
ಮೆಟ್ರೋ ಪ್ರಯಾಣಿಕರಿಗೆ ಗುಡ್ನ್ಯೂಸ್- ರೈಲು ಸೇವೆಯ ಅವಧಿ ವಿಸ್ತರಣೆ
ವಾರಾಂತ್ಯ ಹಾಗೂ ಸತತ ರಜಾದಿನಗಳ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮೆಟ್ರೋ ರೈಲುಗಳ ಸೇವೆಯ ಸಮಯವನ್ನು ವಿಸ್ತರಿಸಲಾಗಿದೆ. ನೇರಳೆ, ಹಸಿರು ಮತ್ತು ಹಳದಿ ಮಾರ್ಗಗಳಲ್ಲಿ ಕೊನೆಯ ರೈಲು ಯಾವ ಸಮಯಕ್ಕೆ? ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ವಾರಾಂತ್ಯ ಹಾಗೂ ಸರಣಿ ರಜಾದಿನಗಳ ಹಿನ್ನೆಲೆಯಲ್ಲಿ ನಗರದಾದ್ಯಂತ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಇಂದು ಮೆಟ್ರೋ ರೈಲುಗಳ ಕೊನೆಯ ಸೇವೆಯ ಸಮಯವನ್ನು ವಿಸ್ತರಿಸಿದೆ. ಶಾಪಿಂಗ್, ಮನರಂಜನೆ, ಕುಟುಂಬ ಪ್ರವಾಸ ಸೇರಿದಂತೆ ವಿವಿಧ ಕಾರಣಗಳಿಗೆ ರಾತ್ರಿ ವೇಳೆ ಹೊರಗಿರುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಈ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಪ್ರಮುಖ ಮೆಟ್ರೋ ಮಾರ್ಗಗಳಲ್ಲಿ ಮಧ್ಯರಾತ್ರಿಯ ನಂತರವೂ ಕೊನೆಯ ರೈಲು ಸೇವೆ ಲಭ್ಯವಿರಲಿದೆ.
ನೇರಳೆ ಮಾರ್ಗ: ಕಾಡುಗೋಡಿ ನಿಲ್ದಾಣದಿಂದ ಕೊನೆಯ ರೈಲು ರಾತ್ರಿ 12 ಗಂಟೆಗೆ ನಿರ್ಗಮಿಸಲಿದೆ. ಚಲ್ಲಘಟ್ಟದಿಂದ ಕೊನೆಯ ರೈಲು ರಾತ್ರಿ 12.20ಕ್ಕೆ ಹೊರಡಲಿದೆ.
ಹಸಿರು ಮಾರ್ಗ: ಮಾದವಾರದಿಂದ ಕೊನೆಯ ರೈಲು ರಾತ್ರಿ 12.15ಕ್ಕೆ ಹಾಗೂ ಸಿಲ್ಕ್ ಇನ್ಸ್ಟಿಟ್ಯೂಟ್ ನಿಲ್ದಾಣದಿಂದ ರಾತ್ರಿ 12.20ಕ್ಕೆ ಕೊನೆಯ ರೈಲು ಸಂಚರಿಸಲಿದೆ.
ಹಳದಿ ಮಾರ್ಗ: ಆರ್.ವಿ. ರಸ್ತೆಯಿಂದ ಕೊನೆಯ ರೈಲು ರಾತ್ರಿ 1.15ಕ್ಕೆ ನಿರ್ಗಮಿಸಲಿದೆ. ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರದಿಂದ ಕೊನೆಯ ರೈಲು ರಾತ್ರಿ 11.55ಕ್ಕೆ ಹೊರಡಲಿದೆ. ಮೆಜೆಸ್ಟಿಕ್ ನಿಲ್ದಾಣದಿಂದ ಇತರ ಮಾರ್ಗಗಳಿಗೆ ಸಂಪರ್ಕ ಕಲ್ಪಿಸುವ ಕೊನೆಯ ರೈಲು ಸೇವೆ ರಾತ್ರಿ 12.55ಕ್ಕೆ ಲಭ್ಯವಿರಲಿದೆ.
