Namma Metro| ವಿದ್ಯುತ್‌ ಸಮಸ್ಯೆ; ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ ತಾತ್ಕಾಲಿಕ ಬಂದ್
x
ಕಬ್ಬನ್‌ ಪಾರ್ಕ್‌ ಮೆಟ್ರೋ ನಿಲ್ದಾಣ

Namma Metro| ವಿದ್ಯುತ್‌ ಸಮಸ್ಯೆ; ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ ತಾತ್ಕಾಲಿಕ ಬಂದ್

ಸುರಕ್ಷತಾ ದೃಷ್ಟಿಯಿಂದ ಬಿಎಂಆರ್‌ಸಿಎಲ್‌ ಈ ಕಠಿಣ ನಿರ್ಧಾರ ಕೈಗೊಂಡಿದೆ. ವಿದ್ಯುತ್ ಇಲ್ಲದೆ ನಿಲ್ದಾಣದ ಸಿಗ್ನಲಿಂಗ್, ಎಸ್ಕಲೇಟರ್ ಹಾಗೂ ಟಿಕೆಟಿಂಗ್ ವ್ಯವಸ್ಥೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.


ಸಿಲಿಕಾನ್ ಸಿಟಿಯ ಮೆಟ್ರೋ ಪ್ರಯಾಣಿಕರಿಗೆ ತಾಂತ್ರಿಕ ಅಡಚಣೆಯ ಬಿಸಿ ತಟ್ಟಿದೆ. ʼನಮ್ಮ ಮೆಟ್ರೋʼ ನೇರಳೆ ಮಾರ್ಗದ ಜನನಿಬಿಡ ನಿಲ್ದಾಣಗಳಲ್ಲಿ ಒಂದಾದ 'ಕಬ್ಬನ್ ಪಾರ್ಕ್' ಮೆಟ್ರೋ ನಿಲ್ದಾಣವನ್ನು ಸೋಮವಾರ ಬೆಳಿಗ್ಗೆ ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಪ್ರಕಟಿಸಿದೆ.

ನಿಲ್ದಾಣದಲ್ಲಿ ಉಂಟಾದ ವಿದ್ಯುತ್ ಸಮಸ್ಯೆಯಿಂದ ನಿಲ್ದಾಣದಲ್ಲಿ ರೈಲುಗಳ ನಿಲುಗಡೆ ಸ್ಥಗಿತಗೊಳಿಸಲಾಗಿದೆ. ಸುರಕ್ಷತಾ ದೃಷ್ಟಿಯಿಂದ ಬಿಎಂಆರ್‌ಸಿಎಲ್‌ ಈ ಕಠಿಣ ನಿರ್ಧಾರ ಕೈಗೊಂಡಿದೆ. ವಿದ್ಯುತ್ ಇಲ್ಲದೆ ನಿಲ್ದಾಣದ ಸಿಗ್ನಲಿಂಗ್, ಎಸ್ಕಲೇಟರ್ ಹಾಗೂ ಟಿಕೆಟಿಂಗ್ ವ್ಯವಸ್ಥೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.

ರೈಲು ಸಂಚಾರದಲ್ಲಿ ಬದಲಾವಣೆ

ನೇರಳೆ ಮಾರ್ಗದಲ್ಲಿ ಸಂಚರಿಸುವ ರೈಲುಗಳು ಎಂದಿನಂತೆ ಚಲಿಸಲಿವೆ. ಆದರೆ ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ರೈಲುಗಳು ನಿಲ್ಲುವುದಿಲ್ಲ. ಈ ನಿಲ್ದಾಣದಲ್ಲಿ ಇಳಿಯಬೇಕಾದ ಪ್ರಯಾಣಿಕರು ಡಾ. ಬಿ.ಆರ್. ಅಂಬೇಡ್ಕರ್ ನಿಲ್ದಾಣ (ವಿಧಾನಸೌಧ) ಅಥವಾ ಎಂ.ಜಿ. ರಸ್ತೆ ನಿಲ್ದಾಣವನ್ನು ಅವಲಂಬಿಸಬೇಕಾಗಿದೆ.

ಕಚೇರಿ ತಲುಪುವವರಿಗೆ ಬಿಸಿ

ಸೋಮವಾರ ಬೆಳಿಗ್ಗೆ ಕಚೇರಿಗೆ ತೆರಳುವ ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ಕಬ್ಬನ್ ಪಾರ್ಕ್ ಸುತ್ತಮುತ್ತಲ ಪ್ರದೇಶಕ್ಕೆ ಭೇಟಿ ನೀಡುವ ಸಾರ್ವಜನಿಕರಿಗೆ ಈ ಬದಲಾವಣೆಯಿಂದ ಭಾರಿ ಅನಾನುಕೂಲ ಉಂಟಾಗಿದೆ. ನಿಲ್ದಾಣದ ಹೊರಗೆ ಪ್ರಯಾಣಿಕರು ಗಲಿಬಿಲಿಗೊಂಡ ದೃಶ್ಯಗಳು ಕಂಡುಬಂದವು. ಇದಕ್ಕೆ ಸ್ಪಷ್ಟನೆ ನೀಡಿದ ಬಿಎಂಆರ್ಸಿಎಲ್, ವಿದ್ಯುತ್ ಪೂರೈಕೆ ಸಹಜ ಸ್ಥಿತಿಗೆ ಬಂದ ತಕ್ಷಣ ನಿಲ್ದಾಣದ ಕಾರ್ಯಾಚರಣೆ ಪುನರಾರಂಭವಾಗಲಿದೆ. ಸಾರ್ವಜನಿಕರಿಗೆ ಉಂಟಾಗಿರುವ ಅನಾನುಕೂಲಕ್ಕೆ ವಿಷಾದಿಸುತ್ತೇವೆ. ಪ್ರಯಾಣಿಕರು ತಮ್ಮ ಪ್ರಯಾಣದ ಸಮಯವನ್ನು ಇದಕ್ಕೆ ತಕ್ಕಂತೆ ಯೋಜಿಸಿಕೊಳ್ಳಬೇಕು," ಎಂದು ಸಂಸ್ಥೆ ತನ್ನ ಅಧಿಕೃತ 'ಎಕ್ಸ್' ಖಾತೆಯಲ್ಲಿ ತಿಳಿಸಿದೆ.

ಸದ್ಯ ತಾಂತ್ರಿಕ ತಜ್ಞರ ತಂಡವು ಸ್ಥಳಕ್ಕೆ ಧಾವಿಸಿದ್ದು, ವಿದ್ಯುತ್ ಸಂಪರ್ಕ ಸರಿಪಡಿಸುವ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಂಡಿದೆ. ಮಧ್ಯಾಹ್ನದ ವೇಳೆಗೆ ನಿಲ್ದಾಣವು ಸಾರ್ವಜನಿಕ ಬಳಕೆಗೆ ಮುಕ್ತವಾಗುವ ನಿರೀಕ್ಷೆಯಿದೆ.

Read More
Next Story