
ಜಿಬಿಎ ಚುನಾವಣೆ ಗಡುವು ವಿಸ್ತರಣೆ ಕೋರಿ ಸುಪ್ರೀಂಗೆ ರಾಜ್ಯ ಚುನಾವಣಾ ಆಯೋಗ ಅರ್ಜಿ
ರಾಜ್ಯ ಸರ್ಕಾರಕ್ಕೆ ತಕ್ಷಣವೇ ಹಣ ಬಿಡುಗಡೆ ಮಾಡುವಂತೆ ಸೂಚನೆ ನೀಡಬೇಕು. ಚುನಾವಣೆಯನ್ನು ಸೆಪ್ಟೆಂಬರ್ ಅಂತ್ಯದೊಳಗೆ ನಡೆಸಲು ಅನುಮತಿ ನೀಡಬೇಕು ಎಂದು ಅರ್ಜಿಯಲ್ಲಿ ವಿನಂತಿಸಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಚುನಾವಣೆ ನಿರೀಕ್ಷೆಯಲ್ಲಿದ್ದ ರಾಜಕೀಯ ಪಕ್ಷಗಳಿಗೆ ಇದೀಗ ರಾಜ್ಯ ಚುನಾವಣಾ ಆಯೋಗ ಬಿಗ್ ಶಾಕ್ ನೀಡಿದೆ. ಚುನಾವಣಾ ಗಡುವು ವಿಸ್ತರಿಸುವಂತೆ ಕೋರಿ ಆಯೋಗವು ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಇದರಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ ಸೆಪ್ಟೆಂಬರ್‌ವರೆಗೆ ಮುಂದೂಡಿಕೆಯಾಗುವ ಸಾಧ್ಯತೆ ಎದುರಾಗಿದೆ.
ಬೆಂಗಳೂರು ನಗರದ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಈ ಹಿಂದೆ ಸುಪ್ರೀಂಕೋರ್ಟ್ ಜೂನ್ 30ರ ಗಡುವು ನೀಡಿತ್ತು. ಆದರೆ, ಪ್ರಸ್ತುತ ಸನ್ನಿವೇಶದಲ್ಲಿ ಗಡುವಿನೊಳಗೆ ಚುನಾವಣೆ ನಡೆಸುವುದು ಅಸಾಧ್ಯ ಎಂದು ಮನಗಂಡಿರುವ ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಗಡುವನ್ನು ಸೆ.30ರವರೆಗೆ ವಿಸ್ತರಿಸುವಂತೆ ಕೋರಿ ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ಅರ್ಜಿಯಲ್ಲಿ ಕೋರಿದೆ.
ಆಯೋಗ ನೀಡುವ ಕಾರಣವೇನು?
ರಾಜ್ಯ ಚುನಾವಣಾ ಆಯೋಗವು ಜಿಬಿಎ ಚುನಾವಣಾ ವಿಳಂಬಕ್ಕೆ ಮೂರು ಕಾರಣಗಳನ್ನು ನೀಡಿದೆ. ಏ. 16ರಿಂದ ಮೇ 15ರವರೆಗೆ ರಾಜ್ಯಾದ್ಯಂತ ಜಾತಿಗಣತಿ ಕಾರ್ಯಗಳು ನಡೆಯುತ್ತಿವೆ. ಬಹುತೇಕ ಸರ್ಕಾರಿ ಸಿಬ್ಬಂದಿ ಈ ಕಾರ್ಯದಲ್ಲಿ ನಿರತರಾಗಿರುವುದರಿಂದ ಚುನಾವಣಾ ಕೆಲಸಗಳಿಗೆ ಸಿಬ್ಬಂದಿಗಳ ಕೊರತೆ ಉಂಟಾಗಲಿದೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಚಾಲ್ತಿಯಲ್ಲಿದ್ದು, ಇದು ಪೂರ್ಣಗೊಳ್ಳಲು ಹೆಚ್ಚಿನ ಸಮಯ ಹಿಡಿಯಲಿದೆ. ಚುನಾವಣೆ ನಡೆಸಲು ಅಗತ್ಯವಿರುವ ಮೂಲಸೌಕರ್ಯ ಮತ್ತು ಹಣಕಾಸಿನ ನೆರವಿಗಾಗಿ ಆಯೋಗವು ಸಂಪೂರ್ಣವಾಗಿ ರಾಜ್ಯ ಸರ್ಕಾರದ ಮೇಲೆ ಅವಲಂಬಿತವಾಗಿದೆ. ಸರ್ಕಾರದಿಂದ ಇನ್ನೂ ಅಗತ್ಯ ಹಣ ಬಿಡುಗಡೆಯಾಗದ ಕಾರಣ ಸಿದ್ಧತೆಗಳಿಗೆ ಹಿನ್ನಡೆಯಾಗಿದೆ ಎಂದು ಆಯೋಗವು ಸುಪ್ರೀಂಕೋರ್ಟ್‌ಗೆ ತಿಳಿಸಿದೆ.
