Safe Footpath Campaign in Bengaluru: 202.7 km of encroachment cleared in just 3 days
x

ನಗರದಲ್ಲಿ ಪಾದಾಚಾರಿ ಮಾರ್ಗದ ಒತ್ತುವರಿ ತೆರವುಗೊಳಿಸಲಾಯಿತು.

ಬೆಂಗಳೂರಿನಲ್ಲಿ 'ಸುರಕ್ಷಿತ ಪಾದಚಾರಿ ಮಾರ್ಗ ಅಭಿಯಾನ': ಕೇವಲ 3 ದಿನದಲ್ಲಿ 202.7 ಕಿ.ಮೀ ಒತ್ತುವರಿ ತೆರವು

ನಾವು ಯಾರ ಹೊಟ್ಟೆಯ ಮೇಲೂ ಹೊಡೆಯುತ್ತಿಲ್ಲ. ಪ್ರಮುಖ ರಸ್ತೆಗಳಿಂದ ಬೀದಿಬದಿ ವ್ಯಾಪಾರಿಗಳನ್ನು ವಾರ್ಡ್ ರಸ್ತೆಗಳಿಗೆ ಸ್ಥಳಾಂತರಿಸಲಾಗುತ್ತಿದೆಯೇ ವಿನಃ ಒಕ್ಕಲೆಬ್ಬಿಸುತ್ತಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟನೆ ನೀಡಿದ್ದಾರೆ.


Click the Play button to hear this message in audio format

ರಾಜಧಾನಿಯ ಪಾದಚಾರಿಗಳಿಗೆ ಮುಕ್ತ ಹಾಗೂ ಸುರಕ್ಷಿತ ಹಾದಿ ಕಲ್ಪಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ 'ಸುರಕ್ಷಿತ ಪಾದಚಾರಿ ಮಾರ್ಗ ಅಭಿಯಾನ' ನಗರದಲ್ಲಿ ಭರದಿಂದ ಸಾಗುತ್ತಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಪ್ರಮುಖ ಆರ್ಟಿರಿಯಲ್ ಹಾಗೂ ಸಬ್-ಆರ್ಟಿರಿಯಲ್ ರಸ್ತೆಗಳಲ್ಲಿ ಜುಲೈ 1 ರಿಂದ ಆರಂಭವಾಗಿರುವ ಈ ಬೃಹತ್ ಒತ್ತುವರಿ ತೆರವು ಕಾರ್ಯಾಚರಣೆಯು ಯಶಸ್ವಿಯಾಗಿ ಮುನ್ನಡೆದಿದ್ದು, ಕೇವಲ ಮೂರು ದಿನಗಳ ಅವಧಿಯಲ್ಲಿ ಒಟ್ಟು 202.7 ಕಿ.ಮೀ ಉದ್ದದ ಪಾದಚಾರಿ ಮಾರ್ಗಗಳನ್ನು ಒತ್ತುವರಿಯಿಂದ ಮುಕ್ತಗೊಳಿಸಲಾಗಿದೆ.

ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ ಪಾಲಿಕೆ ಅಧಿಕಾರಿಗಳು ಮತ್ತು ಪೊಲೀಸ್ ಭದ್ರತೆಯೊಂದಿಗೆ ಜಂಟಿಯಾಗಿ ಈ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಾಚರಣೆಯ ಮೊದಲ ದಿನವಾದ ಜು.1 ರಂದು ಅಧಿಕಾರಿಗಳು ತೀವ್ರ ಗತಿಯಲ್ಲಿ ಕಾರ್ಯಾಚರಣೆ ನಡೆಸಿದ್ದು, ಐದೂ ಪಾಲಿಕೆಗಳಲ್ಲಿ ಒಟ್ಟು 76.55 ಕಿ.ಮೀ ತೆರವುಗೊಳಿಸಲಾಗಿತ್ತು.

