ಠಾಣೆಗಳ ಆವರಣದಲ್ಲಿ ತುಕ್ಕು ಹಿಡಿದ ವಾಹನಗಳಿಗೆ ಮುಕ್ತಿ: 20 ದಿನದಲ್ಲಿ ಸ್ವಚ್ಛತೆ
x

ಠಾಣೆಗಳ ಆವರಣದಲ್ಲಿ ತುಕ್ಕು ಹಿಡಿದ ವಾಹನಗಳಿಗೆ ಮುಕ್ತಿ: 20 ದಿನದಲ್ಲಿ ಸ್ವಚ್ಛತೆ

ದಶಕಗಳಿಂದ ಪೊಲೀಸ್ ಠಾಣೆಗಳ ಮುಂಭಾಗ, ರಸ್ತೆ ಬದಿ, ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿಕೊಂಡಿದ್ದ 8,500ಕ್ಕೂ ಹೆಚ್ಚು ವಾಹನಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಸರ್ಕಾರ ಸ್ಥಳ ಗುರುತಿಸಿದೆ.


Click the Play button to hear this message in audio format

ದಶಕಗಳಿಂದ ಪೊಲೀಸ್ ಠಾಣೆಗಳ ಮುಂಭಾಗ, ರಸ್ತೆ ಬದಿ ಮತ್ತು ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿಕೊಂಡಿದ್ದ ಸಾವಿರಾರು ಜಪ್ತಿ ವಾಹನಗಳ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಗಲಿದೆ. ನಗರದಲ್ಲಿ ಅಂದಾಜು 8,500ಕ್ಕೂ ಹೆಚ್ಚು ಜಪ್ತಿ ಮಾಡಿದ ವಾಹನಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಕಂದಾಯ ಇಲಾಖೆಯು ಸೂಕ್ತ ಜಾಗವನ್ನು ಗುರುತಿಸಿದ್ದು, ಇನ್ನು ಕೇವಲ 15-20 ದಿನಗಳಲ್ಲಿ ಠಾಣಾ ಆವರಣಗಳು ಸ್ವಚ್ಛವಾಗಲಿವೆ.

ಪೊಲೀಸ್ ಇಲಾಖೆಯು ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಿದ ದ್ವಿಚಕ್ರ, ತ್ರಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳು ವರ್ಷಗಳ ಕಾಲ ಠಾಣೆಗಳ ಆವರಣದಲ್ಲಿಯೇ ಉಳಿದುಕೊಳ್ಳುತ್ತಿದ್ದವು. ನ್ಯಾಯಾಲಯದಲ್ಲಿ ಪ್ರಕರಣಗಳು ಬಾಕಿ ಇರುವುದರಿಂದ ಅಥವಾ ಇತ್ಯರ್ಥವಾಗಲು ದಶಕಗಳೇ ತಗಲುವುದರಿಂದ, ಈ ವಾಹನಗಳು ವಿಲೇವಾರಿಯಾಗದೆ ಗುಡ್ಡೆ ಬೀಳುತ್ತಿದ್ದವು. ಈ ವಾಹನಗಳು ಕೇವಲ ಠಾಣೆಯ ಜಾಗವನ್ನು ಅತಿಕ್ರಮಿಸಿದ್ದಲ್ಲದೆ, ಫುಟ್‌ಪಾತ್ ಮತ್ತು ಸಾರ್ವಜನಿಕ ರಸ್ತೆಗಳಿಗೂ ಹರಡಿಕೊಂಡಿದ್ದವು. ಇದರಿಂದಾಗಿ ಪಾದಚಾರಿಗಳಿಗೆ ಓಡಾಡಲು ಜಾಗವಿಲ್ಲದೆ, ಸಂಚಾರ ದಟ್ಟಣೆ ಉಂಟಾಗಿ ಜನಸಾಮಾನ್ಯರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದರು.

