x

ಗುಣಮಟ್ಟದ ಶಿಕ್ಷಣ ನೆಪದಲ್ಲಿ ಸರ್ಕಾರದ ಎಡವಟ್ಟು; ಸರ್ಕಾರಿ ಶಾಲೆಗಳು ಖಾಸಗಿ ಪಾಲು ?

ಸರ್ಕಾರಿ ಶಾಲೆಗಳ ಅಭಿವೃದ್ಧಿಯ ಹೆಸರಲ್ಲಿ ಹೊಸ ಪಾಲುದಾರಿಕೆ ಯೋಜನೆ ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಹಿಂಬಾಗಿಲ ಖಾಸಗೀಕರಣಕ್ಕೆ ಶಿಕ್ಷಣ ತಜ್ಞರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Click the Play button to hear this message in audio format

ರಾಜ್ಯದ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಸರ್ಕಾರವು ಹೊಸ ಯೋಜನೆಯೊಂದನ್ನು ರೂಪಿಸಿದ್ದು, ಮೊದಲ ಹಂತದಲ್ಲಿ 1,000 ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳ ಸಹಭಾಗಿತ್ವದಲ್ಲಿ ನಡೆಸಲು ತೀರ್ಮಾನಿಸಿದೆ. ರಾಜ್ಯದ ಸುಮಾರು 6,000 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಯೋಜನೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು 2,000 ಶಾಲೆಗಳಿಗೆ ವಿಸ್ತರಿಸುವ ಚಿಂತನೆಯೂ ಸರ್ಕಾರದ ಮುಂದಿದೆ. ಆದರೆ, ಸರ್ಕಾರದ ಈ ಪ್ರಸ್ತಾವನೆಯು ಶಿಕ್ಷಣ ವಲಯದಲ್ಲಿ ತೀವ್ರ ಪರ-ವಿರೋಧ ಚರ್ಚೆಗೆ ಕಾರಣವಾಗಿದ್ದು, ಸಾರ್ವಜನಿಕ ಶಿಕ್ಷಣವನ್ನು ವ್ಯವಸ್ಥಿತವಾಗಿ ಖಾಸಗೀಕರಣಗೊಳಿಸುವ ಹುನ್ನಾರವಿದು ಎಂದು ಶಿಕ್ಷಣ ತಜ್ಞರು ಮತ್ತು ವಿವಿಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಈ ಯೋಜನೆ ಮೇಲ್ನೋಟಕ್ಕೆ ಆಕರ್ಷಕವಾಗಿ ಕಂಡರೂ, ಹಲವು ಆತಂಕಗಳನ್ನು ಸೃಷ್ಟಿಸಿದೆ. ಸಂವಿಧಾನದ 21(ಎ) ವಿಧಿಯ ಪ್ರಕಾರ ಪ್ರತಿಯೊಂದು ಮಗುವಿಗೂ ಉಚಿತ ಮತ್ತು ಗುಣಮಟ್ಟದ ಕಡ್ಡಾಯ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯ. ಶಿಕ್ಷಣ ಬಜೆಟ್‌ಗೆ ಸಾವಿರಾರು ಕೋಟಿ ರೂ. ಮೀಸಲಿಡುವ ಸರ್ಕಾರ, ಮೂಲಸೌಕರ್ಯ, ಶಿಕ್ಷಕರ ನಿಯೋಜನೆ ಮತ್ತು ವಾಹನ ಸೌಲಭ್ಯಕ್ಕಾಗಿ ಖಾಸಗಿ ಶಾಲೆಗಳ ಮುಂದೆ ಜೋಳಿಗೆ ಹಿಡಿಯುವುದು ಕಲ್ಯಾಣ ರಾಜ್ಯದ ಆಶಯಕ್ಕೆ ಧಕ್ಕೆ ತರುವುದಿಲ್ಲವೇ? ಸರ್ಕಾರ ತನ್ನ ಸಾಂವಿಧಾನಿಕ ಜವಾಬ್ದಾರಿಯನ್ನು ಹೊರಗುತ್ತಿಗೆ ನೀಡುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಸರ್ಕಾರಿ ಶಾಲೆಗೆ ಟೊಯೊಟೊ ಅಥವಾ ಯಾವುದೇ ಖಾಸಗಿ ಶಾಲೆಯ ಹೆಸರನ್ನು ಸೇರಿಸಲು ಅವಕಾಶ ನೀಡುವುದು ಶಾಲೆಗಳ ಸಾರ್ವಜನಿಕ ಅಸ್ಮಿತೆಯನ್ನು ಕುಗ್ಗಿಸಬಹುದು. ಸರ್ಕಾರಿ ಶಾಲೆ ಎಂಬುದು ಪ್ರಜಾಪ್ರಭುತ್ವದ ಸಮಾನತೆಯ ಸಂಕೇತ. ಅಲ್ಲಿ ಕಾರ್ಪೊರೇಟ್ ಲಾಂಛನಗಳು ರಾರಾಜಿಸಿದರೆ, ಬಡ ಮಕ್ಕಳ ಮನಸ್ಸಿನಲ್ಲಿ ಕೀಳರಿಮೆ ಮೂಡುವ ಅಪಾಯವಿರುತ್ತದೆ. ಕಾರ್ಪೊರೇಟ್ ಸಂಸ್ಥೆಗಳು ಇದನ್ನು ಶಿಕ್ಷಣ ಸೇವೆಯ ಬದಲು ತಮ್ಮ ಜಾಹೀರಾತು ಫಲಕವಾಗಿ ಬಳಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಖಾಸಗಿ ಶಾಲೆಯ ಶಿಕ್ಷಕರು ಸರ್ಕಾರಿ ಶಾಲೆಗೆ ಬಂದು ಪಾಠ ಮಾಡುವುದು ಪ್ರಾಯೋಗಿಕವಾಗಿ ಎಷ್ಟು ಸರಿ? ಸರ್ಕಾರಿ ಶಿಕ್ಷಕರ ವೇತನ, ಅರ್ಹತೆ ಹಾಗೂ ಖಾಸಗಿ ಶಿಕ್ಷಕರ ಕಾರ್ಯವೈಖರಿಯ ನಡುವೆ ಸಮನ್ವಯ ಸಾಧ್ಯವೇ? ಒಂದೇ ಶಾಲೆಯಲ್ಲಿ ಸರ್ಕಾರಿ ಶಿಕ್ಷಕರು ಮತ್ತು ಖಾಸಗಿ ಶಿಕ್ಷಕರ ನಡುವೆ ಆಡಳಿತಾತ್ಮಕ ಮೇಲಾಟ ಅಥವಾ ಅಸಮಾಧಾನ ಸೃಷ್ಟಿಯಾಗುವುದಿಲ್ಲವೇ? ಖಾಸಗಿ ಶಾಲೆಯವರು ಕಳುಹಿಸುವ ಶಿಕ್ಷಕರ ಜವಾಬ್ದಾರಿ ಮತ್ತು ಪಠ್ಯಕ್ರಮದ ಬದ್ಧತೆಯನ್ನು ಯಾರು ಮೇಲ್ವಿಚಾರಣೆ ಮಾಡುತ್ತಾರೆ? ಖಾಸಗಿ ಶಾಲೆಗಳು 50 ಸಾವಿರದಿಂದ 2 ಲಕ್ಷ ರೂ.ವರೆಗೆ ಶುಲ್ಕ ವಸೂಲಿ ಮಾಡುತ್ತಿವೆ ಎಂಬುದನ್ನು ಸರ್ಕಾರವೇ ಉಲ್ಲೇಖಿಸಿದೆ. ಈಗ ಈ ಶಾಲೆಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ನಿರ್ವಹಣೆ ಮಾಡಬೇಕಾದರೆ, ಆ ಹೆಚ್ಚುವರಿ ಆರ್ಥಿಕ ಹೊರೆಯನ್ನು ತಮ್ಮಲ್ಲಿ ಓದುತ್ತಿರುವ ಮಧ್ಯಮ ವರ್ಗದ ಪೋಷಕರ ಶಾಲಾ ಶುಲ್ಕದ ಮೇಲೆ ವರ್ಗಾಯಿಸುವುದಿಲ್ಲ ಎಂಬುದಕ್ಕೆ ಏನು ಖಾತರಿ? ಎಂಬ ಪ್ರಶ್ನೆ ಮೂಡಿದೆ.

