
ಬೆಂಗಳೂರಿನ ಹೊಸ ವಿಶ್ವದಾಖಲೆ: 12 ಗಂಟೆಗಳಲ್ಲಿ 15 ಲಕ್ಷ ಸಸಿಗಳ ನೆಡುವ ಮೂಲಕ ಗಿನ್ನೆಸ್ ದಾಖಲೆ
ಬೆಂಗಳೂರು ನಗರದಲ್ಲಿ ಕೇವಲ 12 ಗಂಟೆಗಳಲ್ಲಿ 15 ಲಕ್ಷ ಸಸಿಗಳನ್ನು ನೆಟ್ಟು ಗಿನ್ನೆಸ್ ವಿಶ್ವದಾಖಲೆ ನಿರ್ಮಿಸಲಾಗಿದೆ. ಬಿಡಿಎ ನೇತೃತ್ವದ ಹಸಿರು ಅಭಿಯಾನಕ್ಕೆ ಜಾಗತಿಕ ಮಾನ್ಯತೆ ಪಡೆದಿದೆ.
ನಗರಾಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆಯ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆ ಮಾಡಿರುವ ಬೆಂಗಳೂರು, ಕೇವಲ 12 ಗಂಟೆಗಳಲ್ಲಿ 15 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ನಾಡಪ್ರಭು ಕೆಂಪೇಗೌಡರ ಜಯಂತಿಯ ಅಂಗವಾಗಿ ಜೂನ್ 27ರಂದು ನಡೆದ ಈ ಬೃಹತ್ ಹಸಿರು ಅಭಿಯಾನವು ನಗರದ ಇತಿಹಾಸದಲ್ಲೇ ಅತಿ ದೊಡ್ಡ ಸಸಿ ನೆಡುವ ಕಾರ್ಯಕ್ರಮವಾಗಿ ದಾಖಲಾಗಿದೆ.
12 ಗಂಟೆಗಳಲ್ಲಿ 15 ಲಕ್ಷ ಸಸಿಗಳ ನೆಟ್ಟು ಕಾರ್ಯಕ್ರಮ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನೇತೃತ್ವದಲ್ಲಿ ನಡೆದ ಈ ಅಭಿಯಾನದಲ್ಲಿ 12 ಗಂಟೆಗಳ ಅವಧಿಯಲ್ಲಿ 15 ಲಕ್ಷ ಸ್ಥಳೀಯ ತಳಿಯ ಸಸಿಗಳನ್ನು ನೆಡಲಾಗಿದೆ. ಇದಕ್ಕೂ ಮೊದಲು ಮಧ್ಯಪ್ರದೇಶದ ಇಂದೋರ್ ನಗರವು 24 ಗಂಟೆಗಳಲ್ಲಿ 12.4 ಲಕ್ಷ ಸಸಿಗಳನ್ನು ನೆಟ್ಟು ದಾಖಲೆ ನಿರ್ಮಿಸಿತ್ತು. ಆದರೆ ಬೆಂಗಳೂರು ಕೇವಲ ಅರ್ಧ ದಿನದಲ್ಲೇ ಆ ದಾಖಲೆಯನ್ನು ಮುರಿದು ಹೊಸ ಗಿನ್ನೆಸ್ ವಿಶ್ವ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.
ಬೆಂಗಳೂರಿನ ಹಸಿರು ಭವಿಷ್ಯಕ್ಕೆ ಕೆಂಪೇಗೌಡರ ದೂರದೃಷ್ಟಿಯೇ ದಾರಿದೀಪ
— DK Shivakumar (@DKShivakumar) June 27, 2026
ನಾಡಪ್ರಭು ಕೆಂಪೇಗೌಡರ ಜಯಂತಿಯ ಈ ಶುಭ ಸಂದರ್ಭದಲ್ಲಿ, ನಮ್ಮ ಹಸಿರು ಬೆಂಗಳೂರು ಸಂಕಲ್ಪದ ಭಾಗವಾಗಿ ಸಾವಿರಾರು ಬೆಂಗಳೂರಿಗರೊಂದಿಗೆ ಜೊತೆಯಾಗಿ ನಾನು ಕೂಡ ಸಸಿಯೊಂದನ್ನು ನೆಟ್ಟೆ.
ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬಾಳುವ ಸುಸ್ಥಿರ ನಗರವನ್ನು ನಾಡಪ್ರಭು ಕೆಂಪೇಗೌಡರು ಅಂದು… pic.twitter.com/xRfdiAhx8Z
50 ಸಾವಿರಕ್ಕೂ ಹೆಚ್ಚು ಸ್ವಯಂಸೇವಕರ ಭಾಗಿ
ಈ ಅಭಿಯಾನದಲ್ಲಿ ನಾಗರಿಕರು, ಸ್ವಯಂಸೇವಾ ಸಂಸ್ಥೆಗಳು, ಶಾಲಾ-ಕಾಲೇಜುಗಳು ಹಾಗೂ ಕಾರ್ಪೊರೇಟ್ ಸಂಸ್ಥೆಗಳು ಸೇರಿ 50 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಅವರ ಮಾರ್ಗದರ್ಶನದಲ್ಲಿ ಈ ಬೃಹತ್ ಕಾರ್ಯಕ್ರಮ ಯಶಸ್ವಿಯಾಗಿದೆ.
ಎಲ್ಲೆಲ್ಲಿ ಸಸಿ ನೆಡಲಾಯಿತು?
ಸುಮಾರು 244 ಎಕರೆ ಪ್ರದೇಶದಲ್ಲಿ ಸಸಿ ನೆಡುವ ಕಾರ್ಯ ಕೈಗೊಳ್ಳಲಾಗಿದೆ. ನಾಡಪ್ರಭು ಕೆಂಪೇಗೌಡ ಲೇಔಟ್, ಬನಶಂಕರಿ 6ನೇ ಹಂತ, ಡಾ. ಶಿವರಾಮ ಕಾರಂತ ಲೇಔಟ್, ಮೈಸೂರು ರಸ್ತೆ ಹಾಗೂ ಮಾಗಡಿ ರಸ್ತೆಯ ಪಕ್ಕದ ಪ್ರದೇಶಗಳಲ್ಲಿ ಸಸಿ ನೆಡಲಾಯಿತು. ನಗರದ ವಿವಿಧ ಭಾಗಗಳನ್ನು ಹಸಿರುಮಯಗೊಳಿಸುವ ಉದ್ದೇಶದಿಂದ ಈ ಪ್ರದೇಶಗಳನ್ನು ಆಯ್ಕೆ ಮಾಡಲಾಗಿದೆ.
ಮಿಯಾವಾಕಿ ತಂತ್ರಜ್ಞಾನ ಬಳಕೆ
ಈ ಬೃಹತ್ ಯೋಜನೆಯಲ್ಲಿ ಜಪಾನ್‌ನ ಮಿಯಾವಾಕಿ ತಂತ್ರಜ್ಞಾನವನ್ನು ಬಳಸಲಾಗಿದೆ. ಈ ವಿಧಾನದಲ್ಲಿ ವಿವಿಧ ಜಾತಿಯ ಸಸಿಗಳನ್ನು ದಟ್ಟವಾಗಿ ನೆಡುವುದರಿಂದ ಅವು ವೇಗವಾಗಿ ಬೆಳೆಯುತ್ತವೆ ಹಾಗೂ ಕಡಿಮೆ ಅವಧಿಯಲ್ಲಿ ದಟ್ಟ ಕಾಡು ನಿರ್ಮಾಣವಾಗುತ್ತದೆ. ನಗರದ ಉಷ್ಣಾಂಶ ಕಡಿಮೆ ಮಾಡುವುದು, ವಾಯುಮಾಲಿನ್ಯ ನಿಯಂತ್ರಿಸುವುದು ಹಾಗೂ ಶುದ್ಧ ಗಾಳಿ ಒದಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
340ಕ್ಕೂ ಹೆಚ್ಚು ಸ್ಥಳೀಯ ಸಸ್ಯ ಪ್ರಭೇದಗಳು
ಬಿಡಿಎ ಮತ್ತು ಅರಣ್ಯ ಇಲಾಖೆ ತಜ್ಞರ ಸಲಹೆಯಂತೆ 340ಕ್ಕೂ ಹೆಚ್ಚು ಸ್ಥಳೀಯ ಸಸ್ಯ ಪ್ರಭೇದಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ 12.5 ಲಕ್ಷ ಸ್ಥಳೀಯ ಹಾಗೂ ಅಪರೂಪದ ಮರಗಳು, 2.5 ಲಕ್ಷ ಪೊದೆಸಸ್ಯಗಳು, ಮಾವು, ಹಲಸು, ಬೇವು, ಸಪೋಟ ಸೇರಿದಂತೆ ಹಲವಾರು ಔಷಧೀಯ ಹಾಗೂ ಪರಿಸರ ಸ್ನೇಹಿ ಸಸ್ಯಗಳನ್ನು ನೆಡಲಾಗಿದೆ.
