
Namma Metro| ಮೆಟ್ರೋ ಪ್ರಯಾಣಿಕರೇ ಗಮನಿಸಿ; ಮೇ 10 ರಂದು ನೇರಳೆ ಮಾರ್ಗದಲ್ಲಿ ಸಂಚಾರ ವ್ಯತ್ಯಯ
ಹೊಸಹಳ್ಳಿ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳ ನಡುವೆ ನಿರ್ವಹಣಾ ಕಾಮಗಾರಿ ನಡೆಯಲಿದ್ದು, ಮೆಜೆಸ್ಟಿಕ್ ಮತ್ತು ಸರ್. ಎಂ. ವಿಶ್ವೇಶ್ವರಯ್ಯ ಮೆಟ್ರೋ ನಿಲ್ದಾಣಗಳ ನಡುವೆ ಸಂಚಾರ ಸ್ಥಗಿತವಾಗಲಿದೆ.
ರಾಜಧಾನಿ ಬೆಂಗಳೂರಿನ ಸಾರಿಗೆ ವ್ಯವಸ್ಥೆಯ ಜೀವನಾಡಿ ಎಂದೇ ಕರೆಯುವ ನಮ್ಮ ಮೆಟ್ರೋ ಸಂಚಾರದಲ್ಲಿ ಮೇ 10ರಂದು ಭಾನುವಾರ ಎರಡು ತಾಸು ಸಂಚಾರ ವ್ಯತ್ಯಯವಾಗಲಿದೆ. ನೇರಳೆ ಮಾರ್ಗದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳಬೇಕಾದ ಹಿನ್ನೆಲೆ ಎರಡು ಗಂಟೆಗಳ ಕಾಲ ರೈಲು ಸೇವೆ ಸ್ಥಗಿತಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಎಷ್ಟು ಸಮಯ ವ್ಯತ್ಯಯ?
ಭಾನುವಾರ ಬೆಳಿಗ್ಗೆ 7 ರಿಂದ 9 ಗಂಟೆಯವರೆಗೆ ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ವ್ಯತ್ಯಯವಾಗಲಿದೆ. ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣ (ಹೊಸಹಳ್ಳಿ) ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳ ನಡುವೆ ನಿರ್ವಹಣಾ ಕಾಮಗಾರಿ ನಡೆಯಲಿದ್ದು, ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್) ಮತ್ತು ಸರ್. ಎಂ. ವಿಶ್ವೇಶ್ವರಯ್ಯ ಮೆಟ್ರೋ ನಿಲ್ದಾಣಗಳ ನಡುವೆ ಸಂಚಾರ ಸ್ಥಗಿತವಾಗಲಿದೆ. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಈ ಕಾಮಗಾರಿ ಅನಿವಾರ್ಯವಾಗಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸೇವೆ ಲಭ್ಯವಿರುವ ಮಾರ್ಗಗಳು
ರೈಲು ಸಂಚಾರ ಸ್ಥಗಿತಗೊಂಡ ಅವಧಿಯಲ್ಲಿ ಉಳಿದ ಮಾರ್ಗಗಳಲ್ಲಿ ಮೆಟ್ರೋ ಎಂದಿನಂತೆ ಕಾರ್ಯನಿರ್ವಹಿಸಲಿದೆ. ಚಲ್ಲಘಟ್ಟ, ವಿಜಯನಗರದ ನಡುವೆ ಎಂದಿನಂತೆ ಮೆಟ್ರೋ ರೈಲು ಸಂಚರಿಸಲಿದೆ. ಅದೇ ರೀತಿ ಎಂ.ಜಿ. ರಸ್ತೆ, ವೈಟ್ಫೀಲ್ಡ್ (ಕಾಡುಗೋಡಿ) ನಡುವೆ ಮೆಟ್ರೋ ಸಂಚಾರ ಅಬಾಧಿತವಾಗಿರಲಿದೆ. ಮಾದಾವರ –ಸಿಲ್ಕ್ ಇನ್ಸ್ಟಿಟ್ಯೂಟ್ ನಡುವಿನ ಮೆಟ್ರೋ ಹಸಿರು ಮಾರ್ಗವು ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿದೆ.
ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಹಳದಿ ಮಾರ್ಗದಲ್ಲಿ ಯಾವುದೇ ವ್ಯತ್ಯಯವಿರುವುದಿಲ್ಲ. ಬೆಳಿಗ್ಗೆ 9 ರ ನಂತರ ಇಡೀ ನೇರಳೆ ಮಾರ್ಗದಲ್ಲಿ ಅಂದರೆ ಚಲ್ಲಘಟ್ಟದಿಂದ ವೈಟ್ಫೀಲ್ಡ್ವರೆಗೆ ಮೆಟ್ರೋ ರೈಲುಗಳು ಎಂದಿನಂತೆ ಸಂಚರಿಸಲಿವೆ.
ಪ್ರಯಾಣಿಕರಿಗೆ ಸಲಹೆ
ಭಾನುವಾರ ಬೆಳಿಗ್ಗೆ ಪ್ರಯಾಣ ಬೆಳೆಸುವವರು ಈ ತಾತ್ಕಾಲಿಕ ಬದಲಾವಣೆ ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣ ಯೋಜಿಸಿಕೊಳ್ಳಬೇಕು. ಮೆಜೆಸ್ಟಿಕ್ ಮೂಲಕ ಸಂಚರಿಸುವವರು ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಿಕೊಳ್ಳಲು ಕೋರಲಾಗಿದೆ. ಬೆಳಿಗ್ಗೆ 9 ಗಂಟೆಯ ನಂತರ ಎಂದಿನಂತೆ ಮೆಟ್ರೋ ಸೇವೆ ಇರಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

