ಸರ್ಕಾರಿ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು: ವಂದೇ ಮಾತರಂ ಗೀತೆಯ ಆರೂ ಚರಣ ಹಾಡಿಸಿದ ಶಾಸಕ
x

ಸರ್ಕಾರಿ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು: ವಂದೇ ಮಾತರಂ ಗೀತೆಯ ಆರೂ ಚರಣ ಹಾಡಿಸಿದ ಶಾಸಕ

ಸರ್ಕಾರಿ ಕಾರ್ಯಕ್ರಮಗಳು ಹಾಗೂ ಶಾಲಾ ಪ್ರಾರ್ಥನೆಯಲ್ಲಿ ವಂದೇ ಮಾತರಂ ಗೀತೆಯ ಕೇವಲ 2 ಚರಣಗಳನ್ನು ಮಾತ್ರ ಹಾಡುವಂತೆ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿತ್ತು.


ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನಲ್ಲಿ ಆಯೋಜಿಸಿದ್ದ ಪ್ರಜಾಸೇವೆ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಆದೇಶ ಧಿಕ್ಕರಿಸಿ ಶಾಸಕ ಜಿ. ಜನಾರ್ದನ ರೆಡ್ಡಿ ಅವರು 'ವಂದೇ ಮಾತರಂ' ರಾಷ್ಟ್ರಗೀತೆಯನ್ನು ಸಂಪೂರ್ಣ ಹಾಡಿಸಿದ ಪ್ರಸಂಗ ನಡೆದಿದೆ.

ರಾಜ್ಯ ಸರ್ಕಾರ ಇತ್ತೀಚೆಗಷ್ಟೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕು ಎಂದು ಆದೇಶ ಹೊರಡಿಸಿತ್ತು. ಅದರಂತೆ ಕಾರ್ಯಕ್ರಮದ ಆರಂಭದಲ್ಲಿ ಗಾಯಕರು ಮೊದಲ ಎರಡು ಚರಣ ಮಾತ್ರ ಹಾಡಿ ಮುಕ್ತಾಯಗೊಳಿಸಲು ಮುಂದಾಗಿದ್ದರು. ಆದರೆ, ಶಾಸಕ ಜನಾರ್ದನ ರೆಡ್ಡಿ ಅವರು ತಕ್ಷಣ ಮಧ್ಯಪ್ರವೇಶಿಸಿ, ಗೀತೆಯನ್ನು ಸಂಪೂರ್ಣವಾಗಿ ಹಾಡುವಂತೆ ಸೂಚಿಸಿದ್ದಾರೆ.

ಶಾಸಕರ ಈ ಕಟ್ಟುನಿಟ್ಟಿನ ನಿರ್ದೇಶನದ ಬಳಿಕ ಗಾಯಕರು ಮತ್ತು ಸಭಿಕರು ಗೀತೆಯ ಉಳಿದ ಭಾಗಗಳನ್ನು ಸೇರಿಸಿ, ಸಂಪೂರ್ಣ 'ವಂದೇ ಮಾತರಂ' ಹಾಡಿದ್ದಾರೆ. ಒಂದೆಡೆ ರಾಜ್ಯ ಸರ್ಕಾರದ ಅಧಿಕೃತ ಆದೇಶ, ಇನ್ನೊಂದೆಡೆ ಸ್ಥಳೀಯ ಶಾಸಕರ ಸ್ಪಷ್ಟ ಸೂಚನೆ ನಡುವೆ ಸಿಲುಕಿದ ಅಧಿಕಾರಿಗಳು ಏನು ಮಾಡಬೇಕೆಂಬ ಗೊಂದಲಕ್ಕೆ ಒಳಗಾಗಿದ್ದಾರೆ. ಈ ಘಟನೆಯು ಈಗ ಸ್ಥಳೀಯ ಹಾಗೂ ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಗಳ ಪ್ರಕಾರ, ಸರ್ಕಾರಿ ಕಾರ್ಯಕ್ರಮಗಳು, ರಾಷ್ಟ್ರೀಯ ಕಾರ್ಯಕ್ರಮಗಳು ಮತ್ತು ಶಾಲಾ ಪ್ರಾರ್ಥನೆಗಳಲ್ಲಿ ವಂದೇ ಮಾತರಂ ಗೀತೆಯ ಸಂಪೂರ್ಣ 6 ಚರಣಗಳನ್ನು ಹಾಡುವುದು ಕಡ್ಡಾಯಗೊಳಿಸಿದೆ.

ಸಂಪೂರ್ಣ ಗೀತೆಯನ್ನು ಹಾಡಲು ಅಥವಾ ವಾದ್ಯವೃಂದದಲ್ಲಿ ನುಡಿಸಲು ಒಟ್ಟು 3 ನಿಮಿಷ 10 ಸೆಕೆಂಡುಗಳ ಕಾಲಾವಧಿಯನ್ನು ನಿಗದಿಪಡಿಸಲಾಗಿದೆ. ರಾಷ್ಟ್ರಗೀತೆ 'ಜನ ಗಣ ಮನ' ಹಾಡುವಾಗ ನೀಡುವಷ್ಟೇ ಗೌರವವನ್ನು 'ವಂದೇ ಮಾತರಂ'ಗೂ ನೀಡಬೇಕು. ಗೀತೆ ಪ್ರಸಾರವಾಗುವಾಗ ಅಥವಾ ಹಾಡುವಾಗ ಎಲ್ಲರೂ ಎದ್ದುನಿಂತು ಗೌರವ ಸೂಚಿಸುವುದು ಕಡ್ಡಾಯ ಎಂದು ಹೇಳಿತ್ತು.

ಆದರೆ, ರಾಜ್ಯ ಸರ್ಕಾರ ಕೇಂದ್ರದ ಮಾರ್ಗಸೂಚಿಗೆ ವಿರೋಧ ವ್ಯಕ್ತಪಡಿಸಿ ರಾಜ್ಯದಲ್ಲಿ ನಡೆಯುವ ಅಧಿಕೃತ ಸರ್ಕಾರಿ ಕಾರ್ಯಕ್ರಮಗಳಲ್ಲಿ ಕೇವಲ ಎರಡು ಚರಣಗಳನ್ನೇ ಹಾಡಬೇಕು. ಸಾಂವಿಧಾನಿಕ ಹುದ್ದೆಯಲ್ಲಿರುವ ಗಣ್ಯರಾದ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಿ ಹಾಗೂ ರಾಜ್ಯಪಾಲರ ಕಾರ್ಯಕ್ರಮಗಳಲ್ಲಿ ಮಾತ್ರ ಆರು ಚರಣಗಳನ್ನು ಹಾಡಬೇಕು ಎಂದು ಆದೇಶ ಹೊರಡಿಸಿತ್ತು. ಕರ್ನಾಟಕದ ಸರ್ಕಾರದ ಈ ಕ್ರಮಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ.

Read More
Next Story