HAL, Yelahanka airbase hinder urban development; DCM appeals for relaxation of rules
x

ನಗರದ ಹೃದಯ ಭಾಗದಲ್ಲಿರುವ ಹೆಚ್‌ಎಎಲ್‌ ಹಾಗೂ ಯಲಹಂಕದಲ್ಲಿನ ಸೇನಾ ವಾಯುನೆಲೆ

ಹೆಚ್‌ಎಎಲ್‌, ಯಲಹಂಕ ವಾಯುನೆಲೆಯಿಂದ ಅಭಿವೃದ್ಧಿಗೆ ಅಡ್ಡಿ; ನಿಯಮ ಸಡಿಲಿಕೆಗೆ ಡಿಸಿಎಂ ಮನವಿ

ವಿಮಾನ ನಿಲ್ದಾಣದ ಸುತ್ತಮುತ್ತಲ 15 ಕಿ.ಮೀ ವ್ಯಾಪ್ತಿಯಲ್ಲಿ ಕಟ್ಟಡಗಳ ಎತ್ತರದ ಮಿತಿಯನ್ನು ಜಿಎಸ್‌ಆರ್ 751 (ಇ) ನಿಯಮದಲ್ಲಿ 150 ಮೀ. ಎಂದು ನಿಗದಿಪಡಿಸಲಾಗಿದೆ.


Click the Play button to hear this message in audio format

ವಿಮಾನ ನಿಲ್ದಾಣಗಳ ಸುತ್ತಲಿನ ಪ್ರದೇಶದಲ್ಲಿ ಹೇರಿರುವ ಕಟ್ಟಡಗಳ ಎತ್ತರದ ನಿರ್ಬಂಧವು ಬೆಂಗಳೂರಿನ ಪ್ರಗತಿಗೆ ಅಡ್ಡಿಯಾಗಿದೆ. ಸುರಕ್ಷತೆಯ ದೃಷ್ಟಿಯಿಂದ ರಕ್ಷಣಾ ಇಲಾಖೆ ನಿರ್ಬಂಧ ಹೇರಿದರೂ ಅಭಿವೃದ್ಧಿ ದೃಷ್ಟಿಯಿಂದ ನಿರ್ಬಂಧ ಸಡಿಲಗೊಳಿಸಿ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಶುಕ್ರವಾರ ನವದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಅವರನ್ನು ಭೇಟಿ ಮಾಡಿ ಮನವಿ ನೀಡಿದ ಅವರು, “ಬೆಂಗಳೂರಿನ ರಕ್ಷಣಾ ಇಲಾಖೆ ಸುಪರ್ದಿಯ ವಿಮಾನ ನಿಲ್ದಾಣಗಳ 20 ಕಿ.ಮೀ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ ನಿರಾಕ್ಷೇಪಣಾ ಪತ್ರ (NOC) ನೀಡುವಾಗ ವಿಮಾನ ನಿಲ್ದಾಣದ ಅಧಿಕಾರಿಗಳು ವಿಪರೀತ ನಿರ್ಬಂಧ ವಿಧಿಸುತ್ತಿದ್ದಾರೆ. ಬೆಂಗಳೂರು ವಿಶ್ವದ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ. ಹೆಚ್ಎಎಲ್ ವಿಮಾನ ನಿಲ್ದಾಣ ಬೆಂಗಳೂರಿನ ಹೃದಯ ಭಾಗದಲ್ಲಿದ್ದು, ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಆದರೆ ಹೆಚ್ಚುವರಿಯಾಗಿ ವಿಧಿಸಲಾಗಿರುವ ನಿರ್ಬಂಧಗಳು ಈ ಪ್ರದೇಶಗಳಲ್ಲಿ ಅಭಿವೃದ್ಧಿಗೆ ಅಡ್ಡಿಯಾಗಿವೆ” ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ನಿಯಮ ಸಡಿಲಿಕೆಗೆ ಮನವಿ

ಮುಂದುವರಿದು, “ಈ ವಿಚಾರವಾಗಿ ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ, ರಕ್ಷಣಾ ಸಚಿವಾಲಯದ ರಕ್ಷಣಾ ಉತ್ಪಾದನಾ ಇಲಾಖೆ ಕಾರ್ಯದರ್ಶಿ ಹಾಗೂ ರಕ್ಷಣಾ ಕಾರ್ಯದರ್ಶಿಗಳಿಗೆ ಪತ್ರಗಳನ್ನು ಬರೆಯಲಾಗಿದೆ. ವಿಮಾನ ನಿಲ್ದಾಣದ ಸುರಕ್ಷತೆ ಹಾಗೂ ನಗರದ ಅಭಿವೃದ್ಧಿ ಎರಡರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಪರಿಶೀಲನೆ ನಡೆಸಿ, ಎದುರಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿ” ಎಂದು ಮನವಿ ಮಾಡಿದ್ದಾರೆ.

