
ಕಾಂಗ್ರೆಸ್ ಸರ್ಕಾರಕ್ಕೆ 'ಸಾವಿನ ಕಳಂಕ': ಆರ್‌ಸಿಬಿ ಬಳಿಕ ಬೌರಿಂಗ್ ಆಸ್ಪತ್ರೆ ದುರಂತ
ಆರ್‌ಸಿಬಿ ವಿಜಯೋತ್ಸವ ಕಾಲ್ತುಳಿತದ ಭೀಕರ ಘಟನೆ ನಡೆದು 10 ತಿಂಗಳ ಬಳಿಕ ಇದೀಗ ನಗರದಲ್ಲಿ ಸುರಿದ ಮಳೆಗೆ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಏಳು ಮಂದಿ ಸಾವನ್ನಪ್ಪಿರುವುದು ಆಡಳಿತ ವೈಫಲ್ಯವಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸರಣಿ ದುರಂತಗಳು ಸಂಭವಿಸುತ್ತಿರುವುದು ಆತಂಕಕಾರಿ ಸಂಗತಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಸಾವಿನ ಕಳಂಕ ಕಾಡುತ್ತಿದೆ. ಆರ್‌ಸಿಬಿ ದುರಂತದಲ್ಲಿ 11 ಮಂದಿ ಸಾವನ್ನಪ್ಪಿರುವ ಕಹಿ ನೆನಪು ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಮತ್ತೊಂದು ಮಳೆಗಾಲದ ದುರಂತ ಸಂಭವಿಸಿದೆ.
ಆರ್‌ಸಿಬಿ ವಿಜಯೋತ್ಸವ ಕಾಲ್ತುಳಿತದ ಭೀಕರ ಘಟನೆ ನಡೆದು 10 ತಿಂಗಳ ಬಳಿಕ ಇದೀಗ ನಗರದಲ್ಲಿ ಸುರಿದ ಮಳೆಗೆ ಏಳು ಅಮಾಯಕರು ಬಲಿಯಾಗಿದ್ದಾರೆ. ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಏಳು ಮಂದಿ ಸಾವನ್ನಪ್ಪಿರುವುದು ಸರ್ಕಾರದ ಆಡಳಿತಾತ್ಮಕ ವೈಫಲ್ಯವನ್ನು ಬಿಂಬಿಸುತ್ತದೆ.
2025ರ ಜೂನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಶಸ್ತಿ ಗೆದ್ದಾಗ ಇಡೀ ಬೆಂಗಳೂರು ರಸ್ತೆಗಿಳಿದಿತ್ತು. ದಶಕಗಳ ಕನಸು ನನಸಾದ ಸಂಭ್ರಮದಲ್ಲಿ ಲಕ್ಷಾಂತರ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದತ್ತ ಧಾವಿಸಿದ್ದರು. ಆದರೆ, ಈ ಸಂಭ್ರಮವನ್ನು ನಿರ್ವಹಿಸುವಲ್ಲಿ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಸಂಪೂರ್ಣವಾಗಿ ವಿಫಲವಾಯಿತು. ಅತಿಯಾದ ಜನಸಂದಣಿಯನ್ನು ನಿಯಂತ್ರಿಸಲು ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ಭದ್ರತಾ ವೈಫಲ್ಯದಿಂದಾಗಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡರು. ಕ್ರೀಡಾ ಪ್ರೇಮಿಗಳ ಹರ್ಷೋದ್ಗಾರವು ಕ್ಷಣಾರ್ಧದಲ್ಲಿ ಶೋಕಸಾಗರವಾಗಿ ಮಾರ್ಪಟ್ಟಿತು. ಸಿದ್ದರಾಮಯ್ಯ ಸರ್ಕಾರವು ಈ ದುರಂತದಿಂದ ಪಾಠ ಕಲಿಯುತ್ತದೆ ಎಂದು ಭಾವಿಸಲಾಗಿತ್ತು, ಆದರೆ ಬೋರಿಂಗ್ ಆಸ್ಪತ್ರೆ ದುರಂತ ಮತ್ತೊಂದು