GBA Election Part-3| ಬೆಂಗಳೂರಿನ ಮತ ಖಜಾನೆಯಾದ ಹಿಂದಿ ಭಾಷಿಕರು..!
x

GBA Election Part-3| ಬೆಂಗಳೂರಿನ 'ಮತ ಖಜಾನೆ'ಯಾದ ಹಿಂದಿ ಭಾಷಿಕರು..!

ಬೆಂಗಳೂರಿನ 8-10 ವಾರ್ಡ್‌ಗಳಲ್ಲಿ ಹಿಂದಿ ಭಾಷಿಕರ ಮತಗಳು ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸುವಷ್ಟರ ಮಟ್ಟಿಗೆ ನಿರ್ಣಾಯಕವಾಗಿವೆ. ಒಟ್ಟು ಮತದಾರರಲ್ಲಿ ಹಿಂದಿ ಭಾಷಿಕರ ಪಾಲು ಶೇ 20ರ ಗಡಿ ದಾಟಿದೆ.


Click the Play button to hear this message in audio format

ವೋಟ್‌ಬ್ಯಾಂಕ್‌ ರಾಜಕಾರಣ, ಗಡಿ ಹಾಗೂ ಭಾಷೆಯ ಹಂಗಿಲ್ಲ. ದೇಶದ ಎಲ್ಲ ರಾಜ್ಯಗಳ ಜನರನ್ನು ತನ್ನತ್ತ ಆಕರ್ಷಿಸುತ್ತಿರುವ ಸಿಲಿಕಾನ್‌ ಸಿಟಿಯ ಪರಿಸ್ಥಿತಿಯೂ ಇದೇ ರೀತಿಯಲ್ಲಿದೆ. ರಾಜಕಾರಣಕ್ಕೆ ಭಾಷೆಯೇ ಮತ ಖಜಾನೆಯಾಗಿ ಮಾರ್ಪಟ್ಟಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಕನ್ನಡದ ಅಸ್ಮಿತೆಯ ಪ್ರಶ್ನೆ ಎದುರಾಗಿದೆ.

ಬೃಹತ್‌ ಬೆಂಗಳೂರಿನಲ್ಲಿ 15-20 ವರ್ಷದ ಅಂತರದಲ್ಲಿ ಜನಸಂಖ್ಯೆಯ ಸ್ವರೂಪವೇ ಬದಲಾಗಿದೆ. ರಾಜಕೀಯ ಪಕ್ಷಗಳಿಗೆ ಹಿಂದಿ ಭಾಷಿಕರು ದೊಡ್ಡ ಮಟ್ಟದ ಮತ ಬ್ಯಾಂಕ್‌ ಆಗಿದ್ದಾರೆ. ಬೆಂಗಳೂರಿನ ಆಡಳಿತದ ಚುಕ್ಕಾಣಿ ಹಿಡಿಯುವ ವಿಚಾರದಲ್ಲಿ ರಾಜಕೀಯ ಪಕ್ಷಗಳಿಗೆ ಹಿಂದಿ ಭಾಷಿಕರೇ 'ಕಿಂಗ್ ಮೇಕರ್'ಗಳಾಗಿ ಬದಲಾಗಿದ್ದಾರೆ.

ಬೆಂಗಳೂರಿನ 8-10 ವಾರ್ಡ್‌ಗಳಲ್ಲಿ ಹಿಂದಿ ಭಾಷಿಕರ ಮತಗಳು ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸುವ ಹಂತಕ್ಕೆ ತಲುಪಿದ್ದು, ಒಟ್ಟು ಮತದಾರರಲ್ಲಿ ಹಿಂದಿ ಭಾಷಿಕರ ಪಾಲು ಶೇ.20ರ ಗಡಿ ದಾಟಿದೆ.

ಬೆಂಗಳೂರು ಕೇವಲ ಕರ್ನಾಟಕದ ರಾಜಧಾನಿಯಲ್ಲ, ಜಾಗತಿಕ ಮಟ್ಟದ ಐಟಿ-ಬಿಟಿ ಹಬ್ ಆಗಿದೆ. ಕಳೆದ ಎರಡು ದಶಕಗಳಲ್ಲಿ ಉತ್ತರ ಭಾರತದಿಂದ ಉದ್ಯೋಗ ಅರಸಿ ಬಂದ ಹಿಂದಿ ಭಾಷಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. 2011ರ ಜನಗಣತಿ ಪ್ರಕಾರ ಬೆಂಗಳೂರಿನಲ್ಲಿ ಹಿಂದಿ ಮಾತನಾಡುವವರ ಪ್ರಮಾಣ ಸುಮಾರು ಶೇ.12 ರಷ್ಟಿತ್ತು. ಆದರೆ, ಈಗಿನ ಅಂದಾಜಿನ ಪ್ರಕಾರ ಆ ಪ್ರಮಾಣ ಶೇ.20ರಷ್ಟು ದಾಟಿದೆ ಎಂದು ಹೇಳಲಾಗುತ್ತಿದೆ.

