
ಪಿಂಕ್ ಲೈನ್ ಮೆಟ್ರೋ; ಬಿಇಎಂಎಲ್‌ನಲ್ಲಿ ಚಾಲಕರಹಿತ ಮೆಟ್ರೋ ಬೋಗಿ ಪರಿಶೀಲನೆ
ʼನಮ್ಮ ಮೆಟ್ರೋʼದ ಬಹುನಿರೀಕ್ಷಿತ ಪಿಂಕ್ ಲೈನ್ ಮಾರ್ಗಕ್ಕಾಗಿ ಬಿಇಎಂಎಲ್ ಒಟ್ಟು 23 ಚಾಲಕರಹಿತ ರೈಲು ಕೋಚ್‌ಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುತ್ತಿದೆ.
ಬೆಂಗಳೂರಿನ ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ 21.25 ಕಿ.ಮೀ ಉದ್ದದ ಗುಲಾಬಿ ಮಾರ್ಗದಲ್ಲಿ(ಪಿಂಕ್ ಲೈನ್) ಸಂಚರಿಸಲಿರುವ ಚಾಲಕರಹಿತ ಮೆಟ್ರೋ ರೈಲು ಬೋಗಿಗಳ ನಿರ್ಮಾಣ ಕಾರ್ಯ ಬೆಂಗಳೂರಿನ ಬಿಎಎಂಎಲ್‌ನಲ್ಲಿ ಭರದಿಂದ ಸಾಗುತ್ತಿದೆ.
ಶನಿವಾರ ಕೇಂದ್ರ ರೈಲ್ವೆ ಹಾಗೂ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಬಿಇಎಂಎಲ್ ಘಟಕಕ್ಕೆ ಭೇಟಿ ನೀಡಿ ಭೇಟಿ ನೀಡಿ, ಅತ್ಯಾಧುನಿಕ ಮೆಟ್ರೋ ಬೋಗಿಗಳನ್ನು ಪರಿಶೀಲಿಸಿದರು.
ʼನಮ್ಮ ಮೆಟ್ರೋʼದ ಬಹುನಿರೀಕ್ಷಿತ ಪಿಂಕ್ ಲೈನ್ ಮಾರ್ಗಕ್ಕಾಗಿ ಬಿಇಎಂಎಲ್ ಒಟ್ಟು 23 ಚಾಲಕರಹಿತ ರೈಲು ಕೋಚ್‌ಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುತ್ತಿದೆ. ರೈಲು ಕೋಚ್‌ಗಳ ನಿರ್ಮಾಣ ಪರಿಶೀಲಿಸಿದ ಸಚಿವರು, ಬಿಇಎಂಎಲ್ ಹಿರಿಯ ಅಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು.
ಚಾಲಕರಹಿತ ರೈಲುಗಳ ಸಿದ್ಧತೆ
ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ ಪಿಂಕ್ ಲೈನ್ ಮೆಟ್ರೋಗಾಗಿ 23 ಚಾಲಕರಹಿತ ರೈಲುಗಳಿಗೆ ಬಿಇಎಂಎಲ್ ಆರ್ಡರ್ ಪಡೆದಿದೆ. ಈ ಪೈಕಿ ಈಗಾಗಲೇ 5 ರೈಲುಗಳು ಬಿಎಂಆರ್‌ಸಿಎಲ್ ಕೈಸೇರಿವೆ. ಸಾಮಾನ್ಯವಾಗಿ ಮೆಟ್ರೋ ಮಾರ್ಗ ಸಿದ್ಧವಾದಾಗ ರೈಲುಗಳ ಕೊರತೆ ಇರುತ್ತಿತ್ತು. ಆದರೆ, ಈ ಬಾರಿ ಮಾರ್ಗ ಸಿದ್ಧವಾಗುವ ಮುನ್ನವೇ ರೈಲುಗಳು ಸಂಚಾರಕ್ಕೆ ಅಣಿಯಾಗಿವೆ.
ಕಾಳೇನ ಅಗ್ರಹಾರದಿಂದ ನಾಗವಾರ ಮಾರ್ಗದ 6 ಎಲಿವೇಟೆಡ್ ಮೆಟ್ರೋ ಸ್ಟೇಷನ್‌ಗಳನ್ನು ಮೇ ತಿಂಗಳಲ್ಲಿ ಸಾರ್ವಜನಿಕ ಸಾರಿಗೆಗೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್ ತಯಾರಿ ನಡೆಸಿತ್ತು. ಆದರೆ, ರೈಲುಗಳ ಸುರಕ್ಷತಾ ಪರೀಕ್ಷಾ ಕಾರ್ಯಗಳು ಇನ್ನೂ ಪೂರ್ಣವಾಗದ ಹಿನ್ನೆಲೆ ಮೇ ತಿಂಗಳಲ್ಲಿ ಉದ್ಘಾಟನೆ ಅನುಮಾನ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ, ಜೂನ್ ಅಥವಾ ಜುಲೈ ವೇಳೆಗೆ ಈ 6 ನಿಲ್ದಾಣಗಳ ಮಾರ್ಗ ಉದ್ಘಾಟನೆಯಾಗುವ ಸಾಧ್ಯತೆಯಿದೆ.
ವರ್ಷಾಂತ್ಯಕ್ಕೆ ಪೂರ್ಣ ಮಾರ್ಗ ಲಭ್ಯ?
ಗುಲಾಬಿ ಮಾರ್ಗದಲ್ಲಿ(ಪಿಂಕ್ ಲೈನ್) ಒಟ್ಟು 18 ನಿಲ್ದಾಣಗಳು ಬರಲಿವೆ. ಇದರಲ್ಲಿ 12 ಸುರಂಗ ಮಾರ್ಗ ಹಾಗೂ 6 ಎಲಿವೇಟೆಡ್ ನಿಲ್ದಾಣಗಳಿವೆ. ಎಲಿವೇಟೆಡ್ ಮಾರ್ಗವು ಒಟ್ಟು 7.49 ಕಿ.ಮೀ ಇದ್ದರೆ, ಸುರಂಗ ಮಾರ್ಗವು 13.76 ಕಿ.ಮೀ ಇದೆ.
ಪ್ರಸ್ತುತ, ಸುರಂಗ ಮಾರ್ಗದ ಕಾಮಗಾರಿಗಳು ಭರದಿಂದ ಸಾಗುತ್ತಿವೆ. ವರ್ಷಾಂತ್ಯಕ್ಕೆ 21.25 ಕಿ.ಮೀ ಉದ್ದದ ಮಾರ್ಗವು ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿದೆ ಎನ್ನಲಾಗಿದೆ. ದಕ್ಷಿಣ ಭಾಗದಿಂದ ಉತ್ತರ ಭಾಗಕ್ಕೆ ಸುಗಮ ಸಂಚಾರವೂ ಸುಲಭವಾಗಲಿದೆ.