ಸರ್ಕಾರಕ್ಕೆ ಪತ್ರ ಬರೆದಿದ್ದ ಜಿಬಿಎ
ಏ.6 ರಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು ಪತ್ರ ಬರೆದು, ಸಿದ್ಧತೆಗಳ ಕೊರತೆಯಿಂದಾಗಿ ಗಡುವು ವಿಸ್ತರಿಸುವಂತೆ ಕೋರಿದ್ದರು.
ಏ.18 ರಂದು ಆಯೋಗವು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದರೂ ವಾಸ್ತವವಾಗಿ ಜೂನ್ ಅಂತ್ಯದೊಳಗೆ ಮತದಾನ ಪ್ರಕ್ರಿಯೆ ಮುಗಿಸುವುದು ಕಷ್ಟ ಎಂಬ ನಿಲುವಿಗೆ ಬಂದಿತ್ತು. ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಯು ಚುನಾವಣಾ ಆಯೋಗದ ಗಡುವು ವಿಸ್ತರಣೆಯ ಬೇಡಿಕೆ ಬೆಂಬಲಿಸಿದೆ. ಈ ಹಿನ್ನೆಲೆಯಲ್ಲಿ ಗಡುವು ವಿಸ್ತರಣೆಗೆ ಕೋರಲಾಗಿದೆ ಎಂದು ಚುನಾವಣಾ ಆಯೋಗ ಮನವರಿಕೆ ಮಾಡಿಕೊಟ್ಟಿದೆ.
ಇದಲ್ಲದೇ ರಾಜ್ಯ ಸರ್ಕಾರಕ್ಕೆ ತಕ್ಷಣವೇ ಹಣ ಬಿಡುಗಡೆ ಮಾಡುವಂತೆ ಸೂಚನೆ ನೀಡಬೇಕು. ಚುನಾವಣೆಯನ್ನು ಸೆಪ್ಟೆಂಬರ್ ಅಂತ್ಯದೊಳಗೆ ನಡೆಸಲು ಅನುಮತಿ ನೀಡಬೇಕು ಎಂದು ಅರ್ಜಿಯಲ್ಲಿ ವಿನಂತಿಸಿದೆ. ಒಂದು ವೇಳೆ ನ್ಯಾಯಾಲಯವು ಆಯೋಗದ ಮನವಿ ಪುರಸ್ಕರಿಸಿದರೆ ಜಿಬಿಎ ಚುನಾವಣೆಗೆ ಅಕ್ಟೋಬರ್ ತಿಂಗಳವರೆಗೆ ಕಾಯಬೇಕಾಗಬಹುದು. ಇಲ್ಲವಾದಲ್ಲಿ, ಜೂನ್ ಅಂತ್ಯದೊಳಗೆ ಚುನಾವಣೆ ನಡೆಸಲು ಸರ್ಕಾರ ಮತ್ತು ಆಯೋಗ ಯುದ್ಧೋಪಾದಿಯಲ್ಲಿ ಸಿದ್ಧತೆ ನಡೆಸುವ ಅನಿವಾರ್ಯತೆಗೆ ಸಿಲುಕಲಿವೆ.

