ದ್ವೇಷ ಭಾಷಣ ಮಸೂದೆ ನೆನೆಗುದಿಗೆ ಬೀಳಿಸಲು ರಾಷ್ಟ್ರಪತಿಗೆ ರವಾನೆ: ರಾಜ್ಯಪಾಲರ ವಿರುದ್ಧ ಗೃಹ ಸಚಿವರ ಆರೋಪ
x

ಜಿ. ಪರಮೇಶ್ವರ್‌ 

ದ್ವೇಷ ಭಾಷಣ ಮಸೂದೆ ನೆನೆಗುದಿಗೆ ಬೀಳಿಸಲು ರಾಷ್ಟ್ರಪತಿಗೆ ರವಾನೆ: ರಾಜ್ಯಪಾಲರ ವಿರುದ್ಧ ಗೃಹ ಸಚಿವರ ಆರೋಪ

ರಾಜ್ಯ ಸರ್ಕಾರ ತಂದಿದ್ದ 'ದ್ವೇಷ ಭಾಷಣ ಮಸೂದೆ'ಯನ್ನು ರಾಜ್ಯಪಾಲರು ರಾಷ್ಟ್ರಪತಿಗಳಿಗೆ ರವಾನಿಸಿರುವುದನ್ನು ಪರಮೇಶ್ವರ ಟೀಕಿಸಿದ್ದಾರೆ.


Click the Play button to hear this message in audio format

ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ 'ದ್ವೇಷ ಭಾಷಣ ಮಸೂದೆ'ಯನ್ನು ರಾಜ್ಯಪಾಲರು ರಾಷ್ಟ್ರಪತಿಗಳ ಅಂಗಳಕ್ಕೆ ರವಾನಿಸಿದ್ದು, ಮಸೂದೆಯನ್ನು ನೆನೆಗುದಿಗೆ ಬೀಳಿಸುವ ಉದ್ದೇಶದಿಂದಲೇ ಹೀಗೆ ಮಾಡಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಸೂದೆಗೆ ಸಂಬಂಧಿಸಿದಂತೆ ರಾಜ್ಯಪಾಲರ ನಡೆ ಮತ್ತು ಕೇಂದ್ರದ ಬಜೆಟ್ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಮಸೂದೆ ಜಾರಿಯಾಗಬಾರದು ಎಂಬ ಉದ್ದೇಶ:

"ದ್ವೇಷ ಭಾಷಣ ಮಸೂದೆಯಲ್ಲಿನ 28 ಅಂಶಗಳನ್ನು ರಾಜ್ಯಪಾಲರು ಪ್ರಶ್ನಿಸಿ, ಅದನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿದ್ದಾರೆ. ಮಸೂದೆ ಜಾರಿಯಾಗಬಾರದು ಮತ್ತು ಅದು ನೆನೆಗುದಿಗೆ ಬೀಳಬೇಕು ಎಂಬ ಉದ್ದೇಶದಿಂದಲೇ ರಾಜ್ಯಪಾಲರು ಹೀಗೆ ಮಾಡಿದ್ದಾರೆ," ಎಂದು ಪರಮೇಶ್ವರ ಅಭಿಪ್ರಾಯಪಟ್ಟರು.

"ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಏನು ಬೇಕಾದರೂ ಮಾತನಾಡಲು ಸಾಧ್ಯವಿಲ್ಲ. ಸಮುದಾಯಗಳನ್ನು ದೂಷಿಸುವುದು ಮತ್ತು ವೈಯಕ್ತಿಕ ನಿಂದನೆಗಳು ಸಮಾಜದಲ್ಲಿ ಅಶಾಂತಿ ಉಂಟುಮಾಡುತ್ತವೆ. ಕೆಲವು ಭಾಷಣಗಳು ಸಮಾಜದ ಮೇಲೆ ಬೀರುವ ಪರಿಣಾಮಗಳನ್ನು ಗಮನಿಸಿಯೇ ಅದಕ್ಕೆ ಕಡಿವಾಣ ಹಾಕಲು ಈ ಬಿಲ್ ತಂದಿದ್ದೇವೆ. ರಾಷ್ಟ್ರಪತಿಗಳು ಇದನ್ನು ಪರಿಶೀಲಿಸಿ ವಾಪಸ್ ಕಳುಹಿಸಿದರೆ, ಅಗತ್ಯ ಬದಲಾವಣೆಗಳನ್ನು ಮಾಡಿ ಮತ್ತೆ ಕಳುಹಿಸಲಾಗುವುದು," ಎಂದು ಅವರು ಸ್ಪಷ್ಟಪಡಿಸಿದರು.