ದುರಂತಕ್ಕೆ ಸಾಕ್ಷಿಯಾಗಿದೆ. ನಗರದ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದಾದ ಬೋರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಬಿದ್ದ ಪರಿಣಾಮ ಏಳು ಜನರು ಮೃತಪಟ್ಟಿದ್ದಾರೆ. ಇದರಲ್ಲಿ ಇಬ್ಬರು ಪುಟ್ಟ ಮಕ್ಕಳು ಸೇರಿರುವುದು ಘಟನೆಯ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಕಾಮಗಾರಿಯ ಕುರಿತು ಹಲವು ಪ್ರಶ್ನೆ
ಕೇವಲ ಒಂದು ಮಳೆಗೆ ಸರ್ಕಾರಿ ಆಸ್ಪತ್ರೆಯ ಗೋಡೆ ಕುಸಿಯುತ್ತದೆ ಎಂದರೆ, ಅಲ್ಲಿನ ಕಾಮಗಾರಿಯ ಗುಣಮಟ್ಟ ಎಂತಹದ್ದು ಎಂಬ ಪ್ರಶ್ನೆ ಮೂಡುತ್ತದೆ. ಆಸ್ಪತ್ರೆಯಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ನಿರ್ವಹಣೆ ಮಾಡುವಲ್ಲಿ ಜಿಬಿಎ ಮತ್ತು ಆರೋಗ್ಯ ಇಲಾಖೆ ತೋರಿದ ನಿರ್ಲಕ್ಷ್ಯಕ್ಕೆ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಆಡಳಿತಾತ್ಮಕ ವೈಫಲ್ಯ - ರಾಜಕೀಯ ಜವಾಬ್ದಾರಿ
ಸಿದ್ದರಾಮಯ್ಯ ಎರಡನೇ ಅವಧಿಯ ಆಡಳಿತದಲ್ಲಿ ಬೆಂಗಳೂರಿನ ಅಭಿವೃದ್ಧಿಗಾಗಿ 'ಬ್ರ್ಯಾಂಡ್ ಬೆಂಗಳೂರು' ಎಂಬ ಮಹತ್ವಾಕಾಂಕ್ಷೆಯ ಯೋಜನೆಯನ್ನು ಘೋಷಿಸಲಾಯಿತು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ನಗರದ ಕಾಯಕಲ್ಪಕ್ಕೆ ಮುಂದಾಗಿದ್ದಾರೆ. ಆದರೆ, ವಾಸ್ತವದಲ್ಲಿ ನಗರದ ಮೂಲಭೂತ ಸೌಕರ್ಯಗಳು ಹದಗೆಟ್ಟಿವೆ.
ಆರ್‌ಸಿಬಿ ಪಂದ್ಯದ ವೇಳೆ ಲಕ್ಷಾಂತರ ಜನರು ಸೇರುತ್ತಾರೆ ಎಂಬ ಕನಿಷ್ಠ ಜ್ಞಾನ ಪೊಲೀಸ್ ಇಲಾಖೆಗೆ ಇರಬೇಕಿತ್ತು. ಅಚ್ಚುಕಟ್ಟಾದ ಬ್ಯಾರಿಕೇಡ್ ವ್ಯವಸ್ಥೆ ಮತ್ತು ಪ್ರವೇಶ-ನಿರ್ಗಮನ ದಾರಿಗಳ ಸರಿಯಾದ ನಿರ್ವಹಣೆ ಇಲ್ಲದಿದ್ದುದು 11 ಜನರ ಸಾವಿಗೆ ಕಾರಣವಾಯಿತು. ಈಗ ಮಳೆಗಾಲಕ್ಕೆ ಮುನ್ನ ಕೈಗೊಳ್ಳಬೇಕಾದ ರಾಜಕಾಲುವೆ ಹೂಳೆತ್ತುವಿಕೆ ಮತ್ತು ದುರ್ಬಲ ಕಟ್ಟಡಗಳ ಗುರುತಿಸುವಿಕೆ ಕಾರ್ಯ ಕೇವಲ ಕಾಗದದ ಮೇಲೆ ಉಳಿದಿದೆ. ಬೌರಿಂಗ್ ಆಸ್ಪತ್ರೆಯ ಗೋಡೆ ಶಿಥಿಲಗೊಂಡಿದ್ದರೂ ಅದನ್ನು ದುರಸ್ತಿ ಮಾಡದ ಬಿಬಿಎಂಪಿ ಅಧಿಕಾರಿಗಳ ಬೇಜವಾಬ್ದಾರಿಯೇ ಈ ಸಾವಿಗೆ ಕಾರಣ ಎನ್ನಲಾಗಿದೆ. ಪ್ರತಿ ದುರಂತ ಸಂಭವಿಸಿದಾಗಲೂ ಸರ್ಕಾರ ತನಿಖೆಗೆ ಆದೇಶಿಸುತ್ತದೆ ಮತ್ತು ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿ ಕೈತೊಳೆದುಕೊಳ್ಳುತ್ತದೆ.
