ಸಿಲಿಕಾನ್ ಸಿಟಿಯಲ್ಲಿ ಒತ್ತುವರಿ ವಿರುದ್ಧ ಬುಲ್ಡೋಜರ್ ಗರ್ಜನೆ: ಪಾದಚಾರಿಗಳ ಜೀವ ರಕ್ಷಣೆಗೆ ಸರ್ಕಾರ ಪಣ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದೂ ಪಾಲಿಕೆಗಳಲ್ಲಿ ಸುಮಾರು 2,000 ಕಿ.ಮೀ. ಉದ್ದದ ರಸ್ತೆಗಳಲ್ಲಿ ಫುಟ್‌ಪಾತ್ ಒತ್ತುವರಿ ತೆರವುಗೊಳಿಸುವ ಗುರಿ ಹೊಂದಲಾಗಿದೆ.
ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಪಾದಚಾರಿಗಳನ್ನು ಫುಟ್‌ಪಾತ್‌ನಿಂದ ರಸ್ತೆಗೆ ದೂಡಿ, ಅವರ ಪ್ರಾಣಕ್ಕೆ ಕುತ್ತು ತರುತ್ತಿದ್ದ ಅಕ್ರಮ ಒತ್ತುವರಿಗಳ ವಿರುದ್ಧ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಈಗ ಛಡಿಯೇಟು ನೀಡಲು ಮುಂದಾಗಿದೆ. ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಕಾಲದ ‘ಕ್ಲೀನ್ ಬೆಂಗಳೂರು’ ಪರಿಕಲ್ಪನೆಗೆ ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಮರುಜೀವ ನೀಡುತ್ತಿದ್ದು, ನಗರದಾದ್ಯಂತ ಬೃಹತ್ ತೆರವು ಕಾರ್ಯಾಚರಣೆ ಆರಂಭವಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದೂ ಪಾಲಿಕೆಗಳಲ್ಲಿ ಸುಮಾರು 2,000 ಕಿ.ಮೀ. ಉದ್ದದ ರಸ್ತೆಗಳಲ್ಲಿ ಫುಟ್‌ಪಾತ್ ಒತ್ತುವರಿ ತೆರವುಗೊಳಿಸುವ ಗುರಿ ಹೊಂದಲಾಗಿದೆ. ಕಳೆದ ಎರಡು ದಿನಗಳಿಂದ ನಡೆದ ಬಿರುಸಿನ ಕಾರ್ಯಾಚರಣೆಯಲ್ಲಿ ಈಗಾಗಲೇ 115 ಕಿ. ಮೀ. ಉದ್ದದ ಪಾದಚಾರಿ ಮಾರ್ಗಗಳನ್ನು ಅತಿಕ್ರಮಣ ಮುಕ್ತಗೊಳಿಸಲಾಗಿದೆ. ಬುಲ್ಡೋಜರ್‌ಗಳೊಂದಿಗೆ ರಸ್ತೆಗಿಳಿದಿರುವ ಅಧಿಕಾರಿಗಳು, ಫುಟ್‌ಪಾತ್ ಅತಿಕ್ರಮಿಸಿಕೊಂಡಿದ್ದ ಅಂಗಡಿ ಮುಂಗಟ್ಟುಗಳು, ತಾತ್ಕಾಲಿಕ ಶೆಡ್‌ಗಳು, ಬೃಹತ್ ಜಾಹೀರಾತು ಪಲಕಗಳು ಹಾಗೂ ಕಬ್ಬಿಣದ ರಚನೆಗಳನ್ನು ನೆಲಸಮಗೊಳಿಸುತ್ತಿದ್ದಾರೆ.
ಜೀವ ಉಳಿಸುವ ಅಭಿಯಾನ
ಸಂಚಾರಿ ಪೊಲೀಸರ ಅಂಕಿಅಂಶಗಳ ಪ್ರಕಾರ, ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗಗಳು ಇಲ್ಲದ ಕಾರಣ ರಸ್ತೆಯಲ್ಲಿ ನಡೆಯುವಾಗ ಅಪಘಾತಕ್ಕೀಡಾಗಿ ಪ್ರತಿವರ್ಷ ಸುಮಾರು 300ಕ್ಕೂ ಹೆಚ್ಚು ಪಾದಚಾರಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. "ಫುಟ್‌ಪಾತ್ ಯಾರೊಬ್ಬರ ಖಾಸಗಿ ಆಸ್ತಿಯಲ್ಲ, ಅದು ನಾಗರಿಕರ ಮೂಲಭೂತ ಹಕ್ಕು" ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಉಲ್ಲೇಖಿಸಿರುವ ಸಚಿವ ಕೃಷ್ಣ ಬೈರೇಗೌಡ, ಇದು ಕೇವಲ ಸೌಂದರ್ಯೀಕರಣದ ಕೆಲಸವಲ್ಲ, ಬದಲಿಗೆ ಜನರ ಜೀವ ಉಳಿಸುವ ಕಾರ್ಯ ಎಂದು ಸಮರ್ಥಿಸಿಕೊಂಡಿದ್ದಾರೆ.