ತಮಿಳು ಮತ್ತು ತೆಲುಗು ಭಾಷಿಕರನ್ನು ಹಿಂದಿಕ್ಕಿ ಹಿಂದಿ ಭಾಷೆಯು ಬೆಂಗಳೂರಿನ ಎರಡನೇ ಅತಿದೊಡ್ಡ ಭಾಷೆಯಾಗಿ ಬೆಳೆಯುತ್ತಿದೆ. ಹಿಂದಿ ಭಾಷಿಕರಲ್ಲಿ ಉರ್ದು ಮಾತನಾಡುವರು, ಗುಜರಾತಿಗಳು, ಒಡಿಸಾ ಭಾಷಿಕರೂ ಇದ್ದಾರೆ. ಇನ್ನು ಭಾಷೆಯು ಕೇವಲ ವೈವಿದ್ಯತೆಗೆ ಸೀಮಿತವಾಗಿಲ್ಲ. ನಗರದ ಆರ್ಥಿಕತೆ, ರಾಜಕೀಯದ ಮೇಲೂ ನೇರ ಪ್ರಭಾವ ಬೀರುತ್ತಿದೆ ಎನ್ನಲಾಗಿದೆ.

ಹಿಂದಿ ಭಾಷಿಕರ ಪ್ರಮುಖ ಪ್ರದೇಶಗಳು

ಬೆಂಗಳೂರಿನ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಹಿಂದಿ ಭಾಷಿಕರ ಜನಸಂಖ್ಯೆ ಅತ್ಯಂತ ದಟ್ಟವಾಗಿದೆ. ಈ ಪ್ರದೇಶಗಳು ಇಂದು 'ಮಿನಿ ಉತ್ತರ ಭಾರತ'ದಂತೆ ಭಾಸವಾಗುತ್ತಿವೆ ಎಂಬ ಮಾತುಗಳು ಕೇಳಿಬಂದಿವೆ.

ಮಹದೇವಪುರ, ವೈಟ್‌ಫೀಲ್ಡ್‌, ಬೆಳ್ಳಂದೂರು, ಎಚ್‌ಎಸ್‌ಆರ್‌ ಲೇಔಟ್‌, ಮಾರತಹಳ್ಳಿ, ಸರ್ಜಾಪುರ, ಯಲಹಂಕ, ಹೆಬ್ಬಾಳ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದಿ ಭಾಷಿಕರು ನೆಲೆಗೊಂಡಿದ್ದಾರೆ. ಮಹದೇವಪುರ, ವೈಟ್‌ಫೀಲ್ಡ್‌ನಲ್ಲಿ ಐಟಿ ಕಂಪನಿಗಳಲ್ಲಿ ಕೆಲಸ ಮಾಡುವ ಬಹುಪಾಲು ಉದ್ಯೋಗಿಗಳು ಉತ್ತರ ಭಾರತದವರಾಗಿದ್ದು, ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ಹಿಂದಿಯೇ ಪ್ರಧಾನ ಭಾಷೆಯಾಗಿದೆ.

ಬೆಳ್ಳಂದೂರು, ಎಚ್‌ಎಸ್‌ಆರ್ ಲೇಔಟ್‌ ಸ್ಟಾರ್ಟ್‌ಅಪ್‌ಗಳ ಕೇಂದ್ರವಾಗಿದೆ. ಇಲ್ಲಿ ಯುವ ಹಿಂದಿ ಭಾಷಿಕರ ಸಂಖ್ಯೆ ಹೆಚ್ಚಾಗಿದ್ದಾರೆ ಎನ್ನಲಾಗಿದೆ. ಮಾರತಹಳ್ಳಿ, ಸರ್ಜಾಪುರದಲ್ಲಿ ಮಧ್ಯಮ ವರ್ಗದ ಹಿಂದಿ ಭಾಷಿಕರು ಮತ್ತು ವಲಸೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಯಲಹಂಕ, ಹೆಬ್ಬಾಳ ಭಾಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಿಂದಿ ಭಾಷಿಕರ ವಸತಿ ಪ್ರದೇಶಗಳು ಹೆಚ್ಚಾಗಿವೆ ಎಂಬುದು ರಾಜಕೀಯ ಪಕ್ಷಗಳ ಕಾರ್ಯಕರ್ತರು ಮಾಡಿರುವ ಸಮೀಕ್ಷೆಗಳಿಂದ ತಿಳಿದುಬಂದಿದೆ.