202.7 ಕಿ. ಮೀ. ಒತ್ತುವರಿಯಿಂದ ಮುಕ್ತ

ಕೇಂದ್ರ ನಗರ ಪಾಲಿಕೆಯಲ್ಲಿ 16.35 ಕಿ.ಮೀ, ಪೂರ್ವ ನಗರ ಪಾಲಿಕೆಯಲ್ಲಿ 13.25 ಕಿ.ಮೀ, ಉತ್ತರ ನಗರ ಪಾಲಿಕೆಯಲ್ಲಿ 12.85 ಕಿ.ಮೀ, ದಕ್ಷಿಣ ನಗರ ಪಾಲಿಕೆಯಲ್ಲಿ 11.00 ಕಿ.ಮೀ, ಹಾಗೂ ಪಶ್ಚಿಮ ನಗರ ಪಾಲಿಕೆಯಲ್ಲಿ 23.10 ಕಿ.ಮೀ ತೆರವು ಮಾಡಲಾಗಿತ್ತು. ಗುರುವಾರ (ಜು.2)ರಂದು ಒಟ್ಟು 64.55 ಕಿ.ಮೀ ಪಾದಚಾರಿ ಮಾರ್ಗವನ್ನು ಮರು ವಶಪಡಿಸಿಕೊಳ್ಳಲಾಗಿದೆ. ಶುಕ್ರವಾರ (ಜು.3)ಮೂರನೇ ದಿನ ಒಟ್ಟು 61.60 ಕಿ.ಮೀ ಕಾರ್ಯಾಚರಣೆ ಮಾಡಲಾಗಿದ್ದು, ಮೂರು ದಿನಗಳ ಒಟ್ಟು 202.7 ಕಿ. ಮೀ. ಒತ್ತುವರಿಯಿಂದ ಮುಕ್ತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಕ್ಕಲೆಬ್ಬಿಸುವಿಕೆಯಲ್ಲ, ಸ್ಥಳಾಂತರ

ಪಾದಚಾರಿ ಮಾರ್ಗ ತೆರವು ಕಾರ್ಯಾಚರಣೆಗೆ ಬೀದಿಬದಿ ವ್ಯಾಪಾರಿಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಸಚಿವ ಕೃಷ್ಣ ಬೈರೇಗೌಡ ಅವರು, "ನಾವು ಯಾರ ಹೊಟ್ಟೆಯ ಮೇಲೂ ಹೊಡೆಯುತ್ತಿಲ್ಲ. ಪ್ರಮುಖ ಆರ್ಟಿರಿಯಲ್ ರಸ್ತೆಗಳಿಂದ ಬೀದಿಬದಿ ವ್ಯಾಪಾರಿಗಳನ್ನು ವಾರ್ಡ್ ರಸ್ತೆಗಳಿಗೆ ಸ್ಥಳಾಂತರಿಸಲಾಗುತ್ತಿದೆಯೇ ವಿನಃ ಒಕ್ಕಲೆಬ್ಬಿಸುತ್ತಿಲ್ಲ. ನಾಗರಿಕರ ಮುಕ್ತ ಸಂಚಾರಕ್ಕೆ ಯಾವುದೇ ಅಡ್ಡಿ ಇರಬಾರದು ಎಂಬುದು ಸುಪ್ರೀಂ ಕೋರ್ಟ್ ಆದೇಶವೂ ಆಗಿದೆ," ಎಂದು ಸಮರ್ಥಿಸಿಕೊಂಡಿದ್ದಾರೆ.

ಮುಂದಿನ ದಿನಗಳಲ್ಲಿ ತೆರವುಗೊಳಿಸಲಾದ ಜಾಗದಲ್ಲಿ ಹೈ-ಕ್ವಾಲಿಟಿ ಫುಟ್‌ಪಾತ್ ನಿರ್ಮಾಣ ಕಾಮಗಾರಿಗಳು ತಕ್ಷಣವೇ ಆರಂಭವಾಗಲಿದ್ದು, ಜು.10 ರಿಂದ ರಸ್ತೆ ಬದಿ ಕೈಬಿಡಲಾದ ವಾಹನಗಳ ತೆರವು ಪ್ರಕ್ರಿಯೆಯೂ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Read More
Next Story