ಬಾಕಿ ಕಡತಗಳ ವಿಲೇವಾರಿಗೆ ಡಿಸಿಎಂ ಸೂಚನೆ: ಜನತೆ ಸೇವೆಗಳಿಗೆ ವೇಗ ನೀಡಲು ನಿರ್ದೇಶನ
x

ಬಾಕಿ ಕಡತಗಳ ವಿಲೇವಾರಿಗೆ ಡಿಸಿಎಂ ಸೂಚನೆ: ಜನತೆ ಸೇವೆಗಳಿಗೆ ವೇಗ ನೀಡಲು ನಿರ್ದೇಶನ

ಕಂದಾಯ ಇಲಾಖೆ ಸಹಾಯಕ ಆಯುರು ತಮ್ಮ ವ್ಯಾಪ್ತಿಯಲ್ಲಿ ಬರುವ ಕಂದಾಯ ಪ್ರಕರಣಗಳನ್ನು ಹೆಚ್ಚು ಕ್ರಿಯಾಶೀಲವಾಗಿ ನಿರ್ವಹಿಸಿದರೆ, ಜಿಲ್ಲಾಧಿಕಾರಿಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ.


Click the Play button to hear this message in audio format

ಕಂದಾಯ ಇಲಾಖೆಯು ಸರ್ಕಾರದ ಆಡಳಿತದ ಬೆನ್ನೆಲುಬಾಗಿದೆ. ಈ ಇಲಾಖೆಯು ಹೆಚ್ಚು ದಕ್ಷ, ಪಾರದರ್ಶಕ ಮತ್ತು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕೆಂಬ ಉದ್ದೇಶದಿಂದ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ವಿಧಾನಸೌಧದಲ್ಲಿ ಕಂದಾಯ ಇಲಾಖೆಯ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ, ಸಾರ್ವಜನಿಕ ಸೇವೆಗಳ ವಿತರಣೆ ಮತ್ತು ಆಡಳಿತಾತ್ಮಕ ಸವಾಲುಗಳ ಕುರಿತು ಸುದೀರ್ಘ ಚರ್ಚೆ ನಡೆಸಿದ ಅವರು, ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.

ಆಡಳಿತ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಉಪಮುಖ್ಯಮಂತ್ರಿಗಳು ಪ್ರಮುಖ ಘೋಷಣೆ ಮಾಡಿದ್ದಾರೆ. ಕಂದಾಯ ಇಲಾಖೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಾಯಕ ಆಯುಕ್ತರಿಗೆ ಹೆಚ್ಚಿನ ಜವಾಬ್ದಾರಿ ನೀಡಬೇಕು ಎಂದು ಅವರು ಪ್ರತಿಪಾದಿಸಿದರು. ತಳಮಟ್ಟದ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸುವ ಸಹಾಯಕ ಆಯುಕ್ತರು ತಮ್ಮ ವ್ಯಾಪ್ತಿಯಲ್ಲಿ ಬರುವ ಕಂದಾಯ ಪ್ರಕರಣಗಳನ್ನು ಹೆಚ್ಚು ಕ್ರಿಯಾಶೀಲವಾಗಿ ನಿರ್ವಹಿಸಿದರೆ, ಜಿಲ್ಲಾಧಿಕಾರಿಗಳ ಮೇಲಿನ ಒತ್ತಡ ಕಡಿಮೆಯಾಗುವುದಲ್ಲದೆ, ಸಮಸ್ಯೆಗಳು ಸ್ಥಳೀಯ ಮಟ್ಟದಲ್ಲೇ ಪರಿಹಾರವಾಗುತ್ತವೆ ಎಂದರು.

