ಬೆನ್ನಿಗಾನಹಳ್ಳಿಯಲ್ಲಿ ಡಬಲ್‌ ಡೆಕ್ಕರ್‌ ರೈಲು; ಒಂದೇ ಮಾರ್ಗದಲ್ಲಿ ಮೆಟ್ರೋ, ಸಬ್‌ ಅರ್ಬನ್‌ ರೈಲು!
x

ಬೆನ್ನಿಗಾನಹಳ್ಳಿಯಲ್ಲಿ ಡಬಲ್‌ ಡೆಕ್ಕರ್‌ ರೈಲು; ಒಂದೇ ಮಾರ್ಗದಲ್ಲಿ ಮೆಟ್ರೋ, ಸಬ್‌ ಅರ್ಬನ್‌ ರೈಲು!

ಬೆಂಗಳೂರಿನ ಬೆನ್ನಿಗಾನಹಳ್ಳಿಯಲ್ಲಿ ಈ ಎರಡೂ ಸಾರಿಗೆ ವ್ಯವಸ್ಥೆಗಳು ಒಂದೇ ಮಾರ್ಗದಲ್ಲಿ ಒಂದರ ಕೆಳಗೆ ಮತ್ತೊಂದರಂತೆ ಬರಲಿವೆ. ಈ ಮಾದರಿಯು ಕೇವಲ ತಾಂತ್ರಿಕಯಷ್ಟೇ ಅಲ್ಲ, ಭೂಸ್ವಾಧೀನದ ವೆಚ್ಚ ಮತ್ತು ಯೋಜನಾ ವೆಚ್ಚವನ್ನು ತಗ್ಗಿಸಲಿವೆ.


ಸಿಲಿಕಾನ್ ಸಿಟಿಯ ಸಂಚಾರ ದಟ್ಟಣೆಗೆ ಮುಕ್ತಿ ನೀಡಲು ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ‘ನಮ್ಮ ಮೆಟ್ರೋ’ ಮತ್ತು ‘ಬೆಂಗಳೂರು ಉಪನಗರ ರೈಲು’(ಸಬ್‌ ಅರ್ಬನ್) ಯೋಜನೆಯನ್ನು ಒಂದೇ ಮಾರ್ಗದಲ್ಲಿ ಅನುಷ್ಠಾನಗೊಳಿಸಲು ನಿರ್ಧರಿಸಿದ್ದು, ಇದು ಸುಧಾರಿತ ಎಂಜಿನಿಯರಿಂಗ್ ತಂತ್ರಜ್ಞಾನಕ್ಕೆ ಸಾಕ್ಷಿಯಾಗಲಿದೆ.

ಬೆಂಗಳೂರಿನ ಬೆನ್ನಿಗಾನಹಳ್ಳಿಯಲ್ಲಿ ಈ ಎರಡೂ ಸಾರಿಗೆ ವ್ಯವಸ್ಥೆಗಳು ಒಂದೇ ಮಾರ್ಗದಲ್ಲಿ ಒಂದರ ಕೆಳಗೆ ಮತ್ತೊಂದರಂತೆ ಬರಲಿವೆ. ಈ ಮಾದರಿಯು ಕೇವಲ ತಾಂತ್ರಿಕಯಷ್ಟೇ ಅಲ್ಲ, ಭೂಸ್ವಾಧೀನದ ವೆಚ್ಚ ಮತ್ತು ಯೋಜನಾ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುವ ಮೂಲಕ ಸಾರ್ವಜನಿಕರ ತೆರಿಗೆ ಹಣದ ಅಪವ್ಯಯ ತಪ್ಪಿಸಲಿದೆ.

