಮಾರುಕಟ್ಟೆ ಲಭ್ಯವಾಗಲಿದೆ.

ನೆಲಮಂಗಲಕ್ಕೆ ಸಮೀಪದಲ್ಲೇ ಪೀಣ್ಯ, ದಾಬಸ್‌ಪೇಟೆ, ಸೋಂಪುರ ಕೈಗಾರಿಕಾ ಪ್ರದೇಶಗಳಿವೆ. ಇಲ್ಲಿಂದ ಹೆಚ್ಚಿನ ಉತ್ಪನ್ನಗಳನ್ನು ರಫ್ತು ಮಾಡಲು ಸಾಧ್ಯವಾಗಲಿದೆ. ನೆಲಮಂಗಲದಲ್ಲಿ ಇ-ಕಾಮರ್ಸ್ ಮತ್ತು ಏರ್ ಕಾರ್ಗೋದಿಂದ ಹೆಚ್ಚಿನ ಬೇಡಿಕೆ ಬರಲಿದೆ. ನೆಲಮಂಗಲವು ಮಂಗಳೂರು ಬಂದರು ಮತ್ತು ಮುಂಬೈ ಕಾರಿಡಾರ್ ಎರಡಕ್ಕೂ ಕೇಂದ್ರಬಿಂದುವಾಗಿರುವುದರಿಂದ ಇದು ದಕ್ಷಿಣ ಭಾರತದ ಪ್ರಮುಖ ಸರಕು ಸಾಗಣೆ ಕೇಂದ್ರ ಆಗಿ ಮಾರ್ಪಡಲಿದೆ.

Read More
Next Story