
ಕರ್ನಾಟಕ ಕ್ವಾಂಟಮ್ ತಂತ್ರಜ್ಞಾನದ ಜಾಗತಿಕ ಕೇಂದ್ರ : ಸಚಿವ ಪ್ರಿಯಾಂಕ್ ಖರ್ಗೆ
ಲಭ್ಯವಿರುವ ಪ್ರತಿಭೆ, ಅತ್ಯುತ್ತಮ ಸಂಶೋಧನಾ ಸಂಸ್ಥೆಗಳು, ನವೋದ್ಯಮಗಳಿಗೆ ಪೂರಕ ಪರಿಸರ ವ್ಯವಸ್ಥೆ, ಸುರಕ್ಷಿತ ಡಿಜಿಟಲ್ ಮೂಲಸೌಕರ್ಯಗಳು ಕ್ವಾಂಟಮ್ ತಂತ್ರಜ್ಞಾನದ ಬೆಳವಣಿಗೆಗೆ ಪೂರಕವಾಗಿವೆ.
21ನೇ ಶತಮಾನದ ಜಾಗತಿಕ ತಾಂತ್ರಿಕ ಪೈಪೋಟಿಯಲ್ಲಿ ಕ್ವಾಂಟಮ್ ತಂತ್ರಜ್ಞಾನ ಒಂದು ಹೊಸ ಕ್ರಾಂತಿಯಾಗಿದೆ. ಈ ಅತ್ಯಾಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ಜಾಗತಿಕ ನಾಯಕನಾಗಿ ಹೊರಹೊಮ್ಮಲು ಕರ್ನಾಟಕ ರಾಜ್ಯ, ಅದರಲ್ಲೂ ವಿಶೇಷವಾಗಿ ಬೆಂಗಳೂರು ನಗರವು ಭದ್ರ ಅಡಿಪಾಯವನ್ನು ಹಾಕಿದೆ. ಬೆಂಗಳೂರು ಇಂದು ಕೇವಲ ಮಾಹಿತಿ ತಂತ್ರಜ್ಞಾನದ ರಾಜಧಾನಿಯಾಗಿ ಉಳಿದಿಲ್ಲ, ಇದು ಕೃತಕ ಬುದ್ಧಿಮತ್ತೆ (ಎಐ), ಡೀಪ್ ಟೆಕ್ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್‌ನಂತಹ ಉದಯೋನ್ಮುಖ ತಂತ್ರಜ್ಞಾನಗಳ ಪವರ್‌ಹೌಸ್ ಆಗಿದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕ್ಯೂಎನ್‌ಯು ಲ್ಯಾಬ್ಸ್‌ನ 10ನೇ ವಾರ್ಷಿಕೋತ್ಸವ ಮತ್ತು 'ಕ್ಯೂಶೀಲ್ಡ್ 2.0' ಬಿಡುಗಡೆ ಸಮಾರಂಭದಲ್ಲಿ ಅವರು, ಕರ್ನಾಟಕವನ್ನು ಜಾಗತಿಕ ಕ್ವಾಂಟಮ್ ಹಬ್ ಆಗಿ ರೂಪಿಸುವ ಸರ್ಕಾರದ ದೃಷ್ಟಿಕೋನವನ್ನು ಸ್ಪಷ್ಟಪಡಿಸಿದರು. ಬೆಂಗಳೂರಿನಲ್ಲಿ ಲಭ್ಯವಿರುವ ಪ್ರತಿಭೆ, ಅತ್ಯುತ್ತಮ ಸಂಶೋಧನಾ ಸಂಸ್ಥೆಗಳು, ನವೋದ್ಯಮಗಳಿಗೆ ಪೂರಕವಾದ ಪರಿಸರ ವ್ಯವಸ್ಥೆ ಮತ್ತು ಸುರಕ್ಷಿತ ಡಿಜಿಟಲ್ ಮೂಲಸೌಕರ್ಯಗಳು ಕ್ವಾಂಟಮ್ ತಂತ್ರಜ್ಞಾನದ ಬೆಳವಣಿಗೆಗೆ ಪೂರಕವಾಗಿವೆ. ಕರ್ನಾಟಕ ಸರ್ಕಾರವು ಈ ಸಾಮರ್ಥ್ಯವನ್ನು ಗುರುತಿಸಿ, ನವೋದ್ಯಮಗಳಿಗೆ ಉತ್ತೇಜನ ನೀಡುವ ಮೂಲಕ ಜಾಗತಿಕ ಮಟ್ಟದ ಮಾರುಕಟ್ಟೆಯಲ್ಲಿ ರಾಜ್ಯದ ಅಸ್ತಿತ್ವವನ್ನು ಗಟ್ಟಿಗೊಳಿಸುತ್ತಿದೆ ಎಂದು ಹೇಳಿದರು.
ಕ್ಯೂಎನ್‌ಯು ಲ್ಯಾಬ್ಸ್: ಒಂದು ದಶಕದ ಸಾಧನೆ
ಕ್ಯೂಎನ್‌ಯು ಲ್ಯಾಬ್ಸ್ ಭಾರತದ ಮೊಟ್ಟಮೊದಲ ಕ್ವಾಂಟಮ್ ಕ್ರಿಪ್ಟೋಗ್ರಫಿ ಮತ್ತು ಕ್ವಾಂಟಮ್-ಸೇಫ್ ಸೈಬರ್ ಭದ್ರತಾ ಸಂಸ್ಥೆಯಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಈ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಷಯ. ರಾಜ್ಯ ಸರ್ಕಾರದ ಎಲಿವೇಟ್ ಮತ್ತು ಕಿಟ್‌ವೆನ್ ನಂತಹ ಕಾರ್ಯಕ್ರಮಗಳು ಹೇಗೆ ಡೀಪ್ ಟೆಕ್ ಸಂಸ್ಥೆಗಳನ್ನು ಬೆಳೆಸಲು ಸಹಾಯ ಮಾಡಬಲ್ಲವು ಎಂಬುದಕ್ಕೆ ಕ್ಯೂಎನ್‌ಯು ಲ್ಯಾಬ್ಸ್ ಒಂದು ಉತ್ತಮ ಉದಾಹರಣೆಯಾಗಿದೆ. ಸಮಾರಂಭದಲ್ಲಿ ಬಿಡುಗಡೆಯಾದ ಕ್ಯೂಶೀಲ್ಡ್ 2.0 ಕ್ವಾಂಟಮ್ ಭದ್ರತಾ ಕ್ಷೇತ್ರದಲ್ಲಿ ಒಂದು ಮೈಲಿಗಲ್ಲಾಗಿದೆ. ಕೇವಲ ಕ್ವಾಂಟಮ್ ತಂತ್ರಜ್ಞಾನವಷ್ಟೇ ಅಲ್ಲದೆ, ಅದನ್ನು ಕೃತಕ ಬುದ್ಧಿಮತ್ತೆ ಆಧಾರಿತ ಭದ್ರತಾ ಪದರದೊಂದಿಗೆ ಬೆಸೆಯುವುದು ಈ ತಂತ್ರಜ್ಞಾನದ ವಿಶೇಷತೆಯಾಗಿದೆ. ಭವಿಷ್ಯದಲ್ಲಿ ಕ್ವಾಂಟಮ್ ಕಂಪ್ಯೂಟರ್‌ಗಳ ವೇಗ ಹೆಚ್ಚಾದಂತೆ, ಪ್ರಸ್ತುತ ಇರುವ ಸಾಂಪ್ರದಾಯಿಕ ಎನ್‌ಕ್ರಿಪ್ಶನ್ ವಿಧಾನಗಳನ್ನು ಒಡೆಯುವುದು ಸುಲಭವಾಗಲಿದೆ. ಈ ಸವಾಲನ್ನು ಎದುರಿಸಲು 'ಪೋಸ್ಟ್-ಕ್ವಾಂಟಮ್ ಕ್ರಿಪ್ಟೋಗ್ರಫಿ' ಅವಶ್ಯಕವಾಗಿದೆ. ಕ್ಯೂಶೀಲ್ಡ್ 2.0 ಅಂತಹ ಸೈಬರ್ ದಾಳಿಗಳನ್ನು ತಡೆಯುವ ಸಾಮರ್ಥ್ಯ ಹೊಂದಿದೆ. ಬ್ಯಾಂಕಿಂಗ್, ರಕ್ಷಣಾ ಕ್ಷೇತ್ರ ಮತ್ತು ಸರ್ಕಾರಿ ದತ್ತಾಂಶಗಳ ರಕ್ಷಣೆಯಲ್ಲಿ ಈ ತಂತ್ರಜ್ಞಾನದ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಕರ್ನಾಟಕದ ಕ್ವಾಂಟಮ್ ರೋಡ್‌ಮ್ಯಾಪ್
