Moti campaign at Cubbon Park: Municipal Corporation launches special drive for adoption of community dogs
x

ನಗರ  ಕೇಂದ್ರ ಪಾಲಿಕೆ ಹೊರಡಿಸಿರುವ ಪ್ರಕಟಣೆ

ಕಬ್ಬನ್ ಪಾರ್ಕ್‌ನಲ್ಲಿ ‘ಮೋತಿ’ ಅಭಿಯಾನ; ಶ್ವಾನಗಳ ದತ್ತು ಸ್ವೀಕಾರಕ್ಕೆ ಚಾಲನೆ

"ಮೋತಿ ಎಂಬುದು ಕೇವಲ ಪ್ರಾಣಿಗಳ ಕಾರ್ಯಕ್ರಮವಲ್ಲ, ಇದು ನಾಗರಿಕರಲ್ಲಿ ದಯೆ ಮತ್ತು ಗೌರವ ಮೂಡಿಸುವ ಒಂದು ಸಾಮಾಜಿಕ ಚಳವಳಿಯಾಗಿದೆ," ಎಂದು ಕೇಂದ್ರ ನಗರ ಪಾಲಿಕೆ ತಿಳಿಸಿದೆ.


Click the Play button to hear this message in audio format

ಬೆಂಗಳೂರಿನಲ್ಲಿ ಸಾರ್ವಜನಿಕರು ಮತ್ತು ಪ್ರಾಣಿಗಳ ನಡುವೆ ಸಹಾನುಭೂತಿ ಹಾಗೂ ಜವಾಬ್ದಾರಿಯುತ ಸಹಜೀವನ ಉತ್ತೇಜಿಸುವ ನಿಟ್ಟಿನಲ್ಲಿ ಬೆಂಗಳೂರು ಕೇಂದ್ರ ನಗರ ಪಾಲಿಕೆಯು ವಿಶಿಷ್ಟ ಹೆಜ್ಜೆಯನ್ನಿಟ್ಟಿದೆ. ಸಾರ್ವಜನಿಕರು ಸಮುದಾಯ ಶ್ವಾನಗಳನ್ನು ದತ್ತು ಪಡೆಯಲು ಉತ್ತೇಜಿಸುವ "ಮೋತಿ: ನಂಬಿಕೆ ಮತ್ತು ಒಳಗೊಳ್ಳುವಿಕೆಯ ಆಂದೋಲನ" (MOTI - Movement of Trust & Inclusion) ಕಾರ್ಯಕ್ರಮವನ್ನು ಭಾನುವಾರ ಆಯೋಜಿಸಿದೆ.

ಮೇ 3ರಂದು ಬೆಳಿಗ್ಗೆ 7 ರಿಂದ 11 ರವರೆಗೆ ಕಬ್ಬನ್ ಉದ್ಯಾನದಲ್ಲಿ ಕಾರ್ಯಕ್ರಮ ನಡೆಯಲಿದ್ದು, "ಮೋತಿ ಎಂಬುದು ಕೇವಲ ಪ್ರಾಣಿಗಳ ಕಾರ್ಯಕ್ರಮವಲ್ಲ, ಇದು ನಾಗರಿಕರಲ್ಲಿ ದಯೆ ಮತ್ತು ಗೌರವ ಮೂಡಿಸುವ ಒಂದು ಸಾಮಾಜಿಕ ಚಳವಳಿಯಾಗಿದೆ," ಎಂದು ಕೇಂದ್ರ ನಗರ ಪಾಲಿಕೆ ತಿಳಿಸಿದೆ.