ವ್ಯಾಪಾರಿಗಳ ಸ್ಥಳಾಂತರ ಮತ್ತು ಸೌಲಭ್ಯ
ಬೀದಿ ಬದಿ ವ್ಯಾಪಾರಿಗಳ ರಕ್ಷಣಾ ಕಾಯ್ದೆಯಡಿ ಸುಮಾರು 60,000 ವ್ಯಾಪಾರಿಗಳನ್ನು ಗುರುತಿಸಲಾಗಿದ್ದು, ಈ ಪೈಕಿ 37,000 ಮಂದಿಗೆ ವೆಂಡಿಂಗ್ ಮಿಷನ್ ಹಾಗೂ ಸಬ್ಸಿಡಿ ನೀಡುವ ಯೋಜನೆ ಸರ್ಕಾರದ ಮುಂದಿದೆ. ಮುಖ್ಯ ರಸ್ತೆಗಳನ್ನು ಬಿಟ್ಟು ಪಕ್ಕದ ರಸ್ತೆಗಳಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿಕೊಡುವುದಾಗಿ ಸರ್ಕಾರ ಭರವಸೆ ನೀಡಿದೆ.
ಸಾರ್ವಜನಿಕರ ಪ್ರಶ್ನೆ ಮತ್ತು ಸವಾಲುಗಳು
ಈ ಕಾರ್ಯಾಚರಣೆಯನ್ನು ನಾಗರಿಕರು ಸ್ವಾಗತಿಸಿದ್ದಾರೆಯಾದರೂ, ಕೆಲವು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. "ಈ ಕಾರ್ಯಾಚರಣೆ ಕೇವಲ ಬಡವರನ್ನು ಗುರಿಯಾಗಿಸಿಕೊಂಡು ನಡೆಯುತ್ತಿದೆಯೇ ಅಥವಾ ಪ್ರಭಾವಿ ಬಿಲ್ಡರ್‌ಗಳ ವಿರುದ್ಧವೂ ಕ್ರಮ ಜರುಗಿಸಲಾಗುತ್ತದೆಯೇ?" ಎಂಬುದು ಜನರ ಆತಂಕವಾಗಿದೆ. ಅಲ್ಲದೆ, ಈ ಹಿಂದೆ ಅಕ್ರಮಕ್ಕೆ ಮೌನ ಸಮ್ಮತಿ ನೀಡಿ ಲಂಚ ಪಡೆದಿದ್ದ ಅಧಿಕಾರಿಗಳ ವಿರುದ್ಧವೂ ಕ್ರಮವಾಗಬೇಕು ಎಂಬ ಒತ್ತಾಯ ಕೇಳಿಬಂದಿದೆ. ಮಳೆಗಾಲ ಆರಂಭವಾದ ಮೇಲೆ ಇಂತಹ ಕಾರ್ಯಾಚರಣೆ ಕೈಗೆತ್ತಿಕೊಂಡಿರುವುದನ್ನು ಹಲವರು "ಯುದ್ಧ ಕಾಲೇ ಶಸ್ತ್ರಾಭ್ಯಾಸ" ಎಂದು ಟೀಕಿಸಿದ್ದಾರೆ.
ಜುಲೈ 1 ರಿಂದ 10 ರವರೆಗೆ ಈ ‘ಸುರಕ್ಷಿತ ಪಾದಚಾರಿ ಮಾರ್ಗ’ ಅಭಿಯಾನ ಮುಂದುವರಿಯಲಿದ್ದು, ಸಾರ್ವಜನಿಕರು ಹಾಗೂ ವಾಣಿಜ್ಯ ಮಳಿಗೆಗಳ ಮಾಲೀಕರು ಸ್ವಯಂಪ್ರೇರಿತರಾಗಿ ಒತ್ತುವರಿ ತೆರವುಗೊಳಿಸುವಂತೆ ಸಚಿವರು ಮನವಿ ಮಾಡಿದ್ದಾರೆ. ಒತ್ತುವರಿ ಮರುಕಳಿಸದಂತೆ ತಡೆಯಲು ಜಿಪಿಎಸ್ ಆಧಾರಿತ ಡಿಜಿಟಲ್ ಮ್ಯಾಪಿಂಗ್ ವ್ಯವಸ್ಥೆಯನ್ನು ಜಾರಿಗೆ ತರುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸುತ್ತಿದೆ.