ಸರ್ಕಾರಿ ಶಾಲೆಗೆ ಶಿಕ್ಷಕರನ್ನು ಕಳುಹಿಸಲು ಆಧ್ಯಯನ ಆಗಿದೆಯೇ?

ಶಿಕ್ಷಣ ನೀತಿಯಲ್ಲಿ ಯಾವುದೇ ದೊಡ್ಡ ಬದಲಾವಣೆ ತರುವ ಮುನ್ನ, ಕೆಲವೇ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿ, ಅದರ ಗುಣದೋಷಗಳನ್ನು ಅಧ್ಯಯನ ಮಾಡಿ ನಂತರ ರಾಜ್ಯಾದ್ಯಂತ ವಿಸ್ತರಿಸುವುದು ಪದ್ಧತಿ. ಆದರೆ, ಈ ಯೋಜನೆಗೆ ಸಂಬಂಧಿಸಿದಂತೆ, ಖಾಸಗಿ ಶಾಲಾ ಶಿಕ್ಷಕರು ಸರ್ಕಾರಿ ಶಾಲೆಗಳಿಗೆ ಹೋದರೆ ಶೈಕ್ಷಣಿಕ ಗುಣಮಟ್ಟ ಹೆಚ್ಚಾಗುತ್ತದೆಯೇ? ಅದರಿಂದ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ? ಎಂಬುದರ ಬಗ್ಗೆ ಯಾವುದೇ ದತ್ತಾಂಶ ಸರ್ಕಾರದ ಬಳಿ ಇಲ್ಲ. ಯಾವುದೇ ಅಧ್ಯಯನ ನಡೆಸದೆ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಒಂದೇ ಶಾಲೆಯಲ್ಲಿ ಸರ್ಕಾರಿ ಶಿಕ್ಷಕರು ಮತ್ತು ಖಾಸಗಿ ಶಾಲೆಯಿಂದ ಬಂದ ಶಿಕ್ಷಕರು ಒಟ್ಟಿಗೆ ಕೆಲಸ ಮಾಡುವಾಗ ಆಡಳಿತಾತ್ಮಕ ಸಂಘರ್ಷ ಮತ್ತು ಭಿನ್ನಾಭಿಪ್ರಾಯಗಳು ಮೂಡುವ ಸಾಧ್ಯತೆ ಹೆಚ್ಚಿದೆ ಎಂಬ ಮಾತುಗಳು ಕೇಳಿಬಂದಿವೆ.

ಹೊಸ ಯೋಜನೆ ಮಾಡಲು ಕಾರಣವೇನು?

