
ಸಾಂದರ್ಭಿಕ ಚಿತ್ರ (ಎಐ ಆಧಾರಿತ)
ರಸ್ತೆಗುಂಡಿ, ಟ್ರಾಫಿಕ್ ಸಮಸ್ಯೆ; UPSC ಪರೀಕ್ಷೆಯಿಂದ ವಂಚಿತರಾದ ಅಭ್ಯರ್ಥಿಗಳು, ವರ್ಷದ ಪರಿಶ್ರಮ ವ್ಯರ್ಥ!
ಯುಪಿಎಸ್‌ಸಿ ನಿಯಮದಂತೆ ಬೆಳಿಗ್ಗೆ 9 ಗಂಟೆಯ ಒಳಗೆ ಪರೀಕ್ಷಾ ಕೇಂದ್ರದ ಒಳಗೆ ಇರಬೇಕಿತ್ತು. ಆದರೆ ಈ ವಿದ್ಯಾರ್ಥಿಗಳು 9.20ಕ್ಕೆ ಪರೀಕ್ಷಾ ಕೇಂದ್ರ ತಲುಪಿದ್ದರು. ಅಧಿಕಾರಿಗಳು ನಿಯಮದ ನೆಪವೊಡ್ಡಿ ಗೇಟ್ ತೆರೆಯಲು ನಿರಾಕರಿಸಿದ್ದರು.
ಸಿಲಿಕಾನ್ ಸಿಟಿಯ ರಸ್ತೆಗುಂಡಿಗಳು ಮತ್ತು ಅಂತ್ಯವಿಲ್ಲದ ವಾಹನ ದಟ್ಟಣೆಯ ಸಮಸ್ಯೆ ಈಗ ಕೇವಲ ಐಟಿ ಕಂಪನಿಗಳಿಗೆ ಅಥವಾ ವಾಹನ ಸವಾರರಿಗೆ ಮಾತ್ರ ಸೀಮಿತವಾಗಿಲ್ಲ. ಇದು ದೇಶದ ಅತ್ಯುನ್ನತ ನಾಗರಿಕ ಸೇವಾ ಪರೀಕ್ಷೆ (UPSC) ಬರೆಯುವ ಕನಸು ಕಂಡಿದ್ದ ವಿದ್ಯಾರ್ಥಿಗಳ ಭವಿಷ್ಯಕ್ಕೂ ಎಳ್ಳುನೀರು ಬಿಟ್ಟಿದೆ.
ಕಳೆದ ಭಾನುವಾರ(ಮೇ 24) ನಡೆದ ಯುಪಿಎಸ್‌ಸಿ ಪೂರ್ವಭಾವಿ (Prelims) ಪರೀಕ್ಷೆಗೆ ಹಾಜರಾಗಬೇಕಿದ್ದ ಆರು ಮಂದಿ ಅಭ್ಯರ್ಥಿಗಳು ಬೆಂಗಳೂರಿನ ರಸ್ತೆಗುಂಡಿ ಮತ್ತು ಟ್ರಾಫಿಕ್ ಕಿರಿಕಿರಿಯಿಂದಾಗಿ ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ನಗರದ ವೈಟ್‌ಫೀಲ್ಡ್, ಮಹಾದೇವಪುರ ಹಾಗೂ ಐಟಿಪಿಎಲ್ ಭಾಗಗಳಿಂದ ಬರಬೇಕಿದ್ದ ಈ ಅಭ್ಯರ್ಥಿಗಳು ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರ ತಲುಪಲಾಗದೆ ಕಣ್ಣೀರು ಹಾಕುತ್ತಾ ಮನೆಗೆ ಮರಳುವಂತಾಗಿದೆ.
ವರ್ಷದ ಪರಿಶ್ರಮಕ್ಕೆ ರಸ್ತೆಗುಂಡಿಯೇ ವಿಘ್ನ
ಇತ್ತೀಚೆಗೆ ಸುರಿದ ಮುಂಗಾರು ಪೂರ್ವ ಮಳೆಯಿಂದಾಗಿ ಮಹಾದೇವಪುರ ಮತ್ತು ವೈಟ್‌ಫೀಲ್ಡ್ ಭಾಗದ ರಸ್ತೆಗಳು ಅಕ್ಷರಶಃ ನರಕಸದೃಶವಾಗಿವೆ. ಯಮಸ್ವರೂಪಿ ಗುಂಡಿಗಳಿಂದಾಗಿ ವಾಹನ ಸಂಚಾರ ಆಮೆಯ ಗತಿಯಲ್ಲಿ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಭಾನುವಾರ ರಜಾ ದಿನವಾಗಿದ್ದರೂ ಅಭ್ಯರ್ಥಿಗಳು ಮುಂಜಾನೆ 6.20ಕ್ಕೇ ತಮ್ಮ ಮನೆಯಿಂದ ಹೊರಟಿದ್ದರು. ಆದರೆ, ಕೇವಲ 20 ಕಿ.ಮೀ. ದೂರವಿರುವ ಚಾಲುಕ್ಯ ಸರ್ಕಲ್ ಬಳಿಯ ರಾಮನಾರಾಯಣ ಚಲ್ಲರಾವ್ (ಆರ್.ಸಿ.) ಕಾಲೇಜನ್ನು ತಲುಪಲು ಅವರಿಗೆ ಬರೋಬ್ಬರಿ ಮೂರು ಗಂಟೆಗಳ ಕಾಲ ಬೇಕಾಯಿತು.
