
ಸಾಂದರ್ಭಿಕ ಚಿತ್ರ
ಅಗ್ನಿ ಅವಘಡ: ನಾಗರಬಾವಿಯಲ್ಲಿ ಹೋಟೆಲ್ ಕಾರ್ಮಿಕ ದುರ್ಮರಣ, ಕೆ.ಆರ್.ಪುರಂ ಶೋ ರೂಂನಲ್ಲಿ 20 ಬೈಕ್‌ಗಳು ಭಸ್ಮ!
ನಾಗರಬಾವಿ ಸಮೀಪದ ಮಾಳಗಾಳದಲ್ಲಿರುವ 'ದುರ್ಗಾ ಗ್ರ್ಯಾಂಡ್' ಹೋಟೆಲ್‌ನಲ್ಲಿ ಮುಂಜಾನೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಈ ದುರ್ಘಟನೆಯಲ್ಲಿ ಮಧ್ಯಪ್ರದೇಶ ಮೂಲದ ರಾಜ್ ಕುಮಾರ್ (40) ಎಂಬ ಕಾರ್ಮಿಕ ಮೃತಪಟ್ಟಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಂಕಿ ಅವಘಡಗಳು ಮುಂದುವರಿದಿವೆ. ಒಂದೇ ರಾತ್ರಿ ಎರಡು ಕಡೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಪ್ರಾಣಹಾನಿ ಜತೆಗೆ ಬೈಕ್ ಗಳು ಸುಟ್ಟು ಹೋಗಿವೆ.
ನಾಗರಬಾವಿ ಸಮೀಪದ ಹೋಟೆಲ್‌ನಲ್ಲಿ ಬೆಂಕಿ ಹೊತ್ತಿಕೊಂಡು, ಒಬ್ಬ ಕಾರ್ಮಿಕ ಸಜೀವದಹನವಾಗಿದ್ದಾರೆ. ಮತ್ತೊಂದೆಡೆ ಕೆ.ಆರ್ ಪುರಂನ ಬೈಕ್ ಶೋ ರೂಂನಲ್ಲಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ಪಾಸ್ತಿ ನಷ್ಟವಾಗಿದೆ.
ಮಾಳಗಾಳದಲ್ಲಿರುವ 'ದುರ್ಗಾ ಗ್ರ್ಯಾಂಡ್' ಹೋಟೆಲ್‌ನಲ್ಲಿ ಶನಿವಾರ ಮುಂಜಾನೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಈ ದುರ್ಘಟನೆಯಲ್ಲಿ ಮಧ್ಯಪ್ರದೇಶ ಮೂಲದ ರಾಜ್ ಕುಮಾರ್ (40) ಎಂಬ ಕಾರ್ಮಿಕ ಮೃತಪಟ್ಟಿದ್ದಾರೆ. ಹೋಟೆಲ್‌ನ ಮೊದಲ ಮಹಡಿಯಲ್ಲಿ ಐವರು ಕಾರ್ಮಿಕರು ನಿದ್ರಿಸುತ್ತಿದ್ದ ವೇಳೆ ಬೆಂಕಿ ಆವರಿಸಿದೆ. ಈ ವೇಳೆ ನಾಲ್ವರು ಕಾರ್ಮಿಕರು ಗಂಭೀರ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.
"ಹೋಟೆಲ್‌ನಲ್ಲಿ 30-35 ಜನ ಕೆಲಸ ಮಾಡುತ್ತಿದ್ದರು. ರಾಜ್ ಕುಮಾರ್ ಕೇವಲ 15 ದಿನಗಳ ಹಿಂದೆಯಷ್ಟೇ ಕೆಲಸಕ್ಕೆ ಸೇರಿದ್ದ. ದಟ್ಟವಾದ ಹೊಗೆಯಿಂದಾಗಿ ಉಸಿರಾಡಲು ಸಾಧ್ಯವಾಗದೆ ಆತ ಪ್ರಜ್ಞೆ ತಪ್ಪಿ ಬಿದ್ದಿದ್ದ," ಎಂದು ಹೋಟೆಲ್ ಮ್ಯಾನೇಜರ್ ಯತೀಶ್ ಮಾಹಿತಿ ನೀಡಿದ್ದಾರೆ.
20 ಹೊಸ ಬೈಕ್‌ಗಳು ಬೆಂಕಿಗೆ ಆಹುತಿ
ಕೆ.ಆರ್. ಪುರಂನ ಟಿನ್ ಫ್ಯಾಕ್ಟರಿ ಸಮೀಪವಿರುವ ಹೋಂಡಾ ಬೈಕ್ ಶೋ ರೂಂನಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಈ ಘಟನೆಯಲ್ಲಿ ಶೋ ರೂಂನಲ್ಲಿದ್ದ ಸುಮಾರು 20 ಹೊಸ ಬೈಕ್‌ಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಘಟನಾ ಸ್ಥಳಕ್ಕೆ ಮಹಾದೇವಪುರ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಹರಸಾಹಸ ಪಟ್ಟು ಬೆಂಕಿಯನ್ನು ನಂದಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಇಲ್ಲೂ ಕೂಡ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣ ಎನ್ನಲಾಗಿದೆ.
ನಗರದಲ್ಲಿ ಒಂದೇ ದಿನ ನಡೆದ ಈ ಎರಡು ಘಟನೆಗಳು ವಾಣಿಜ್ಯ ಕಟ್ಟಡಗಳಲ್ಲಿನ ಅಗ್ನಿ ಸುರಕ್ಷತಾ (Fire Safety) ಕ್ರಮಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ನಿಯಮಗಳ ಉಲ್ಲಂಘನೆಯೇ ಇಂತಹ ಅವಘಡಗಳಿಗೆ ಕಾರಣವಾಗುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

