
ಟ್ರಾಫಿಕ್ ಕಿರಿಕಿರಿ ಇಲ್ಲದೆ ಗುಂಡಿ ಮುಚ್ಚಲು 'ಜೆಟ್ ಪ್ಯಾಚರ್' ತಂತ್ರಜ್ಞಾನ - ಕೃಷ್ಣಬೈರೇಗೌಡ
ಜೆಟ್ ಪ್ಯಾಚರ್ ತಂತ್ರಜ್ಞಾನ ಮೂಲಕ ಕಾಮಗಾರಿ ನಡೆದ 10 ನಿಮಿಷಗಳಲ್ಲಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಬಹುದು. ಹೀಗಾಗಿ ರಾತ್ರಿ ವೇಳೆಯೇ ರಸ್ತೆ ಗುಂಡಿ ಮುಚ್ಚಬೇಕು ಎಂಬ ಅನಿವಾರ್ಯತೆ ಇರುವುದಿಲ್ಲ.
ಸಂಚಾರ ದಟ್ಟಣೆಯಿಂದಾಗಿ ಬೆಂಗಳೂರಿನಲ್ಲಿ, ರಸ್ತೆ ಗುಂಡಿಗಳನ್ನು ಮುಚ್ಚುವ ಪ್ರಕ್ರಿಯೆಯೂ ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು. ಇದನ್ನು ಹೋಗಲಾಡಿಸಲು ಸಚಿವ ಕೃಷ್ಣ ಬೈರೇಗೌಡ ಅವರು 'ಜೆಟ್ ಪ್ಯಾಚರ್' ತಂತ್ರಜ್ಞಾನವನ್ನು ಪರಿಚಯಿಸಿದ್ದು, ಗುಂಡಿ ಮುಚ್ಚುವ ಕಾಮಗಾರಿಯಲ್ಲಿ ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡಿದ್ದಾರೆ.
ವಿಧಾನಸೌಧ ಮತ್ತು ಎಂ.ಎಸ್. ಬಿಲ್ಡಿಂಗ್ ನಡುವಿನ ರಸ್ತೆಯಲ್ಲಿ ನಡೆದ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ನಗರದಲ್ಲಿರುವ ಗುಂಡಿಗಳಲ್ಲಿ ಬಹುತೇಕವು 2 ರಿಂದ 3 ಇಂಚಿನ ಆಳದವು. ಇಂತಹ ಗುಂಡಿಗಳನ್ನು ಮುಚ್ಚಲು ಇಡೀ ರಸ್ತೆಯನ್ನು ಬ್ಲಾಕ್ ಮಾಡಿ, ಹಾಟ್ ಮಿಕ್ಸ್ ಹಾಕುವ ಅಗತ್ಯವಿಲ್ಲ. ಜೆಟ್ ಪ್ಯಾಚರ್ ಯಂತ್ರವು ಧೂಳನ್ನು ಶುಚಿಗೊಳಿಸಿ, ಟಾರ್ ಮತ್ತು ವೆಟ್ ಮಿಕ್ಸ್ ಅನ್ನು ಒಂದೇ ಯಂತ್ರದ ಮೂಲಕ ಸುರಿಯುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದರು.
ಸಾಂಪ್ರದಾಯಿಕ ವಿಧಾನಕ್ಕೂ ಜೆಟ್ ಪ್ಯಾಚರ್ಗೂ ಇರುವ ವ್ಯತ್ಯಾಸ
ಈ ಹಿಂದೆ ರಸ್ತೆ ಗುಂಡಿ ಮುಚ್ಚಲು ಹಾಟ್ ಮಿಕ್ಸ್ ಬಳಸಲಾಗುತ್ತಿತ್ತು. ಇದರ ಅನಾನುಕೂಲಗಳೆಂದರೆ ಕೆಲಸ ಆರಂಭಿಸುವ ಮುನ್ನ ವಾಹನ ಸಂಚಾರವನ್ನು ಸಂಪೂರ್ಣವಾಗಿ ತಡೆಯಬೇಕಿತ್ತು. ಹಾಟ್ ಮಿಕ್ಸ್ ಹಾಕಿದ ನಂತರ ಅದನ್ನು ಸಮತಟ್ಟು ಮಾಡಲು ರೋಲರ್ ಅಗತ್ಯವಿತ್ತು. ಮಳೆಗಾಲದಲ್ಲಿ ಹಾಟ್ ಮಿಕ್ಸ್ ಬಳಸಿ ಗುಂಡಿ ಮುಚ್ಚುವುದು ಅಸಾಧ್ಯವಾಗಿತ್ತು. ಇಡೀ ಪ್ರಕ್ರಿಯೆ ಮುಗಿಯಲು ಗಂಟೆಗಟ್ಟಲೆ ಬೇಕಾಗುತ್ತಿತ್ತು. ಆದರೆ, ಜೆಟ್ ಪ್ಯಾಚರ್ ತಂತ್ರಜ್ಞಾನದಲ್ಲಿ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವಿದೆ. ಕಾಮಗಾರಿ ನಡೆದ 10 ನಿಮಿಷಗಳಲ್ಲಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಬಹುದು. ಹೀಗಾಗಿ ರಾತ್ರಿ ವೇಳೆಯೇ ರಸ್ತೆ ಗುಂಡಿ ಮುಚ್ಚಬೇಕು ಎಂಬ ಅನಿವಾರ್ಯತೆ ಇರುವುದಿಲ್ಲ.
