ಓಬಳಾಪುರಂ ಮೈನಿಂಗ್ ಅಕ್ರಮಕ್ಕೆ ಮರುಜೀವ; ಶಾಸಕ ಜನಾರ್ದನ ರೆಡ್ಡಿಗೆ ಮತ್ತೆ ಸಂಕಷ್ಟ
x

ಓಬಳಾಪುರಂ ಮೈನಿಂಗ್ ಅಕ್ರಮಕ್ಕೆ ಮರುಜೀವ; ಶಾಸಕ ಜನಾರ್ದನ ರೆಡ್ಡಿಗೆ ಮತ್ತೆ ಸಂಕಷ್ಟ

ಕೆಲ ತಿಂಗಳ ಹಿಂದಷ್ಟೇ ನಿವೃತ್ತ ನ್ಯಾಯಮೂರ್ತಿ ಸುಧಾಂಶು ಧುಲಿಯಾ ನೇತೃತ್ವದ ಉನ್ನತ ಮಟ್ಟದ ಅಧಿಕಾರಿಗಳ ತಂಡವು ಆಂಧ್ರದ ರಾಯದುರ್ಗ ತಾಲೂಕಿನ ಮಲಪನಗುಡಿ ಗ್ರಾಮಕ್ಕೆ ಭೇಟಿ ನೀಡಿತ್ತು. ಆಧುನಿಕ ಡ್ರೋನ್ ತಂತ್ರಜ್ಞಾನದ ಮೂಲಕ ಗಡಿ ಸರ್ವೇ ನಡೆಸಿತ್ತು.


ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್ ಕಂಪನಿ ವಿರುದ್ಧದ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಈಗ ಮರು ಜೀವ ಬಂದಿದೆ. ಒಎಂಸಿ ಅಕ್ರಮಗಳ ಕುರಿತು ಸಮಗ್ರ ವರದಿ ನೀಡುವಂತೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು ರಾಜ್ಯ ಅರಣ್ಯ ಇಲಾಖೆಗೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಅವರಿಗೆ ಕಾನೂನು ಸಂಕಷ್ಟದ ಭೀತಿ ಎದುರಾಗಿದೆ.

ಕೇಂದ್ರ ಸರ್ಕಾರದ ಈ ದಿಢೀರ್ ಕ್ರಮದಿಂದ ಗಣಿ ವಲಯದಲ್ಲಿ ತಲ್ಲಣ ಸೃಷ್ಟಿಯಾಗಿದೆ. ಕೆಲ ತಿಂಗಳ ಹಿಂದಷ್ಟೇ ನಿವೃತ್ತ ನ್ಯಾಯಮೂರ್ತಿ ಸುಧಾಂಶು ಧುಲಿಯಾ ನೇತೃತ್ವದ ಉನ್ನತ ಮಟ್ಟದ ಅಧಿಕಾರಿಗಳ ತಂಡವು ಆಂಧ್ರಪ್ರದೇಶದ ರಾಯದುರ್ಗ ತಾಲೂಕಿನ ಮಲಪನಗುಡಿ ಗ್ರಾಮಕ್ಕೆ ಭೇಟಿ ನೀಡಿತ್ತು. ಆಧುನಿಕ ಡ್ರೋನ್ ತಂತ್ರಜ್ಞಾನದ ಮೂಲಕ ಗಡಿ ಭಾಗದಲ್ಲಿ ಸರ್ವೇ ನಡೆಸಿತ್ತು.