150 ಮೀ. ಎತ್ತರ ಹೆಚ್ಚಿಸಿ

ಪ್ರಸ್ತುತ ಬೆಂಗಳೂರಿನ ಹೆಚ್ಎಎಲ್ ಹಾಗೂ ಯಲಹಂಕ ವಾಯುನೆಲೆ ರಕ್ಷಣಾ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ವಿಮಾನ ನಿಲ್ದಾಣಗಳ ಸುತ್ತಮುತ್ತಲ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಮಾಡಲು ವಿಮಾನ ನಿಲ್ದಾಣ ಅಧಿಕಾರಿಗಳಿಂದ ನಿರಾಕ್ಷೇಪಣ ಪತ್ರ ಪಡೆಯಬೇಕಾಗಿದೆ. ವಿಮಾನ ನಿಲ್ದಾಣದ ಸುತ್ತಮುತ್ತಲ 15 ಕಿ.ಮೀ ವ್ಯಾಪ್ತಿಯಲ್ಲಿ ಕಟ್ಟಡಗಳ ಎತ್ತರದ ಮಿತಿಯನ್ನು 150 ಮೀ. ನಿಗದಿಪಡಿಸಲಾಗಿದೆ ಎಂದು ಜಿಎಸ್‌ಆರ್ 751 (ಇ) ನಿಯಮದಲ್ಲಿ ಸೂಚಿಸಲಾಗಿದೆ. ಆದರೆ ರಕ್ಷಣಾ ಇಲಾಖೆ ವಿಮಾನ ನಿಲ್ದಾಣಗಳು ಈ ವಿಪರೀತ ನಿರ್ಬಂಧ ಹೇರುವುದರ ಜತೆಗೆ 150 ಮೀ. ಎತ್ತರದ ಮಿತಿಯನ್ನು 15 ಕಿ.ಮೀ ಮೀರಿ 20 ಕಿ.ಮೀ ವರೆಗೂ ವಿಸ್ತರಿಸಿವೆ. ಈ ನಿರ್ಬಂಧಗಳು ಈ ಬೆಂಗಳೂರು ನಗರದ ಪ್ರಗತಿಗೆ ಮಾರಕವಾಗಿವೆ ಎಂದಿದ್ದಾರೆ.

ಉದ್ಯಮ ಕೇಂದ್ರವಾಗಿ ಪರಿವರ್ತನೆಯಾಗಲಿ

ಸಿಂಗಾಪುರ, ಆಂಸ್ಟ್ರಡಾಮ್, ಡಲ್ಲಾಸ್, ಲಂಡನ್ ಹಾಗೂ ದುಬೈ ಸೇರಿದಂತೆ ಅನೇಕ ನಗರಗಳಲ್ಲಿ ವಿಮಾನ ನಿಲ್ದಾಣಗಳನ್ನು ಕಚೇರಿ, ಮನರಂಜನೆ ಸೇರಿದಂತೆ ವಿವಿದೋದ್ದೇಶಕ್ಕೆ ಬಳಸಲಾಗುತ್ತಿದೆ. ಈ ನಗರಗಳಲ್ಲಿ ವಿಮಾನ ನಿಲ್ದಾಣಗಳು ಕೇವಲ ಸಂಚಾರ ಉದ್ದೇಶಕ್ಕೆ ಮಾತ್ರವಲ್ಲದೇ ಉದ್ಯೋಗದ ಕೇಂದ್ರವಾಗಿ ನಗರ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿವೆ. ಹೀಗಾಗಿ ಜಿಎಸ್‌ಆರ್ 751 (ಇ) ನಿಯಮವನ್ನು ಸಡಿಲಗೊಳಿಸಬೇಕು. 150 ಮೀ. ಎತ್ತರದ ಮಿತಿಯನ್ನು 20 ಕಿ.ಮೀ ಬದಲಿಗೆ 15 ಕಿ.ಮೀ ವ್ಯಾಪ್ತಿಗೆ ಸೀಮಿತಗೊಳಿಸಬೇಕು ಎಂದು ಪತ್ರದಲ್ಲಿ ವಿವರಿಸಿದ್ದಾರೆ.

Read More
Next Story