ಹೆಗ್ಗೋಡಿನ ‘ಚರಕʼದಲ್ಲಿ ಸೆ. 26, 27ರಂದು ‘ಗಾಂಧಿ ಸಂತೆʼ, ಕೊಡು-ಕೊಳ್ಳುವವರ ಸಮಾವೇಶ
x

ಹೆಗ್ಗೋಡಿನ ‘ಚರಕʼದಲ್ಲಿ ಸೆ. 26, 27ರಂದು ‘ಗಾಂಧಿ ಸಂತೆʼ, ಕೊಡು-ಕೊಳ್ಳುವವರ ಸಮಾವೇಶ

2025-26ನೇ ಹಣಕಾಸು ವರ್ಷದಲ್ಲಿ ಚರಕ ಸಂಸ್ಥೆಯು 9.66 ಕೋಟಿ ವಹಿವಾಟು ನಡೆಸಿದ್ದು, ಕಾರ್ಮಿಕರು ಹಾಗೂ ಕುಶಲಕರ್ಮಿಗಳಿಗೆ 30 ಲಕ್ಷಕ್ಕೂ ಅಧಿಕ ಬೋನಸ್, ಭತ್ಯೆ, ಆರೋಗ್ಯ ರಕ್ಷಣೆ ಹಾಗೂ ಉಚಿತ ಊಟದ ಸೌಲಭ್ಯ ಒದಗಿಸಿದೆ.


ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡಿನಲ್ಲಿರುವ 'ಚರಕ' ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದ ಶ್ರಮಜೀವಿ ಆಶ್ರಮದಲ್ಲಿ ಸೆ.26 ಮತ್ತು 27ರಂದು "ಗಾಂಧಿ ಸಂತೆ" ಹಾಗೂ "ಕೊಡು-ಕೊಳ್ಳುವವರ ಸಮಾವೇಶ" ನಡೆಯಲಿದೆ.

‘ಗಾಂಧಿ ಪ್ರವಾಸʼ ಸುಸ್ಥಿರ ಪ್ರವಾಸೋದ್ಯಮ ಪರಿಕಲ್ಪನೆಯಡಿ ಚರಕ ನೇಕಾರರ ಸಂಘ, ಭೀಮನಕೋಣೆ ಕವಿ-ಕಾವ್ಯ ಟ್ರಸ್ಟ್, ದೇಸಿ ಟ್ರಸ್ಟ್, ಜೀವನಮುಖಿ ಸಾಗರ ಹಾಗೂ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಜಂಟಿ ಸಹಯೋಗದೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಚರಕ ಸಂಸ್ಥೆಯ ಸಂಸ್ಥಾಪಕ ಹಾಗೂ ಖ್ಯಾತ ರಂಗಕರ್ಮಿ ಪ್ರಸನ್ನ ಅವರು ಗುರುವಾರ ಹೆಗ್ಗೋಡಿನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಕಾರ್ಯಕ್ರಮದ ರೂಪುರೇಷೆಗಳನ್ನು ಹಂಚಿಕೊಂಡರು.

"ಗ್ರಾಮೋದ್ಯೋಗವು ಕೇವಲ ಗಾಂಧಿವಾದಿ ಆದರ್ಶದ ಪರಂಪರೆಯಾಗಿ ಉಳಿಯಬಾರದು, ಬದಲಿಗೆ ಅದೊಂದು ಶ್ರಮಜೀವಿಗಳಿಗೆ ಆಸರೆಯಾಗಬಲ್ಲ ಲಾಭದಾಯಕ ಹಾಗೂ ಸ್ವಾವಲಂಬಿ ಉದ್ಯಮವೂ ಹೌದು ಎಂಬುದನ್ನು ತೋರಿಸಿಕೊಡಲು ಈ ಸಂತೆಯನ್ನು ನಮ್ಮ ಉತ್ಪಾದನಾ ಕೇಂದ್ರದಲ್ಲೇ ನಡೆಸಲಾಗುತ್ತಿದೆ" ಎಂದು ತಿಳಿಸಿದ್ದಾರೆ.

