ಎಸ್‌ಐಆರ್ ಕೆಲಸದ ಒತ್ತಡಕ್ಕೆ ಬೆಂಗಳೂರಲ್ಲಿ ಶಿಕ್ಷಕಿಯ ಸಾವು?
x

ಎಸ್‌ಐಆರ್ ಕೆಲಸದ ಒತ್ತಡಕ್ಕೆ ಬೆಂಗಳೂರಲ್ಲಿ ಶಿಕ್ಷಕಿಯ ಸಾವು?

ಕುರುಬರಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ದ ಶಮಂತಾಕುಮಾರಿ (44) ಮೃತಪಟ್ಟವರಾಗಿದ್ದಾರೆ. ಇತ್ತೀಚೆಗಷ್ಟೇ ಇವರನ್ನು ಎಸ್‌ಐಆರ್‌ ಪ್ರಕ್ರಿಯೆಯ ಬಿಎಲ್‌ಒ ಡ್ಯೂಟಿಗೆ ನಿಯೋಜಿಸಲಾಗಿತ್ತು.


Click the Play button to hear this message in audio format

ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ನಿರತರಾಗಿದ್ದ ಬಿಎಲ್‌ಒರೊಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕುರುಬರಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ದ ಶಮಂತಾಕುಮಾರಿ (44) ಮೃತಪಟ್ಟವರಾಗಿದ್ದಾರೆ. ಇತ್ತೀಚೆಗಷ್ಟೇ ಇವರನ್ನು ಎಸ್‌ಐಆರ್‌ ಪ್ರಕ್ರಿಯೆಯ ಬಿಎಲ್‌ಒ ಡ್ಯೂಟಿಗೆ ನಿಯೋಜಿಸಲಾಗಿತ್ತು. ಈ ಹಿಂದೆ ತುಮಕೂರು ಮೂಲದ ಶಿಕ್ಷಕಿ ಭುವನಾ ಪರಿಷ್ಕರಣೆಗೆ ತೆರಳುತ್ತಿದ್ದ ವೇಳೆ ಅಪಘಾತದಿಂದ ಮೃತಪಟ್ಟಿದ್ದರು.

ಕುಟುಂಬಸ್ಥರು, ಮೇಲಾಧಿಕಾರಿಗಳಿಂದ ಕೆಲಸದ ಒತ್ತಡ ಅತಿಯಾಗಿತ್ತು. ನಿಗದಿತ ಸಮಯದೊಳಗೆ ಮತದಾರರ ಪಟ್ಟಿಯನ್ನು ಪರಿಷ್ಕರಿಸಿ ಸಲ್ಲಿಸಬೇಕೆಂಬ ಆದೇಶವು ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿತ್ತು ಎಂದು ಆರೋಪಿಸಿದ್ದಾರೆ. "ನನಗೆ ಕೆಲಸದ ಒತ್ತಡ ಹೆಚ್ಚಾಗಿದೆ, ನನ್ನನ್ನು ಈ ಕೆಲಸದಿಂದ ಮುಕ್ತಗೊಳಿಸಿ" ಎಂದು ಮೃತರು ಮನೆಯವರ ಬಳಿ ಪದೇ ಪದೇ ಅಳಲು ತೋಡಿಕೊಳ್ಳುತ್ತಿದ್ದರು. ಅವರ ದೇಹದ ಮೇಲೆ ಒತ್ತಡದ ಪರಿಣಾಮವಾಗಿ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಯ ಮಟ್ಟ ಏರಿಕೆಯಾಗಿ, ತೀವ್ರ ಜ್ವರ ಕಾಣಿಸಿಕೊಂಡಿತು. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಇದೇ ರೀತಿಯ ಎಸ್‌ಐಆರ್‌ ಪ್ರಕ್ರಿಯೆಯ ಕರ್ತವ್ಯದ ವೇಳೆಯಲ್ಲಿಯೇ ಈ ಹಿಂದೆ ಎಸ್‌ಐಆರ್‌ ಕರ್ತವ್ಯಕ್ಕೆ ತೆರಳುವಾಗ ದ್ವಿಚಕ್ರ ವಾಹನ ಅಪಘಾತದಲ್ಲಿ ಗಾಯಗೊಂಡಿದ್ದ ಭುವನಾ ಎಂಬುವವರು ಚಿಕಿತ್ಸೆ ಫಲಿಸದೇ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ತುಮಕೂರು ತಾಲೂಕಿನ ಗೂಳೂರು ಬಳಿ ಬೈಕ್‌ನಲ್ಲಿ ಎಸ್‌ಐಆರ್ ಪ್ರಕ್ರಿಯೆಯ ಸೂಪರ್‌ವೈಸರ್ ಆಗಿ ಕರ್ತವ್ಯಕ್ಕೆ ತೆರಳುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿತ್ತು.

ಮೇಲಾಧಿಕಾರಿಗಳ ಒತ್ತಡವೇ ಕಾರಣ?

ಯಾವುದೇ ಸರ್ಕಾರಿ ಕೆಲಸವಿದ್ದರೂ ಒಂದು ನಿರ್ದಿಷ್ಟ ಕಾಲಮಿತಿ ಇರುತ್ತದೆ. ಆದರೆ, ಶಿಕ್ಷಕರು ಸೇರಿದಂತೆ ಇತರೆ ಸಿಬ್ಬಂದಿಗೆ ಈ ಕೆಲಸದ ಜೊತೆಗೆ ತಮ್ಮ ಮೂಲ ಕರ್ತವ್ಯಗಳನ್ನು ನಿರ್ವಹಿಸಬೇಕಾದ ಅನಿವಾರ್ಯತೆ ಇದೆ. ಮತದಾರರ ಪಟ್ಟಿ ಪರಿಷ್ಕರಣೆಯಂತಹ ಕೆಲಸಗಳಲ್ಲಿ ತಕ್ಷಣವೇ ಮುಗಿಸಿ ಎಂಬ ಮೇಲಾಧಿಕಾರಿಗಳ ಆದೇಶಗಳು ನೌಕರರ ಮೇಲೆ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತವೆ. ಶಿಕ್ಷಕಿ ಶಮಂತಾಕುಮಾರಿ ಅವರ ಸಾವು, ಮಾನಸಿಕ ಒತ್ತಡವು ಹೇಗೆ ದೈಹಿಕ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ ಮತ್ತು ಕೊನೆಗೆ ಸಾವಿನಲ್ಲಿ ಅಂತ್ಯವಾಗುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಬೋಧಕ ಸಿಬ್ಬಂದಿಯನ್ನು ಬೋಧನಾ ಕೆಲಸಗಳಿಗೆ ಮಾತ್ರ ಸೀಮಿತಗೊಳಿಸುವುದು ಸೂಕ್ತ. ಕರ್ತವ್ಯದ ಮೇಲೆ ತೆರಳುವ ನೌಕರರಿಗೆ ಸೂಕ್ತ ರಕ್ಷಣೆ ಅಥವಾ ಸಾರಿಗೆ ವ್ಯವಸ್ಥೆಯ ಕುರಿತು ಗಂಭೀರ ಚಿಂತನೆ ಅಗತ್ಯ. ಮೇಲಾಧಿಕಾರಿಗಳು ತಮ್ಮ ಗುರಿಗಳನ್ನು ತಲುಪುವ ಭರದಲ್ಲಿ ನೌಕರರ ಆರೋಗ್ಯದ ಸ್ಥಿತಿಗತಿಗಳನ್ನು ಪರಿಗಣಿಸಬೇಕು ಎಂದು ಹೇಳಲಾಗಿದೆ.

Read More
Next Story