
ವಿದ್ಯಾರ್ಥಿಗಳಿಗೆ ಒಂದು ವಾರದಲ್ಲಿ ಶೂ-ಸಾಕ್ಸ್ ವಿತರಣೆ - ಸಚಿವ ಮಧು ಬಂಗಾರಪ್ಪ
ಹಿಂದಿನ ವರ್ಷಗಳಲ್ಲಿ ತಾಲೂಕು,ಜಿಲ್ಲಾ ಮಟ್ಟದಲ್ಲಿ ಟೆಂಡರ್ ಕರೆಯುತ್ತಿದ್ದಾಗ ದಲ್ಲಾಳಿಗಳ ಹಾವಳಿ ಹೆಚ್ಚಿತ್ತು ಮತ್ತು ಸಾಕಷ್ಟು ಅವ್ಯವಹಾರಗಳು ನಡೆಯುತ್ತಿದ್ದವು. ಇದಕ್ಕೆ ಕಡಿವಾಣ ಹಾಕಲು ವಿಳಂಬವಾಗಿದೆ.
ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವಲ್ಲಿ ಉಂಟಾಗಿರುವ ವಿಳಂಬದ ಕುರಿತು ವಿಧಾನಪರಿಷತ್‌ನಲ್ಲಿ ಮಹತ್ವದ ನಡೆದಿದ್ದು, ಮುಂದಿನ ಒಂದು ವಾರದೊಳಗೆ ಎಲ್ಲ ವಿದ್ಯಾರ್ಥಿಗಳಿಗೂ ಸೌಲಭ್ಯ ತಲುಪಿಸುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ.
ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯೆ ಬಲ್ಕೀಸ್ ಬಾನು ಶಾಲೆ ಆರಂಭವಾಗಿ ಮೂರು ತಿಂಗಳಾದರೂ ವಿದ್ಯಾರ್ಥಿಗಳಿಗೆ ಶೂ-ಸಾಕ್ಸ್ ಸಿಕ್ಕಿಲ್ಲ ಎಂದು ಸರ್ಕಾರದ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಸಚಿವ ಮಧು ಬಂಗಾರಪ್ಪ, ವಿಳಂಬಕ್ಕೆ ಕಾರಣವಾದ ವ್ಯವಸ್ಥಿತ ಅವ್ಯವಹಾರಗಳನ್ನು ವಿವರಿಸಿದರು.
ಹಿಂದಿನ ವರ್ಷಗಳಲ್ಲಿ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಟೆಂಡರ್ ಕರೆಯುತ್ತಿದ್ದಾಗ ದಲ್ಲಾಳಿಗಳ ಹಾವಳಿ ಹೆಚ್ಚಿತ್ತು ಮತ್ತು ಸಾಕಷ್ಟು ಅವ್ಯವಹಾರಗಳು ನಡೆಯುತ್ತಿದ್ದವು. ಈ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು, ಪಾರದರ್ಶಕತೆ ತರಲು ಮೊದಲ ಬಾರಿಗೆ ಈ ಬಾರಿ ರಾಜ್ಯ ಮಟ್ಟದಲ್ಲಿ ಟೆಂಡರ್ ಕರೆಯಲಾಗಿದೆ. ಈ ಪ್ರಕ್ರಿಯೆಯ ಬದಲಾವಣೆಯೇ ವಿಳಂಬಕ್ಕೆ ಮೂಲ ಕಾರಣ ಎಂದು ಸ್ಪಷ್ಟಪಡಿಸಿದರು.
ವಿತರಣೆಯ ಪ್ರಸ್ತುತ ಸ್ಥಿತಿ
ರಾಜ್ಯದಲ್ಲಿ ಒಟ್ಟು 36.56 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಇವರಲ್ಲಿ ಈಗಾಗಲೇ 21.92 ಲಕ್ಷ ವಿದ್ಯಾರ್ಥಿಗಳಿಗೆ ಶೂ-ಸಾಕ್ಸ್ ವಿತರಣೆಯಾಗಿದೆ. ಉಳಿದಂತೆ 12.59 ಲಕ್ಷ ಜೋಡಿ ಶೂಗಳು ಸಾಗಣೆ ಹಂತದಲ್ಲಿದ್ದರೆ, 2 ಲಕ್ಷ ಜೋಡಿ ಶೂಗಳು ಉತ್ಪಾದನೆಯ ಅಂತಿಮ ಹಂತದಲ್ಲಿವೆ. ಇನ್ನೊಂದು ವಾರದೊಳಗೆ ರಾಜ್ಯದ ಎಲ್ಲಾ ವಿದ್ಯಾರ್ಥಿಗಳ ಕೈಗೂ ಶೂ-ಸಾಕ್ಸ್ ತಲುಪುವುದನ್ನು ಖಚಿತಪಡಿಸಲಾಗುವುದು ಎಂದು ಆಶ್ವಾಸನೆ ನೀಡಿದ್ದಾರೆ.
