
ಬರ್ತ್‌ಡೇ ಫ್ಲೆಕ್ಸ್ ಹಾಗೂ ಕಟೌಟ್‌ಗಳು
ಡಿಕೆಶಿ ಆದೇಶಕ್ಕೆ 'ಡೋಂಟ್ ಕೇರ್': ಸಚಿವ ಮಹಾದೇವಪ್ಪ ನಿವಾಸದ ಸುತ್ತ ಫ್ಲೆಕ್ಸ್, ಕಟೌಟ್‌ಗಳದ್ದೇ ದರ್ಬಾರ್!
ಬೆಂಗಳೂರಿನಲ್ಲಿ ಎಲ್ಲೇ ಫ್ಲೆಕ್ಸ್, ಬ್ಯಾನರ್ ಹಾಕಿದರೂ ನಿರ್ದಾಕ್ಷಿಣ್ಯವಾಗಿ ದಂಡ ವಿಧಿಸುತ್ತೇವೆ, ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇವೆ' ಎಂದು ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದರು.
ರಾಜಧಾನಿ ಬೆಂಗಳೂರು ನಗರವನ್ನು ಫ್ಲೆಕ್ಸ್ ಮುಕ್ತಗೊಳಿಸುವ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರ ಕಟ್ಟುನಿಟ್ಟಿನ ಆದೇಶಕ್ಕೆ ಸ್ವತಃ ಆಡಳಿತ ಪಕ್ಷದ ನಾಯಕರೇ ಕವಡೆಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ನಗರದಲ್ಲಿ ಮತ್ತೆ ಫ್ಲೆಕ್ಸ್, ಬ್ಯಾನರ್‌ಗಳ ಅಬ್ಬರ ಜೋರಾಗಿದ್ದು, ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹಾದೇವಪ್ಪ ಅವರ ಸರ್ಕಾರಿ ನಿವಾಸದ ಸುತ್ತಮುತ್ತ ಬೃಹತ್ ಹುಟ್ಟುಹಬ್ಬದ ಬ್ಯಾನರ್‌ಗಳು ರಾರಾಜಿಸುತ್ತಿವೆ.
ನಗರದ ಸೌಂದರ್ಯ ಹಾಳುಮಾಡುವ ಫ್ಲೆಕ್ಸ್, ಬ್ಯಾನರ್, ಹಾಗೂ ಕಟೌಟ್‌ಗಳನ್ನು ಯಾವುದೇ ಕಾರಣಕ್ಕೂ ಅಳವಡಿಸುವಂತಿಲ್ಲ ಎಂದು ಬಿಬಿಎಂಪಿ ಮತ್ತು ಸರ್ಕಾರ ಎಷ್ಟೇ ಎಚ್ಚರಿಕೆ ನೀಡಿದರೂ, ರಾಜಕೀಯ ನಾಯಕರ ಬೆಂಬಲಿಗರು ಮಾತ್ರ ಇದಕ್ಕೆ ಕ್ಯಾರೇ ಎನ್ನುತ್ತಿಲ್ಲ. ಸಚಿವ ಎಚ್.ಸಿ. ಮಹಾದೇವಪ್ಪ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಮತ್ತು ಅಭಿಮಾನಿಗಳು ಸಚಿವರ ಸರ್ಕಾರಿ ನಿವಾಸದ ಸುತ್ತಮುತ್ತ 'ಹುಟ್ಟುಹಬ್ಬದ ಶುಭಾಶಯಗಳು' ಎಂದು ಬರೆದಿರುವ ಬೃಹತ್ ಕಟೌಟ್‌ಗಳು ಹಾಗೂ ಫ್ಲೆಕ್ಸ್‌ಗಳನ್ನು ಅಳವಡಿಸಿದ್ದಾರೆ. ಅಷ್ಟೇ ಅಲ್ಲದೆ, ಎಲ್ಲೆಂದರಲ್ಲಿ ಗೋಡೆಗಳಿಗೂ ಭಿತ್ತಿಪತ್ರಗಳನ್ನು (ಪೋಸ್ಟರ್) ಅಂಟಿಸಿ ನಗರದ ಅಂದಗೆಡಿಸಿದ್ದಾರೆ.
ದಂಡ ಹಾಕುತ್ತಾರಾ ಡಿಕೆಶಿ?
'ಬೆಂಗಳೂರಿನಲ್ಲಿ ಎಲ್ಲೇ ಫ್ಲೆಕ್ಸ್, ಬ್ಯಾನರ್ ಹಾಕಿದರೂ ನಿರ್ದಾಕ್ಷಿಣ್ಯವಾಗಿ ದಂಡ ವಿಧಿಸುತ್ತೇವೆ, ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇವೆ' ಎಂದು ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದರು. ಆದರೆ, ಆ ಆದೇಶ ಈಗ ಗಾಳಿಗೆ ತೂರಿದಂತಾಗಿದೆ. ಸಾಮಾನ್ಯ ಜನರಿಗೆ ಒಂದು ನ್ಯಾಯ, ಪ್ರಭಾವಿ ಸಚಿವರಿಗೆ ಒಂದು ನ್ಯಾಯವೇ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಸ್ವತಃ ಸಚಿವರ ಮನೆ ಮುಂದೆಯೇ ನಿಯಮಗಳ ಬಹಿರಂಗ ಉಲ್ಲಂಘನೆಯಾಗುತ್ತಿದ್ದು, ಉಪಮುಖ್ಯಮಂತ್ರಿಗಳು ಹೇಳಿದಂತೆ ಬ್ಯಾನರ್ ಹಾಕಿದವರ ವಿರುದ್ಧ ಬಿಬಿಎಂಪಿ ಅಧಿಕಾರಿಗಳು ದಂಡ ವಿಧಿಸುತ್ತಾರಾ? ಅಥವಾ ತಮ್ಮದೇ ಸರ್ಕಾರದ ಸಚಿವರ ಬೆಂಬಲಿಗರು ಎಂಬ ಕಾರಣಕ್ಕೆ ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸುತ್ತಾರಾ? ಕಾದುನೋಡಬೇಕಿದೆ.

