
ಆಮೆಗಳ ಸಂರಕ್ಷಣೆಗೆ ಕೈಜೋಡಿಸಿದ ಬನ್ನೇರುಘಟ್ಟ ಉದ್ಯಾನವನ : ವನ್ಯಜೀವಿ ರಕ್ಷಣೆಗೆ ಜಾಗೃತಿ
ಹವಾಮಾನ ಬದಲಾವಣೆ, ಆವಾಸಸ್ಥಾನ ನಾಶದಿಂದಾಗಿ ಆಮೆಗಳ ಸಂಖ್ಯೆ ಕ್ಷೀಣಿಸುತ್ತಿದೆ. ಈ ಹಿನ್ನೆಲೆಯಲ್ಲಿ,ಆಮೆಗಳ ಬಗ್ಗೆ ಜಾಗೃತಿ ಮೂಡಿಸಲು ಹಮ್ಮಿಕೊಂಡ ಕಾರ್ಯಕ್ರಮ ಜನರ ಮನ ಸೆಳೆಯಿತು.
ಪ್ರಕೃತಿಯ ಅಪ್ರತಿಮ ಸೃಷ್ಟಿಗಳಾದ ಆಮೆಗಳ ಸಂರಕ್ಷಣೆ ಮತ್ತು ಅವುಗಳ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 'ವಿಶ್ವ ಆಮೆ ದಿನ'ವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಭಾರತೀಯ ಅಂಚೆ ಇಲಾಖೆ, ಪೋಸ್ಟ್ ಕ್ರಾಸಿಂಗ್ ವೆಲ್ಫೇರ್ ಸೊಸೈಟಿ ಆಫ್ ಇಂಡಿಯಾ ಜಂಟಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮವು ವನ್ಯಜೀವಿ ಪ್ರಿಯರು, ವಿದ್ಯಾರ್ಥಿಗಳು ಮತ್ತು ಪರಿಸರವಾದಿಗಳ ಗಮನ ಸೆಳೆಯಿತು.
ಆಮೆಗಳು ಭೂಮಿಯ ಅತ್ಯಂತ ಹಳೆಯ ಮತ್ತು ಅಳಿವಿನಂಚಿನಲ್ಲಿರುವ ಪ್ರಭೇದಗಳಲ್ಲಿ ಒಂದಾಗಿವೆ. ಇವು ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಆದರೆ, ಹವಾಮಾನ ಬದಲಾವಣೆ, ಆವಾಸಸ್ಥಾನ ನಾಶ ಮತ್ತು ಅಕ್ರಮ ವ್ಯಾಪಾರದಿಂದಾಗಿ ಇವುಗಳ ಸಂಖ್ಯೆ ಕ್ಷೀಣಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಜನರ ಮನಸ್ಸಿನಲ್ಲಿ ಆಮೆಗಳ ಬಗ್ಗೆ ಕಾಳಜಿ ಮೂಡಿಸಲು ಮತ್ತು ವೈಜ್ಞಾನಿಕ ಅರಿವನ್ನು ವಿಸ್ತರಿಸಲು ಈ ಕಾರ್ಯಕ್ರಮವನ್ನು ರೂಪಿಸಲಾಗಿತ್ತು.
ಅರಿವಿನ ಹೊಸ ಆಯಾಮ
ಈ ಆಚರಣೆಯ ಪ್ರಮುಖ ಆಕರ್ಷಣೆಯಾಗಿ ಒಂಬತ್ತು ಶೈಕ್ಷಣಿಕ ಪೋಸ್ಟ್ ಕಾರ್ಡ್‌ಗಳನ್ನು ಬಿಡುಗಡೆ ಮಾಡಲಾಯಿತು. ಅಂಚೆ ಇಲಾಖೆಯ ಸಹಯೋಗದಲ್ಲಿ ಸಿದ್ಧಪಡಿಸಲಾದ ಈ ಕಾರ್ಡ್‌ಗಳು ಸಾಮಾನ್ಯ ಅಂಚೆ ಚೀಟಿಗಳಿಗಿಂತ ಭಿನ್ನವಾಗಿದ್ದವು. ಇವುಗಳಲ್ಲಿ ನೆಲದ ಆಮೆಗಳು ಭೂಮಿಯ ಮೇಲೆ ಬದುಕುವ ವಿಶಿಷ್ಟತೆಗಳು, ಕಡಲಾಮೆಗಳು ಸಾಗರಗಳ ಸಂರಕ್ಷಕಗಳಾಗಿ ಇವುಗಳ ಪಾತ್ರ ಮತ್ತು ಸಿಹಿನೀರಿನ ಆಮೆಗಳು ನದಿ ಮತ್ತು ಕೆರೆಗಳ ಪರಿಸರ ವ್ಯವಸ್ಥೆಯಲ್ಲಿನ ಕೊಡುಗೆಯಾಗಿದೆ. ಪ್ರತಿಯೊಂದು ಪೋಸ್ಟ್ ಕಾರ್ಡ್ ಚಿತ್ರಣದೊಂದಿಗೆ, ಆ ನಿರ್ದಿಷ್ಟ ಜಾತಿಯ ಆಮೆಗಳ ಶಾರೀರಿಕ ರಚನೆ, ಆಹಾರ ಪದ್ಧತಿ, ಬದುಕುಳಿಯುವ ತಂತ್ರ ಮತ್ತು ಅವುಗಳ ವೈಜ್ಞಾನಿಕ ಹಿನ್ನೆಲೆಯನ್ನು ಸರಳ ಹಾಗೂ ಆಕರ್ಷಕವಾಗಿ ವಿವರಿಸಲಾಗಿತ್ತು. ಇದು ಕೇವಲ ಪ್ರಚಾರದ ಸಾಧನವಾಗದೆ, ಜ್ಞಾನ ಭಂಡಾರವಾಗಿಯೂ ಕಾರ್ಯನಿರ್ವಹಿಸಿತು.
