x

ಪದವೀಧರ ಮತದಾರರಿಗೆ ಅರ್ಜಿ 18 ಗೊಂದಲ; ಎಸ್‌ಐಆರ್‌ : Gen Z ಗಳಿಗೇಕೆ ಆತಂಕ?

ಪದವೀಧರ ಕ್ಷೇತ್ರಗಳ ಮತದಾರರ ಪಟ್ಟಿ ಮತ್ತು ಸಾಮಾನ್ಯ ಮತದಾರರ ಪಟ್ಟಿ ಎರಡೂ ಭಿನ್ನ. ಪದವೀಧರ ಕ್ಷೇತ್ರಗಳಿಗೆ ಮತ ಚಲಾಯಿಸಲು ಅರ್ಹ ಪದವೀಧರರು ಪ್ರತ್ಯೇಕವಾಗಿ ನೋಂದಾಯಿಸಿಕೊಂಡಿರುತ್ತಾರೆ.


Click the Play button to hear this message in audio format

ರಾಜ್ಯದ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದು, ಎಸ್‌ಐಆರ್ ಎಂಬ ಪದವು ಮತದಾರರಲ್ಲಿ ಗೊಂದಲವನ್ನು ಉಂಟುಮಾಡಿದೆ. ಪದವೀಧರ ಕ್ಷೇತ್ರದ ಮತದಾರರ ಪಟ್ಟಿಯನ್ನು ಪ್ರತಿ ಚುನಾವಣೆಯ ಸಂದರ್ಭದಲ್ಲಿಯೂ ಹೊಸದಾಗಿ ಸಿದ್ಧಪಡಿಸಲಾಗುತ್ತದೆ. ಈ ಬಾರಿ ಮತದಾರರ ಅರ್ಹತೆಯನ್ನು ಖಚಿತಪಡಿಸಿಕೊಳ್ಳಲು ಆಯೋಗವು ಬೂತ್ ಮಟ್ಟದ ಅಧಿಕಾರಿಗಳ ಮೂಲಕ ಮನೆ ಮನೆ ಭೇಟಿ ನೀಡಿ ಎಸ್‌ಐಆರ್ ಪ್ರಕ್ರಿಯೆ ನಡೆಸಿದರು. ಇದು ಪದವೀಧರ ಮತದಾರರಲ್ಲಿ ಆತಂಕವನ್ನುಂಟು ಮಾಡಿತು. ತಮ್ಮ ಪದವಿ ಪ್ರಮಾಣಪತ್ರ ಮತ್ತು ವಾಸಸ್ಥಳದ ದಾಖಲೆಗಳನ್ನು ಸಲ್ಲಿಸಿದ್ದರೂ, ಮತ್ತೆ ಬೂತ್ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ವಿಚಾರಿಸುತ್ತಿರುವುದು ಮತ್ತು ದಾಖಲೆಗಳನ್ನು ಕೇಳುತ್ತಿರುವುದು ಮತದಾರರಲ್ಲಿ ಗೊಂದಲವನ್ನು ಉಂಟುಮಾಡಿದೆ. ನಮ್ಮ ದಾಖಲೆಗಳು ಸರಿಯಿದ್ದರೂ, ಎಸ್‌ಐಆರ್ ಪ್ರಕ್ರಿಯೆಯ ನಂತರ ನಮ್ಮ ಹೆಸರು ಪಟ್ಟಿಯಿಂದ ಕೈಬಿಡಲಾಗುತ್ತದೆಯೇ? ಎಂಬ ಆತಂಕ ಪದವೀಧರರಲ್ಲಿ ವ್ಯಕ್ತವಾಗಿತ್ತು.

ಚುನಾವಣಾ ಆಯೋಗವು ಸಾರ್ವತ್ರಿಕ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಿಗೆ ಅನುಗುಣವಾಗಿ ಸಾಮಾನ್ಯ ಮತದಾರರ ಪಟ್ಟಿಯನ್ನು ಪರಿಷ್ಕರಿಸಲು ಎಸ್‌ಐಆರ್ ಪ್ರಕ್ರಿಯೆ ಮತ್ತು ಪದವೀಧರ ಕ್ಷೇತ್ರದ ಮತದಾರರ ನೋಂದಣಿ ಪ್ರಕ್ರಿಯೆಗಳನ್ನು ಒಂದೇ ಎಂದು ತಪ್ಪಾಗಿ ಭಾವಿಸುತ್ತಿದ್ದಾರೆ. ಪರಿಣಾಮವಾಗಿ, ತಮ್ಮ ಹೆಸರು ಪದವೀಧರರ ಪಟ್ಟಿಯಿಂದಲೂ ಡಿಲೀಟ್ ಆಗಿರಬಹುದು ಎಂಬ ಆತಂಕದಲ್ಲಿ ಮತದಾರರು ಇದ್ದಾರೆ. ವಾಸ್ತವದಲ್ಲಿ, ಪದವೀಧರ ಕ್ಷೇತ್ರಗಳ ಮತದಾರರ ಪಟ್ಟಿ ಮತ್ತು ಸಾಮಾನ್ಯ ಮತದಾರರ ಪಟ್ಟಿ ಎರಡೂ ಭಿನ್ನ. ಪದವೀಧರ ಕ್ಷೇತ್ರಗಳಿಗೆ ಮತ ಚಲಾಯಿಸಲು ಅರ್ಹ ಪದವೀಧರರು ಪ್ರತ್ಯೇಕವಾಗಿ ನೋಂದಾಯಿಸಿಕೊಂಡಿರುತ್ತಾರೆ. ಇದು ಸಾಮಾನ್ಯ ಮತದಾರರ ಪಟ್ಟಿಯ ಪರಿಷ್ಕರಣೆಗಿಂತ ಸಂಪೂರ್ಣ ಭಿನ್ನವಾದ ಕಾನೂನುಬದ್ಧ ಪ್ರಕ್ರಿಯೆಯಾಗಿದೆ. ಮತದಾರರ ಗೊಂದಲವನ್ನು ಗಮನಿಸಿದ ಚುನಾವಣಾ ಆಯೋಗವು, ಈ ಪ್ರಕ್ರಿಯೆಯು ಸಂಪೂರ್ಣ ಪಾರದರ್ಶಕವಾಗಿದೆ ಮತ್ತು ಚುನಾವಣಾ ಪ್ರಕ್ರಿಯೆಯ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ ಎಂದು ಭರವಸೆ ನೀಡಿದೆ. ಎಸ್‌ಐಆರ್ ಪ್ರಕ್ರಿಯೆಯಿಂದ ಮತದಾರರ ಹಕ್ಕಿಗೆ ಚ್ಯುತಿಯಾಗುವುದಿಲ್ಲ. ಅರ್ಹರಾಗಿರುವ ಒಬ್ಬ ಪದವೀಧರನೂ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಲಾಗುವುದು ಎಂದು ಆಯೋಗ ಸ್ಪಷ್ಟಪಡಿಸಿದೆ. ಈ ಪ್ರಕ್ರಿಯೆಯು ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಪಟ್ಟಿಯನ್ನು ಶುದ್ಧೀಕರಿಸಲು ಮಾತ್ರವೇ ಹೊರತು, ಮತದಾರರನ್ನು ಅನರ್ಹಗೊಳಿಸಲು ಅಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.

