ಕಸ ತೆರವು ಮಾಡದಿದ್ದರೆ ಜಿಬಿಎಯಿಂದಲೇ ಕ್ಲೀನ್; ಮಾಲೀಕರಿಗೆ ಬರುತ್ತೆ ದುಬಾರಿ ಬಿಲ್
x

ಬೆಂಗಳೂರು ಖಾಲಿ ನಿವೇಶನಗಳ ಕಸವನ್ನು ಆಗಸ್ಟ್‌ 15ರೊಳಗೆ ತೆರವುಗೊಳಿಸಬೇಕು.

ಕಸ ತೆರವು ಮಾಡದಿದ್ದರೆ ಜಿಬಿಎಯಿಂದಲೇ ಕ್ಲೀನ್; ಮಾಲೀಕರಿಗೆ ಬರುತ್ತೆ ದುಬಾರಿ ಬಿಲ್

ಬೆಂಗಳೂರು ಖಾಲಿ ನಿವೇಶನಗಳ ಕಸವನ್ನು ಆಗಸ್ಟ್‌ 15ರೊಳಗೆ ತೆರವುಗೊಳಿಸಬೇಕು. ತಪ್ಪಿದರೆ ಆಗಸ್ಟ್‌ 16ರಿಂದ ಜಿಬಿಎ ಸ್ವಚ್ಛಗೊಳಿಸಿ, ವೆಚ್ಚವನ್ನು ಆಸ್ತಿ ತೆರಿಗೆಯೊಂದಿಗೆ ವಸೂಲಿ ಮಾಡಲಿದೆ.


Click the Play button to hear this message in audio format

ಖಾಲಿ ನಿವೇಶನಗಳಲ್ಲಿ ಬಿದ್ದಿರುವ ಕಸವನ್ನು ಆಗಸ್ಟ್‌ 15ರೊಳಗೆ ಮಾಲೀಕರು ಸ್ವತಃ ತೆರವುಗೊಳಿಸದಿದ್ದರೆ, ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವತಿಯಿಂದಲೇ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತದೆ. ಕಸವನ್ನು ತೆರವುಗೊಳಿಸಿ ಸಾಗಣೆ ಮಾಡಲು ನಿವೇಶನದ ಅಳತೆಗೆ ಅನುಗುಣವಾಗಿ ಕನಿಷ್ಠ 25,900ರೂ. ರಿಂದ ಗರಿಷ್ಠ 1.74 ರೂ. ಲಕ್ಷದವರೆಗೆ ವೆಚ್ಚ ವಿಧಿಸಲು ಜಿಬಿಎ ಆದೇಶಿಸಿದೆ.

ನಗರವನ್ನು ಸ್ವಚ್ಛ, ಸುಂದರ ಹಾಗೂ ವಾಸಯೋಗ್ಯವಾಗಿಸುವ ಉದ್ದೇಶದಿಂದ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ ಆರಂಭಿಸಲಾಗಿದ್ದು, ನಗರದಾದ್ಯಂತ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಈ ವೇಳೆ ಹಲವು ಖಾಸಗಿ ಖಾಲಿ ನಿವೇಶನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕಸ ಸಂಗ್ರಹವಾಗಿರುವುದು ಕಂಡುಬಂದಿದೆ. ಕೆಲವು ನಿವೇಶನಗಳು ಕಸ ಸುರಿಯುವ ಸ್ಥಳಗಳಾಗಿಯೂ ಮಾರ್ಪಟ್ಟಿವೆ.

ಹೀಗಾಗಿ ಖಾಲಿ ನಿವೇಶನಗಳ ಮಾಲೀಕರು ತಮ್ಮ ಜಾಗದಲ್ಲಿರುವ ಕಸವನ್ನು ಸ್ವತಃ ತೆರವುಗೊಳಿಸಿ ಆಗಸ್ಟ್‌ 15ರೊಳಗೆ ನಿಗದಿತ ಸ್ಥಳಗಳಲ್ಲಿ ವಿಲೇವಾರಿ ಮಾಡುವಂತೆ ಜಿಬಿಎ ಸೂಚಿಸಿದೆ. ಅಗತ್ಯವಿದ್ದರೆ ಸಂಬಂಧಪಟ್ಟ ನಗರ ಪಾಲಿಕೆಗಳು ಸೂಚಿಸಿರುವ ಸೇವಾದಾರರ ನೆರವನ್ನೂ ಪಡೆಯಬಹುದು.