ಸರ್ಕಾರವು ಈ ಯೋಜನೆ ಜಾರಿಗೊಳಿಸುತ್ತಿರುವುದು ಖಾಸಗೀಕರಣಕ್ಕೆ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ ಎಂದು ಹೇಳಲಾಗಿದೆ. ಶಿಕ್ಷಣ ವಲಯದಲ್ಲಿ ಹಿಂಬಾಗಿಲಿನ ಖಾಸಗೀಕರಣ ಎಂದು ಕರೆಯಲಾಗುತ್ತಿದೆ. ಸರ್ಕಾರವು ಇದನ್ನು ನೇರವಾಗಿ ನಾವು ಖಾಸಗೀಕರಣ ಮಾಡುತ್ತಿದ್ದೇವೆ ಎಂದು ಹೇಳದೆ, ಸಹಭಾಗಿತ್ವ ಎಂಬ ಮುಖವಾಡದ ಮೂಲಕ ಹೇಗೆ ಖಾಸಗೀಕರಣಕ್ಕೆ ಹಾದಿ ಮಾಡಿಕೊಡುತ್ತಿದೆ. ಜೊತೆಗೆ, ಕಾಯಂ ಶಿಕ್ಷಕರನ್ನು ನೇಮಿಸಿದರೆ ಸರ್ಕಾರದ ಬೊಕ್ಕಸಕ್ಕೆ ಪ್ರತಿ ತಿಂಗಳು ವೇತನ ಮತ್ತು ಪಿಂಚಣಿಯ ಭಾರಿ ಆರ್ಥಿಕ ಹೊರೆ ಬೀಳುತ್ತದೆ. ಖಾಸಗಿ ಶಾಲೆಗಳಿಂದ ಶಿಕ್ಷಕರನ್ನು ಉಚಿತವಾಗಿ ಬಳಸಿಕೊಳ್ಳುವುದರಿಂದ ಸರ್ಕಾರಕ್ಕೆ ನಯಾಪೈಸೆ ಖರ್ಚಿಲ್ಲದೆ ಶಿಕ್ಷಕರ ಕೊರತೆ ನೀಗಿಸಬಹುದು ಎಂಬುದು ಸರ್ಕಾರದ ಲೆಕ್ಕಾಚಾರ. ಈ ಕಾರಣಕ್ಕಾಗಿ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ ಎನ್ನಲಾಗಿದೆ.

ಶಿಕ್ಷಣ ತಜ್ಷರ ವಿರೋಧವೇನು?

ಸರ್ಕಾರದ ಯೋಜನೆ ಪ್ರಕಾರ, ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳಿಗೆ ಕನಿಷ್ಠ 10 ತರಬೇತಿ ಪಡೆದ ಶಿಕ್ಷಕರನ್ನು ಕಳುಹಿಸಬೇಕು. ಜೊತೆಗೆ ತಮ್ಮ ಹಳೆಯ ಶಾಲಾ ಬಸ್‌ಗಳು, ಕಂಪ್ಯೂಟರ್‌ಗಳು ಮತ್ತು ಪ್ರಯೋಗಾಲಯದ ಉಪಕರಣಗಳನ್ನು ನೀಡಲಿವೆ. ಆದರೆ, ಸರ್ಕಾರದ ಈ ನಡೆಯನ್ನು ಶಿಕ್ಷಣ ತಜ್ಞರು ಮತ್ತು ಸಂಘಟನೆಗಳು ಬಲವಾಗಿ ವಿರೋಧಿಸಿವೆ. ಸಂವಿಧಾನದ 21(ಎ) ವಿಧಿಯ ಅಡಿಯಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವುದು ಸರ್ಕಾರದ ಸಾಂವಿಧಾನಿಕ ಹೊಣೆಗಾರಿಕೆ. ಕಾಯಂ ಶಿಕ್ಷಕರನ್ನು ನೇಮಿಸದೆ ಬೋಧನೆಯನ್ನೇ ಖಾಸಗಿಯವರಿಗೆ ವಹಿಸುತ್ತಿರುವುದು ಸಾರ್ವಜನಿಕ ಶಿಕ್ಷಣವನ್ನು ಹಿಂಬಾಗಿಲ ಮೂಲಕ ಖಾಸಗೀಕರಣ ಮಾಡುವ ವ್ಯವಸ್ಥಿತ ಹುನ್ನಾರ ಎಂದು ತಜ್ಞರು ಆರೋಪಿಸಿದ್ದಾರೆ. ಅಲ್ಲದೆ, ಖಾಸಗಿ ಶಾಲೆಗಳ ಹಳೆಯ ಬಸ್‌ಗಳು ಮತ್ತು ಉಪಕರಣಗಳನ್ನು ಬಳಸುವುದರಿಂದ ಬಡ ಮಕ್ಕಳಲ್ಲಿ ಕೀಳರಿಮೆ ಮೂಡುತ್ತದೆ. ಶಾಲೆಗಳ ಮೇಲೆ ಕಾರ್ಪೊರೇಟ್ ಬ್ರ್ಯಾಂಡಿಂಗ್‌ಗೆ ಅವಕಾಶ ನೀಡಿದರೆ ಸರ್ಕಾರಿ ಶಾಲೆಗಳ ಅಸ್ಮಿತೆ ನಾಶವಾಗಿ, ಅವು ಕೇವಲ ಖಾಸಗಿ ಸಂಸ್ಥೆಗಳ ಪ್ರಚಾರದ ಫಲಕಗಳಾಗಲಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಸರ್ಕಾರಿ ಶಾಲೆಯಲ್ಲಿ ಎಷ್ಟು ಶಿಕ್ಷಕರ ಹುದ್ದೆ ಖಾಲಿ ಇವೆ?

