Bidadi Township| ಬಿಡದಿ ಟೌನ್‌ಶಿಪ್‌ ಯೋಜನೆಗೆ ಸಂಪುಟ ಸಭೆ ಅನುಮೋದನೆ
x
ಉಪನಗರ ಯೋಜನೆ

Bidadi Township| ಬಿಡದಿ ಟೌನ್‌ಶಿಪ್‌ ಯೋಜನೆಗೆ ಸಂಪುಟ ಸಭೆ ಅನುಮೋದನೆ

ಒಟ್ಟು 7,484 ಎಕರೆ ವಿಸ್ತೀರ್ಣದ ಅಂದಾಜು 18,104 ಕೋಟಿ ರೂ. ವೆಚ್ಚದಲ್ಲಿ ಗ್ರೇಟರ್‌ ಬೆಂಗಳೂರು ಉಪನಗರ ಯೋಜನೆ ಜಾರಿಗೆ ಉದ್ದೇಶಿಸಲಾಗಿದೆ. ಯೋಜನೆಗಾಗಿ ಹುಡ್ಕೊದಿಂದ 7,500 ಕೋಟಿ ರೂ. ಸಾಲಕ್ಕೆ ಬ್ಯಾಂಕ್ ಗ್ಯಾರಂಟಿ ನೀಡಲು ತೀರ್ಮಾನಿಸಲಾಗಿದೆ.


ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಿ ವ್ಯವಸ್ಥಿತ ನಗರೀಕರಣಕ್ಕೆ ವೇಗ ನೀಡುವ ಸಲುವಾಗಿ ಜಾರಿಗೊಳಿಸಲು ಉದ್ದೇಶಿಸಿರುವ ಮಹತ್ವಾಕಾಂಕ್ಷೆಯ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಗೆ ( ಬಿಡದಿ ಟೌನ್‌ಶಿಪ್‌) ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

ಒಟ್ಟು 7,481 ಎಕರೆ ವಿಸ್ತೀರ್ಣದ ಅಂದಾಜು 18,104 ಕೋಟಿ ರೂ. ವೆಚ್ಚದಲ್ಲಿ ಬಿಡದಿ ಟೌನ್‌ಶಿಪ್ ನಿರ್ಮಿಸಲು ಉದ್ದೇಶಿಸಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಇತ್ತೀಚೆಗೆ ಯೋಜನೆಯ ಲೋಗೋ ಮತ್ತು ಕಿರುಹೊತ್ತಿಗೆ ಬಿಡುಗಡೆಗೊಳಿಸಿ, ಭೂಮಿ ಕಳೆದುಕೊಳ್ಳುವ ರೈತರಿಗೆ ಆಕರ್ಷಕ ಪರಿಹಾರ ಘೋಷಿಸಿದ್ದರು.

ಹೇಗಿದೆ ಭೂಸ್ವಾಧೀನ ಪರಿಹಾರ?

ಯೋಜನೆಗೆ ಭೂಮಿ ಕಳೆದುಕೊಳ್ಳುವ ರೈತರ ಪ್ರತಿ ಎಕರೆಗೆ 1.50 ಕೋಟಿಯಿಂದ 2.50 ಕೋಟಿ ರೂ.ವರೆಗೆ ಪರಿಹಾರ ನಿಗದಿ ಮಾಡಲಾಗಿದೆ. ಹಣ ಬೇಡ ಎನ್ನುವವರಿಗೆ 50:50 ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ಭೂಮಿ (ವಸತಿ ಮತ್ತು ವಾಣಿಜ್ಯ ನಿವೇಶನ) ನೀಡಲಾಗುವುದು. ಅಲ್ಲದೇ ಜೀವನೋಪಾಯಕ್ಕೆ ವಾರ್ಷಿಕ ಅನುದಾನ, ಆದಾಯ ತೆರಿಗೆ ಮತ್ತು ಮುದ್ರಾಂಕ ಶುಲ್ಕ ವಿನಾಯಿತಿ ಹಾಗೂ ಭೂರಹಿತರಿಗೆ ನಿವೇಶನ ನೀಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದರು.

