ಜರ್ಮನಿಯ ಮಾನವೀಯತೆ VS ಭಾರತದ ಕೀಳು ಹಾಸ್ಯ: ಶವಗಳ ಗೌರವಕ್ಕೆ ಜಾಗತಿಕ ಚರ್ಚೆ
x

ಜರ್ಮನಿಯ ಮಾನವೀಯತೆ VS ಭಾರತದ ಕೀಳು ಹಾಸ್ಯ: ಶವಗಳ ಗೌರವಕ್ಕೆ ಜಾಗತಿಕ ಚರ್ಚೆ

ಜರ್ಮನಿಯ ಶಾಲಾ ಮಕ್ಕಳು ಭಾರತೀಯನ ಅಸ್ತಿಪಂಜರಕ್ಕೆ ಮುಕ್ತಿ ನೀಡಿದರೆ, ಮುುಂಬೈನ ವೈದ್ಯಕೀಯ ವಿದ್ಯಾರ್ಥಿನಿ ಸೆಜಲ್ ಪವಾರ್ ಶವಗಳನ್ನು ಹಾಸ್ಯದ ವಸ್ತುವಾಗಿಸಿ ಸಾರ್ವಜನಿಕ ಆಕ್ರೋಶಕ್ಕೆ ಈಡಾಗಿದ್ದಾರೆ.


Click the Play button to hear this message in audio format

ತಂತ್ರಜ್ಞಾನ ಮತ್ತು ವಿಜ್ಞಾನದಲ್ಲಿ ಜಗತ್ತು ಎಷ್ಟೇ ಮುಂದುವರಿದಿದ್ದರೂ, ಮಾನವೀಯ ಮೌಲ್ಯಗಳಲ್ಲಿ ನಾವೆಷ್ಟು ಹಿಂದೆ ಬಿದ್ದಿದ್ದೇವೆ ಎಂಬುದನ್ನು ಇತ್ತೀಚಿನ ಎರಡು ಭಿನ್ನ ಘಟನೆಗಳು ಸಾಬೀತುಪಡಿಸಿವೆ. ಸುಮಾರು ಆರು ಸಾವಿರ ಕಿಲೋಮೀಟರ್ ದೂರದ ಜರ್ಮನಿಯಲ್ಲಿ ಮಡಿದ ಭಾರತೀಯನೊಬ್ಬನ ಅಸ್ತಿಪಂಜರಕ್ಕೆ ಗೌರವಯುತ ಅಂತ್ಯಸಂಸ್ಕಾರ ಸಿಕ್ಕಿದ್ದರೆ, ಇತ್ತ ಭಾರತದಲ್ಲಿ ವೈದ್ಯಕೀಯ ಶಿಕ್ಷಣಕ್ಕಾಗಿ ದಾನ ಪಡೆದ ಶವವೊಂದನ್ನು ಹಾಸ್ಯದ ವಸ್ತುವಾಗಿಸಿ ಸಾರ್ವಜನಿಕವಾಗಿ ಅವಮಾನಿಸಿರುವ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಜರ್ಮನಿಯ ಹೈಸ್ಕೂಲ್ ಬಯಾಲಜಿ ಲ್ಯಾಬ್‌ನಲ್ಲಿ ದಶಕಗಳಿಂದ ಕೇವಲ ಪಾಠದ ವಸ್ತುವಾಗಿ ನೇತಾಡುತ್ತಿದ್ದ ಅಸ್ತಿಪಂಜರವೊಂದರ ಇತಿಹಾಸವನ್ನು ಕೆದಕಿದ ಅಲ್ಲಿನ ಇಂದಿನ ತಲೆಮಾರಿನ ವಿದ್ಯಾರ್ಥಿಗಳು, ಅದು ಬ್ರಿಟಿಷ್ ವಸಹತುಶಾಹಿ ಆಡಳಿತದ ಅವಧಿಯಲ್ಲಿ ಭಾರತದಿಂದ ವಿದೇಶಕ್ಕೆ ರಫ್ತಾಗಿದ್ದ ಒಬ್ಬ ಅನಾಥ ಬಡ ಮನುಷ್ಯನ ಕಳೆಬರಹ ಎಂಬ ಕಹಿ ಸತ್ಯವನ್ನು ಪತ್ತೆಹಚ್ಚಿದ್ದಾರೆ. ಬ್ರಿಟಿಷರ ಕಾಲದಲ್ಲಿ ನಡೆದ ಹೆಣಗಳ ದಂಧೆಗೆ ಬಲಿಯಾಗಿದ್ದ ಆ ದೇಹಕ್ಕೆ ವಿದ್ಯಾರ್ಥಿಗಳು ಗೌರವದಿಂದ 'ನಿರನ್' ಎಂದು ಹೆಸರಿಟ್ಟು, ಕೇವಲ ಬೋಧನಾ ವಸ್ತುವಾಗಿ ನೋಡದೇ, ಶಾಲಾ ಸಿಬ್ಬಂದಿಗಳ ನೆರವಿನಿಂದ ಶವಪೆಟ್ಟಿಗೆಯಲ್ಲಿಟ್ಟು ಸಕಲ ಧಾರ್ಮಿಕ ಗೌರವಗಳೊಂದಿಗೆ ಮಣ್ಣು ಮಾಡುವ ಮೂಲಕ ದಶಕಗಳ ನಂತರ ಆ ಆತ್ಮಕ್ಕೆ ಮುಕ್ತಿ ನೀಡಿದ್ದಾರೆ. ಈ ಘಟನೆ ಜಾಗತಿಕ ಮಟ್ಟದಲ್ಲಿ ಮಾನವೀಯತೆಗೆ ಹಿಡಿದ ಕನ್ನಡಿಯಾಗಿದೆ.

