ತೆರವು ಬಳಿಕವೂ ಪಾದಚಾರಿ ಮಾರ್ಗ ಒತ್ತುವರಿ; ಸಾಮಗ್ರಿ ಜಪ್ತಿ, ದುಪ್ಪಟ್ಟು ದಂಡ ಹಾಕಲು ಸೂಚನೆ
x

ಕೃಷ್ಣ ಬೈರೇಗೌಡ

ತೆರವು ಬಳಿಕವೂ ಪಾದಚಾರಿ ಮಾರ್ಗ ಒತ್ತುವರಿ; ಸಾಮಗ್ರಿ ಜಪ್ತಿ, ದುಪ್ಪಟ್ಟು ದಂಡ ಹಾಕಲು ಸೂಚನೆ

ತೆರವುಗೊಳಿಸಿದ ಪಾದಚಾರಿ ಮಾರ್ಗಗಳನ್ನು ಸದಾ ನಿಗಾದಲ್ಲಿಡಲು ಪಾಲಿಕೆ ಹಾಗೂ ಸಂಚಾರ ಪೊಲೀಸ್ ಅಧಿಕಾರಿಗಳೊಂದಿಗೆ ಶೀಘ್ರದಲ್ಲೇ ಜಂಟಿ ಸಮನ್ವಯ ಸಭೆ ನಡೆಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.


Click the Play button to hear this message in audio format

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಪಾದಚಾರಿ ಒತ್ತುವರಿ ತೆರವು ಕಾರ್ಯಾಚರಣೆ ನಂತರವೂ ಒತ್ತುವರಿ ಮುಂದುವರಿದರೆ ಸಾಮಗ್ರಿಗಳನ್ನು ಜಪ್ತಿ ಮಾಡಿಕೊಂಡು, ದುಪ್ಪಟ್ಟು ದಂಡ ವಿಧಿಸಲು ಸರ್ಕಾರ ತೀರ್ಮಾನಿಸಿದೆ. ನಗರದಲ್ಲಿ ಸುಮಾರು 1,500 ಕಿ.ಮೀ. ಉದ್ದದ ಪ್ರಮುಖ ಪಾದಚಾರಿ ಮಾರ್ಗದ ಪೈಕಿ ಈವರೆಗೆ 964 ಕಿ.ಮೀ. ವ್ಯಾಪ್ತಿಯಲ್ಲಿ ಒತ್ತುವರಿ ತೆರವುಗೊಳಿಸಲಾಗಿದೆ. ಬಾಕಿ ಉಳಿದಿರುವ ಒತ್ತುವರಿ ಮಾರ್ಗವನ್ನು ಇದೇ ಆಗಸ್ಟ್ ತಿಂಗಳೊಳಗೆ ಪೂರ್ಣಗೊಳಿಸುವಂತೆ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

ಪಾದಚಾರಿ ಮಾರ್ಗ ಒತ್ತುವರಿ ತೆರವು, ತ್ಯಾಜ್ಯದಿಂದ ಸ್ವಾತಂತ್ರ್ಯ ಹಾಗೂ ಬಿಡಾಡಿ ವಾಹನಗಳ ತೆರವು ಕಾರ್ಯಾಚರಣೆ ಕುರಿತು ನಡೆದ ಉನ್ನತ ಮಟ್ಟದ ವರ್ಚುವಲ್ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ನಗರದ ಸಾರ್ವಜನಿಕರಿಗೆ ಸುಗಮ ಸಂಚಾರ ಕಲ್ಪಿಸುವುದೇ ಸರ್ಕಾರದ ಆದ್ಯತೆ ಎಂದು ಹೇಳಿದ್ದಾರೆ.

ಸಚಿವರು ಕೊಟ್ಟ ಸೂಚನೆಗಳೇನು?

ಒತ್ತುವರಿ ತೆರವುಗೊಳಿಸುವುದಷ್ಟೇ ಅಲ್ಲದೆ ಕಾರ್ಯಾಚರಣೆ ನಡೆದ ಸ್ಥಳಗಳಲ್ಲಿ ಪಾದಚಾರಿ ಮಾರ್ಗಗಳ ದುರಸ್ತಿ ಮತ್ತು ಉನ್ನತೀಕರಣ ಕಾರ್ಯಗಳನ್ನು ತಕ್ಷಣವೇ ಕೈಗೊಳ್ಳಬೇಕು ಎಂದು ಜಿಬಿಎ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದ್ದಾರೆ.

ತೆರವು ಮಾಡಲಾದ ಸ್ಥಳಗಳಲ್ಲಿ ಬೀದಿ ಬದಿ ವ್ಯಾಪಾರಿಗಳು ಮತ್ತೆ ಅತಿಕ್ರಮಣ ಮಾಡುತ್ತಿರುವುದು ಕಂಡುಬಂದಿದೆ. ಇಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಅವರ ಸಾಮಗ್ರಿ ಜಪ್ತಿ ಮಾಡುವುದರ ಜೊತೆಗೆ ದುಪ್ಪಟ್ಟು ದಂಡ ವಿಧಿಸಲು ಸೂಚಿಸಿದ್ದಾರೆ. ಪಾದಚಾರಿ ಮಾರ್ಗಗಳ ಮೇಲೆ ಅಕ್ರಮವಾಗಿ ನಿಲ್ಲಿಸಿರುವ ಅನಾಥ ವಾಹನಗಳು ಹಾಗೂ ಕಟ್ಟಡ ತ್ಯಾಜ್ಯಗಳನ್ನು ತಕ್ಷಣವೇ ತೆರವುಗೊಳಿಸಿ, ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ತೆರವುಗೊಳಿಸಿದ ಪಾದಚಾರಿ ಮಾರ್ಗಗಳನ್ನು ಸದಾ ನಿಗಾದಲ್ಲಿಡಲು ಪಾಲಿಕೆ ಹಾಗೂ ಸಂಚಾರ ಪೊಲೀಸ್ ಅಧಿಕಾರಿಗಳೊಂದಿಗೆ ಶೀಘ್ರದಲ್ಲೇ ಜಂಟಿ ಸಮನ್ವಯ ಸಭೆ ನಡೆಸಲಾಗುವುದು ಎಂದು ಸಚಿವರು ಹೇಳಿದ್ದಾರೆ. ಪಾದಚಾರಿ ಮಾರ್ಗಗಳು ಸಾರ್ವಜನಿಕರ ಸುರಕ್ಷಿತ ಸಂಚಾರಕ್ಕೆ ಮೀಸಲಾಗಿದ್ದು, ಅಧಿಕಾರಿಗಳು ತೆರವು ಕಾರ್ಯಾಚರಣೆಯ ಪ್ರಗತಿಯನ್ನು ಪ್ರತಿದಿನ ಮೇಲ್ವಿಚಾರಣೆ ಮಾಡಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

Read More
Next Story