ಗಿನ್ನೆಸ್ ದಾಖಲೆಗೆ ಕಟ್ಟುನಿಟ್ಟಿನ ನಿಯಮ
ಗಿನ್ನೆಸ್ ವಿಶ್ವ ದಾಖಲೆಗೆ ಸಂಬಂಧಿಸಿದಂತೆ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಲಾಗಿದೆ. ಮೊದಲೇ ನೆಡಲಾಗಿದ್ದ ಅಥವಾ ಕುಂಡಗಳಲ್ಲಿ ಬೆಳೆದ ಸಸಿಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗಿಲ್ಲ.
ಸಸಿ ನೆಡುವ ಪ್ರಕ್ರಿಯೆಯನ್ನು ಜಿಯೋ-ಟ್ಯಾಗಿಂಗ್ ಹಾಗೂ ವಿಡಿಯೋ ದಾಖಲಾತಿಗಳ ಮೂಲಕ ಪರಿಶೀಲಿಸಲಾಗಿದ್ದು, ಎಲ್ಲಾ ನಿಯಮಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಗಿನ್ನೆಸ್ ವಿಶ್ವ ದಾಖಲೆ ಸಂಸ್ಥೆಯ ಅಧಿಕೃತ ತೀರ್ಪುಗಾರ ರಿಷಿ ನಾಥ್ ಅವರು ಬಿಡಿಎಗೆ ಪ್ರಮಾಣಪತ್ರವನ್ನು ಹಸ್ತಾಂತರಿಸಿದ್ದಾರೆ.
ಮೂರು ವರ್ಷಗಳ ನಿರ್ವಹಣೆ ಜವಾಬ್ದಾರಿ
ಸಸಿ ನೆಡುವುದರ ಜೊತೆಗೆ ಅವುಗಳ ನಿರ್ವಹಣೆಯ ಮೇಲೂ ವಿಶೇಷ ಗಮನ ನೀಡಲಾಗಿದೆ. ಎನ್‌ಜಿಒಗಳು ಹಾಗೂ ಅನುಷ್ಠಾನ ಸಂಸ್ಥೆಗಳು ಮೂರು ವರ್ಷಗಳ ಕಾಲ ಸಸಿಗಳ ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಹೊತ್ತುಕೊಂಡಿವೆ.
ನೀರುಣಿಸುವುದು, ಪ್ರಾಣಿಗಳಿಂದ ರಕ್ಷಣೆ ನೀಡುವುದು ಹಾಗೂ ಒಣಗಿದ ಸಸಿಗಳ ಜಾಗದಲ್ಲಿ ಹೊಸ ಸಸಿಗಳನ್ನು ನೆಡುವ ಜವಾಬ್ದಾರಿಯನ್ನು ಬಿಡಿಎ ವಹಿಸಿಕೊಂಡಿದೆ. ಒಮ್ಮೆ ಉದ್ಯಾನ ನಗರಿ ಎಂದು ಖ್ಯಾತಿ ಪಡೆದಿದ್ದ ಬೆಂಗಳೂರು ಮತ್ತೆ ತನ್ನ ಹಸಿರು ಹೊದಿಕೆಯನ್ನು ಮರಳಿ ಪಡೆಯುವತ್ತ ಮಹತ್ವದ ಹೆಜ್ಜೆಯನ್ನಿಟ್ಟಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