ಮೇಲ್ಭಾಗ ಮೆಟ್ರೋ, ಕೆಳಗೆ ಸಬ್‌ ಅರ್ಬನ್ ರೈಲು

ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್) ನೀಡಿರುವ ಅಧಿಕೃತ ಮಾಹಿತಿ ಪ್ರಕಾರ ಬೆನ್ನಿಗಾನಹಳ್ಳಿ ಫ್ಲೈಓವರ್ ಬಳಿ ಸುಮಾರು 500 ಮೀಟರ್ಗಳವರೆಗೆ ಕನಕ ಮಾರ್ಗದ ಉಪನಗರ ರೈಲಿನ ಮೇಲ್ಸೇತುವೆಯು ʼನಮ್ಮ ಮೆಟ್ರೋʼದ ನೀಲಿ ಮಾರ್ಗದ ಕೆಳಭಾಗದಲ್ಲೇ ಹಾದುಹೋಗಲಿದೆ.

ಸುಮಾರು 18 ರಿಂದ 20 ಮೀಟರ್‌ ಎತ್ತರದ ಪಿಲ್ಲರ್ ಬೇಸ್ ನಿರ್ಮಾಣವಾಗಲಿದ್ದು, ನಮ್ಮ ಮೆಟ್ರೋ ಮೇಲ್ಭಾಗದಲ್ಲಿ ಚಲಿಸಿದರೆ, ಕೆಳಭಾಗದಲ್ಲೇ ಉಪನಗರ ರೈಲು ಸಂಚರಿಸಲಿದೆ.

169 ಕೋಟಿ ರೂ. ಹಣ ಉಳಿತಾಯ

ಬೆಂಗಳೂರಿನ ಅತ್ಯಂತ ದುಬಾರಿ ವಸತಿ ಹಾಗೂ ವಾಣಿಜ್ಯ ಪ್ರದೇಶಗಳಲ್ಲಿ ಒಂದಾದ ಈ ಭಾಗದಲ್ಲಿ ಎರಡು ಪ್ರತ್ಯೇಕ ಹಳಿಗಳ ಮಾರ್ಗ ನಿರ್ಮಿಸುವುದು ಅಸಾಧ್ಯದ ಮಾತಾಗಿತ್ತು. ಒಂದು ವೇಳೆ ಪ್ರತ್ಯೇಕ ಮಾರ್ಗ ಮಾಡಿದ್ದರೆ ಭಾರೀ ಪ್ರಮಾಣದ ಭೂಸ್ವಾಧೀನ ಪ್ರಕ್ರಿಯೆ ನಡೆಸಬೇಕಾಗುತ್ತಿತ್ತು. ಅಲ್ಲದೇ ವೆಚ್ಚವೂ ದುಬಾರಿಯಾಗುತ್ತಿತ್ತು.

ಈ ಜಂಟಿ ಯೋಜನೆ ಮಾದರಿಯಿಂದಾಗಿ ಸುಮಾರು 1.65 ಎಕರೆ ಅತ್ಯಂತ ದುಬಾರಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಕೈಬಿಡಲಾಗಿದೆ. ಇಲ್ಲಿ ವಾಸವಿದ್ದ ಸುಮಾರು 600 ಕ್ಕೂ ಹೆಚ್ಚು ನಿವಾಸಿಗಳು ತಮ್ಮ ಆಸ್ತಿಪಾಸ್ತಿ ಹಾಗೂ ಮನೆಗಳನ್ನು ಕಳೆದುಕೊಂಡು ಬೀದಿಪಾಲಾಗುವ ದೊಡ್ಡ ಆಪತ್ತಿನಿಂದ ಪಾರಾಗಿದ್ದಾರೆ. ಈ ಯೋಜನೆಯಿಂದ ಅಂದಾಜು 169 ಕೋಟಿ ರೂ.ಗಳಷ್ಟು ಸಾರ್ವಜನಿಕರ ತೆರಿಗೆ ಹಣ ಉಳಿತಾಯವಾಗಿದೆ ಎಂದು ಕೆ-ರೈಡ್ ಅಧಿಕಾರಿಗಳು ಹೇಳಿದ್ದಾರೆ.