20 ನಿಮಿಷ ತಡ
ಯುಪಿಎಸ್‌ಸಿ ನಿಯಮದಂತೆ ಬೆಳಿಗ್ಗೆ 9 ಗಂಟೆಯ ಒಳಗೆ ಪರೀಕ್ಷಾ ಕೇಂದ್ರದ ಒಳಗೆ ಇರಬೇಕಿತ್ತು. ಆದರೆ ಈ ವಿದ್ಯಾರ್ಥಿಗಳು 9.20ಕ್ಕೆ ಪರೀಕ್ಷಾ ಕೇಂದ್ರ ತಲುಪಿದ್ದಾರೆ. ಅಧಿಕಾರಿಗಳು ನಿಯಮದ ನೆಪವೊಡ್ಡಿ ಗೇಟ್ ತೆರೆಯಲು ನಿರಾಕರಿಸಿದ್ದರಿಂದ, ವಿದ್ಯಾರ್ಥಿಗಳು ಎಷ್ಟೇ ಅಂಗಲಾಚಿದರೂ ಅವರಿಗೆ ಪ್ರವೇಶ ಸಿಗಲಿಲ್ಲ. ಇದರಿಂದ ಅಭ್ಯರ್ಥಿಗಳ ಒಂದು ವರ್ಷದ ಕಠಿಣ ಪರಿಶ್ರಮ ನೀರಿನಲ್ಲಿ ಹೋಮ ಮಾಡಿದಂತಾಗಿದೆ.
ಬ್ರಾಂಡ್ ಬೆಂಗಳೂರಿಗೆ ಕಳಂಕ ತಂದ ಆಡಳಿತ ವೈಫಲ್ಯ
ಈ ಘಟನೆ ರಾಷ್ಟ್ರಮಟ್ಟದಲ್ಲಿ ಬೆಂಗಳೂರಿನ ಆಡಳಿತಾತ್ಮಕ ವೈಫಲ್ಯವನ್ನು ಮತ್ತೆ ಮುನ್ನೆಲೆಗೆ ತಂದಿದೆ. ಕೇವಲ ಉತ್ಪಾದಕತೆಗೆ ಪೆಟ್ಟು ನೀಡುತ್ತಿದ್ದ ಈ ಸಮಸ್ಯೆ ಈಗ ಯುವಜನತೆಯ ಭವಿಷ್ಯವನ್ನೇ ಕಸಿದುಕೊಳ್ಳುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಿಬಿಎಂಪಿ, ಬಿಡಬ್ಲ್ಯೂಎಸ್‌ಎಸ್‌ಬಿ ಮತ್ತು ಬೆಸ್ಕಾಂ ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ರಸ್ತೆಗಳು ಪದೇ ಪದೇ ಹಾಳಾಗುತ್ತಿವೆ ಎಂಬ ದೂರುಗಳು ಕೇಳಿಬರುತ್ತಿವೆ. ಹೈಕೋರ್ಟ್ ಕೂಡ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ರಸ್ತೆಗುಂಡಿಗಳ ಸಮಸ್ಯೆ ಮಾತ್ರ ಬಗೆಹರಿದಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ಪರೀಕ್ಷೆ ತಪ್ಪಿಸಿಕೊಂಡ ವಿದ್ಯಾರ್ಥಿಗಳ ಪೋಷಕರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, "ಅಧಿಕಾರಿಗಳ ಭ್ರಷ್ಟಾಚಾರ ಮತ್ತು ಬೇಜವಾಬ್ದಾರಿತನಕ್ಕೆ ನಮ್ಮ ಮಕ್ಕಳು ಯಾಕೆ ಶಿಕ್ಷೆ ಅನುಭವಿಸಬೇಕು? ಅವರ ಒಂದು ವರ್ಷದ ಭವಿಷ್ಯವನ್ನು ಯಾರು ತಂದುಕೊಡುತ್ತಾರೆ" ಎಂದು ಪ್ರಶ್ನಿಸಿದ್ದಾರೆ.