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಮರೀಚಿಕೆಯಾಗಲು ಶಿಕ್ಷಕರ ಭಾರಿ ಕೊರತೆಯೇ ಮುಖ್ಯ ಕಾರಣವಾಗಿದೆ. ಶಿಕ್ಷಣ ಇಲಾಖೆಯ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 25,000ಕ್ಕೂ ಹೆಚ್ಚು ಕಾಯಂ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳಲ್ಲಿ ಈ ಸಮಸ್ಯೆ ಅತ್ಯಂತ ಗಂಭೀರವಾಗಿದೆ. ಸರ್ಕಾರವು ಕಾಯಂ ನೇಮಕಾತಿ ಮಾಡುವ ಬದಲು, ಪ್ರತಿವರ್ಷ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಶೈಕ್ಷಣಿಕ ವರ್ಷವನ್ನು ತಳ್ಳಿಹಾಕುತ್ತಿದೆ. ಒಂದೆಡೆ ಸಾವಿರಾರು ಟಿಇಟಿ, ಬಿ.ಎಡ್ ಅರ್ಹ ಅಭ್ಯರ್ಥಿಗಳು ಉದ್ಯೋಗಕ್ಕಾಗಿ ಕಾಯುತ್ತಿದ್ದರೆ, ಇನ್ನೊಂದೆಡೆ ಶಿಕ್ಷಕರ ಕೊರತೆಯಿಂದ ಸರ್ಕಾರಿ ಶಾಲೆಗಳ ಫಲಿತಾಂಶ ಕುಸಿಯುತ್ತಿದ್ದು, ತಕ್ಷಣವೇ ಕಾಯಂ ನೇಮಕಾತಿ ನಡೆಸಬೇಕೆಂಬ ಕೂಗು ತೀವ್ರಗೊಂಡಿದೆ.

ಸಿಎಸ್ಆರ್ ಫಂಡ್ಗೂ ಸರ್ಕಾರದ ಯೋಜನೆಗೂ ಇರುವ ವ್ಯತ್ಯಾಸ ಏನು?

ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಗೂ ಮತ್ತು ಸರ್ಕಾರದ ಪ್ರಸ್ತುತ 'ಶಾಲೆಗಳ ಪಾಲುದಾರಿಕೆ' ಯೋಜನೆಗೂ ಆಡಳಿತಾತ್ಮಕವಾಗಿ ವ್ಯತ್ಯಾಸವಿದೆ. ಕಂಪನಿಗಳ ಕಾಯ್ದೆಯಡಿ ಖಾಸಗಿ ಕಂಪನಿಗಳು ತಮ್ಮ ಲಾಭದ ಶೇ.2 ರಷ್ಟು ಹಣವನ್ನು ಶಾಲೆಗಳ ಕಟ್ಟಡ, ಡೆಸ್ಕ್, ಶೌಚಾಲಯ ಅಥವಾ ಲ್ಯಾಬ್‌ನಂತಹ ಕೇವಲ ಭೌತಿಕ ಮೂಲಸೌಕರ್ಯಗಳ ನೆರವಿಗೆ ಮಾತ್ರ ನೀಡುತ್ತವೆ. ಇದರಲ್ಲಿ ಕಂಪನಿಗಳು ಶಾಲೆಯ ಆಡಳಿತದಲ್ಲಾಗಲಿ ಅಥವಾ ಬೋಧನೆಯಲ್ಲಾಗಲಿ ಯಾವುದೇ ಹಸ್ತಕ್ಷೇಪ ಮಾಡುವಂತಿಲ್ಲ. ಸರ್ಕಾರದ ಹೊಸ ಯೋಜನೆಯಿಂದ ಖಾಸಗಿ ಶಾಲೆಗಳು ಕೇವಲ ವಸ್ತುಗಳನ್ನಷ್ಟೇ ನೀಡುವುದಿಲ್ಲ, ಬದಲಿಗೆ 10 ಶಿಕ್ಷಕರನ್ನು ಕಳುಹಿಸಿ ನೇರವಾಗಿ ಬೋಧನೆ ಮತ್ತು ಆಡಳಿತದಲ್ಲೇ ಭಾಗಿಯಾಗುತ್ತವೆ. ಜೊತೆಗೆ ಶಾಲೆಯ ಮೇಲೆ ತಮ್ಮ ಹೆಸರು ಹಾಕಿಕೊಳ್ಳುವ ಅವಕಾಶ ಪಡೆಯುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಸಿಎಸ್‌ಆರ್ ಕೇವಲ ಹೊರಗಿನ ನೆರವು, ಆದರೆ ಸರ್ಕಾರದ ಈ ಯೋಜನೆ ಶಾಲೆಯ ಒಳಗಿನ ನೇರ ನಿಯಂತ್ರಣ ಆಗಿದೆ.

ಶಿಕ್ಷಕರನ್ನು ನೇಮಿಸುವ ಬದಲು ಖಾಸಗಿ ಶಿಕ್ಷಕರನ್ನು ಕಳುಹಿಸುವುದೇಕೆ?

ರಾಜ್ಯದಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇದ್ದರೂ ಸರ್ಕಾರ ಕಾಯಂ ನೇಮಕಾತಿ ಮಾಡದೆ ಖಾಸಗಿ ಶಿಕ್ಷಕರನ್ನು ಬಳಸಿಕೊಳ್ಳಲು ಮುಂದಾಗಿರುವುದರ ಹಿಂದೆ ಖಾಸಗೀಕರಣದ ಹುನ್ನಾರ ಅಡಗಿದೆ ಎಂಬ ಮಾತುಗಳು ಬಲವಾಗಿ ಕೇಳಿಬಂದಿವೆ. ಆದರೆ, ಸರ್ಕಾರವು ಹಣಕಾಸಿನ ಕೊರತೆಯ ನೆಪ ಹೇಳುತ್ತಿದೆ. ಹೊಸದಾಗಿ ಕಾಯಂ ಶಿಕ್ಷಕರನ್ನು ನೇಮಿಸಿದರೆ ಸರ್ಕಾರದ ಬೊಕ್ಕಸಕ್ಕೆ ಪ್ರತಿ ತಿಂಗಳು ವೇತನ, ಭತ್ಯೆ ಮತ್ತು ಪಿಂಚಣಿಯ ನೂರಾರು ಕೋಟಿ ರೂಪಾಯಿಗಳ ಭಾರಿ ಹೊರೆ ಬೀಳುತ್ತದೆ. ಗ್ಯಾರಂಟಿ ಯೋಜನೆಗಳಿಂದಾಗಿ ಆರ್ಥಿಕ ಒತ್ತಡದಲ್ಲಿರುವ ಸರ್ಕಾರಕ್ಕೆ ಇದು ಕಷ್ಟಕರವಾಗಿದೆ. ಅಲ್ಲದೆ, ನೇಮಕಾತಿ ಪರೀಕ್ಷೆ, ಮೀಸಲಾತಿ ನಿಯಮ ಹಾಗೂ ನ್ಯಾಯಾಲಯದ ವ್ಯಾಜ್ಯಗಳ ತಲೆನೋವಿಲ್ಲದೆ, ಖಾಸಗಿ ಸಂಸ್ಥೆಗಳಿಂದ ಶೂನ್ಯ ವೆಚ್ಚದಲ್ಲಿ ಶಿಕ್ಷಕರನ್ನು ಪಡೆಯುವುದು ಸರ್ಕಾರಕ್ಕೆ ಸುಲಭದ ಉಪಾಯವಾಗಿದೆ ಎನ್ನಲಾಗಿದೆ.