ಶ್ವಾನದತ್ತು ಕಾರ್ಯಕ್ರಮದ ಭಿತ್ತಿಪತ್ರ

ಸಮುದಾಯ ಶ್ವಾನಗಳ ದತ್ತು ಸ್ವೀಕಾರ

ಪ್ರೀತಿಯ ಮನೆಯನ್ನು ಹುಡುಕುತ್ತಿರುವ ಬೀದಿ ಶ್ವಾನಗಳನ್ನು ಸಾರ್ವಜನಿಕರು ದತ್ತು ಪಡೆಯಬಹುದು. ದತ್ತು ಪಡೆದ ಶ್ವಾನಗಳಿಗೆ ಅಗತ್ಯ ಲಸಿಕೆ ನೀಡುವುದರ ಜೊತೆಗೆ, ಆಹಾರ, ಕುತ್ತಿಗೆ ಪಟ್ಟಿ ಮತ್ತು ಚೈನ್ ಒಳಗೊಂಡ ವಿಶೇಷ ಕಿಟ್ ಅನ್ನು ಉಚಿತವಾಗಿ ನೀಡಲಾಗುವುದು. ಮಕ್ಕಳಲ್ಲಿ ಪ್ರಾಣಿಗಳ ಬಗ್ಗೆ ಪ್ರೀತಿ ಮೂಡಿಸಲು “Paint with Puppies” ಎಂಬ ಪೇಂಟಿಂಗ್ ಚಟುವಟಿಕೆ ಹಾಗೂ ವಿವಿಧ ಸಂವಹನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಸಹಜೀವನದ ಸಂದೇಶ ಸಾರಲು ಸಂಕೇತಾತ್ಮಕ ನಡಿಗೆ ಆಯೋಜಿಸಲಾಗಿದ್ದು, ಪ್ರಾಣಿ ಪ್ರಿಯರು ಇದರಲ್ಲಿ ಭಾಗವಹಿಸಬಹುದಾಗಿದೆ. ಈ ವಿಶಿಷ್ಟ ಅಭಿಯಾನದಲ್ಲಿ ನಗರದ ಸಾರ್ವಜನಿಕರು, ಎನ್‌ಜಿಓಗಳು ಮತ್ತು ಪ್ರಾಣಿ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಪಾಲಿಕೆ ಮನವಿ ಮಾಡಿದೆ.

ಮಕ್ಕಳಿಗಾಗಿ ಚಿತ್ರ ಬಿಡಿಸುವ ಕಾರ್ಯಕ್ರಮದ ಭಿತ್ತಿಪತ್ರ

ಕ್ಯೂಆರ್‌ ಕೋಡ್‌ ಮೂಲಕ ನೋಂದಣಿ

ವಾರ್ಡ್ ಮಟ್ಟದಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಲು ಆಸಕ್ತಿ ಇರುವವರು ಕ್ಯೂಆರ್‌ ಕೋಡ್ ಮೂಲಕ ನೋಂದಾಯಿಸಿಕೊಳ್ಳಬಹುದು. ಶಸ್ತ್ರಚಿಕಿತ್ಸೆ (ಸ್ಟೆರಿಲೈಸೇಶನ್), ಜವಾಬ್ದಾರಿಯುತ ಆಹಾರ ಪೂರೈಕೆ ಮತ್ತು ಪ್ರಾಣಿ ಕಲ್ಯಾಣದ ಕುರಿತು ಜಾಗೃತಿ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಪ್ರಾಣಿ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಹೋರಾಟಗಾರರು ಮತ್ತು ಸ್ವಯಂಸೇವಕರಿಗೆ ಇದೇ ಸಂದರ್ಭದಲ್ಲಿ ಗೌರವ ಸಲ್ಲಿಸಲಾಗುವುದು.

ನೋಂದಣಿಗಾಗಿ ಕ್ಯೂಆರ್‌ ಕೋಡ್‌

"ಬೆಂಗಳೂರಿನ ನಗರ ಸಂಸ್ಕೃತಿಯಲ್ಲಿ ದಯೆ ಮತ್ತು ಪ್ರಾಣಿಗಳೊಂದಿಗಿನ ಸಹಜೀವನ ಅವಿಭಾಜ್ಯ ಭಾಗವಾಗಬೇಕು ಎಂಬುದು ಈ ಯೋಜನೆಯ ಮೂಲ ಉದ್ದೇಶ." ಎಂದು ಕೇಂದ್ರ ನಗರ ಪಾಲಿಕೆ ಅಪರ ಆಯುಕ್ತ ದಲ್ಜಿತ್ ಕುಮಾರ್ ತಿಳಿಸಿದ್ದಾರೆ.

Read More
Next Story