
ಸಾಂದರ್ಭಿಕ ಚಿತ್ರ
ಬಿಬಿಎಂಪಿಯಲ್ಲಿ 40 ಸಾವಿರ ಕೋಟಿ ರೂ. ಹಗರಣ ಆರೋಪ; ಅಧಿಕಾರಿಗಳ ವಿರುದ್ಧ ಬಿಜೆಪಿ ದೂರು!
ನಗರದಲ್ಲಿ ನಿರ್ಮಿಸಲಾಗಿರುವ 50 ಯುನಿಟ್‌ಗಳಿಗಿಂತ ಹೆಚ್ಚಿರುವ ವಸತಿ ಸಂಕೀರ್ಣಗಳು ಮತ್ತು ಬೃಹತ್ ವಾಣಿಜ್ಯ ಕಟ್ಟಡಗಳಿಗೆ ನೀಡಲಾಗಿರುವ ಶೇ.95 ರಷ್ಟು ಸಿ.ಸಿ ಮತ್ತು ಓ.ಸಿ ಪ್ರಮಾಣ ಪತ್ರಗಳು ಸಂಪೂರ್ಣ ನಕಲಿಯಾಗಿವೆ ಎಂದು ಆರೋಪಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) 150 ವರ್ಷಗಳ ಇತಿಹಾಸದಲ್ಲೇ ಅತ್ಯಂತ ದೊಡ್ಡದಾದ ಹಾಗೂ ಆಘಾತಕಾರಿ ಭ್ರಷ್ಟಾಚಾರ ಮತ್ತು ವಂಚನೆಯ ಮಹಾ ಹಗರಣವೊಂದು ಬಯಲಾಗಿದೆ. ಪಾಲಿಕೆಯ ನಗರ ಯೋಜನೆ ಇಲಾಖೆಯ ಅಧಿಕಾರಿಗಳು ನಡೆಸಿರುವ ಈ ಬೃಹತ್ ಹಗರಣದಲ್ಲಿ ಬರೋಬ್ಬರಿ 40 ಸಾವಿರ ಕೋಟಿ ರೂ. ಗೂ ಅಧಿಕ ಮೊತ್ತದ ಭ್ರಷ್ಟಾಚಾರ ನಡೆದಿದ್ದು, ಸುಮಾರು 22 ಲಕ್ಷ ನಾಗರಿಕರಿಗೆ ವಂಚಿಸಲಾಗಿದೆ ಎಂದು ಗಂಭೀರ ಆರೋಪ ಕೇಳಿಬಂದಿದೆ.
ಪಾಲಿಕೆ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಎನ್. ಆರ್. ರಮೇಶ್ ಈ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮತ್ತು ಲೋಕಾಯುಕ್ತಕ್ಕೆ ಬರೋಬ್ಬರಿ 9,700 ಪುಟಗಳ ದಾಖಲೆಗಳ ಸಮೇತ ಅಧಿಕೃತ ದೂರು ದಾಖಲಿಸಿದ್ದಾರೆ.
255 ಅಧಿಕಾರಿಗಳು, 437 ಬಿಲ್ಡರ್‌ಗಳ ವಿರುದ್ಧ ದೂರು
ಕಳೆದ 16 ವರ್ಷಗಳ ಅವಧಿಯಲ್ಲಿ (2010-11 ರಿಂದ 2025-26) ಪಾಲಿಕೆಯ ನಗರ ಯೋಜನೆ ಇಲಾಖೆಯಲ್ಲಿ ಕಾರ್ಯನಿರ್ವಹಿಸಿರುವ 255 ಭ್ರಷ್ಟ ಅಧಿಕಾರಿಗಳು ಹಾಗೂ ಬೆಂಗಳೂರಿನಲ್ಲಿ ಬೃಹತ್ ಕಟ್ಟಡಗಳನ್ನು ನಿರ್ಮಿಸುತ್ತಿರುವ ಕ್ರೆಡಾಯ್ (CREDAI) ಮತ್ತು ಬ್ರಾಯ್ (BRAI) ಸಂಸ್ಥೆಗಳ ಸದಸ್ಯರಾಗಿರುವ 437 ಬಿಲ್ಡರ್‌ಗಳ ವಿರುದ್ಧ ನೀಡಲಾಗಿದೆ.
ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ ಬಿಜೆಪಿ ಮುಖಂಡ ಎನ್.ಆರ್. ರಮೇಶ್
ಶೇ. 95 ರಷ್ಟು ಸಿಸಿ ಮತ್ತು ಓಸಿಗಳು ನಕಲಿ!
ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ 50 ಯುನಿಟ್‌ಗಳಿಗಿಂತ ಹೆಚ್ಚಿರುವ ವಸತಿ ಸಂಕೀರ್ಣಗಳು ಮತ್ತು ಬೃಹತ್ ವಾಣಿಜ್ಯ ಕಟ್ಟಡಗಳಿಗೆ ನೀಡಲಾಗಿರುವ ಶೇ.95 ರಷ್ಟು ಆರಂಭಿಕ ಪ್ರಮಾಣಪತ್ರ (ಸಿ.ಸಿ) ಮತ್ತು ಸ್ವಾಧೀನ ಪ್ರಮಾಣಪತ್ರಗಳು (ಓ.ಸಿ) ಸಂಪೂರ್ಣ ನಕಲಿಯಾಗಿವೆ! ದಾಖಲೆಗಳ ಪ್ರಕಾರ, ಕಳೆದ 16 ವರ್ಷಗಳಲ್ಲಿ ನಗರ ಯೋಜನೆ ಇಲಾಖೆಯಿಂದ ಅಧಿಕೃತವಾಗಿ ನೀಡಲಾಗಿರುವ ಸಿ.ಸಿಗಳ ಸಂಖ್ಯೆ 4,381 ಮತ್ತು ಓ.ಸಿಗಳ ಸಂಖ್ಯೆ ಕೇವಲ 4,587 ಮಾತ್ರ. ಆದರೆ, ಇದೇ ಅವಧಿಯಲ್ಲಿ 71,169 ನಕ್ಷೆ ಮಂಜೂರಾತಿ ನೀಡಲಾಗಿದೆ. ಕ್ರೆಡಾಯ್ ಮತ್ತು ಬ್ರಾಯ್ ಸದಸ್ಯರಾಗಿರುವ ಬಿಲ್ಡರ್‌ಗಳು 50 ಕ್ಕೂ ಹೆಚ್ಚು ಯುನಿಟ್‌ಗಳನ್ನು ಹೊಂದಿರುವ ಸುಮಾರು 25 ಸಾವಿರಕ್ಕೂ ಹೆಚ್ಚು ವಸತಿ ಸಂಕೀರ್ಣಗಳನ್ನು ನಿರ್ಮಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಯಾವೆಲ್ಲಾ ಕಟ್ಟಡಗಳು ನಕಲಿ ಓಸಿ ವ್ಯಾಪ್ತಿಯಲ್ಲಿವೆ?