ಬೆಂಗಳೂರು ಇಂದು ಬೆಳೆಯುತ್ತಿರುವ ವೇಗಕ್ಕೆ ತಕ್ಕಂತೆ ಅದರ ಸುರಕ್ಷತಾ ವ್ಯವಸ್ಥೆಗಳು ಸುಧಾರಿಸುತ್ತಿಲ್ಲ. ಆರ್‌ಸಿಬಿ ಸಂಭ್ರಮಾಚರಣೆಯಂತಹ ಕಾರ್ಯಕ್ರಮಗಳಿಗೆ ಎಸ್‌ಒಪಿ ಇಲ್ಲದಿರುವುದು ಮತ್ತು ಮಳೆಯಂತಹ ನೈಸರ್ಗಿಕ ವಿಕೋಪಗಳನ್ನು ಎದುರಿಸಲು ಸನ್ನದ್ಧತೆ ಇಲ್ಲದಿರುವುದು ನಾಗರಿಕರ ಜೀವಕ್ಕೆ ಕುತ್ತು ತರುತ್ತಿದೆ. ಸರ್ಕಾರಿ ಆಸ್ಪತ್ರೆಗಳ ಕಾಂಪೌಂಡ್ ಅಥವಾ ಕಟ್ಟಡಗಳೇ ಜನರ ಮೇಲೆ ಬೀಳುತ್ತಿವೆ ಎಂದರೆ, ಸಾಮಾನ್ಯ ಜನರು ಎಲ್ಲಿ ಸುರಕ್ಷಿತವಾಗಿದ್ದಾರೆ ಎಂಬ ಪ್ರಶ್ನೆ ಕಾಡುತ್ತಿದೆ.
ಅಧಿಕಾರಿಗಳ ವೈಫಲ್ಯ?
ಮಳೆಗಾಲ ಆರಂಭಕ್ಕೂ ಮುನ್ನ ನಗರದಲ್ಲಿ ಏಳು ಮಂದಿಯ ಸಾವಿನ ದುರಂತ ಸಂಭವಿಸಿದೆ. ಇದಕ್ಕೆ ಜಿಬಿಎ ಅಧಿಕಾರಿಗಳ ನಿರ್ಲಕ್ಷ್ಯತನ ಎಂಬ ಆರೋಪಗಳು ಕೇಳಿಬಂದಿವೆ. ಕಾಂಪೌಂಡ್ ಕುಸಿದಿರುವುದಕ್ಕೆ ಅದು ಶಿಥಿಲಗೊಂಡಿತೇ? ಅಥವಾ ಕಾಮಗಾರಿಯ ಲೋಪವೇ? ಎಂಬುದು ಚರ್ಚೆಗೆ ಗ್ರಾಸವಾಗಿದೆ. ಕಾಂಪೌಂಡ್ ಶಿಥಿಲವಾಗಿದ್ದರೆ ಅಧಿಕಾರಿಗಳು ಸಮರ್ಪಕವಾಗಿ ಪರಿಶೀಲನೆ ನಡೆಸದಿರುವುದು ಪ್ರಮುಖ ಲೋಪದೋಷವಾಗಿರುತ್ತದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿದ್ದಾರೆ. ಅಲ್ಲದೇ, ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಕಾಂಪೌಂಡ್ ಕುಸಿತಕ್ಕೆ ಕಾರಣಗಳೇನು ಎಂಬುದರ ಮಾಹಿತಿ ಪಡೆದ ಮುಖ್ಯಮಂತ್ರಿಗಳು ಅಧಿಕಾರಿಗಳ ವಿರುದ್ಧ ಗರಂ ಆದರು. ಅಲ್ಲದೇ, ಕೌಂಪೌಂಡ್ ಕುಸಿತಕ್ಕೆ ಶಿಥಿಲಗೊಂಡಿರುವುದು ಕಾರಣವೇ? ಅಥವಾ ಬೇರೆ ಯಾವುದಾದರೂ ಕಾರಣವೇ? ಎಂಬುದರ ಕುರಿತು ವಿವರಣೆ ನೀಡುವಂತೆ ನಿರ್ದೇಶನ ನೀಡಿದ್ದಾರೆ.