ಸಾಮಾನ್ಯ ದಿನಗಳಲ್ಲಿ ಬಹುತೇಕ ಕೊನೆಯ ರೈಲು ಸೇವೆಗಳು ರಾತ್ರಿ 11 ಗಂಟೆಯ ವೇಳೆಗೆ ಮುಕ್ತಾಯಗೊಳ್ಳುತ್ತವೆ. ಆದರೆ ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಮಾಲ್ಗಳು, ಚಿತ್ರಮಂದಿರಗಳು, ಉದ್ಯಾನವನಗಳು ಮತ್ತು ಆಹಾರ ಮಳಿಗೆಗಳಲ್ಲಿ ಜನದಟ್ಟಣೆ ಹೆಚ್ಚಾಗುವ ಹಿನ್ನೆಲೆಯಲ್ಲಿ ರಾತ್ರಿ ಮನೆಗೆ ಮರಳುವ ಪ್ರಯಾಣಿಕರಿಗೆ ಈ ವಿಸ್ತರಿತ ಸೇವೆ ನೆರವಾಗಲಿದೆ.
ಪ್ರಯಾಣಿಕರು ಟಿಕೆಟ್ ಕೌಂಟರ್ಗಳಲ್ಲಿ ಜನದಟ್ಟಣೆ ತಪ್ಪಿಸಲು ಕ್ಯೂಆರ್ ಕೋಡ್, ಸ್ಮಾರ್ಟ್ ಕಾರ್ಡ್ ಅಥವಾ ಎನ್ಸಿಎಂಸಿ ಕಾರ್ಡ್ ಬಳಸುವಂತೆ ಬಿಎಂಆರ್ಸಿಎಲ್ ಸೂಚಿಸಿದೆ. ಮೊಬೈಲ್ ಮೂಲಕ ಟಿಕೆಟ್ ಪಡೆಯುವುದು, ಸ್ವಯಂ ಟಿಕೆಟ್ ವಿತರಣಾ ಯಂತ್ರಗಳನ್ನು ಬಳಸುವುದು ಹಾಗೂ ಮುಂಚಿತವಾಗಿ ಕಾರ್ಡ್ಗಳನ್ನು ರೀಚಾರ್ಜ್ ಮಾಡಿಕೊಳ್ಳುವುದು ಸೂಕ್ತ ಎಂದು ತಿಳಿಸಲಾಗಿದೆ.
ರಾತ್ರಿ ವೇಳೆ ಪ್ರಯಾಣಿಸುವವರು ತಮ್ಮ ಸಾಮಾನುಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಹಾಗೂ ಅಗತ್ಯವಿದ್ದಲ್ಲಿ ನಿಲ್ದಾಣದ ಸಿಬ್ಬಂದಿಯ ಸಹಾಯ ಪಡೆಯುವಂತೆ ಸೂಚಿಸಲಾಗಿದೆ. ನಿಖರವಾದ ರೈಲು ಸಮಯಕ್ಕಾಗಿ ಪ್ರಯಾಣಿಕರು ನಮ್ಮ ಮೆಟ್ರೋದ ಅಧಿಕೃತ ಜಾಲತಾಣ, ಮೊಬೈಲ್ ಆ್ಯಪ್ ಹಾಗೂ ನಿಲ್ದಾಣಗಳಲ್ಲಿನ ಪ್ರಕಟಣೆ ಫಲಕಗಳನ್ನು ಪರಿಶೀಲಿಸಬಹುದು. ವಾರಾಂತ್ಯದ ವಿಶೇಷ ವ್ಯವಸ್ಥೆಯಿಂದ ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಾಗಿ, ನಗರದ ರಸ್ತೆಗಳಲ್ಲಿ ವಾಹನ ದಟ್ಟಣೆ ಕಡಿಮೆಯಾಗುವ ನಿರೀಕ್ಷೆಯಿದೆ.