ಸಾರ್ವಜನಿಕರ ದೂರಿಗೆ ಸ್ಪಂದಿಸಿದ ಸರ್ಕಾರ

ಸಾರ್ವಜನಿಕರ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು, ಎರಡು ತಿಂಗಳ ಸತತ ಪ್ರಯತ್ನದ ನಂತರ ಪೊಲೀಸ್ ಇಲಾಖೆಯೊಂದಿಗೆ ಜಂಟಿಯಾಗಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡಿದ್ದಾರೆ. ಕಂದಾಯ ಇಲಾಖೆಯು ಈ ವಾಹನಗಳನ್ನು ಸ್ಥಳಾಂತರಿಸಲು ಬೆಂಗಳೂರಿನ ಸುತ್ತಮುತ್ತ ವಿವಿಧ ಕಡೆಗಳಲ್ಲಿ ವಿಶಾಲವಾದ ಜಮೀನನ್ನು ಕಾಯ್ದಿರಿಸಿದೆ.

ಕಂದಾಯ ಇಲಾಖೆಯಿಂದ ದೊರೆತ ಜಾಗಗಳ ವಿವರ

ಪೊಲೀಸ್ ಇಲಾಖೆಯ ಸುಪರ್ದಿಗೆ ಸದ್ಯ ಕಂದಾಯ ಇಲಾಖೆ ನೀಡಿರುವ ಪ್ರಮುಖ ಜಮೀನುಗಳೆಂದರೆ ಕೆ.ಆರ್. ಪುರಂದ ಹಗದೂರು ಗ್ರಾಮದಲ್ಲಿ 26 ಗುಂಟೆ ಜಮೀನು, ಬಿದರಹಳ್ಳಿಯ ಯರಪ್ಪನಹಳ್ಳಿ ಗ್ರಾಮದಲ್ಲಿ 35 ಗುಂಟೆ ಜಮೀನು, ಬೇಗೂರು ಬಳಿಯ ಹೊಂಗಸಂದ್ರ ಗ್ರಾಮದಲ್ಲಿ 1 ಎಕರೆ 1 ಗುಂಟೆ ಜಮೀನು ನೀಡಲು ಆದೇಶಿಸಲಾಗಿದೆ. ಅಲ್ಲದೇ, ಇದರ ಜತೆಗೆ ಆನೇಕಲ್, ಯಲಹಂಕ, ದಾಸನಪುರ ಹೋಬಳಿಗಳ ವ್ಯಾಪ್ತಿಯಲ್ಲಿ ಹಲವು ಎಕರೆ ಜಮೀನುಗಳನ್ನು ಕಾಯ್ದಿರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅಲ್ಲಿ ಅಂದಾಜು 23 ಎಕರೆಗೂ ಹೆಚ್ಚು ಜಾಗದಲ್ಲಿ ಈ ವಾಹನಗಳನ್ನು ಇರಿಸಲು ವ್ಯವಸ್ಥೆ ಮಾಡಲಾಗುತ್ತಿದೆ.

ಮುಂದಿನ ಹಂತ: ವಾಹನಗಳ ಸ್ಥಳಾಂತರ

ಕಂದಾಯ ಇಲಾಖೆ ಮಂಜೂರು ಮಾಡಿದ ಜಾಗಗಳನ್ನು ಪೊಲೀಸ್ ಇಲಾಖೆ ಈಗ ವಶಕ್ಕೆ ಪಡೆಯಲಿದೆ. ಜೆಸಿಬಿ ಬಳಸಿ ಜಾಗವನ್ನು ಸಮತಟ್ಟು ಮಾಡಲಾಗುವುದು ಮತ್ತು ಅಲ್ಲಿ ವಾಹನಗಳಿಗೆ ಯಾವುದೇ ಹಾನಿಯಾಗದಂತೆ ಕಾಂಪೌಂಡ್ ಅಥವಾ ಬೇಲಿ ಹಾಕಿ ಭದ್ರತೆ ಒದಗಿಸಲಾಗುವುದು. ಪೊಲೀಸ್ ಅಧಿಕಾರಿಗಳು ಯಾವ ಠಾಣೆಯ ವಾಹನಗಳು ಎಲ್ಲಿಗೆ ಹೋಗಬೇಕು ಎಂಬ ಬಗ್ಗೆ ಸ್ಪಷ್ಟ ಯೋಜನೆ ರೂಪಿಸಿದ್ದು, ಮುಂದಿನ 15 ರಿಂದ 20 ದಿನಗಳಲ್ಲಿ ಸಂಪೂರ್ಣ ವಾಹನಗಳ ಸ್ಥಳಾಂತರ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ದೂರುಗಳಿಗೆ ಆದ್ಯತೆ : ಕೃಷ್ಣಬೈರೇಗೌಡ

