
ಮುಂಡರಗಿಯ ಶಾಲೆಯ ಬಿಸಿಯೂಟದಲ್ಲಿ ಹಲ್ಲಿ, 100ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ
ಅಸ್ವಸ್ಥಗೊಂಡ ಮಕ್ಕಳನ್ನು ಕೂಡಲೇ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸಕಾಲದಲ್ಲಿ ಚಿಕಿತ್ಸೆ ದೊರೆತಿದ್ದರಿಂದ ಯಾವುದೇ ಮಗು ಗಂಭೀರ ಸ್ಥಿತಿಗೆ ತಲುಪಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬೀಡನಾಳ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಳವಳಕಾರಿ ಘಟನೆಯೊಂದು ಇಡೀ ರಾಜ್ಯದ ಗಮನ ಸೆಳೆದಿದೆ. ಶಾಲೆಯಲ್ಲಿ ಮಕ್ಕಳಿಗೆ ನೀಡಲಾದ ಬಿಸಿಯೂಟದ ಪಾತ್ರೆಯಲ್ಲಿ ಸತ್ತ ಹಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ, ಅದನ್ನು ಸೇವಿಸಿದ ನೂರಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ.
ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಅಡುಗೆಯವರು ಸಿದ್ಧಪಡಿಸಿದ ಉಪ್ಪಿಟ್ಟನ್ನು ಮಕ್ಕಳಿಗೆ ಬಡಿಸಲಾಯಿತು. ಹಸಿವಿನಲ್ಲಿದ್ದ ಮಕ್ಕಳು ಉಪ್ಪಿಟ್ಟು ತಿನ್ನಲು ಪ್ರಾರಂಭಿಸಿದಾಗ, ಕೆಲವರಿಗೆ ತಮ್ಮ ತಟ್ಟೆಯಲ್ಲಿ ಹಲ್ಲಿಯ ಭಾಗಗಳು ಇರುವುದು ಕಂಡುಬಂದಿದೆ. ತಕ್ಷಣವೇ ಈ ವಿಷಯವು ಇಡೀ ಶಾಲೆಗೆ ಹರಡಿತು. ಬಿಸಿಐೂಟ ಸೇವಿಸಿದ ನೂರಕ್ಕೂ ಹೆಚ್ಚು ಮಕ್ಕಳು ಭಯಭೀತರಾದರು. ಕೆಲ ಮಕ್ಕಳಿಗೆ ತಕ್ಷಣವೇ ವಾಂತಿ ಮತ್ತು ತಲೆಸುತ್ತಿನ ಲಕ್ಷಣಗಳು ಕಾಣಿಸಿಕೊಂಡವು.
ತಕ್ಷಣದ ಸ್ಪಂದನೆ ಮತ್ತು ಚಿಕಿತ್ಸೆ
ಶಾಲೆಯ ಶಿಕ್ಷಕರು ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಯ ಸದಸ್ಯರು ಕೂಡಲೇ ಎಚ್ಚೆತ್ತುಕೊಂಡರು. ಆತಂಕದಲ್ಲಿದ್ದ ಮಕ್ಕಳನ್ನು ಕೂಡಲೇ ಮುಂಡರಗಿ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಯಿತು. ನೂರಕ್ಕೂ ಹೆಚ್ಚು ಮಕ್ಕಳನ್ನು ಒಂದೇ ಬಾರಿ ಆಸ್ಪತ್ರೆಗೆ ಕರೆತಂದಾಗ ಅಲ್ಲಿನ ವೈದ್ಯಕೀಯ ಸಿಬ್ಬಂದಿ ತುರ್ತು ಚಿಕಿತ್ಸೆಯನ್ನು ಆರಂಭಿಸಿದರು. ಅದೃಷ್ಟವಶಾತ್, ಸಕಾಲದಲ್ಲಿ ಚಿಕಿತ್ಸೆ ದೊರೆತಿದ್ದರಿಂದ ಯಾವುದೇ ಮಗು ಗಂಭೀರ ಸ್ಥಿತಿಗೆ ತಲುಪಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಆದರೂ, ಮಕ್ಕಳನ್ನು ನಿಗಾದಲ್ಲಿ ಇರಿಸಲಾಗಿತ್ತು. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಬೀಡನಾಳ ಗ್ರಾಮದ ಪೋಷಕರು ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಚಿಂತಿತರಾಗಿ ಆಸ್ಪತ್ರೆಗೆ ಧಾವಿಸಿದರು. ಆಸ್ಪತ್ರೆಯ ಆವರಣದಲ್ಲಿ ಪೋಷಕರ ಆಕ್ರಂದನ ಮತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. "ನಮ್ಮ ಮಕ್ಕಳ ಜೀವಕ್ಕೆ ಇಷ್ಟೊಂದು ನಿರ್ಲಕ್ಷ್ಯವೇ?" ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಯೊಬ್ಬ ಪೋಷಕರೂ ತಮ್ಮ ಮಗುವನ್ನು ವೈದ್ಯರು ತಪಾಸಣೆ ಮಾಡುತ್ತಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳುತ್ತಿದ್ದರು.