ಅಡ್ವಾನ್ಸ್ಡ್ ಜೆಟ್ ಪ್ಯಾಚರ್ ಯಂತ್ರವು ಅಧುನಿಕ ತಾಂತ್ರಿಕತೆಯನ್ನು ಹೊಂದಿದೆ. ಇದು ಗಂಟೆಗೆ 1,370 ಘನ ಮೀಟರ್ ಗಾಳಿಯ ಹರಿವಿನ ಸಾಮರ್ಥ್ಯದ ಬ್ಲೋವರ್ ಹೊಂದಿದೆ. 50 ಮಿ.ಮೀ. ಆಳದ ಗುಂಡಿಗಳನ್ನು ಕೋಲ್ಡ್ ಮಿಕ್ಸ್ ತಂತ್ರಜ್ಞಾನ ಬಳಸಿ ಸೆಮಿ ಡೆನ್ಸ್ ಬಿಟ್ಯುಮಿನಸ್ ಕಾಂಕ್ರೀಟ್ ಮೂಲಕ ದುರಸ್ತಿ ಮಾಡಲಾಗುತ್ತದೆ. ಗುಂಡಿಯಲ್ಲಿರುವ ನೀರು ಮತ್ತು ಧೂಳನ್ನು ಸಂಪೂರ್ಣವಾಗಿ ಹೊರತೆಗೆಯುವ ಬ್ಲೋವರ್ ಸೌಲಭ್ಯವಿದ್ದು, ಇದು ಕಾಮಗಾರಿಯ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಶೇ.5ರಷ್ಟು ಬಿಟ್ಯುಮೆನ್ ಅಥವಾ ಶೇ.10ರಷ್ಟು ಆರ್‌ಎಸ್‌ಐ ಬಿಟ್ಯುಮೆನ್ ಎಮಲ್ಷನ್ ಬಳಸಿ ಕಾಮಗಾರಿ ನಡೆಸಲಾಗುತ್ತದೆ.
2 ಕೋಟಿ ರೂ.ಗಳಲ್ಲಿ ಪೈಲಟ್ ಪ್ರಾಜೆಕ್ಟ್
ಪ್ರಸ್ತುತ ಬೆಂಗಳೂರು ಕೇಂದ್ರ ಪಾಲಿಕೆ ವ್ಯಾಪ್ತಿಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಕೈಗೆತ್ತಿಕೊಳ್ಳಲಾಗಿದೆ. ಈ ತಂತ್ರಜ್ಞಾನ ಇಲ್ಲಿ ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಇಡೀ ಪಾಲಿಕೆ ವ್ಯಾಪ್ತಿಯಲ್ಲಿ ಇದೇ ಮಾದರಿಯನ್ನು ಅಳವಡಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಸಚಿವರು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದು, ರಸ್ತೆ ಗುಂಡಿ ಮುಚ್ಚುವ ಕೆಲಸದ ವೇಳೆ ಸಂಚಾರಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು. ತಂತ್ರಜ್ಞಾನದ ಬಳಕೆಯು ಕೇವಲ ದಕ್ಷತೆಯನ್ನು ಹೆಚ್ಚಿಸುವುದಷ್ಟೇ ಅಲ್ಲ, ಕಾರ್ಮಿಕರ ಮೇಲೆ ಬೀಳುವ ಕೆಲಸದ ಹೊರೆಯನ್ನು ಕಡಿಮೆ ಮಾಡುತ್ತದೆ ಎಂದರು.
ಈ ತಂತ್ರಜ್ಞಾನದಿಂದ ಲಾಭವೇನು?
ಸಾಂಪ್ರದಾಯಿಕ ವಿಧಾನಕ್ಕಿಂತ ವೇಗವಾಗಿ ಕೆಲಸ ಪೂರ್ಣಗೊಳ್ಳುತ್ತದೆ. ರಸ್ತೆ ಬಂದ್ ಮಾಡದೆಯೇ ದುರಸ್ತಿ ಕಾರ್ಯ ಮಾಡಬಹುದು. ಯಂತ್ರದ ಮೂಲಕ ಮಿಶ್ರಣ ಮಾಡುವುದರಿಂದ ಗುಂಡಿಗಳು ದೀರ್ಘಕಾಲದವರೆಗೆ ಬಾಳಿಕೆ ಬರುತ್ತವೆ. ಮಳೆಗಾಲದಲ್ಲೂ ಗುಂಡಿ ಮುಚ್ಚಲು ಸಾಧ್ಯವಾಗುತ್ತದೆ. ಬೆಂಗಳೂರಿನ ರಸ್ತೆ ಗುಂಡಿಗಳ ಸಮಸ್ಯೆ ಬಗೆಹರಿಸಲು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿರುವ ಸರ್ಕಾರದ ಈ ಕ್ರಮ ಶ್ಲಾಘನೀಯ.