ದೃಶ್ಯ ಮಾಧ್ಯಮದ ಮೂಲಕ ಜಾಗೃತಿ
ಕಾರ್ಯಕ್ರಮದಲ್ಲಿ 'ರೌಂಡ್‍ಗ್ಲಾಸ್ ಸಸ್ಟೈನ್' ಸಂಸ್ಥೆಯ ಸಹಯೋಗದೊಂದಿಗೆ ಸಿದ್ಧಪಡಿಸಲಾದ ಕಿರು ಸಂರಕ್ಷಣಾ ಚಲನಚಿತ್ರಗಳನ್ನು ಪ್ರದರ್ಶಿಸಲಾಯಿತು. ಈ ಸಾಕ್ಷ್ಯಚಿತ್ರಗಳು ಆಮೆಗಳು ಎದುರಿಸುತ್ತಿರುವ ಸವಾಲುಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದವು. ಸಾರ್ವಜನಿಕರು ಆಮೆ ಸಂರಕ್ಷಣಾ ಪ್ರಯತ್ನಗಳಿಗೆ ಹೇಗೆ ಕೈಜೋಡಿಸಬಹುದು, ಗಾಯಗೊಂಡ ಆಮೆಗಳನ್ನು ಕಂಡಾಗ ಯಾರನ್ನು ಸಂಪರ್ಕಿಸಬೇಕು ಮತ್ತು ಅವುಗಳ ಆವಾಸಸ್ಥಾನಗಳನ್ನು ಹೇಗೆ ಉಳಿಸಬೇಕು ಎಂಬುದರ ಕುರಿತು ಈ ಚಿತ್ರಗಳು ಸ್ಪಷ್ಟ ಸಂದೇಶವನ್ನು ರವಾನಿಸಿದವು.
ಸಜೀವ ಮಾದರಿಗಳ ಪ್ರದರ್ಶನ
ಉದ್ಯಾನವನದ ಸರೀಸೃಪ ವಿಭಾಗದಲ್ಲಿ ಏಳು ಜೀವಿ ಗಾತ್ರದ ಕಡಲಾಮೆ ಮಾದರಿಗಳನ್ನು ಸಾರ್ವಜನಿಕ ವೀಕ್ಷಣೆಗೆ ಇಡಲಾಗಿತ್ತು. ಈ ಮಾದರಿಗಳು ನೈಜ ಆಮೆಗಳಂತೆಯೇ ಇದ್ದು, ಅವುಗಳ ಬೆನ್ನಿನ ಕವಚದ ರಚನೆ, ಈಜಲು ಸಹಕಾರಿಯಾದ ಅಂಗಗಳ ರಚನೆ ಮತ್ತು ಅವುಗಳ ವಿಭಿನ್ನ ದೇಹದ ವಿನ್ಯಾಸಗಳನ್ನು ಗಮನಿಸಲು ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವನ್ನು ಕಲ್ಪಿಸಿಕೊಟ್ಟಿತು. ಪ್ರವಾಸಿಗರು ಮತ್ತು ವಿದ್ಯಾರ್ಥಿಗಳು ಈ ಮಾದರಿಗಳನ್ನು ಕುತೂಹಲದಿಂದ ವೀಕ್ಷಿಸಿ, ತಜ್ಞರಿಂದ ಆಮೆಗಳ ಜೀವನಚಕ್ರದ ಬಗ್ಗೆ ಮಾಹಿತಿ ಪಡೆದರು. ಕಾರ್ಯಕ್ರಮದಲ್ಲಿ ಬೆಂಗಳೂರಿನ ಉಪ ಮುಖ್ಯ ಪೋಸ್ಟ್ ಮಾಸ್ಟರ್ ದಿನೇಶ್ ನಾರಾಯಣ್, ಅಂಚೆ ಇಲಾಖೆಯು ಇಂತಹ ಜಾಗೃತಿ ಕಾರ್ಯಕ್ರಮಗಳಿಗೆ ವೇದಿಕೆಯಾಗುತ್ತಿರುವುದು ಹೆಮ್ಮೆಯ ವಿಷಯ. ಪೋಸ್ಟ್ ಕಾರ್ಡ್‌ಗಳ ಮೂಲಕ ಜಾಗೃತಿ ಮೂಡಿಸುವ ಈ ಪ್ರಯತ್ನವು ಆಮೆಗಳ ಸಂರಕ್ಷಣೆಗೆ ಹೊಸ ಬಲ ನೀಡಲಿದೆ ಎಂದು ತಿಳಿಸಿದರು. ಬೆಂಗಳೂರು ದಕ್ಷಿಣದ ಅಂಚೆ ಕಚೇರಿಗಳ ಸಹಾಯಕ ಅಧೀಕ್ಷಕಿ ನಳಿನಿ ಎನ್ ಅವರು ಮಾತನಾಡಿ, ಪ್ರಕೃತಿಯನ್ನು ಪ್ರೀತಿಸುವ ಮತ್ತು ಉಳಿಸುವ ಸಂಸ್ಕೃತಿಯನ್ನು ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದರು.