ಅಂತರಗಂಗಮ್ಮ ಹೆಸರಿನಲ್ಲಿ 68.50 ಹೆಕ್ಟೇರ್‌, ಸಿದ್ಧಾಪುರದಲ್ಲಿನ ಬಿಐಒಸಿ ಕಂಪನಿ ಹೆಸರಲ್ಲಿ 27.12 ಹೆಕ್ಟೇರ್‌, ವೈ.ಮಹಾಬಲೇಶ್ವರಪ್ಪ ಸನ್ಸ್‌ ಹೆಸರಿನಲ್ಲಿ 20.24 ಹೆಕ್ಟೇರ್‌, ಓಬಳಾಪುರಂ ಗ್ರಾಮದಲ್ಲಿನ ಒಎಂಸಿ ಹೆಸರಿನಲ್ಲಿ 25.98 ಹೆಕ್ಟೇರ್‌, ಒಎಂಪಿ 2 ಹೆಸರಿನಲ್ಲಿರುವ 39.50 ಹೆಕ್ಟೇರ್ ಪ್ರದೇಶಗಳಲ್ಲಿ ಗಣಿ ಗುತ್ತಿಗೆ ಸಂಬಂಧ ಎರಡು ಹಂತಗಳಲ್ಲಿ ಸರ್ವೇ ಮಾಡಿತ್ತು. ಇದರಲ್ಲಿ ಜನಾರ್ದನ ರೆಡ್ಡಿ ಒಡೆತನದ ಒಎಂಸಿ ಕಂಪನಿಯ 39.50 ಹೆಕ್ಟೇರ್‌, ಅಂತರಗಂಗಮ್ಮ ಹೆಸರಿನಲ್ಲಿರುವ 68.50 ಹೆಕ್ಟೇರ್‌ ಪ್ರದೇಶವು ಗಣಿಗುತ್ತಿಗೆ ಮತ್ತು ಗಡಿಗಳು ಹೊಂದಾಣಿಕೆ ಆಗುತ್ತಿರಲಿಲ್ಲ. ಹೀಗಾಗಿ ಈ ಕಂಪನಿಗಳು ಕರ್ನಾಟಕ ರಾಜ್ಯದಲ್ಲಿ ಅತಿಕ್ರಮಣ ಮಾಡಿವೆ ಎಂದು ವರದಿ ನೀಡಿತ್ತು.

ಇದೇ ವರದಿಯನ್ನು ದೂರುದಾರ ಟಪಾಲ್‌ ಗಣೇಶ್‌ ಅವರು ಕೇಂದ್ರ ಪರಿಸರ ಸಚಿವಾಲಯಕ್ಕೆ ಸಲ್ಲಿಸಿದ್ದರು ಎಂದು ತಿಳಿದುಬಂದಿದೆ. ಈ ಹಿಂದೆ ಕರ್ನಾಟಕ ಮತ್ತು ಆಂಧ್ರಪ್ರದೇಶದ ನಡುವಿನ ಗಡಿ ನಾಶಪಡಿಸಿದ ಆರೋಪ ಒಎಂಸಿ ಮೇಲಿತ್ತು. ಮೀಸಲು ಅರಣ್ಯ ಪ್ರದೇಶಗಳಾದ ವಿಠಲಾಪುರ ಹಾಗೂ ತುಮಟಿ ಸೇರಿ ವಿವಿಧ ಸೂಕ್ಷ್ಮ ವಲಯಗಳಲ್ಲಿ ನಿಯಮ ಬಾಹಿರವಾಗಿ 28.90 ಲಕ್ಷ ಟನ್ ಅದಿರು ಹಗಲು ದರೋಡೆ ಮಾಡಿದ ಆರೋಪ ಸಾಬೀತಾಗಿತ್ತು. ಸಿಬಿಐ ನ್ಯಾಯಾಲಯವು ಇದೇ ಪ್ರಕರಣಕ್ಕೆ ಸಂಬಂಧಿಸಿ ಜನಾರ್ದನ ರೆಡ್ಡಿ ಅವರಿಗೆ ಶಿಕ್ಷೆ ವಿಧಿಸಿತ್ತು.

ಈಗ ಕೇಂದ್ರ ಪರಿಸರ ಸಚಿವಾಲಯದ ಸೂಚನೆಯಂತೆ ರಾಜ್ಯ ಅರಣ್ಯ ಇಲಾಖೆ ಒಎಂಸಿ ಅಕ್ರಮಗಳ ಇಂಚಿಂಚೂ ಮಾಹಿತಿ ಕಲೆ ಹಾಕಲು ಆರಂಭಿಸಿದೆ. ಒಂದು ವೇಳೆ ರಾಜ್ಯ ಸರ್ಕಾರ ನಿಖರ ವರದಿ ಸಲ್ಲಿಸಿದರೆ, ಸುಪ್ರೀಂಕೋರ್ಟ್ ಹಾಗೂ ಸಿಬಿಐ ನ್ಯಾಯಾಲಯದಲ್ಲಿ ಜನಾರ್ದನ ರೆಡ್ಡಿ ಅವರಿಗೆ ನೀಡಿರುವ ಜಾಮೀನಿನ ಮೇಲೆ ನೇರ ಪರಿಣಾಮ ಬೀರಲಿದೆ.

Read More
Next Story