ಕೈಮಗ್ಗ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮದಿಂದ ಸಂಸ್ಥೆಗೆ ಪ್ರಸಕ್ತ ಸಾಲಿನ "ದೇಶದ ಅತ್ಯುತ್ತಮ ಕೈಮಗ್ಗ ಬ್ರ್ಯಾಂಡ್" ಪ್ರಶಸ್ತಿ ಲಭಿಸಿದೆ. ಆರಂಭಿಕ ಕೆಲ ವರ್ಷಗಳು ಹಾಗೂ ಕೋವಿಡ್ ಸಾಂಕ್ರಾಮಿಕದ ಅವಧಿ ಹೊರತುಪಡಿಸಿ, ನಾಲ್ಕು ದಶಕಗಳ ಪಯಣದಲ್ಲಿ ಸಂಸ್ಥೆಯು ನಿರಂತರ ಲಾಭದಲ್ಲಿದೆ. 2025-26ನೇ ಸಾಲಿನಲ್ಲಿ ಸಂಸ್ಥೆಯು 9.66 ಕೋಟಿಗೂ ಅಧಿಕ ವಾರ್ಷಿಕ ವಹಿವಾಟು ನಡೆಸಿದೆ. ಕೇವಲ 2 ಚರಕಗಳಿಂದ ಆರಂಭಗೊಂಡ ಈ ಸಂಸ್ಥೆಯಲ್ಲಿ ಇಂದು 800ಕ್ಕೂ ಹೆಚ್ಚು ಕುಶಲಕರ್ಮಿಗಳು ಹಾಗೂ 300ಕ್ಕೂ ಹೆಚ್ಚು ಸ್ಥಳೀಯ ಮಹಿಳೆಯರು ಉದ್ಯೋಗ ಕಂಡುಕೊಂಡಿದ್ದಾರೆ ಎಂದು ವಿವರಿಸಿದ್ದಾರೆ.

“ಕೋಟಿಗಟ್ಟಲೇ ಹಣ ಖರ್ಚು ಮಾಡುವ ಜಾಹೀರಾತಿಗಿಂತ ಗ್ರಾಹಕರ ನಂಬಿಕೆಯೇ ನಮ್ಮ ಶಕ್ತಿ. ಗ್ರಾಹಕರಾಗಿ ಬನ್ನಿ, ಸಂಸ್ಥೆಯ ರಾಯಭಾರಿಯಾಗಿ ಹೊರಹೊಮ್ಮಿ ಎನ್ನುವುದೇ ನಮ್ಮ ತತ್ತ್ವ. ಗ್ರಾಮೀಣ ಶ್ರಮ ಮತ್ತು ಬಂಡವಾಳವು ಹಳ್ಳಿಯಲ್ಲೇ ಉಳಿದು ಸ್ವಾವಲಂಬಿ ಅರ್ಥವ್ಯವಸ್ಥೆ ಕಟ್ಟಲು ಚರಕವೇ ಜೀವಂತ ಉದಾಹರಣೆಯಾಗಿದೆ ಎಂದಿದ್ದಾರೆ.