ಇದು ಅತ್ಯಂತ ದುರ್ಬಲ ಬಜೆಟ್:

ನಿರ್ಮಲಾ ಸೀತಾರಾಮನ್ ಮಂಡಿಸಿದ 9ನೇ ಬಜೆಟ್ ಇದಾಗಿದ್ದು, ಹಿಂದಿನ ಎಲ್ಲ ಬಜೆಟ್‌ಗಳಿಗಿಂತಲೂ ಇದು 'ಅತ್ಯಂತ ದುರ್ಬಲ' ಎಂದು ಗೃಹ ಸಚಿವರು ಟೀಕಿಸಿದರು.

"ಒಟ್ಟು 53.50 ಲಕ್ಷ ಕೋಟಿ ರೂ. ಗಾತ್ರದ ಬಜೆಟ್‌ನಲ್ಲಿ 16 ಲಕ್ಷ ಕೋಟಿ ರೂ. ಸಾಲವನ್ನೇ ಮಾಡಲಾಗಿದೆ. ಇಷ್ಟೊಂದು ಸಾಲ ಮಾಡಿಕೊಂಡೂ ವಿಧಾನಸಭೆಯಲ್ಲಿ ನಮಗೆ ನೀತಿಪಾಠ ಹೇಳುತ್ತಾರೆ. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ತಂದ ಉದ್ಯೋಗ ಖಾತ್ರಿ ಯೋಜನೆಯಂತಹ ಜನಪರ ಕಾರ್ಯಕ್ರಮಗಳು ಇಲ್ಲಿ ಮಾಯವಾಗಿವೆ. ಕೃಷಿ, ನೀರಾವರಿ ಮತ್ತು ಮೂಲಸೌಕರ್ಯಕ್ಕೆ ಒತ್ತು ನೀಡದ ಇದನ್ನು ಬಜೆಟ್ ಎಂದು ಕರೆಯಬೇಕೇ?" ಎಂದು ಪ್ರಶ್ನಿಸಿದರು.

ಕರ್ನಾಟಕಕ್ಕೆ ಐಐಟಿ, ಏಮ್ಸ್‌ನಂತಹ ಸಂಸ್ಥೆಗಳು ಸಿಗುವ ನಿರೀಕ್ಷೆಯಿತ್ತು, ಆದರೆ ರಾಜ್ಯಕ್ಕೆ ಏನನ್ನೂ ನೀಡಿಲ್ಲ. ಕೇವಲ ಪ್ಲಾಸ್ಟಿಕ್ ಮತ್ತು ಬೆಂಕಿಪೆಟ್ಟಣದ ಬೆಲೆ ಕಡಿಮೆ ಮಾಡಿ, ಶಿಕ್ಷಣ ಕ್ಷೇತ್ರವನ್ನೇ ಹಿಂದಕ್ಕೆ ತಳ್ಳಲಾಗಿದೆ ಎಂದು ಅವರು ಲೇವಡಿ ಮಾಡಿದರು.

ಸಿ.ಜೆ. ರಾಯ್ ಪ್ರಕರಣಕ್ಕೆ ಎಸ್‌ಐಟಿ:

ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಊಹಾಪೋಹಗಳಿಗೆ ಅವಕಾಶ ನೀಡಬಾರದು ಎಂಬ ಕಾರಣಕ್ಕೆ ಎಸ್‌ಐಟಿ (ವಿಶೇಷ ತನಿಖಾ ತಂಡ) ರಚಿಸಲಾಗಿದೆ. ವರದಿ ಬಂದ ನಂತರ ಯಾರ ಪಾತ್ರವೇನಿದೆ ಎಂಬುದು ತಿಳಿಯಲಿದೆ ಎಂದು ಹೇಳಿದರು.

Read More
Next Story