ಟೌನ್‌ಶಿಪ್‌ನಲ್ಲಿ ಏನೆಲ್ಲಾ ಬರಲಿದೆ?

ಬಿಡದಿ ಟೌನ್‌ಶಿಪ್‌ನಲ್ಲಿ AI, IT, ಸ್ಟಾರ್ಟ್ಅಪ್ ಮತ್ತು ಸೇವಾ ಕ್ಷೇತ್ರದ ಉದ್ದಿಮೆಗಳು ಬರಲಿದ್ದು, ಲಕ್ಷಾಂತರ ಉದ್ಯೋಗಾವಕಾಶ ಸೃಷ್ಟಿಯಾಗಲಿವೆ.

ಇದು ಶೂನ್ಯ ಸಂಚಾರ ದಟ್ಟಣೆ ನಗರವಾಗಿ ಬದಲಾಗಲಿದೆ. 300 ಮೀಟರ್ ಅಗಲದ ಬಿಸಿನೆಸ್ ಕಾರಿಡಾರ್ ಹೊಂದಿರಲಿದೆ. ಎಸ್‌ಟಿಆರ್‌ಆರ್ ರಸ್ತೆ 9 ಕಿ.ಮೀ, ನೈಸ್ ರಸ್ತೆ 11 ಕಿ.ಮೀ ಮತ್ತು ಮೈಸೂರು ಹೆದ್ದಾರಿಯ 5 ಕಿ.ಮೀ ಗೆ ನೇರ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ.

ಸುಮಾರು 1,100 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಉದ್ಯಾನವನ ಮತ್ತು ಆಟದ ಮೈದಾನಗಳನ್ನು ನಿರ್ಮಿಸಲಾಗುವುದು, ಯೋಜನಾ ವ್ಯಾಪ್ತಿಯಲ್ಲಿರುವ 26 ಹಳ್ಳಿಗಳ ವಾಸಸ್ಥಳಗಳನ್ನು ಸ್ವಾಧೀನಪಡಿಸಿಕೊಳ್ಳದೇ ಅವುಗಳನ್ನು ನಗರ ಮಾದರಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ.

ಯೋಜನೆಯ ಸಾಗಿ ಬಂದ ಹಾದಿ ಹೇಗಿತ್ತು?

ಬಿಡದಿ ಟೌನ್‌ಶಿಪ್ ಯೋಜನೆಗೆ ಸುಮಾರು ಎರಡು ದಶಕಗಳ ಇತಿಹಾಸವಿದೆ. 2006ರಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಪಿಪಿಪಿ ಮಾದರಿ ಟೌನ್‌ಶಿಪ್‌ ನಿರ್ಮಾಣಕ್ಕೆ ತೀರ್ಮಾನಿಸಿದ್ದರು. 2009ರಲ್ಲಿ ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಯೋಜನೆ ಹಿಂಪಡೆದಿದ್ದರು.

2011-2020 ರ ಮಧ್ಯೆ ವಿವಿಧ ಸರ್ಕಾರಗಳ ಅವಧಿಯಲ್ಲಿ ಸ್ಮಾರ್ಟ್ ಸಿಟಿ ಮತ್ತು ಕೈಗಾರಿಕಾ ಪ್ರದೇಶ ಎಂದು ಘೋಷಿಸಲಾಗಿತ್ತು. 2023-24ರಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಿಡದಿ ಟೌನ್‌ಶಿಪ್ ಯೋಜನೆಗೆ ಮರುಜೀವ ನೀಡಿ, 'ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ'ವಾಗಿ ಮೇಲ್ದರ್ಜೆಗೆ ಏರಿಸಿದ್ದರು.

Read More
Next Story