ರಾಜ್ಯ ಸರ್ಕಾರವು ಕ್ವಾಂಟಮ್ ತಂತ್ರಜ್ಞಾನಕ್ಕಾಗಿ ಸ್ಪಷ್ಟವಾದ ರೋಡ್‌ಮ್ಯಾಪ್ ಅನ್ನು ಹೊಂದಿದೆ. ಕರ್ನಾಟಕದ ಗುರಿ ಕೇವಲ ತಂತ್ರಜ್ಞಾನ ಅಭಿವೃದ್ಧಿ ಮಾತ್ರವಲ್ಲ, ಬದಲಾಗಿ ಜಾಗತಿಕ ಮಟ್ಟದಲ್ಲಿ ಸ್ವಾವಲಂಬಿ ಮತ್ತು ಸುರಕ್ಷಿತ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದಾಗಿದೆ. ವಿಶ್ವವಿದ್ಯಾಲಯಗಳು ಮತ್ತು ಖಾಸಗಿ ಸಂಸ್ಥೆಗಳ ನಡುವೆ ಕ್ವಾಂಟಮ್ ಸಂಶೋಧನೆಗಾಗಿ ಸಹಭಾಗಿತ್ವವನ್ನು ಬಲಪಡಿಸುವುದು. ಕ್ಯೂಎನ್‌ಯು ಲ್ಯಾಬ್ಸ್‌ನಂತಹ ಡೀಪ್ ಟೆಕ್ ಕಂಪನಿಗಳಿಗೆ ಅಗತ್ಯವಿರುವ ಆರ್ಥಿಕ ನೆರವು ಮತ್ತು ಪಾಲಿಸಿ ಬೆಂಬಲ ಒದಗಿಸುವುದು. ಮುಂದಿನ ತಲೆಮಾರಿನ ಎಂಜಿನಿಯರ್‌ಗಳು ಮತ್ತು ವಿಜ್ಞಾನಿಗಳನ್ನು ಕ್ವಾಂಟಮ್ ತಂತ್ರಜ್ಞಾನದಲ್ಲಿ ಸಜ್ಜುಗೊಳಿಸುವುದಾಗಿದೆ ಎಂದರು.
ಭಾರತವು ಡಿಜಿಟಲ್ ಇಂಡಿಯಾದ ಮೂಲಕ ಜಗತ್ತನ್ನು ಮುನ್ನಡೆಸುತ್ತಿರುವಾಗ, ಕ್ವಾಂಟಮ್ ಸುರಕ್ಷತೆಯು ರಾಷ್ಟ್ರೀಯ ಭದ್ರತೆಯ ಅವಿಭಾಜ್ಯ ಅಂಗವಾಗಿದೆ. ದತ್ತಾಂಶ ರಕ್ಷಣೆಯು ಇಂದಿನ ಅತಿದೊಡ್ಡ ಸವಾಲಾಗಿದೆ. ಅಮೆರಿಕ, ಚೀನಾ ಮತ್ತು ಯುರೋಪಿಯನ್ ರಾಷ್ಟ್ರಗಳು ಕ್ವಾಂಟಮ್ ರೇಸ್‌ನಲ್ಲಿ ಮುಂಚೂಣಿಯಲ್ಲಿರುವಾಗ, ಭಾರತವು ಕರ್ನಾಟಕದ ಮೂಲಕ ಆ ರೇಸ್‌ನಲ್ಲಿ ಸಮಾನವಾಗಿ ಭಾಗವಹಿಸುತ್ತಿದೆ.