ಮೊದಲೇ ಎಚ್ಚರಿಕೆ ನೀಡಿದ್ದ ಉದ್ಯಮಿಗಳು
ಉದ್ಯಮಿ ಟಿ.ವಿ. ಮೋಹನದಾಸ್ ಪೈ ಬೆಂಗಳೂರಿನ ರಸ್ತೆಗಳ ಬಗ್ಗೆ ನಿರಂತರವಾಗಿ ಧ್ವನಿ ಎತ್ತುತ್ತಾ ಬಂದಿದ್ದಾರೆ. "ನಾವು ಜಾಗತಿಕ ಮಟ್ಟದ ತೆರಿಗೆ ಪಾವತಿಸುತ್ತಿದ್ದೇವೆ, ಆದರೆ ನಮಗೆ ಸಿಗುತ್ತಿರುವುದು ಮೂರನೇ ದರ್ಜೆಯ ಮೂಲಸೌಕರ್ಯ" ಎಂದು ಹಲವು ಬಾರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ವಾಹನ ದಟ್ಟಣೆ ಹಾಗೂ ರಸ್ತೆ ಗುಂಡಿ ಸಮಸ್ಯೆಯಿಂದಾಗಿಯೇ ಬ್ಲಾಕ್ ಬಕ್ ಕಂಪೆನಿ ಬೆಳ್ಳಂದೂರಿನಿಂದ ತನ್ನ ಕಚೇರಿಯನ್ನು ಸ್ಥಳಾಂತರಿಸಲು ನಿರ್ಧರಿಸಿತ್ತು. ಈ ಸಮಯದಲ್ಲಿ ಆಂಧ್ರ ಪ್ರದೇಶದ ಸಚಿವರು ಬೆಂಗಳೂರಿನಲ್ಲಿರುವ ಉದ್ಯಮಿಗಳನ್ನು ತಮ್ಮಲ್ಲಿಗೆ ಆಹ್ವಾನಿಸಿದ್ದರು. ಇದು ಕರ್ನಾಟಕ ಹಾಗೂ ಆಂಧ್ರಪ್ರದೇಶದ ನಡುವೆ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿತ್ತು. ಇದಾದ ಬಳಿಕ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್, ಉದ್ಯಮಿಗಳಾದ ಕಿರಣ್ ಮಜುಂದಾರ್ ಶಾ, ಮೋಹನ್ ದಾಸ್ ಪೈ ಸೇರಿದಂತೆ ಹಲವು ಐಟಿ ದಿಗ್ಗಜರ ಜತೆ ಮಾತುಕತೆ ನಡೆಸಿ, ತ್ವರಿತವಾಗಿ ರಸ್ತೆ ಗುಂಡಿ ಮುಚ್ಚುವುದಾಗಿ ಭರವಸೆ ನೀಡಿದ್ದರು.
ಒಆರ್‌ಆರ್ ಕಂಪನಿಗಳ ಒಕ್ಕೂಟ ಪತ್ರ
ರಸ್ತೆ ಗುಂಡಿಗಳಿಂದಾಗಿ ಐಟಿ ಕಾರಿಡಾರ್‌ಗಳಾದ ಔಟರ್ ರಿಂಗ್ ರೋಡ್ , ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ ರಸ್ತೆಗಳಲ್ಲಿ ಉದ್ಯೋಗಿಗಳು ದಿನಕ್ಕೆ 4 ಗಂಟೆಗಳನ್ನು ರಸ್ತೆಯಲ್ಲೇ ಕಳೆಯಬೇಕಾಗಿ ಬರುತ್ತಿದೆ. ಇದರಿಂದ ಕಂಪನಿಗಳ ಉತ್ಪಾದಕತೆ ಕಡಿಮೆಯಾಗುತ್ತಿದ್ದು, ಕೋಟ್ಯಂತರ ರೂ. ಇಂಧನ ವ್ಯರ್ಥವಾಗುತ್ತಿದೆ ಎಂದು ಔಟರ್ ರಿಂಗ್ ರೋಡ್ ಕಂಪನಿಗಳ ಒಕ್ಕೂಟ (ORRICA) ಮತ್ತು ಹಲವು ಸ್ಟಾರ್ಟ್ಅಪ್ ಸಂಸ್ಥೆಗಳು ಸರ್ಕಾರಕ್ಕೆ ಕಟು ಎಚ್ಚರಿಕೆ ನೀಡಿದ್ದವು. ಈ ಒಕ್ಕೂಟವು ಸರ್ಕಾರಕ್ಕೆ ಪತ್ರ ಬರೆದು, "ರಸ್ತೆ ಗುಂಡಿ ಮತ್ತು ಮೂಲಸೌಕರ್ಯದ ಸಮಸ್ಯೆಯಿಂದಾಗಿ ಉದ್ಯಮ ವಲಯಕ್ಕೆ ವಾರ್ಷಿಕವಾಗಿ ಕೋಟ್ಯಂತರ ರೂ. ನಷ್ಟವಾಗುತ್ತಿದೆ. ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ದೊಡ್ಡ ಕಂಪೆನಿಗಳು ಬೆಳ್ಳಂದೂರು ಭಾಗ ತೊರೆಯಲಿವೆ" ಎಂದು ನೇರವಾಗಿಯೇ ಎಚ್ಚರಿಸಿತ್ತು.