ಗ್ರಾಮೀಣ ಕೆಲಸಗಾರರಿಗೆ ಆದ್ಯತೆ

ಚರಕ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟೆರೆನ್ಸ್ ಪೀಟರ್ ಮಾತನಾಡಿ, 1994ರಲ್ಲಿ ಆರಂಭವಾದ ಚರಕ ಸಂಸ್ಥೆಯು ಕೇವಲ ಲಾಭ ಗಳಿಕೆಯನ್ನಷ್ಟೇ ಮುಖ್ಯವಾಗಿಸಿಕೊಳ್ಳದೇ ಗ್ರಾಮೀಣ ಜನರ ಬದುಕಿಗೆ ಭದ್ರತೆ ನೀಡುವುದನ್ನೇ ಪ್ರಮುಖ ಗುರಿಯಾಗಿಸಿಕೊಂಡಿದೆ. 2025-26ನೇ ಹಣಕಾಸು ವರ್ಷದಲ್ಲಿ ಸಂಸ್ಥೆಯು 9.66 ಕೋಟಿ ವಹಿವಾಟು ನಡೆಸಿದ್ದು, ಕಾರ್ಮಿಕರು ಹಾಗೂ ಕುಶಲಕರ್ಮಿಗಳಿಗೆ 30 ಲಕ್ಷಕ್ಕೂ ಅಧಿಕ ಬೋನಸ್, ಭತ್ಯೆ, ಆರೋಗ್ಯ ರಕ್ಷಣೆ ಹಾಗೂ ಉಚಿತ ಊಟದ ಸೌಲಭ್ಯ ವಿತರಿಸಿದ ನಂತರವೂ 5.19 ಲಕ್ಷ ರೂ. ನಿವ್ವಳ ಲಾಭ ದಾಖಲಿಸಿದೆ ಎಂದು ಹೇಳಿದ್ದಾರೆ.

ಲಾಭಾಂಶವನ್ನು ಶ್ರಮಜೀವಿಗಳಿಗೇ ಮರಳಿ ಹಂಚುವುದು ನಮ್ಮ ಧೋರಣೆ. ಎಲ್ಲಿ ಕೌಶಲ್ಯವಿದೆಯೋ ಅಲ್ಲಿಯ ಕೈಗಳಿಗೆ ಕೆಲಸ ಕೊಡು ಎಂಬ ತತ್ತ್ವದಡಿ, ಏಳೆಂಟು ಜಿಲ್ಲೆಗಳಲ್ಲಿ ಹರಡಿರುವ ಕುಶಲಕರ್ಮಿಗಳಿಗೆ ಅವರವರ ಕೌಶಲ್ಯಕ್ಕೆ ಅನುಗುಣವಾಗಿ ಕೆಲಸ ಹಂಚಿಕೆ ಮಾಡಿದ್ದೇವೆ. ಉತ್ತರ ಕರ್ನಾಟಕದ ನೇಕಾರರು, ಬಡ ರೈತರು, ಮಹಿಳೆಯರಿಗೆ ಸೂಕ್ತ ಅವಕಾಶ ನೀಡಿ ವಿಕೇಂದ್ರೀಕೃತ ಮಾದರಿಯನ್ನು ಯಶಸ್ವಿಗೊಳಿಸಿದ್ದೇವೆ ಎಂದು ಟೆರೆನ್ಸ್ ಪೀಟರ್ ವಿವರಿಸಿದ್ದಾರೆ.

ಸೆ.26 ರಂದು ಉದ್ಘಾಟನಾ ಕಾರ್ಯಕ್ರಮದಲ್ಲಿ ಗಾಂಧಿ ಸಂತೆಗೆ ಸಂಸದ ಬಿ. ವೈ. ರಾಘವೇಂದ್ರ ಅವರು ಚಾಲನೆ ನೀಡಲಿದ್ದಾರೆ. ಮಾಜಿ ಸಚಿವ ಹೆಚ್. ಕೆ. ಪಾಟೀಲ ಅವರು ವಸ್ತುಸಂಗ್ರಹಾಲಯ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಕೊಡು-ಕೊಳ್ಳುವವರ ಸಮಾವೇಶವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಲಿದ್ದು,ಚರಕ ಹಾಗೂ ಭೀಮನಕೋಣೆ ಟ್ರಸ್ಟ್ ಅಧ್ಯಕ್ಷರಾದ ಮಹಾಲಕ್ಷ್ಮಿ, ಸಾಗರ ತಹಶೀಲ್ದಾರ್ ಡಾ. ಆರ್. ಪ್ರತಿಭಾ ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Read More
Next Story