ಐಐಎಸ್ಸಿ ಗ್ರೀನ್ ಸಿಗ್ನಲ್

ಎರಡು ವಿಭಿನ್ನ ರೈಲು ವ್ಯವಸ್ಥೆಗಳನ್ನು ಒಂದೇ ಪಿಲ್ಲರ್ ವ್ಯಾಪ್ತಿಯಲ್ಲಿ ತರುವುದು ಎಂಜಿನಿಯರ್ಗಳಿಗೆ ಸುಲಭದ ಹಾದಿಯಾಗಿಲ್ಲ. ಏಕೆಂದರೆ, ಇವೆರಡೂ ವಿಭಿನ್ನ ವಿದ್ಯುತ್ ಶಕ್ತಿ ವ್ಯವಸ್ಥೆಗಳ ಮೇಲೆ ಕಾರ್ಯನಿರ್ವಹಿಸುತ್ತವೆ. ಸಬ್‌ ಅರ್ಬನ್‌ ರೈಲುಗಳು 25 ಕೆವಿ ಸಾಮರ್ಥ್ಯದ ಆಲ್ಟರ್‌ನೇಟಿವ್‌ ಕರೆಂಟ್‌ ತಂತ್ರಜ್ಞಾನ (AC) ದಲ್ಲಿ ಚಲಿಸುತ್ತವೆ. ಆದರೆ, ನಮ್ಮ ಮೆಟ್ರೋ ಡೈರೆಕ್ಟ್ ಕರೆಂಟ್ (DC) ತಂತ್ರಜ್ಞಾನದಲ್ಲಿ ಕಾರ್ಯಾಚರಿಸಲಿವೆ.

ಈ ಎರಡು ಭಿನ್ನ ಪ್ರವಾಹಗಳ ವಿದ್ಯುತ್ ತಂತಿಗಳು ಇಷ್ಟು ಹತ್ತಿರದಲ್ಲಿ ಹಾದುಹೋಗುವಾಗ ಉಂಟಾಗಬಹುದಾದ ತಾಂತ್ರಿಕ ಸುರಕ್ಷತೆ ಮತ್ತು ಕಾಂತೀಯ ಪರಿಣಾಮಗಳನ್ನು ಭಾರತೀಯ ವಿಜ್ಞಾನ ಸಂಸ್ಥೆಯ ಪರಿಣಿತರ ತಂಡವು ಕೂಲಂಕಷವಾಗಿ ಮೌಲ್ಯಮಾಪನ ಮಾಡಿ, ಯೋಜನೆಗೆ ಹಸಿರು ನಿಶಾನೆ ತೋರಿದೆ.

ಇತರೆ ಮೆಟ್ರೋ ನಗರಗಳಿಗೆ ಮಾದರಿ

ಜಾಗದ ಅಭಾವವಿರುವ ಹಾಗೂ ಜನದಟ್ಟಣೆ ಹೆಚ್ಚಿರುವ ಮುಂಬೈ, ದೆಹಲಿ, ಚೆನ್ನೈನಂತಹ ಭಾರತದ ಇತರೆ ಪ್ರಮುಖ ಮೆಟ್ರೋ ಸಿಟಿಗಳಿಗೂ ಬೆಂಗಳೂರಿನ ಈ ಜಂಟಿ ಕಾರಿಡಾರ್ ಎಂಜಿನಿಯರಿಂಗ್ ಮಾದರಿ ಮುಂಬರುವ ದಿನಗಳಲ್ಲಿ ದಾರಿದೀಪವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸದ್ಯದಲ್ಲೇ ಕಾಮಗಾರಿ ವೇಗ ಪಡೆದುಕೊಳ್ಳಲಿದ್ದು, ಪೂರ್ವ ಬೆಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿ ಸೃಷ್ಟಿಯಾಗಲಿದೆ.

Read More
Next Story