ಈ ಬಗ್ಗೆ ಮಾತನಾಡಿರುವ ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಸಾರ್ವಜನಿಕರ ದೂರುಗಳಿಗೆ ನಾವು ಆದ್ಯತೆ ನೀಡಿದ್ದೇವೆ. ಎರಡು ತಿಂಗಳ ಪ್ರಯತ್ನದ ನಂತರ ಸಮಸ್ಯೆ ಬಗೆಹರಿದಿದೆ. ಈ ಮೂಲಕ ನಗರದ ಸಂಚಾರ ದಟ್ಟಣೆ ಮತ್ತು ಪಾದಚಾರಿ ಮಾರ್ಗಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಇದೊಂದು ಸಣ್ಣ ಆದರೆ ಮಹತ್ವದ ಹೆಜ್ಜೆ ಎಂದು ತಿಳಿಸಿದ್ದಾರೆ. ಜಮೀನು ನೀಡಿದ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಅವರು ಧನ್ಯವಾದ ಸಲ್ಲಿಸಿದ್ದಾರೆ.

ನಗರಕ್ಕೆ ಸಿಗುವ ಲಾಭಗಳೇನು?

ಪೊಲೀಸ್ ಠಾಣೆಗಳು ಅಚ್ಚುಕಟ್ಟಾಗಿ ಕಾಣಲಿದ್ದು, ಸಿಬ್ಬಂದಿಗೆ ಕೆಲಸ ಮಾಡಲು ಹೆಚ್ಚು ಜಾಗ ಸಿಗಲಿದೆ. ಸಂಚಾರ ಸುಧಾರಣೆ: ರಸ್ತೆ ಬದಿ ನಿಂತಿದ್ದ ವಾಹನಗಳು ತೆರವಾಗುವುದರಿಂದ ಟ್ರಾಫಿಕ್ ಸಮಸ್ಯೆ ಕಡಿಮೆಯಾಗಲಿದೆ. ಪಾದಚಾರಿಗಳು ಯಾವುದೇ ಅಡಚಣೆಯಿಲ್ಲದೆ ಓಡಾಡಲು ಅವಕಾಶವಾಗಲಿದೆ. ಗುಜರಿ ವಾಹನಗಳ ಜಾಗದಲ್ಲಿ ಕಸದ ರಾಶಿ ಬೀಳುವುದು ಮತ್ತು ಸೊಳ್ಳೆಗಳ ಉತ್ಪತ್ತಿ ತಾಣವಾಗುವುದು ತಪ್ಪಲಿದೆ. ಒಟ್ಟಾರೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಈ ಸಮಸ್ಯೆ ಬಗೆಹರಿಯುತ್ತಿರುವುದು ಬೆಂಗಳೂರಿನ ನಾಗರಿಕರಿಗೆ ದೊಡ್ಡ ನಿರಾಳತೆ ನೀಡಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರ ತೆಗೆದುಕೊಂಡಿರುವ ಈ ಕ್ರಮ ಈಗ ಪ್ರಶಂಸೆಗೆ ಪಾತ್ರವಾಗಿದೆ.

Read More
Next Story