
ಸಿಇಟಿ ಕೀ ಉತ್ತರ ಪ್ರಕಟವಾಗಿದೆ.
ಸಿಇಟಿ ಪರೀಕ್ಷೆಗೆ ಜನಿವಾರ ತೆಗೆಸಿದ ಪ್ರಕರಣ: ಮೂವರ ಅಮಾನತು, ಪೊಲೀಸ್ ವಶಕ್ಕೆ
ಪರೀಕ್ಷಾ ಪರಿವೀಕ್ಷಕರಾದ ಸರಿತಾ, ಗಿರಿಜಾ ಹಾಗೂ ಪರೀಕ್ಷಾ ಕೇಂದ್ರದ ಉಸ್ತುವಾರಿ ಸುಧಾಕರ್ ಅಮಾನತುಗೊಂಡವರು. ಆರೋಪಿಗಳ ವಿರುದ್ಧ ಬಿಎನ್ಎಸ್ ಸೆಕ್ಷನ್ 299 ಹಾಗೂ 302ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬೆಂಗಳೂರಿನ ಕೃಪಾನಿಧಿ ಪದವಿ ಪೂರ್ವ ಕಾಲೇಜಿನ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರೀಕ್ಷಾ ಕೇಂದ್ರದ ಉಸ್ತುವಾರಿ ಸೇರಿ ಮೂವರನ್ನು ಕಾಲೇಜು ಆಡಳಿತ ಮಂಡಳಿ ಅಮಾನತು ಮಾಡಿದೆ. ಅಲ್ಲದೇ ವಿದ್ಯಾರ್ಥಿ ನೀಡಿದ ದೂರಿನ ಮೇರೆಗೆ ಮಡಿವಾಳ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಪರೀಕ್ಷಾ ಪರಿವೀಕ್ಷಕರಾದ ಸರಿತಾ, ಗಿರಿಜಾ ಹಾಗೂ ಪರೀಕ್ಷಾ ಕೇಂದ್ರದ ಉಸ್ತುವಾರಿ ಸುಧಾಕರ್ ಅಮಾನತುಗೊಂಡವರು. ಆರೋಪಿಗಳ ವಿರುದ್ಧ ಬಿಎನ್ಎಸ್ ಸೆಕ್ಷನ್ 299 ಹಾಗೂ 302ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸ್ ಆಯುಕ್ತರಿಗೆ ಅಶೋಕ್ ದೂರು
ಘಟನೆ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರು ಶುಕ್ರವಾರ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರನ್ನು ಭೇಟಿ ಮಾಡಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ದೂರು ನೀಡಿದರು.
ಆಯುಕ್ತರ ಭೇಟಿಯ ಬಳಿಕ ಮಾತನಾಡಿದ ಆರ್. ಅಶೋಕ್, "ಧಾರ್ಮಿಕ ಸಂಕೇತವಾದ ಜನಿವಾರ ತೆಗೆಸಬಾರದು ಎಂದು ಹೈಕೋರ್ಟ್ ಆದೇಶವಿದ್ದರೂ ಈ ರೀತಿ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ನಾಮ, ತಾಳಿ, ಜನಿವಾರ ಕಂಡರೆ ಆಗುವುದಿಲ್ಲ. ಬೇಕಂತಲೇ ಈ ವಿವಾದ ಸೃಷ್ಟಿಸಿದ್ದಾರೆ ಎಂದು ದೂರಿದರು.
ಕರ್ನಾಟಕವು ಸಂಸ್ಕಾರವಿರುವ ನಾಡು. ಪುಲ್ವಾಮ ಘಟನೆ ನಡೆದು ಒಂದು ವರ್ಷವಾಗುತ್ತಿರುವ ಈ ಹೊತ್ತಿನಲ್ಲಿ ಇಂತಹ ಕೃತ್ಯ ಎಸಗುತ್ತಿರುವ ನಿಮಗೂ ಪಾಕಿಸ್ತಾನದವರಿಗೂ ಏನು ವ್ಯತ್ಯಾಸ?" ಎಂದು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಧಾರ್ಮಿಕ ಸ್ವಾತಂತ್ರ್ಯದ ಹರಣ: ತೇಜಸ್ವಿ ಸೂರ್ಯ
ಸಂಸದ ತೇಜಸ್ವಿ ಸೂರ್ಯ ಮಾತನಾಡಿ, "ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಹಿಂದೂ ಧಾರ್ಮಿಕ ಭಾವನೆಗಳ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಈ ಹಿಂದೆ ಕೆಪಿಎಸ್ಸಿ ಪರೀಕ್ಷೆಯಲ್ಲೂ ತಾಳಿ ತೆಗೆಸಲಾಗಿತ್ತು. ಪರೀಕ್ಷೆಗಾಗಿ ಎರಡು ವರ್ಷ ಶ್ರಮಿಸಿದ ಮಕ್ಕಳ ಭಾವನೆಗೆ ಧಕ್ಕೆಯುಂಟಾಗಿದೆ. ನಾವು ಆಯುಕ್ತರನ್ನು ಭೇಟಿ ಮಾಡುವವರೆಗೂ ಎಫ್ಐಆರ್ ದಾಖಲಿಸಿರಲಿಲ್ಲ. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕಟ್ಟುನಿಟ್ಟಿನ ಸಂದೇಶ ರವಾನಿಸಬೇಕು" ಎಂದು ಒತ್ತಾಯಿಸಿದರು.
ಸದ್ಯ ಕಾಲೇಜು ಆಡಳಿತ ಮಂಡಳಿಯು ತಪ್ಪಿತಸ್ಥರನ್ನು ಅಮಾನತುಗೊಳಿಸಿ ಕೈ ತೊಳೆದುಕೊಂಡಿದ್ದರೂ, ರಾಜಕೀಯ ವಲಯದಲ್ಲಿ ಈ ವಿಚಾರ ಸರ್ಕಾರದ ವಿರುದ್ಧದ ದೊಡ್ಡ ಅಸ್ತ್ರವಾಗಿ ಮಾರ್ಪಟ್ಟಿದೆ.