ಮತ ಸೆಳೆಯಲು ರಾಜಕೀಯ ಪಕ್ಷಗಳ ತಂತ್ರ

ರಾಜಕೀಯ ಪಕ್ಷಗಳು ಹಿಂದಿ ಭಾಷಿಕರ ಮತಗಳನ್ನು ಸೆಳೆಯಲು ತಂತ್ರಗಳನ್ನು ರೂಪಿಸುತ್ತಿವೆ. ಸೈದ್ಧಾಂತಿಕವಾಗಿ ಹಿಂದಿ ಭಾಷಿಕರ ನಿಕಟವರ್ತಿಯಾಗಿರುವ ಬಿಜೆಪಿಯು, 'ರಾಷ್ಟ್ರೀಯತೆ' ಮತ್ತು 'ಹಿಂದೂತ್ವ'ದ ಹೆಸರಿನಲ್ಲಿ ಸೆಳೆಯುವ ಬಗ್ಗೆ ತಂತ್ರಗಾರಿಕೆ ರೂಪಿಸಿದೆ.

ಇನ್ನು, ಕಾಂಗ್ರೆಸ್‌ ಹಿಂದಿ ಭಾಷಿಕ ಮತದಾರರನ್ನು ತಲುಪಲು ಉತ್ತರ ಭಾರತದ ನಾಯಕರನ್ನು ಪ್ರಚಾರಕ್ಕೆ ಬಳಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಿದೆ. ಅವರಿಗೆ ಮೂಲಸೌಲಭ್ಯ ಕಲ್ಪಿಸುವ ಮೂಲಕ ಕಾಂಗ್ರೆಸ್‌ ಹಿಂದಿ ಭಾಷಿಕರನ್ನು ಮತಬ್ಯಾಂಕ್‌ ಆಗಿ ಮಾಡಿಕೊಳ್ಳುವ ತಂತ್ರ ಮಾಡಿದೆ ಎಂದು ಮೂಲಗಳು ಹೇಳಿವೆ.

ಬೆಂಗಳೂರಿನಲ್ಲಿ 'ಕನ್ನಡ ಮತ್ತು ಹಿಂದಿ' ಸಂಘರ್ಷ ಹಲವು ವರ್ಷಗಳಿಂದ ನಡೆಯುತ್ತಲೇ ಬಂದಿದೆ. ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ, ಹಿಂದಿ ಹೇರಿಕೆ ವಿರೋಧದಂತಹ ಹೋರಾಟಗಳು ನಡೆಯುತ್ತಲೇ ಇವೆ. ಆದರೆ, ಸರ್ಕಾರಗಳು ಮಾತ್ರ ಈ ವಿಚಾರದಲ್ಲಿ ದ್ವಂದ್ವ ನೀತಿ ಅನುಸರಿಸುತ್ತಿವೆ.

ಯಾವುದೇ ವಿವಾದ ಉಂಟಾದಾಗ ಸರ್ಕಾರಗಳು ಕನ್ನಡಿಗರ ಪರ ಮಾತನಾಡಿದಂತೆ ತೋರಿದರೂ, ಹಿಂದಿ ಭಾಷಿಕರ ವಿರುದ್ಧ ಕಠಿಣ ಕ್ರಮ ಜರುಗಿಸಲು ಹಿಂಜರಿಯುತ್ತಿವೆ. ಹಿಂದಿ ಭಾಷಿಕರು ಸಂಘಟಿತರಾಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಂಡರೆ ಒಂದು ದೊಡ್ಡ ಮತ ಬ್ಯಾಂಕ್ ಕೈತಪ್ಪುವ ಆತಂಕ ರಾಜಕೀಯ ಪಕ್ಷಗಳಿಗಿದೆ.