ಸರ್ಕಾರಿ ಶಾಲೆಗಳನ್ನು ಖಾಸಗಿಯವರೊಂದಿಗೆ ಜೋಡಿಸುವ ಯೋಜನೆಯಲ್ಲಿ ಶಾಶ್ವತತೆ ಮತ್ತು ನಿರಂತರತೆ ಇಲ್ಲದಿರುವುದೇ ಅತಿ ದೊಡ್ಡ ಲೋಪ ಎಂದು ಶಿಕ್ಷಣ ತಜ್ಞರು ಬೆಟ್ಟುಮಾಡಿದ್ದಾರೆ. ಖಾಸಗಿ ಶಾಲೆಗಳು ತಮ್ಮ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕಂತೆ ಸ್ವಯಂಪ್ರೇರಿತವಾಗಿ ಬರುತ್ತಿವೆಯೇ ಹೊರತು, ಯಾವುದೇ ಕಡ್ಡಾಯ ಕಾನೂನು ಬದ್ಧತೆಯಿಂದಲ್ಲ. ನಾಳೆ ಖಾಸಗಿ ಸಂಸ್ಥೆ ಆರ್ಥಿಕ ನಷ್ಟಕ್ಕೆ ತುತ್ತಾದರೆ, ಆಡಳಿತ ಮಂಡಳಿ ಬದಲಾದರೆ ಅಥವಾ ಸಾಮಾಜಿಕ ಸೇವೆಯ ಆಸಕ್ತಿ ಕಳೆದುಕೊಂಡರೆ, ಶೈಕ್ಷಣಿಕ ವರ್ಷದ ಮಧ್ಯದಲ್ಲೇ ಶಿಕ್ಷಕರನ್ನು ಹಾಗೂ ಬಸ್‌ಗಳನ್ನು ಹಿಂಪಡೆಯುವ ಸಾಧ್ಯತೆ ಇರುತ್ತದೆ. ಆಗ ವಿದ್ಯಾರ್ಥಿಗಳ ಭವಿಷ್ಯ ಸಂಪೂರ್ಣ ಅತಂತ್ರವಾಗಲಿದೆ. ಶಿಕ್ಷಣ ಎಂಬುದು ಸರ್ಕಾರದ ನಿರಂತರ ಸಾಂವಿಧಾನಿಕ ಬದ್ಧತೆಯಾಗಬೇಕೇ ಹೊರತು, ಖಾಸಗಿ ಸಂಸ್ಥೆಗಳ ಮರ್ಜಿ, ಔದಾರ್ಯ ಮತ್ತು ಹಿತಾಸಕ್ತಿಯ ಮೇಲೆ ನಿಲ್ಲಬಾರದು ಎಂದು ತಜ್ಞರು ಎಚ್ಚರಿಸಿದ್ದಾರೆ.

Read More
Next Story