ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ವಂಚಿತ ಗಾಯತ್ರಿ ಶಾಂತೇಗೌಡ
ಆರಂಭದಲ್ಲಿ ಬಿಡುಗಡೆಯಾದ 20 ಸಚಿವರ ಪಟ್ಟಿಯಲ್ಲಿ ಮಹಿಳಾ ಕೋಟಾದಡಿ ಕಾಂಗ್ರೆಸ್ ಶಾಸಕಿ ಗಾಯತ್ರಿ ಶಾಂತೇಗೌಡ ಅವರ ಹೆಸರು ಸೇರಿತ್ತು. ಆದರೆ ಕೆಲವೇ ಗಂಟೆಗಳಲ್ಲಿ ರಾಜಕೀಯ ಸಮೀಕರಣಗಳು ಬದಲಾಗಿದ್ದು, ಅಂತಿಮ ಪಟ್ಟಿಯಿಂದ ಗಾಯತ್ರಿ ಶಾಂತೇಗೌಡ ಅವರ ಹೆಸರನ್ನು ಕೈಬಿಡಲಾಯಿತು
ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯ ಹಿನ್ನೆಲೆಯಲ್ಲಿ ಅಂತಿಮ ಹಂತದ ನಾಟಕೀಯ ಬೆಳವಣಿಗೆಯೊಂದರಲ್ಲಿ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರ ಹೆಸರನ್ನು ಸಚಿವರ ಪಟ್ಟಿಯಿಂದ ಕೊನೆ ಕ್ಷಣದಲ್ಲಿ ಕೈಬಿಡಲಾಗಿದೆ. ಹೈಕಮಾಂಡ್‌ನಿಂದ ಬಿಡುಗಡೆಯಾಗಿದ್ದ ಮೂಲ ಪಟ್ಟಿಯಲ್ಲಿ ಮಹಿಳಾ ಕೋಟಾದಡಿಯಲ್ಲಿ ಸಚಿವ ಸ್ಥಾನಕ್ಕೆ ಆಯ್ಕೆಯಾಗಿದ್ದ ಅವರಿಗೆ, ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೂ ಕೆಲವೇ ಗಂಟೆಗಳ ಮುನ್ನ ಬಂದ ದೂರವಾಣಿ ಕರೆಯು ತೀವ್ರ ನಿರಾಶೆ ಮೂಡಿಸಿದೆ.
ಸಚಿವ ಪಟ್ಟಿಯಲ್ಲಿ ಹೆಸರಿದ್ದರೂ ಕೊನೆ ಕ್ಷಣದ ಆಘಾತ
ಎಐಸಿಸಿ ಸಿದ್ಧಪಡಿಸಿದ್ದ ನೂತನ ಸಚಿವರ ಪಟ್ಟಿಯಲ್ಲಿ 17ನೇ ಅನುಕ್ರಮ ಸಂಖ್ಯೆಯಲ್ಲಿ ಗಾಯತ್ರಿ ಶಾಂತೇಗೌಡ ಅವರ ಹೆಸರು ಸೇರ್ಪಡೆಯಾಗಿತ್ತು. ಸಚಿವ ಸ್ಥಾನ ಖಚಿತಗೊಂಡ ಬೆನ್ನಲ್ಲೇ ಬೆಂಬಲಿಗರು ಮತ್ತು ಕುಟುಂಬಸ್ಥರಿಂದ ಶುಭಾಶಯಗಳ ಸುರಿಮಳೆಯಾಗಿತ್ತು. ಆದರೆ, ರಾಜಕೀಯ ಸಮೀಕರಣಗಳ ಹಠಾತ್ ಬದಲಾವಣೆಯಿಂದಾಗಿ ಪ್ರಮಾಣ ವಚನ ಸ್ವೀಕಾರಕ್ಕೆ ಸಿದ್ಧರಾಗುತ್ತಿದ್ದ ವೇಳೆ ಹೈಕಮಾಂಡ್‌ನಿಂದ ಕರೆ ಬಂದಿದ್ದು, ಪಟ್ಟಿಯಿಂದ ಹೆಸರು ತೆರವುಗೊಳಿಸಿರುವುದಾಗಿ ತಿಳಿಸಲಾಯಿತು. ಈ ಬೆಳವಣಿಗೆಯ ಬಳಿಕ ಗಾಯತ್ರಿ ಶಾಂತೇಗೌಡ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
'ದ ಫೆಡರಲ್ ಕರ್ನಾಟಕ'ಗೆ ನೀಡಿದ್ದ ಪ್ರತಿಕ್ರಿಯೆ
ಸಚಿವ ಸ್ಥಾನ ಲಭಿಸುವುದು ಖಚಿತ ಎಂಬ ವಿಶ್ವಾಸದಲ್ಲಿದ್ದಾಗ 'ದ ಫೆಡರಲ್ ಕರ್ನಾಟಕ'ದೊಂದಿಗೆ ಮಾತನಾಡಿದ್ದ ಗಾಯತ್ರಿ ಶಾಂತೇಗೌಡ, ತಮಗೆ ಪಕ್ಷ ನೀಡುವ ಯಾವುದೇ ಖಾತೆಯನ್ನು ಸಮರ್ಥವಾಗಿ ನಿಭಾಯಿಸುವುದಾಗಿ ತಿಳಿಸಿದ್ದರು. ಅಲ್ಲದೆ, ಸಂಪುಟದಲ್ಲಿ ಕನಿಷ್ಠ ಮೂವರು ಮಹಿಳೆಯರಿಗೆ ಅವಕಾಶ ನೀಡಿದ್ದರೆ ಉತ್ತಮವಾಗಿರುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದರು. ತಮ್ಮ ರಾಜಕೀಯ ಹೋರಾಟದ ಕುರಿತು ಮಾತನಾಡುತ್ತಾ, ಬಿಜೆಪಿ ಸದಸ್ಯರಾಗಿದ್ದ ಎಂ.ಕೆ. ಪ್ರಾಣೇಶ್ ವಿರುದ್ಧ ಕಾನೂನು ಸಮರ ಸಾರಲು ಸಿದ್ದರಾಮಯ್ಯ ಅವರೇ ಪ್ರೇರೇಪಿಸಿದ್ದರು ಹಾಗೂ ಈ ಹೋರಾಟದಲ್ಲಿ ಗೆಲುವು ಸಾಧಿಸುವುದಾಗಿ ಧೈರ್ಯ ತುಂಬಿದ್ದರು ಎಂದು ಸ್ಮರಿಸಿದ್ದರು.
ಮಹಿಳಾ ಪ್ರಾತಿನಿಧ್ಯದ ಕುರಿತು ಮತ್ತೆ ಚರ್ಚೆ
ಸಂಪುಟ ವಿಸ್ತರಣೆಯ ಕೊನೆಯ ಕ್ಷಣದಲ್ಲಿ ನಡೆದ ರಾಜಕೀಯ ಲೆಕ್ಕಾಚಾರಗಳಿಂದಾಗಿ ಇಬ್ಬರು ನಾಯಕರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಗಾಯತ್ರಿ ಶಾಂತೇಗೌಡ ಅವರ ಹೆಸರು ಹೊರಬಿದ್ದಿರುವುದು ನೂತನ ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯದ ಕೊರತೆಯ ಕುರಿತು ಮತ್ತೊಮ್ಮೆ ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಅಂತಿಮ ಹಂತದ ಈ ಹಠಾತ್ ಬೆಳವಣಿಗೆಯ ಬಳಿಕ ಗಾಯತ್ರಿ ಶಾಂತೇಗೌಡ ಅವರು ಮಾಧ್ಯಮಗಳಿಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

