
ನಗರದ ರಸ್ತೆಗಳಲ್ಲಿ ಸಂಚರಿಸುವ ವಾಹನಗಳಲ್ಲೇ ವಿಶೇಷ ಕ್ಯಾಮೆರಾ ಮತ್ತು ಸೆನ್ಸಾರ್‌ಗಳನ್ನು ಅಳವಡಿಸುವ ಯೋಜನೆ ರೂಪಿಸಲಾಗಿದೆ.
ರಸ್ತೆಗುಂಡಿ ಪತ್ತೆಗೆ ಎಐ ಮೊರೆ: ವಾಹನಗಳಲ್ಲೇ ಕ್ಯಾಮೆರಾ, ಸೆನ್ಸಾರ್
ರಸ್ತೆಗುಂಡಿ ಪತ್ತೆಯಾದ ಬಳಿಕ ಅದರ ಚಿತ್ರ, ಸ್ಥಳ ಹಾಗೂ ಸಂಬಂಧಿತ ಮಾಹಿತಿಯನ್ನು ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಕಳುಹಿಸುವ ವ್ಯವಸ್ಥೆ AI ತಂತ್ರಜ್ಞಾನದಲ್ಲಿ ಇರಲಿದೆ.
ನಗರದ ರಸ್ತೆಗಳಲ್ಲಿ ಕಾಣಿಸಿಕೊಳ್ಳುವ ರಸ್ತೆಗುಂಡಿಗಳನ್ನು ತ್ವರಿತವಾಗಿ ಪತ್ತೆಹಚ್ಚಿ ದುರಸ್ತಿ ಕಾರ್ಯಕ್ಕೆ ವೇಗ ನೀಡಲು ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ವ್ಯವಸ್ಥೆ ಅಳವಡಿಸಲು ಮುಂದಾಗಿದೆ.
ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸುವ ವಾಹನಗಳನ್ನೇ ರಸ್ತೆಗುಂಡಿ ಪತ್ತೆಹಚ್ಚುವ ಸಾಧನಗಳನ್ನಾಗಿ ಬಳಸಿಕೊಳ್ಳುವುದು ಯೋಜನೆಯ ಉದ್ದೇಶವಾಗಿದೆ. ಇದಕ್ಕಾಗಿ ಆಯ್ದ ವಾಹನಗಳಲ್ಲಿ ವಿಶೇಷ ಕ್ಯಾಮೆರಾ, ಜಿಪಿಎಸ್ ಹಾಗೂ ಸೆನ್ಸಾರ್‌ಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ.
ವಾಹನಗಳಲ್ಲೇ ಎಐ ಕ್ಯಾಮೆರಾ
ವಾಹನಗಳ ಡ್ಯಾಶ್‌ಬೋರ್ಡ್, ನಗರ ಪಾಲಿಕೆಯ ಕಸ ಸಂಗ್ರಹ ವಾಹನಗಳು ಹಾಗೂ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಎಐ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಜತೆಗೆ ಜಿಪಿಎಸ್ ಮತ್ತು ಆಕ್ಸಿಲರೋಮೀಟರ್ ಸೆನ್ಸಾರ್‌ಗಳನ್ನು ಬಳಸಲಾಗುತ್ತದೆ.
ವಾಹನಗಳು ರಸ್ತೆಗಳಲ್ಲಿ ಸಂಚರಿಸುವಾಗ ಕ್ಯಾಮೆರಾಗಳು ರಸ್ತೆ ಮೇಲ್ಮೈಯ ಚಿತ್ರಗಳನ್ನು ದಾಖಲಿಸಲಿದ್ದು, ಎಐ ವ್ಯವಸ್ಥೆ ರಸ್ತೆಗುಂಡಿಗಳನ್ನು ಗುರುತಿಸಲಿದೆ. ಗುಂಡಿ ಪತ್ತೆಯಾದ ಕೂಡಲೇ ಅದರ ನಿಖರ ಸ್ಥಳವನ್ನು ಜಿಪಿಎಸ್ ಮೂಲಕ ಗುರುತಿಸಲು ಸಾಧ್ಯವಾಗಲಿದೆ.
ಅಧಿಕಾರಿಗಳಿಗೆ ಚಿತ್ರ, ಸ್ಥಳದ ಮಾಹಿತಿ
ರಸ್ತೆಗುಂಡಿ ಪತ್ತೆಯಾದಾಗ ಅದರ ಚಿತ್ರವನ್ನೂ ವ್ಯವಸ್ಥೆ ದಾಖಲಿಸಲಿದೆ. ಗುಂಡಿಯ ಸ್ಥಳ ಹಾಗೂ ಚಿತ್ರದ ವಿವರಗಳನ್ನು ಸಂಬಂಧಪಟ್ಟ ನಗರ ಪಾಲಿಕೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಇ–ಮೇಲ್ ಮೂಲಕ ಕಳುಹಿಸುವ ವ್ಯವಸ್ಥೆ ರೂಪಿಸಲಾಗುತ್ತಿದೆ. ಇದರಿಂದ ರಸ್ತೆಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಿ ಗುಂಡಿಗಳನ್ನು ಗುರುತಿಸುವ ಸಮಯ ಕಡಿಮೆಯಾಗಲಿದ್ದು, ದುರಸ್ತಿ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳಲು ಅನುಕೂಲವಾಗಲಿದೆ.
ಪೂರ್ವ ಬೆಂಗಳೂರಿನಲ್ಲಿ 22 ಸಾವಿರ ಗುಂಡಿ ಪತ್ತೆ
ಪೂರ್ವ ಬೆಂಗಳೂರಿನ ವ್ಯಾಪ್ತಿಯಲ್ಲಿ ಈಗಾಗಲೇ ಎಐ ಆಧಾರಿತ ವ್ಯವಸ್ಥೆಯ ಮೂಲಕ ರಸ್ತೆಗುಂಡಿಗಳ ಪತ್ತೆ ಕಾರ್ಯ ನಡೆಸಲಾಗಿದೆ. ಈ ವೇಳೆ ಸುಮಾರು 22 ಸಾವಿರ ರಸ್ತೆಗುಂಡಿಗಳು ಗುರುತಿಸಲ್ಪಟ್ಟಿವೆ ಎಂದು ವರದಿಯಾಗಿದೆ. ನಗರದ ಇತರ ಭಾಗಗಳಲ್ಲಿಯೂ ರಸ್ತೆಗುಂಡಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದೇ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಿಕೊಳ್ಳಲು ಜಿಬಿಎ ಮುಂದಾಗಿದೆ.
ರಸ್ತೆಗುಂಡಿ ಪತ್ತೆ, ಅದರ ಸ್ಥಳದ ಗುರುತು, ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ರವಾನೆ ಹಾಗೂ ದುರಸ್ತಿ ಕಾರ್ಯದ ಮೇಲ್ವಿಚಾರಣೆ ಸೇರಿದಂತೆ ರಸ್ತೆ ನಿರ್ವಹಣೆಯ ವಿವಿಧ ಹಂತಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಯೋಜನೆಯ ಉದ್ದೇಶವಾಗಿದೆ.

