BBMP officials negligence, dereliction of duty by not cashing tax checks worth lakhs of rupees: Demand for action
x

ಬಸವನಗುಡಿ ಸಹಕಾರ ಸಂಘ ನಿಯಮಿತದ ಕಟ್ಟಡ

ಲಕ್ಷಾಂತರ ರೂ. ತೆರಿಗೆಯ ಚೆಕ್ ನಗದೀಕರಿಸದ ಬಿಬಿಎಂಪಿ ಅಧಿಕಾರಿಗಳು; ಪಾಲಿಕೆ ಬೊಕ್ಕಸಕ್ಕೆ ನಷ್ಟ

ಸಹಾಯಕ ಕಂದಾಯ ಅಧಿಕಾರಿಯಾಗಿದ್ದ ಮಾಧುರಿ ಅವರಿಗೆ ಕಟ್ಟಡ ಮಾಲೀಕರು ನೀಡಿದ್ದ 62,16 ಲಕ್ಷ ರೂ. ಮೌಲ್ಯದ ಚೆಕ್ ಅನ್ನು ಬ್ಯಾಂಕ್‌ಗೆ ಜಮಾ ಮಾಡದೇ ತಮ್ಮ ಬಳಿಯೇ ಇಟ್ಟುಕೊಂಡಿದ್ದರು ಎಂದು ಬಿಜೆಪಿ ಮುಖಂಡ ಎನ್‌.ಆರ್‌. ರಮೇಶ್‌ ಆರೋಪಿಸಿದ್ದಾರೆ.


Click the Play button to hear this message in audio format

ಸ್ಥಳೀಯ ಸಂಸ್ಥೆಗಳು ಹಾಗೂ ಮಹಾನಗರ ಪಾಲಿಕೆಗಳಲ್ಲಿ ರಾಜ್ಯ ಸರ್ಕಾರವು ಕಂದಾಯ ವಸೂಲಿ ಮಾಡಲು ಸೂಚನೆ ನೀಡಿದರೂ ನಿಗದಿತ ಪ್ರಮಾಣದಲ್ಲಿ ಗುರಿ ಸಾಧಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ. ಈ ನಡುವೆಯೇ, ಬಿಬಿಎಂಪಿ ಕಂದಾಯ ವಿಭಾಗಕ್ಕೆ ಒಂದು ವರ್ಷದ ಹಿಂದೆ ಸಲ್ಲಿಕೆಯಾಗಿರುವ ತೆರಿಗೆಯ ಚೆಕ್‌ ಅನ್ನು ಅಧಿಕಾರಿಗಳು ನಗದೀಕರಣ ಮಾಡದೇ ಕರ್ತ್ಯವ್ಯ ಲೋಪ ಎಸಗಿರುವ ಘಟನೆ ಬಯಲಿಗೆ ಬಂದಿದೆ.

ತೆರಿಗೆ ವಸೂಲಾತಿಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಾಲಿಕೆಗೆ ಬರಬೇಕಿದ್ದ ಲಕ್ಷಾಂತರ ರೂಪಾಯಿ ಹಣ ಪಾವತಿಯಾಗದೇ, ಬೊಕ್ಕಸಕ್ಕೆ ನಷ್ಟ ಉಂಟಾಗಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಆಗ್ರಹಿಸಿದ್ದಾರೆ.

ಪ್ರಕರಣದ ಹಿನ್ನೆಲೆ ಏನು?

ಬೆಂಗಳೂರಿನ ಬಸವನಗುಡಿಯ ಗಾಂಧಿ ಬಜಾರ್ ಮುಖ್ಯರಸ್ತೆಯಲ್ಲಿರುವ ʼಬಸವನಗುಡಿ ಸಹಕಾರ ಸಂಘ ನಿಯಮಿತʼದ ಕಟ್ಟಡದ ಆಸ್ತಿ ತೆರಿಗೆ ಪರಿಷ್ಕರಣೆಯಲ್ಲಿ ಸುಮಾರು 1.24 ಕೋಟಿ ರೂಪಾಯಿ ವ್ಯತ್ಯಾಸ ಕಂಡುಬಂದಿತ್ತು. ಈ ಸಂಬಂಧ ಕಟ್ಟಡದ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಈ ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿದ್ದು, ಕೋರ್ಟ್ ಆದೇಶದಂತೆ ಮಾಲೀಕರು ತೆರಿಗೆಯ ಶೇ. 50 ರಷ್ಟು ಮೊತ್ತವಾದ 62.16 ಲಕ್ಷ ರೂ. ತೆರಿಗೆಯನ್ನು ಚೆಕ್ ಮೂಲಕ ಪಾವತಿಸಿದ್ದರು.