ಬೆಂಗಳೂರಿನಲ್ಲಿ ಸದ್ಯ 98 ಟೆಕ್ ಪಾರ್ಕ್‌ಗಳು, 3,876 ಐಟಿ ಕಂಪನಿಗಳು, 103 ಬಿಟಿ ಕಂಪನಿಗಳು, 4,500 ಕ್ಕೂ ಹೆಚ್ಚು ಬೃಹತ್ ವಾಣಿಜ್ಯ ಸಂಕೀರ್ಣಗಳು, 217 ಮಾಲ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳು, 1,10 ಲಕ್ಷ ಕೈಗಾರಿಕಾ ಕಟ್ಟಡಗಳು, 540 ಸ್ಟಾರ್ ಹೋಟೆಲ್‌ಗಳು, 2,850 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಹಾಗೂ 1,350 ಕಲ್ಯಾಣ ಮಂಟಪಗಳಿವೆ. ಇಷ್ಟೊಂದು ಬೃಹತ್ ಪ್ರಮಾಣದ ಕಟ್ಟಡಗಳಿದ್ದರೂ ಪಾಲಿಕೆ ನೀಡಿರುವ ಅಧಿಕೃತ ಓ.ಸಿಗಳು ಕೇವಲ 4,587 ಮಾತ್ರ ಆಗಿರುವುದು, ಉಳಿದ ಶೇ. 95 ಕ್ಕೂ ಹೆಚ್ಚು ಕಟ್ಟಡಗಳಿಗೆ ನಕಲಿ ಓ.ಸಿ ನೀಡಿರುವುದನ್ನು ಸಾಬೀತುಪಡಿಸುತ್ತದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಪಾಲಿಕೆ ಬೊಕ್ಕಸಕ್ಕೆ 40 ಸಾವಿರ ಕೋಟಿ ರೂ. ನಷ್ಟ
ಬಿಲ್ಡರ್‌ಗಳು ನಿಯಮಾನುಸಾರ ಪಾಲಿಕೆಗೆ ಪಾವತಿಸಬೇಕಾದ ಒಟ್ಟು ಶುಲ್ಕದ ಕೇವಲ ಶೇ. 25 ರಷ್ಟು ಮೊತ್ತವನ್ನು ಮಾತ್ರ ನಗರ ಯೋಜನೆ ಇಲಾಖೆಯ ಅಧಿಕಾರಿಗಳಿಗೆ ಲಂಚದ ರೂಪದಲ್ಲಿ ನೀಡಿ ನಕಲಿ ಓ.ಸಿಗಳನ್ನು ಪಡೆದುಕೊಂಡಿದ್ದಾರೆ. ಒಂದು ವೇಳೆ ಅಸಲಿ ಓ.ಸಿ ನೀಡಿ ನಿಯಮಿತ ಶುಲ್ಕ ವಸೂಲಿ ಮಾಡಿದ್ದರೆ ಪಾಲಿಕೆಯ ಬೊಕ್ಕಸಕ್ಕೆ 40 ಸಾವಿರ ಕೋಟಿ ರೂ. ಗೂ ಅಧಿಕ ಆದಾಯ ಬರುತ್ತಿತ್ತು ಎಂದು ತಿಳಿಸಿದ್ದಾರೆ.
22 ಲಕ್ಷ ಫ್ಲ್ಯಾಟ್ ಗ್ರಾಹಕರಿಗೆ ಬಿಗ್ ಶಾಕ್!
ಈ ವಂಚನೆಯ ನೇರ ಪರಿಣಾಮ ಬೆಂಗಳೂರಿನ ಸಾಮಾನ್ಯ ನಾಗರಿಕರ ಮೇಲಾಗಿದೆ. ಕಳೆದ 16 ವರ್ಷಗಳಲ್ಲಿ ನಿರ್ಮಾಣಗೊಂಡಿರುವ 25 ಸಾವಿರ ಅಪಾರ್ಟ್‌ಮೆಂಟ್‌ಗಳಲ್ಲಿನ 22 ಲಕ್ಷ ಫ್ಲ್ಯಾಟ್‌ಗಳನ್ನು ಗ್ರಾಹಕರಿಗೆ ಮಾರಾಟ ಮಾಡಲಾಗಿದ್ದು, ಈ ಎಲ್ಲಾ 22 ಲಕ್ಷ ಗ್ರಾಹಕರಿಗೆ ಬಿಲ್ಡರ್‌ಗಳು ನಕಲಿ ಓ.ಸಿ ಗಳನ್ನೇ ನೀಡಿದ್ದಾರೆ. ಇನ್ನು ಗೃಹ ಸಾಲ ನೀಡುವ ಬ್ಯಾಂಕ್ ಅಧಿಕಾರಿಗಳು ಕೂಡ ಈ ಓ.ಸಿ ಹಾಗೂ ಸಿ.ಸಿಗಳು ಅಸಲಿಯೇ ಅಥವಾ ನಕಲಿಯೇ ಎಂದು ಪರಿಶೀಲಿಸದೆ ಸಾಲ ಮಂಜೂರು ಮಾಡಿ ನಿರ್ಲಕ್ಷ್ಯವಹಿಸಿದ್ದಾರೆ ಎನ್ನಲಾಗಿದೆ.