ಆರ್ಥಿಕತೆಯಲ್ಲಿ ಕೊಡುಗೆ

ಬೆಂಗಳೂರಿನ ಆರ್ಥಿಕತೆಗೆ ಉತ್ತರ ಭಾರತದ ಉದ್ಯಮಿಗಳು ಮತ್ತು ಕಾರ್ಮಿಕರ ಕೊಡುಗೆ ದೊಡ್ಡದಿದೆ. ಅವರ ಬಗ್ಗೆ ಕ್ರಮ ಕೈಗೊಂಡರೆ ಹೂಡಿಕೆಯ ಮೇಲೆ ಪರಿಣಾಮ ಬೀರಬಹುದು ಎಂಬ ಆರ್ಥಿಕ ಭಯ ಸರ್ಕಾರಕ್ಕಿದೆ. ಇದಲ್ಲದೇ, ರಾಜ್ಯದ ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ರಾಷ್ಟ್ರೀಯ ಮಟ್ಟದ ಪಕ್ಷಗಳಾಗಿದ್ದು, ದೆಹಲಿಯ ನಾಯಕರ ನಿರ್ದೇಶನದಂತೆ ನಡೆಯಬೇಕಾಗುತ್ತದೆ. ಹಿಂದಿ ವಿರೋಧಿ ಕ್ರಮ ಕೈಗೊಂಡರೆ ಅದು ರಾಷ್ಟ್ರೀಯ ಮಟ್ಟದಲ್ಲಿ ಪಕ್ಷದ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಮೃದು ಧೋರಣೆ ತಾಳಲಾಗುತ್ತದೆ ಎಂದು ಹೇಳಲಾಗಿದೆ.

ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಹಿಂದಿ ಭಾಷಿಕರಿಗೆ ಪೂರಕವಾದ ವಾತಾವರಣವನ್ನು ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ಕಲ್ಪಿಸುತ್ತಿವೆ ಎಂಬ ಆರೋಪಗಳೂ ಇವೆ. ಉತ್ತರ ಭಾರತದ ಹಬ್ಬಗಳಾದ ಛತ್ ಪೂಜೆ, ದುರ್ಗಾ ಪೂಜೆ ಮತ್ತು ಗಣೇಶೋತ್ಸವದಂತಹ ಸಂದರ್ಭಗಳಲ್ಲಿ ಹಿಂದಿ ಭಾಷಿಕ ಪ್ರದೇಶಗಳಿಗೆ ವಿಶೇಷ ಅನುದಾನ ಮತ್ತು ಭದ್ರತೆಯನ್ನು ಸರ್ಕಾರ ಒದಗಿಸುತ್ತದೆ. ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆ, ಇದು ಅಲ್ಲಿನ ಹಿಂದಿ ಭಾಷಿಕರಿಗೆ ತಮ್ಮದೇ ಸಂಸ್ಕೃತಿಯನ್ನು ಮುಂದುವರಿಸಲು ಪೂರಕವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಹಿಂದಿ ಭಾಷಿಕರು ಹೆಚ್ಚಳವಾಗಿರುವ ಕುರಿತು ʼದ ಫೆಡರಲ್‌ ಕರ್ನಾಟಕʼ ಜತೆ ಮಾತನಾಡಿದ ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌, ಐಟಿ ಕಂಪನಿಗಳು ಹೆಚ್ಚಾದ ಬಳಿಕ ಹಿಂದಿ ಭಾಷಿಕರು ಬೆಂಗಳೂರಿಗೆ ಬರುತ್ತಿದ್ದಾರೆ. ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇತ್ತೀಚಿನ ವರ್ಷದಲ್ಲಿ ಹಿಂದಿ ಭಾಷಿಕರು ಹೆಚ್ಚಾಗುತ್ತಿದ್ದಾರೆ. ಪಶ್ಚಿಮ ವಿಭಾಗದ ಪಾಲಿಕೆಗೆ ಮಾತ್ರ ಕನ್ನಡಿಗ ಮೇಯರ್‌ ಆಯ್ಕೆಯಾಗಬಹುದು. ಇನ್ನುಳಿದಂತೆ ಪಾಲಿಕೆಗೆ ಕನ್ನಡಿಗ ಮೇಯರ್‌ ಆಯ್ಕೆಯಾಗುವುದಿಲ್ಲ. ಮುಸ್ಲಿಂ, ತೆಲುಗು, ತಮಿಳು ಭಾಷಿಕರು ಮೇಯರ್‌ ಆಗುವ ಸಾಧ್ಯತೆ ಇದೆ ಎಂದರು.

Read More
Next Story