ಅಧಿಕಾರಿಗಳ ಭೇಟಿ ಮತ್ತು ತನಿಖೆ
ವಿಷಯ ತಿಳಿದ ತಕ್ಷಣ ತಾಲೂಕು ಶಿಕ್ಷಣಾಧಿಕಾರಿಗಳು, ಸಿಪಿಐ ಮತ್ತು ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಶಾಲೆಯ ಅಡುಗೆ ಮನೆಯ ಸ್ಥಿತಿಗತಿ, ಆಹಾರ ಪದಾರ್ಥಗಳನ್ನು ಸಂಗ್ರಹಿಸುವ ವಿಧಾನ ಮತ್ತು ಅಡುಗೆಯ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿದರು. ಬಿಸಿಯೂಟ ತಯಾರಿಸುವ ಸಿಬ್ಬಂದಿ ಎಲ್ಲಿ ಎಡವಿದರು? ಹಲ್ಲಿ ಪಾತ್ರೆಗೆ ಹೇಗೆ ಬಿತ್ತು? ಎಂಬ ಬಗ್ಗೆ ಕೂಲಂಕಷ ತನಿಖೆ ನಡೆಸಲಾಗುತ್ತಿದೆ. ಈ ಘಟನೆಯು ಸರ್ಕಾರಿ ಶಾಲೆಗಳಲ್ಲಿನ ಬಿಸಿಯೂಟ ಯೋಜನೆಗೆ ಸಂಬಂಧಿಸಿದ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಬಿಸಿಯೂಟ ತಯಾರಿಸುವ ಅಡುಗೆ ಮನೆಗಳು ಎಷ್ಟು ಸುರಕ್ಷಿತವಾಗಿವೆ? ಅಲ್ಲಿನ ಕಿಟಕಿಗಳಿಗೆ ಜಾಲರಿ ಅಳವಡಿಸಲಾಗಿದೆಯೇ? ಪ್ರತಿ ದಿನವೂ ಅಡುಗೆ ಮಾಡುವಾಗ ಶಾಲೆಯ ಶಿಕ್ಷಕರು ಅಥವಾ ಎಸ್‌ಡಿಎಂಸಿ ಸದಸ್ಯರು ಮೇಲ್ವಿಚಾರಣೆ ನಡೆಸುವುದಿಲ್ಲವೇ? ಆಹಾರ ಪದಾರ್ಥಗಳು ಕೀಟಗಳಿಂದ ಮುಕ್ತವಾಗಿವೆಯೇ ಎಂಬುದನ್ನು ಯಾರೂ ಪರೀಕ್ಷಿಸುವುದಿಲ್ಲವೇ? ಎಂಬ ಪ್ರಶ್ನೆಗಳು ಉದ್ಭವಿಸಿವೆ.
ಮಕ್ಕಳ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿರುವ ಅಡುಗೆ ಸಿಬ್ಬಂದಿ ಹಾಗೂ ಇದಕ್ಕೆ ಹೊಣೆಗಾರರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಶಾಲಾ ಆಡಳಿತ ಮಂಡಳಿಯು ಅಡುಗೆ ಮನೆಯ ಶುಚಿತ್ವದ ಬಗ್ಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಬೇಕಿದೆ ಎಂದು ಆಗ್ರಹಿಸಲಾಗಿದೆ.

