
ಬಿಪಿ, ಶುಗರ್ ಸೇರಿ 39 ಅಗತ್ಯ ಔಷಧಗಳ ಬೆಲೆ ಇಳಿಸಿದ ಕೇಂದ್ರ ಸರ್ಕಾರ
ಶುಗರ್, ಬಿಪಿ, ಹೃದಯರೋಗ, ಕಣ್ಣಿನ ಸೋಂಕು ಹಾಗೂ ಉಸಿರಾಟದ ಸಮಸ್ಯೆಗಳಿಗೆ ಬಳಸುವ ಅಗತ್ಯ ಔಷಧಿಗಳ ದರವನ್ನು ಇಳಿಕೆ ಮಾಡಿ ಗರಿಷ್ಠ ಮಿತಿ ನಿಗದಿಪಡಿಸಲಾಗಿದೆ.
ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ದೇಶದ ಕೋಟ್ಯಂತರ ಬಡ ಮತ್ತು ಮಧ್ಯಮ ವರ್ಗದ ರೋಗಿಗಳಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ. ನಿರಂತರ ಬೆಲೆ ಏರಿಕೆಯಾಗುತ್ತಿರುವ ಇಂದಿನ ದಿನಗಳಲ್ಲಿ ಸಾರ್ವಜನಿಕರ ಆರೋಗ್ಯದ ಹೊರೆ ತಗ್ಗಿಸಲು ಮುಂದಾಗಿರುವ ಕೇಂದ್ರ ಸರ್ಕಾರ, ದೈನಂದಿನ ಹಾಗೂ ತುರ್ತು ಸಂದರ್ಭಗಳಲ್ಲಿ ಬಳಸುವ ಪ್ರಮುಖ 39 ಔಷಧಿಗಳ ಗರಿಷ್ಠ ಮಾರಾಟ ದರವನ್ನು ಇಳಿಕೆ ಮಾಡಿ ಆದೇಶ ಹೊರಡಿಸಿದೆ.
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದಡಿ ಬರುವ ರಾಷ್ಟ್ರೀಯ ಔಷಧ ದರ ನಿಯಂತ್ರಣ ಪ್ರಾಧಿಕಾರ ಈ ಮಹತ್ವದ ಆದೇಶ ಹೊರಡಿಸಿದ್ದು, ಔಷಧ ಬೆಲೆ ನಿಯಂತ್ರಣ ಕಾಯ್ದೆ 2013ರ ಅಡಿಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಶುಗರ್, ಬಿಪಿ, ಹೃದಯರೋಗ, ಕಣ್ಣಿನ ಸೋಂಕು ಹಾಗೂ ಉಸಿರಾಟದ ಸಮಸ್ಯೆಗಳಿಗೆ ಬಳಸುವ ಅಗತ್ಯ ಔಷಧಿಗಳ ದರವನ್ನು ಇಳಿಕೆ ಮಾಡಿ ಗರಿಷ್ಠ ಮಿತಿ ನಿಗದಿಪಡಿಸಲಾಗಿದೆ.
ಯಾವ ಮಾತ್ರೆಯ ಬೆಲೆ ಎಷ್ಟು?
ಮಧುಮೇಹ ನಿಯಂತ್ರಣಕ್ಕೆ ವ್ಯಾಪಕವಾಗಿ ಬಳಸಲಾಗುವ 'ಎಂಪಾಗ್ಲಿಫ್ಲೋಜಿನಾ, ಸಿಟಾಗ್ಲಿಪ್ಟಿನ್ ಮತ್ತು ಮೆಟ್ಫಾರ್ಮಿನ್ ಹೈಡ್ರೋಕ್ಲೋರೈಡ್' ಪ್ರತಿ ಮಾತ್ರೆಗೆ 17.17 ರೂ. ನಿಗದಿಪಡಿಸಲಾಗಿದೆ. ಅಧಿಕ ರಕ್ತದೊತ್ತಡ ಸಮಸ್ಯೆಗೆ ಬಳಸುವ 'ಆಮ್ಲೋಡಿಪೈನ್, ಬಿಸೊಪ್ರೊಲೊಲ್ ಮತ್ತು ಟೆಲ್ಮಿಸಾರ್ಟನ್' ಮಾತ್ರೆಗಳ ಬೆಲೆಯನ್ನು ಗರಿಷ್ಠ 14.74 ರೂ.ಗೆ ಮಿತಿಗೊಳಿಸಲಾಗಿದೆ.
ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯ ತಡೆಯಲು ಬಳಸುವ 'ಕ್ಲೋಪಿಡೋಗ್ರೆಲ್, ಆಸ್ಪಿರಿನ್ ಮತ್ತು ಅಟೊರ್ವಸ್ಟಾಟಿನ್' ಮಾತ್ರೆಗಳ ಬೆಲೆಯನ್ನು ಕೇವಲ 6.37 ರೂ.ಗೆ ನಿಗದಿ ಮಾಡಲಾಗಿದೆ. ಕಣ್ಣಿನ ಶಸ್ತ್ರಚಿಕಿತ್ಸೆಯ ನಂತರ ಹಾಗೂ ಬ್ಯಾಕ್ಟೀರಿಯಾ ಸೋಂಕಿಗೆ ಬಳಸುವ 'ನೆಪಾಫೆನಾಕ್ ಮತ್ತು ಮೊಕ್ಸಿಫ್ಲೋಕ್ಸಾಸಿನ್' ಕಣ್ಣಿನ ಡ್ರಾಪ್ಸ್ ಬೆಲೆಯನ್ನು ಪ್ರತಿ ಮಿಲಿ ಲೀಟರ್‌ಗೆ 68.64 ರೂ. ನಿಗದಿಪಡಿಸಲಾಗಿದೆ.
ಮೂಳೆಗಳ ಆರೋಗ್ಯಕ್ಕೆ ಅಗತ್ಯವಿರುವ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ-3 ಮಾತ್ರೆಗಳ ಗರಿಷ್ಠ ಬೆಲೆಯನ್ನು ಪ್ರತಿ ಮಾತ್ರೆಗೆ 8 ರೂ. ಗೆ ಮಿತಿಗೊಳಿಸಲಾಗಿದೆ. ನಾಯಿ ಕಡಿತಕ್ಕೆ ನೀಡಲಾಗುವ ಅತ್ಯಂತ ಪ್ರಮುಖ 'ಆಂಟಿ ರೇಬಿಸ್ ಇಮ್ಯುನೊ ಗ್ಲೋಬ್ಯುಲಿನ್' ಇಂಜೆಕ್ಷನ್ ದರವನ್ನು ಪ್ರತಿ ಎಂಎಲ್ಗೆ 119.48 ರೂ.ಗಳಿಗೆ ಇಳಿಸಲಾಗಿದೆ.
ಹೃದಯಾಘಾತದ ಸಂದರ್ಭದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯನ್ನು ತಕ್ಷಣವೇ ಕರಗಿಸಲು ಬಳಸುವ ಅತ್ಯಂತ ದುಬಾರಿ ಹಾಗೂ ಪ್ರಾಣರಕ್ಷಕ 'ಟೆನೆಕ್ಟೆ ಪ್ಲೇಸ್ ಇಂಜೆಕ್ಷನ್' ಬೆಲೆಯನ್ನು 60,238.27 ರೂ.ಗೆ ನಿಗದಿಪಡಿಸಲಾಗಿದೆ.
ಮೆಡಿಕಲ್ ಶಾಪ್‌ಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ
ನೂತನ ದರ ಜಾರಿಗೆ ತರುವ ಬೆನ್ನಲ್ಲೇ ಕೇಂದ್ರ ಸರ್ಕಾರವು ಔಷಧ ತಯಾರಿಕಾ ಕಂಪನಿಗಳು, ವಿತರಕರು ಹಾಗೂ ಮೆಡಿಕಲ್ ಸ್ಟೋರ್ ಮಾಲೀಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಪ್ರಾಧಿಕಾರ ನಿಗದಿಪಡಿಸಿರುವ ಗರಿಷ್ಠ ಚಿಲ್ಲರೆ ಬೆಲೆಗಿಂತ ಒಂದು ಪೈಸೆ ಕೂಡ ಹೆಚ್ಚಿನ ದರಕ್ಕೆ ಗ್ರಾಹಕರಿಗೆ ಔಷಧ ಮಾರಾಟ ಮಾಡುವಂತಿಲ್ಲ. ಎಲ್ಲಾ ಮೆಡಿಕಲ್ ಶಾಪ್‌ಗಳ ಮುಂಭಾಗ ಗ್ರಾಹಕರಿಗೆ ಕಾಣಿಸುವಂತೆ ಪರಿಷ್ಕೃತ ಔಷಧಗಳ ದರಪಟ್ಟಿ ಪ್ರದರ್ಶಿಸಬೇಕು.
ಒಂದು ವೇಳೆ ನಿಯಮ ಉಲ್ಲಂಘಿಸಿ ಸಾರ್ವಜನಿಕರಿಂದ ಹೆಚ್ಚಿನ ಹಣ ವಸೂಲಿ ಮಾಡಿದರೆ, ಅಂತಹ ಫಾರ್ಮಾ ಕಂಪನಿಗಳು ಅಥವಾ ಮಾರಾಟಗಾರರಿಂದ ಹೆಚ್ಚುವರಿ ಹಣವನ್ನು ಬಡ್ಡಿ ಸಮೇತ ವಸೂಲಿ ಮಾಡಲಾಗುವುದು. ಅಷ್ಟೇ ಅಲ್ಲದೆ, ಔಷಧ ಬೆಲೆ ನಿಯಂತ್ರಣ ಆದೇಶ -2013 ಮತ್ತು ಅಗತ್ಯ ಸರಕುಗಳ ಕಾಯ್ದೆ 1955ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ರಾಷ್ಟ್ರೀಯ ಔಷಧ ದರ ನಿಯಂತ್ರಣ ಪ್ರಾಧಿಕಾರ ಎಚ್ಚರಿಸಿದೆ.

