
ಮಳೆ ಹೆಚ್ಚಾಗಿ ರಸ್ತೆಯಲ್ಲಿ ಹರಿಯುತ್ತಿರುವ ನೀರಿನಲ್ಲೇ ಸಂಚರಿಸಿದ ವಾಹನಗಳು.
ಬೆಂಗಳೂರಿನಲ್ಲಿ ಮುಂದುವರಿದ ಮಳೆಯ ಆರ್ಭಟ, ಟ್ರಾಫಿಕ್ ಜಾಮ್ಗೆ ಸಿಲುಕಿ ವಾಹನ ಸವಾರರ ಪರದಾಟ
ಶೇಷಾದ್ರಿ ರಸ್ತೆ ಮತ್ತು ಕೆಆರ್ ಮಾರುಕಟ್ಟೆ ರಸ್ತೆಗಳು ಮಿನಿ ಕೆರೆಯಂತಾಗಿದ್ದು, ವಾಹನಗಳು ನೀರಿನಲ್ಲೇ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಎಸ್ಪಿ ರಸ್ತೆ ಸುತ್ತಮುತ್ತಲಿನ ಪ್ರದೇಶದಲ್ಲೂ ನೀರು ನಿಂತು ಸಂಚಾರ ದಟ್ಟಣೆ ಉಂಟಾಯಿತು.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಶುಕ್ರವಾರ ಸಂಜೆ ಸುರಿದ ಭಾರೀ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನಗರದ ಹಲವು ಪ್ರಮುಖ ರಸ್ತೆಗಳು ಮಳೆ ನೀರಿಗೆ ಜಲಾವೃತಗೊಂಡಿದ್ದು, ಸಂಜೆ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವಾಹನ ಸವಾರರು ಟ್ರಾಫಿಕ್ ಜಾಮ್ನಲ್ಲಿ ಸಿಲುಕಿ ಪರದಾಡುವಂತಾಯಿತು.
ಶುಕ್ರವಾರ ಸಂಜೆ ಸುರಿದ ಧಾರಾಕಾರ ಮಳೆಗೆ ನಗರದ ವಸಂತನಗರ, ಮೆಜೆಸ್ಟಿಕ್, ಶಾಂತಿನಗರ, ಜಯನಗರ, ಜೆಪಿ ನಗರ, ಬನಶಂಕರಿ, ಹೆಬ್ಬಾಳ, ಯಲಹಂಕ, ಸದಾಶಿವನಗರ, ರಾಜಾಜಿನಗರ, ವಿಜಯನಗರ, ಇಂದಿರಾನಗರ, ಕೋರಮಂಗಲ ಹಾಗೂ ಆರ್ಆರ್ ನಗರ ಸೇರಿದಂತೆ ಹಲವೆಡೆ ರಸ್ತೆಗಳಲ್ಲಿ ನೀರು ನಿಂತು ಟ್ರಾಫಿಕ್ ಜಾಮ್ ಉಂಟಾಗಿತ್ತು.
ವಾಹನ ಸವಾರರ ಪರದಾಟ
ಶೇಷಾದ್ರಿ ರಸ್ತೆ ಮತ್ತು ಕೆಆರ್ ಮಾರುಕಟ್ಟೆ ರಸ್ತೆಗಳು ಮಿನಿ ಕೆರೆಯಂತಾಗಿದ್ದು, ವಾಹನಗಳು ನೀರಿನಲ್ಲೇ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಎಸ್ಪಿ ರಸ್ತೆ ಸುತ್ತಮುತ್ತಲಿನ ಪ್ರದೇಶದಲ್ಲೂ ನೀರು ನಿಂತು ಸಂಚಾರ ದಟ್ಟಣೆ ಉಂಟಾಯಿತು. ಅರವಿಂದ್ ಜಂಕ್ಷನ್ ಮತ್ತು ಜಯನಗರದ ಕಾರ್ಮೆಲ್ ಕಾನ್ವೆಂಟ್ ಬಸ್ ನಿಲ್ದಾಣದ ಬಳಿ ಮರ ಬಿದ್ದಿದ್ದರಿಂದ ಶಾಲಿನಿ ಜಂಕ್ಷನ್ ಕಡೆಗೆ ವಾಹನಗಳ ಸಂಚಾರ ನಿಧಾನಗತಿಯಲ್ಲಿತ್ತು.
ಬನ್ನೇರುಘಟ್ಟ ರಸ್ತೆಯ ಸಾಗರ ಜಂಕ್ಷನ್, ಆರ್ವಿ ಜಂಕ್ಷನ್, ಮಹಾರಾಣಿ ಅಂಡರ್ಪಾಸ್, ಜೆಪಿ ನಗರದ 24ನೇ ಮುಖ್ಯರಸ್ತೆ ಹಾಗೂ ಕೋರಮಂಗಲದ ಎನ್ಜಿವಿ ರಸ್ತೆಗಳಲ್ಲಿ ಮಳೆ ನೀರು ಶೇಖರಣೆಯಾಗಿ ವಾಹನ ಸವಾರರು ಪರದಾಡಿದರು.
ಮೇ 2ರಂದು 16 ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್'
ರಾಜ್ಯದಲ್ಲಿ ಇನ್ನೂ ಕೆಲವು ದಿನಗಳ ಕಾಲ ಮಳೆಯ ಆರ್ಭಟ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಮೇ 2ರಂದು ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಉತ್ತರ ಕನ್ನಡ, ಧಾರವಾಡ, ಹಾವೇರಿ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ತುಮಕೂರು, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ ಮತ್ತು ಕೋಲಾರ ಸೇರಿದಂತೆ ಒಟ್ಟು 16 ಜಿಲ್ಲೆಗಳಿಗೆ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ.