ಮೊಟ್ಟೆ ದರ ಏರಿಕೆ: ಶಿಕ್ಷಕರ ಮೇಲಿನ ಆರ್ಥಿಕ ಹೊರೆಗೆ ಪರಿಹಾರ
ಶಾಲಾ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ಒದಗಿಸಲು ಸರ್ಕಾರ ಜಾರಿಗೆ ತಂದಿರುವ ಮೊಟ್ಟೆ ವಿತರಣಾ ಯೋಜನೆಯು ಇದೀಗ ದರ ಏರಿಕೆಯ ಬಿಸಿ ಅನುಭವಿಸುತ್ತಿದೆ. ಕಳೆದ ಒಂದು ವರ್ಷದಲ್ಲಿ ಮಾರುಕಟ್ಟೆಯಲ್ಲಿ ಒಂದು ಮೊಟ್ಟೆಯ ಬೆಲೆ 6 ರೂ. ನಿಂದ 8 ರೂ.ಗೆ ಏರಿಕೆಯಾಗಿದೆ. ಆದರೆ ಸರ್ಕಾರ ಪ್ರತಿ ಮೊಟ್ಟೆಗೆ ಕೇವಲ 6 ರೂ. ಮಾತ್ರ ನೀಡುತ್ತಿರುವುದರಿಂದ, ಶಿಕ್ಷಕರು ಮತ್ತು ಶಾಲಾ ಉಸ್ತುವಾರಿ ಸಮಿತಿಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳುತ್ತಿದೆ. ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಅನುದಾನ ಹೆಚ್ಚಿಸಬೇಕು, ಇಲ್ಲವಾದಲ್ಲಿ ವಿತರಣೆಯ ಜವಾಬ್ದಾರಿಯನ್ನು ಏಜೆನ್ಸಿಗಳಿಗೆ ವಹಿಸಬೇಕು ಎಂದು ರಾಮೋಜಿಗೌಡ ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ, "ಅಪೌಷ್ಟಿಕತೆ ನಿವಾರಣೆ ನಮ್ಮ ಪ್ರಮುಖ ಗುರಿ. ನೂರು ಪ್ರತಿಶತ ಹಾಜರಾತಿ ಇರುವ ಶಾಲೆಗಳಲ್ಲಿ ಮೊಟ್ಟೆ ಖರೀದಿಗೆ ಹಣದ ಕೊರತೆ ಇರುವುದು ನಿಜ. ಈ ಸಮಸ್ಯೆಯನ್ನು ನಿವಾರಿಸಲು ಹಣಕಾಸು ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿ, ಅನುದಾನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು" ಎಂದು ಭರವಸೆ ನೀಡಿದ್ದಾರೆ.
ಶಿಕ್ಷಕರ ಮೇಲಿನ ಇಲಾಖೆಯೇತರ ಕೆಲಸಗಳ ಒತ್ತಡ
ಚರ್ಚೆಯ ಇನ್ನೊಂದು ಪ್ರಮುಖ ವಿಷಯವೆಂದರೆ ಶಿಕ್ಷಕರಿಗೆ ವಹಿಸಲಾಗುತ್ತಿರುವ ಇಲಾಖೆಯೇತರ ಕೆಲಸಗಳು. ಎಸ್ಐಆರ್, ಜನಗಣತಿ, ಮತ್ತು ಜಾತಿ ಗಣತಿಯಂತಹ ಸರ್ಕಾರಿ ಕಾರ್ಯಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳುತ್ತಿರುವುದರಿಂದ ಶಾಲಾ ಪಾಠ-ಪ್ರವಚನಗಳಿಗೆ ಅಡ್ಡಿಯಾಗುತ್ತಿದೆ ಎಂದು ರಾಮೋಜಿಗೌಡ ಆರೋಪಿಸಿದರು.
ಸಚಿವರು ಈ ವಿಷಯದ ಬಗ್ಗೆ ಗಂಭೀರವಾಗಿ ಗಮನಹರಿಸಿ, ಶಿಕ್ಷಕರ ಮೇಲೆ ಬೀಳುತ್ತಿರುವ ಹೆಚ್ಚುವರಿ ಕೆಲಸದ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದರು.