ಅಧಿಕಾರಿಗಳ ನಿರ್ಲಕ್ಷ್ಯ

2025ರ ಫೆ. 19ರಂದು ಅಂದಿನ ಸಹಾಯಕ ಕಂದಾಯ ಅಧಿಕಾರಿಯಾಗಿದ್ದ ಮಾಧುರಿ ಅವರಿಗೆ ಕಟ್ಟಡ ಮಾಲೀಕರು ನೀಡಿದ್ದ 62.16 ಲಕ್ಷ ರೂ. ಮೌಲ್ಯದ ಚೆಕ್ ಅನ್ನು ಬ್ಯಾಂಕ್‌ಗೆ ಜಮಾ ಮಾಡದೇ ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಒಂದು ವರ್ಷದ ಅವಧಿಯವರೆಗೆ ಚೆಕ್ ನಗದೀಕರಣವಾಗದ ಕಾರಣ ಪಾಲಿಕೆಗೆ ಬರಬೇಕಿದ್ದ ಬೃಹತ್ ಮೊತ್ತದ ಹಣ ಬೊಕ್ಕಸಕ್ಕೆ ಸೇರಲಿಲ್ಲ ಎಂದು ಎನ್‌.ಆರ್‌.ರಮೇಶ್‌ ಆರೋಪಿಸಿದ್ದಾರೆ.

ಬಿಬಿಎಂಪಿಗೆ ಸಲ್ಲಿಸಿದ್ದ ಚೆಕ್‌

ಜಂಟಿ ಆಯುಕ್ತರ ಉದಾಸೀನತೆ

ಕಟ್ಟಡ ಮಾಲೀಕರು 2026ರ ಫೆ. 9ರಂದು ಮತ್ತೊಮ್ಮೆ ಅದೇ ಮೊತ್ತದ ಮತ್ತೊಂದು ಚೆಕ್ (ಸಂಖ್ಯೆ: 056201) ನೀಡಿದ್ದಾರೆ. ಆದರೆ, ಪ್ರಸ್ತುತ ಈ ಚೆಕ್‌ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಜಂಟಿ ಆಯುಕ್ತ ಹೇಮಂತ್ ಅವರ ಕೈಸೇರಿ ಎರಡು ತಿಂಗಳು ಕಳೆದರೂ ಅದನ್ನು ಆಯುಕ್ತರ ಖಾತೆಗೆ ಜಮಾ ಮಾಡಲು ಮುಂದಾಗಿಲ್ಲ. ಅಧಿಕಾರಿಗಳ ಈ ಉದಾಸೀನತೆ ಈಗ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ತೆರಿಗೆ ಹಣ ಪಾವತಿಯಾಗದಿರಲು ಕಾರಣರಾದ ಕಂದಾಯ ಅಧಿಕಾರಿ ಮಾಧುರಿ ಮತ್ತು ಪ್ರಸ್ತುತ ಕರ್ತವ್ಯಲೋಪ ಎಸಗುತ್ತಿರುವ ಜಂಟಿ ಆಯುಕ್ತ ಹೇಮಂತ್ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶಿಸಬೇಕು. ಈ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತರು, ಕಂದಾಯ ಇಲಾಖೆಯ ವಿಶೇಷ ಆಯುಕ್ತರು ಮತ್ತು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರಿಗೆ ದಾಖಲೆಗಳ ಸಹಿತ ದೂರು ಸಲ್ಲಿಸಲಾಗಿದೆ ಎಂದು ರಮೇಶ್‌ ತಿಳಿಸಿದ್ದಾರೆ.

Read More
Next Story