ಮಾಲೀಕರು ಗಡುವಿನೊಳಗೆ ಕಸ ತೆರವುಗೊಳಿಸದಿದ್ದರೆ ಆಗಸ್ಟ್‌ 16ರಿಂದ ಜಿಬಿಎ ವತಿಯಿಂದಲೇ ಸ್ವಚ್ಛತಾ ಕಾರ್ಯ ಆರಂಭಿಸಲಾಗುತ್ತದೆ. ಕಸ ತೆರವು ಹಾಗೂ ಸಾಗಣೆಗೆ ತಗಲುವ ಸಂಪೂರ್ಣ ವೆಚ್ಚವನ್ನು ನಂತರ ಸಂಬಂಧಪಟ್ಟ ನಿವೇಶನ ಮಾಲೀಕರ ಆಸ್ತಿ ತೆರಿಗೆಯೊಂದಿಗೆ ವಸೂಲಿ ಮಾಡಲಾಗುತ್ತದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ತಿಳಿಸಿದ್ದಾರೆ.

ನಿವೇಶನದ ಅಳತೆಗೆ ಅನುಗುಣವಾಗಿ ವೆಚ್ಚ

20×30 ಅಡಿ ನಿವೇಶನಕ್ಕೆ ತಡೆಗೋಡೆ ಇಲ್ಲದಿದ್ದರೆ ಸ್ವಚ್ಛತಾ ವೆಚ್ಚ 6,700 ರೂ. ಹಾಗೂ ತಡೆಗೋಡೆ ಇದ್ದರೆ 7,700 ರೂ. ನಿಗದಿಪಡಿಸಲಾಗಿದೆ. ಇದರ ಕಸ ಸಾಗಣೆಗೆ 19,200 ರೂ. ವೆಚ್ಚವಾಗಲಿದೆ.

30×40 ಅಡಿ ನಿವೇಶನಕ್ಕೆ ಸ್ವಚ್ಛತಾ ವೆಚ್ಚ ಕ್ರಮವಾಗಿ13,400 ರೂ. ಮತ್ತು 14,400 ರೂ. ಇದ್ದು, ಸಾಗಣೆಗೆ 38,400 ರೂ. ನಿಗದಿಯಾಗಿದೆ. 30×50 ಅಡಿ ನಿವೇಶನಕ್ಕೆ 16,750ರೂ. 14,750 ರೂ. ಸ್ವಚ್ಛತಾ ವೆಚ್ಚ ಹಾಗೂ 48,000 ರೂ. ಸಾಗಣೆ ವೆಚ್ಚ ವಿಧಿಸಲಾಗುತ್ತದೆ.

40×60 ಅಡಿ ನಿವೇಶನಕ್ಕೆ ರೂ. 26,800/ ರೂ. 27,800 ಸ್ವಚ್ಛತಾ ವೆಚ್ಚ ಮತ್ತು 76,800 ರೂ. ಸಾಗಣೆ ವೆಚ್ಚ ನಿಗದಿಯಾಗಿದೆ. 50×80 ಅಡಿ ನಿವೇಶನಕ್ಕೆ ರೂ. 46,700ರೂ. 47,700 ಸ್ವಚ್ಛತಾ ವೆಚ್ಚ ಹಾಗೂ ರೂ.1.28 ಲಕ್ಷ ಸಾಗಣೆ ವೆಚ್ಚ ವಿಧಿಸಲಾಗುತ್ತದೆ.

ಇದಕ್ಕಿಂತ ಕಡಿಮೆ ಅಥವಾ ಹೆಚ್ಚಿನ ವಿಸ್ತೀರ್ಣದ ನಿವೇಶನಗಳಿಗೆ ಅಳತೆಗೆ ಅನುಗುಣವಾಗಿ ವೆಚ್ಚವನ್ನು ನಿಗದಿಪಡಿಸಲಾಗುತ್ತದೆ. ಕಸ ತೆರವು ಮತ್ತು ಸಾಗಣೆ ಪೂರ್ಣಗೊಂಡ ಬಳಿಕ ನಿಗದಿತ ಮೊತ್ತವನ್ನು ನಿವೇಶನ ಮಾಲೀಕರ ಆಸ್ತಿ ತೆರಿಗೆಯೊಂದಿಗೆ ವಸೂಲಿ ಮಾಡಲಾಗುತ್ತದೆ ಎಂದು ಜಿಬಿಎ ತಿಳಿಸಿದೆ.

Read More
Next Story