
ಪೊಲೀಸರು ವಾಹನ ಜಪ್ತಿ ಮಾಡಿದರು. (ಸಾಂದರ್ಭಿಕ ಚಿತ್ರ)
IPL ಫೈನಲ್ ವೇಳೆ ಬೆಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ; ನಿಯಮ ಉಲ್ಲಂಘಿಸಿದ 75 ವಾಹನಗಳು ಸೀಜ್!
ಉತ್ತರ ವಿಭಾಗದ 13 ಪೊಲೀಸ್ ಠಾಣಾ ಸರಹದ್ದುಗಳಲ್ಲಿ ಹಿರಿಯ ಅಧಿಕಾರಿಗಳು ಸೇರಿದಂತೆ ಎಲ್ಲಾ ವರ್ಗದ ಸಿಬ್ಬಂದಿ ರಾತ್ರಿ ಗಸ್ತು ತಿರುಗಲಾಗಿದ್ದು, ಪ್ರಮುಖ ರಸ್ತೆಗಳಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿ ತೀವ್ರ ವಾಹನ ತಪಾಸಣೆ ನಡೆಸಲಾಗಿದೆ.
ಐಪಿಎಲ್ ಕ್ರಿಕೆಟ್ ಫೈನಲ್ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಉತ್ತರ ವಿಭಾಗದ ಪೊಲೀಸರು ಭಾನುವಾರ (ಮೇ 31) ರಾತ್ರಿ ಭರ್ಜರಿ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ನಿಯಮ ಉಲ್ಲಂಘಿಸಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಹಾಗೂ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಒಟ್ಟು 75 ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಭಾನುವಾರ ರಾತ್ರಿ ಹೈವೋಲ್ಟೇಜ್ ಐಪಿಎಲ್ ಫೈನಲ್ ಪಂದ್ಯ ನಡೆದ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಉತ್ತರ ವಿಭಾಗದ 13 ಪೊಲೀಸ್ ಠಾಣಾ ಸರಹದ್ದುಗಳಲ್ಲಿ ಹಿರಿಯ ಅಧಿಕಾರಿಗಳು ಸೇರಿದಂತೆ ಎಲ್ಲಾ ವರ್ಗದ ಸಿಬ್ಬಂದಿ ರಾತ್ರಿ ಗಸ್ತು ತಿರುಗಲಾಗಿದ್ದು, ಪ್ರಮುಖ ರಸ್ತೆಗಳಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿ ತೀವ್ರ ವಾಹನ ತಪಾಸಣೆ ನಡೆಸಲಾಗಿದೆ. ಈ ವೇಳೆ ರಸ್ತೆಗಳಲ್ಲಿ ಅಪಾಯಕಾರಿಯಾಗಿ ದ್ವಿಚಕ್ರ ವಾಹನಗಳಲ್ಲಿ ವೀಲಿಂಗ್ ಮಾಡುತ್ತಿದ್ದ ಪುಂಡರು, ತ್ರಿಬಲ್ ರೈಡಿಂಗ್ ಮಾಡುತ್ತಿದ್ದವರು ಹಾಗೂ ಅನುಮಾನಾಸ್ಪದವಾಗಿ ಕಂಡುಬಂದ ವಾಹನಗಳನ್ನು ಪೊಲೀಸರು ತಡೆದು ಪರಿಶೀಲಿಸಲಾಗಿದೆ.
ಬೆಂಗಳೂರು ನಗರ ಪೊಲೀಸರ ಪ್ರಕಟಣೆ
75 ವಾಹನಗಳು ಸೀಜ್
ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಜಂಟಿ ಪೊಲೀಸ್ ಆಯುಕ್ತರ (ಪಶ್ಚಿಮ) ಮಾರ್ಗದರ್ಶನದಲ್ಲಿ, ಉತ್ತರ ವಿಭಾಗದ ಡಿಸಿಪಿ ನೇತೃತ್ವದಲ್ಲಿ ಮೂರು ಉಪ-ವಿಭಾಗಗಳ ಎಸಿಪಿಗಳು, 13 ಠಾಣೆಗಳ ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಹಾಗೂ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದು, ನಿಯಮ ಉಲ್ಲಂಘಿಸಿದ ಆರೋಪದಡಿ ಪೊಲೀಸರು ಒಟ್ಟು 71 ದ್ವಿಚಕ್ರ ವಾಹನಗಳು, 3 ಆಟೋರಿಕ್ಷಾಗಳು ಹಾಗೂ 1 ಕಾರು ಸೇರಿದಂತೆ ಒಟ್ಟು 75 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡ ವಾಹನಗಳ ಸವಾರರು ಮತ್ತು ಚಾಲಕರ ವಿರುದ್ಧ ಮುಂದಿನ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