ಸಾಮಾನ್ಯ ಮತದಾರರ ಪಟ್ಟಿ - ಪದವೀಧರರ ಮತದಾರರ ಪಟ್ಟಿ ನಡುವಿನ ವ್ಯತ್ಯಾಸ

ದೇಶದಲ್ಲಿ ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ಜಾರಿಯಲ್ಲಿದೆ. ಆದರೂ, ಶಾಸನ ಸಭೆಗಳಲ್ಲಿ ಎಲ್ಲಾ ವರ್ಗಗಳ ಪ್ರಾತಿನಿಧ್ಯ ಇರಬೇಕು ಎಂಬ ಉದ್ದೇಶದಿಂದ ಸಂವಿಧಾನವು ಕೆಲವು ವಿಶೇಷ ಕ್ಷೇತ್ರಗಳಿಗೆ ಅವಕಾಶ ಕಲ್ಪಿಸಿದೆ. ಅವುಗಳ ಪೈಕಿ ಪದವೀಧರ ಕ್ಷೇತ್ರವೂ ಒಂದಾಗಿದೆ. ಸಾಮಾನ್ಯ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಲು 18 ವರ್ಷ ಪೂರೈಸಿರುವ, ಭಾರತೀಯ ಪ್ರಜೆ ಮತ್ತು ಆ ಕ್ಷೇತ್ರದಲ್ಲಿ ವಾಸಿಸುವವರಾಗಿರಬೇಕು. ಇಲ್ಲಿ ನೋಂದಣಿಯಾದವರು ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಮತದಾನ ಮಾಡುವ ಹಕ್ಕು ಹೊಂದಿರುತ್ತಾರೆ.

ಪದವೀಧರ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಲು ಪದವಿ ಪೂರೈಸಿರಬೇಕು ಮತ್ತು ಸ್ಥಳೀಯ ನಿವಾಸಿಯಾಗಿರಬೇಕಾಗಿದೆ. ಪದವೀಧರ ಕ್ಷೇತ್ರದ ಚುನಾವಣೆಗೆ ಮಾತ್ರ ಮತಚಲಾಯಿಸುವ ಹಕ್ಕು ಹೊಂದಿರಲಾಗುತ್ತದೆ. ಸಾಮಾನ್ಯ ಪಟ್ಟಿಯಲ್ಲಿರುವ ಪ್ರತಿಯೊಬ್ಬರಿಗೂ ಪದವೀಧರರ ಪಟ್ಟಿಯಲ್ಲಿ ಹೆಸರು ಸೇರಿಸುವ ಹಕ್ಕಿಲ್ಲ. ಇದಕ್ಕೆ ಕಾರಣ, ಪದವೀಧರರು ತಮ್ಮ ವೃತ್ತಿಪರ ಜ್ಞಾನ ಮತ್ತು ಶಿಕ್ಷಣದ ಆಧಾರದ ಮೇಲೆ ಸಮಾಜದ ವಿವಿಧ ಸಮಸ್ಯೆಗಳನ್ನು (ಉದಾಹರಣೆಗೆ: ಶಿಕ್ಷಣ ನೀತಿ, ಉದ್ಯೋಗ ಸೃಷ್ಟಿ, ಆರ್ಥಿಕ ನೀತಿಗಳು) ಸರ್ಕಾರಕ್ಕೆ ಬಲವಾಗಿ ತಿಳಿಸಬಲ್ಲರು ಎಂಬ ನಂಬಿಕೆ. ಈ ವರ್ಗದ ಆಲೋಚನೆಗಳು ಸಾಮಾನ್ಯ ಜನಸಮುದಾಯದ ಸಮಸ್ಯೆಗಳಿಗಿಂತ ತುಸು ಭಿನ್ನವಾಗಿರಬಹುದು ಎಂಬ ಉದ್ದೇಶದಿಂದ ಈ ಪ್ರತ್ಯೇಕ ಮತಪಟ್ಟಿಯ ವ್ಯವಸ್ಥೆ ಮಾಡಲಾಗಿದೆ.

Read More
Next Story