
ಗ್ರೇಟರ್ ಬೆಂಗಳೂರು ಪ್ರಾಧಿಕಾರ
GBA Tax | ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್; ಶೇ. 5ರಷ್ಟು ತೆರಿಗೆ ರಿಯಾಯಿತಿ ಅವಧಿ ಮೇ 31ರವರೆಗೆ ವಿಸ್ತರಣೆ
ಸದ್ಯ ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿ ಸುಮಾರು 530 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಉಳಿದಿದ್ದು, ಇದರಲ್ಲಿ ಪ್ರಮುಖ ಸರ್ಕಾರಿ ಕಟ್ಟಡಗಳೂ ಸೇರಿವೆ.
ಉದ್ಯಾನನಗರಿ ಬೆಂಗಳೂರಿನ ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯಲ್ಲಿ 2026-27ನೇ ಸಾಲಿನ ಆಸ್ತಿ ತೆರಿಗೆಯನ್ನು ಪೂರ್ಣವಾಗಿ ಪಾವತಿಸುವವರಿಗೆ ನೀಡಲಾಗುವ ಶೇ. 5ರಷ್ಟು ರಿಯಾಯಿತಿ ಅವಧಿಯನ್ನು ಮೇ 31ರವರೆಗೆ ವಿಸ್ತರಿಸಲಾಗಿದೆ.
ಸದ್ಯ ನಗರ ಪಾಲಿಕೆಗಳ ಬಹುತೇಕ ಸಿಬ್ಬಂದಿ ಜನಗಣತಿ ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರಿಂದ, ನಾಗರಿಕರು ತೆರಿಗೆ ಪಾವತಿಸಲು ತಾಂತ್ರಿಕ ತೊಂದರೆಗಳನ್ನು ಎದುರಿಸುತ್ತಿದ್ದರು. ತೆರಿಗೆ ಬಾಕಿ ಪಾವತಿ ದಿನಾಂಕವನ್ನು ವಿಸ್ತಿರಿಸುವಂತೆ ಹಲವರು ಮನವಿ ಮಾಡಿದ್ದರು. ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಜನಪ್ರತಿನಿಧಿಗಳ ಮನವಿಯನ್ನು ಪುರಸ್ಕರಿಸಿದ ನಗರಾಭಿವೃದ್ಧಿ ಇಲಾಖೆಯು, ಈ ರಿಯಾಯಿತಿ ಸೌಲಭ್ಯವನ್ನು ಒಂದು ತಿಂಗಳ ಕಾಲ ವಿಸ್ತರಿಸಿ ಆದೇಶ ಹೊರಡಿಸಿದೆ.
ಸುಸ್ತಿದಾರರಿಗೆ ಕಾದಿದೆ ಸಂಕಷ್ಟ!
ಒಂದೆಡೆ ರಿಯಾಯಿತಿಯ ಅವಕಾಶವಿದ್ದರೆ, ಇನ್ನೊಂದೆಡೆ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಠಿಣ ಎಚ್ಚರಿಕೆ ನೀಡಿದೆ. ತೆರಿಗೆ ಬಾಕಿ ಉಳಿಸಿಕೊಂಡವರ ಮೇಲೆ ಬಾಕಿ ಇರುವ ಮೊತ್ತದ ಮೇಲೆ ಶೇ. 100 ದಂಡ ವಿಧಿಸಲಾಗುತ್ತದೆ. 2023-24ರವರೆಗಿನ ಬಾಕಿಗೆ ಶೇ. 9 ಹಾಗೂ 2024-25ರ ಬಾಕಿಗೆ ಶೇ. 15ರಷ್ಟು ಬಡ್ಡಿ ಅನ್ವಯವಾಗಲಿದೆ. ಬಹಳಷ್ಟು ವರ್ಷಗಳಿಂದ ತೆರಿಗೆ ಬಾಕಿ ಇರುವ ವಾಣಿಜ್ಯ ಕಟ್ಟಡಗಳನ್ನು ಸೀಲ್ ಮಾಡುವುದು ಮಾತ್ರವಲ್ಲದೆ, ಆಸ್ತಿ ಹರಾಜು ಪ್ರಕ್ರಿಯೆಯನ್ನು ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಬಾಕಿ ಉಳಿದಿದೆ ಕೋಟ್ಯಂತರ ರೂಪಾಯಿ!
ಸದ್ಯ ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿ ಸುಮಾರು 530 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಉಳಿದಿದ್ದು, ಇದರಲ್ಲಿ ಪ್ರಮುಖ ಸರ್ಕಾರಿ ಕಟ್ಟಡಗಳೂ ಸೇರಿವೆ. ಈ ಬೃಹತ್ ಮೊತ್ತವನ್ನು ವಸೂಲಿ ಮಾಡಲು ಜಿಬಿಎ ಈಗ ಕಠಿಣ ನಿಲುವು ತಳೆದಿದ್ದು, ಆಸ್ತಿ ಮಾಲೀಕರಿಗೆ ಎಚ್ಚರಿಕೆಯನ್ನು ನೀಡಿದೆ.
ತೆರಿಗೆ ಗುರಿ ನಿಗದಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ತನ್ನ ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಪ್ರಸಕ್ತ ವರ್ಷ ಒಟ್ಟು 4,378 ಕೋಟಿ ರೂ. ತೆರಿಗೆ ಸಂಗ್ರಹಿಸಲು ಗುರಿ ನೀಡಲಾಗಿದ್ದು, ಬೆಂಗಳೂರು ಕೇಂದ್ರ ಹಾಗೂ ದಕ್ಷಿಣ ಪಾಲಿಕೆಗಳಿಗೆ 2,251 ಕೋಟಿ ರೂ, ಪೂರ್ವ ವಲಯಕ್ಕೆ 1,500 ಕೋಟಿ ರೂ. ತೆರಿಗೆ ಸಂಗ್ರಹಿಸುವಂತೆ ಗುರಿ ನೀಡಿದೆ.