ಲಂಚ ನೀಡಿ ಪೋಸ್ಟಿಂಗ್ ಪಡೆಯುವ ಅಧಿಕಾರಿಗಳು
ಪಾಲಿಕೆಯ 17 ಇಲಾಖೆಗಳ ಪೈಕಿ ನಗರ ಯೋಜನೆ ಇಲಾಖೆಯು ಅತ್ಯಂತ ಭ್ರಷ್ಟ ಇಲಾಖೆಯಾಗಿದೆ. ಇಲ್ಲಿ ಎ.ಇ ಹುದ್ದೆಗೆ 25 ಲಕ್ಷದಿಂದ 50 ಲಕ್ಷ ರೂ, ಎಡಿಟಿಪಿ ಹುದ್ದೆಗೆ 50 ಲಕ್ಷದಿಂದ 1 ಕೋಟಿ ರೂ, ಜೆಡಿಟಿಪಿ ಹುದ್ದೆಗೆ 1 ರಿಂದ 2 ಕೋಟಿ ರೂ. ಹಾಗೂ ಅಪರ ನಿರ್ದೇಶಕರ ಸ್ಥಾನಕ್ಕೆ ಕನಿಷ್ಠ 5 ಕೋಟಿ ರೂ. ಗೂ ಹೆಚ್ಚು ಲಂಚ ನೀಡಿ ಅಧಿಕಾರಿಗಳು ರಾಜಕಾರಣಿಗಳ ಮೂಲಕ ಪ್ರಭಾವಿ ಪೋಸ್ಟಿಂಗ್ ಗಿಟ್ಟಿಸಿಕೊಳ್ಳುತ್ತಾರೆ. ಈ ಹಿಂದೆ 2017 -18 ರಲ್ಲೂ ರಾಜರಾಜೇಶ್ವರಿ ನಗರ ವಲಯದಲ್ಲಿ ನಕಲಿ ಓ.ಸಿ ಹಾಗೂ ಸಿ.ಸಿ ಮುದ್ರಿಸುತ್ತಿದ್ದ ಆರು ಮಂದಿ ಬಿಬಿಎಂಪಿ ನೌಕರರನ್ನು ಬಿಎಂಟಿಎಫ್ ಪೊಲೀಸರು ಬಂಧಿಸಿದ್ದರು ಎಂದು ತಿಳಿಸಿದ್ದಾರೆ.
ಸಿಬಿಐ, ನ್ಯಾಯಾಂಗ ತನಿಖೆಗೆ ಆಗ್ರಹ
ಈ ಬೃಹತ್ ಹಗರಣದಲ್ಲಿ ಹಿಂದಿನ 8 ವಲಯಗಳ ಹಾಗೂ ಸದ್ಯದ 5 ಪಾಲಿಕೆಗಳ ಜಂಟಿ ಆಯುಕ್ತರುಗಳು ಭಾಗಿಯಾಗಿದ್ದಾರೆ. ನಗರ ಯೋಜನೆ ಇಲಾಖೆಯ ಪ್ರತಿಯೊಬ್ಬ ಅಧಿಕಾರಿಯೂ ನೂರಾರು ಕೋಟಿ ರೂ. ಅಕ್ರಮ ಆಸ್ತಿಗಳಿಸಿದ್ದಾರೆ. ಆದ್ದರಿಂದ, 22 ಲಕ್ಷ ನಾಗರಿಕರ ಹಿತದೃಷ್ಟಿಯಿಂದ ಮತ್ತು ಪಾಲಿಕೆಯ ಬೊಕ್ಕಸ ಲೂಟಿಯಾಗಿರುವ ಹಿನ್ನೆಲೆಯಲ್ಲಿ ಈ ಹಗರಣವನ್ನು ಸಿಬಿಐ, ಸಿಐಡಿ ಅಥವಾ ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.