ಆದರೆ, ಇದಕ್ಕೆ ತದ್ವಿರುದ್ಧವಾಗಿ ಭಾರತದಲ್ಲಿ ನಡೆದ ಮತ್ತೊಂದು ಘಟನೆ ಇಡೀ ದೇಶವೇ ತಲೆತಗ್ಗಿಸುವಂತೆ ಮಾಡಿದೆ. ಇತ್ತೀಚೆಗೆ ವೈರಲ್ ಆದ ಸ್ಟ್ಯಾಂಡ್ ಅಪ್ ಕಾಮಿಡಿ ಶೋ ಒಂದರಲ್ಲಿ ಮುಂಬೈನ ಕೆಇಎಂ ಆಸ್ಪತ್ರೆಯ ವೈದ್ಯಕೀಯ ವಿದ್ಯಾರ್ಥಿನಿ ಸೆಜಲ್ ಪವಾರ್, ಮೆಡಿಕಲ್ ಲ್ಯಾಬ್‌ನಲ್ಲಿ ಶವಗಳನ್ನು ಕತ್ತರಿಸುವಾಗ ತಾವು ಮತ್ತು ತಮ್ಮ ಸ್ನೇಹಿತರು ಮೃತರ ಗುಪ್ತಾಂಗಗಳ ಬಗ್ಗೆ ಮಾಡುತ್ತಿದ್ದ ಅಸಭ್ಯ ಜೋಕ್‌ಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ನಗುತ್ತಾ ಹಂಚಿಕೊಂಡಿದ್ದಾರೆ. ವೈದ್ಯಕೀಯ ರಂಗದಲ್ಲಿ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಆಡುವ ಖಾಸಗಿ ಮಾತುಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಅಸಭ್ಯವಾಗಿ ಪ್ರದರ್ಶಿಸಿ ಚಪ್ಪಾಳೆ ಗಿಟ್ಟಿಸಿಕೊಳ್ಳಲು ಬಳಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಖಂಡನೆಗೆ ಒಳಗಾಗಿದೆ. ವೈದ್ಯಕೀಯ ಲೋಕದಲ್ಲಿ ಶವಗಳನ್ನು 'ಮೊದಲ ಗುರು' ಎಂದು ಪರಿಗಣಿಸಲಾಗುತ್ತದೆ, ಆದರೆ ಇಂತಹ ಕೀಳುಮಟ್ಟದ ಹಾಸ್ಯಗಳು ಸಮಾಜದಲ್ಲಿ ಅಂಗಾಂಗ ದಾನ ಅಥವಾ ಶವದಾನದ ಬಗ್ಗೆ ಇರುವ ಭಯ ಮತ್ತು ಅಪನಂಬಿಕೆಯನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ.

ಈ ಎರಡು ಘಟನೆಗಳು ಸತ್ತವರನ್ನು ಇಂದಿನ ಸಮಾಜ ಮತ್ತು ವ್ಯವಸ್ಥೆ ಹೇಗೆ ನಡೆಸಿಕೊಳ್ಳುತ್ತಿದೆ ಎಂಬ ಕ್ರೂರ ವಾಸ್ತವವನ್ನು ಬಿಂಬಿಸುತ್ತವೆ. ಇತ್ತೀಚೆಗೆ ಒಡಿಶಾದಲ್ಲಿ ಜಿತ್ತುಮುಂಡ ಎಂಬ ವ್ಯಕ್ತಿ ಬ್ಯಾಂಕ್ ಅಧಿಕಾರಿಯ ಹಠಕ್ಕೆ ಬಿದ್ದು ಡೆತ್ ಸರ್ಟಿಫಿಕೇಟ್‌ಗಾಗಿ ತನ್ನ ತಂಗಿಯ ಹೂತಿದ್ದ ಶವವನ್ನು ಅಗೆದು ಬ್ಯಾಂಕಿಗೆ ಹೊತ್ತು ತಂದ ಘಟನೆಯಾಗಲಿ, ಅಥವಾ ಆಂಬುಲೆನ್ಸ್ ಬಾಡಿಗೆ ಇಲ್ಲದೆ ಹೆಗಲ ಮೇಲೆ ಹೆಣ ಹೊರಬೇಕಾದ ಬಡವರ ಕಣ್ಣೀರ ಕಥೆಗಳಾಗಲಿ, ಇಂದಿಗೂ ಸತ್ತವರು ಗೌರವಕ್ಕಾಗಿ ಹೋರಾಡಬೇಕಾದ ದುಸ್ಥಿತಿಯನ್ನು ತೋರಿಸುತ್ತವೆ. ಜರ್ಮನಿಯ ಮಕ್ಕಳು ಅಪರಿಚಿತ ಶವಕ್ಕೆ ಮುಕ್ತಿ ನೀಡಿದರೆ, ನಮ್ಮದೇ ದೇಶದಲ್ಲಿ ಶವದಾನ ಮಾಡಿದವರನ್ನು ಹಾಸ್ಯದ ವಸ್ತುವನ್ನಾಗಿಸುತ್ತಿರುವುದು ದುರಂತದ ಸಂಗತಿಯಾಗಿದೆ. ಸತ್ತವರು ಎದ್ದು ಬಂದು ತಮಗೆ ಗೌರವ ಕೊಡಿ ಎಂದು ಕೇಳಲು ಸಾಧ್ಯವಿಲ್ಲ, ಬದುಕಿರುವ ನಾವೇ ಆ ಜವಾಬ್ದಾರಿಯನ್ನು ಅರಿತು ಬದಲಾಗಬೇಕಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.

Read More
Next Story