ಕಚೇರಿಗಳಲ್ಲಿ ಕಡತಗಳು ಧೂಳು ತಿನ್ನುವಂತಾಗಬಾರದು ಎಂದು ಎಚ್ಚರಿಸಿದ ಅವರು, ಬಾಕಿ ಉಳಿದಿರುವ ಎಲ್ಲಾ ಕಡತಗಳನ್ನು ಶೀಘ್ರ ವಿಲೇವಾರಿ ಮಾಡುವಂತೆ ನಿರ್ದೇಶನ ನೀಡಿದರು. ಸಾರ್ವಜನಿಕರು ತಮ್ಮ ಕೆಲಸಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಪದೇ ಪದೇ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ಕಡತ ವಿಲೇವಾರಿಯಲ್ಲಿ ವಿಳಂಬವಾಗುತ್ತಿದ್ದರೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಭೂಮಾಪಕರ ಸಮಸ್ಯೆಗಳಿಗೆ ಪರಿಹಾರ

ಕಂದಾಯ ಇಲಾಖೆಯ ಪ್ರಮುಖ ಅಂಗವಾಗಿರುವ ಭೂಮಾಪಕರ ಸಮಸ್ಯೆಗಳ ಬಗ್ಗೆಯೂ ಡಿಸಿಎಂ ವಿಶೇಷ ಗಮನ ಹರಿಸಿದರು. ಪರವಾನಗಿ ಪಡೆದ ಭೂಮಾಪಕರು ಎದುರಿಸುತ್ತಿರುವ ತಾಂತ್ರಿಕ ಮತ್ತು ವೃತ್ತಿಪರ ಸಮಸ್ಯೆಗಳ ಕುರಿತು ಚರ್ಚಿಸಿದ ಅವರು, ಅವರ ಬೇಡಿಕೆಗಳನ್ನು ಆಲಿಸಲು ಕೂಡಲೇ ಸಭೆ ಕರೆಯಬೇಕು ಎಂದು ಸೂಚಿಸಿದರು. ಭೂಮಾಪಕರಿಗೆ ಸೂಕ್ತ ವೇದಿಕೆ ಕಲ್ಪಿಸಿ, ಅವರ ಅಹವಾಲುಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸುವ ಮೂಲಕ ಭೂ ದಾಖಲೆಗಳ ಸರ್ವೇ ಕಾರ್ಯದಲ್ಲಿ ವೇಗ ಮತ್ತು ನಿಖರತೆ ತರಬೇಕು ಎಂದು ನಿರ್ದೇಶನ ನೀಡಿದರು. ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಬದ್ಧವಾಗಿದೆ. ನೇಮಕಾತಿ ಪ್ರಕ್ರಿಯೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ತಿಳಿಸಿದರು. ಜತೆಗೆ, ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ನೀಡಲಾಗುವ ಬಡ್ತಿ ಪ್ರಕ್ರಿಯೆಯಲ್ಲಿ ಯಾವುದೇ ವಿಳಂಬವಾಗಬಾರದು ಎಂದರು. "ಜೇಷ್ಠತಾ ಪಟ್ಟಿಯನ್ನು ಸಕಾಲದಲ್ಲಿ ಪ್ರಕಟಿಸಿ, ಯಾವುದೇ ರೀತಿಯ ಗೊಂದಲಗಳಿಲ್ಲದೆ, ನಿಯಮಾನುಸಾರ ಪಾರದರ್ಶಕವಾಗಿ ಬಡ್ತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಡಿಜಿಟಲೀಕರಣ ಹಾಗೂ ಆನ್‌ಲೈನ್ ಸೇವೆಗಳ ಬಲವರ್ಧನೆ

ಇ-ಪೌತಿ, ಖಾತೆ ಬದಲಾವಣೆ, ಮ್ಯೂಟೇಷನ್ ಮೊದಲಾದ ಸಾರ್ವಜನಿಕ ಸೇವೆಗಳು ತಂತ್ರಜ್ಞಾನದ ಮೂಲಕ ಸರಳೀಕರಣಗೊಳ್ಳಬೇಕು. ಸರ್ಕಾರದ ಸೇವೆಗಳು ಆನ್‌ಲೈನ್ ಮೂಲಕ ಸುಲಭವಾಗಿ ಸಿಗುವಂತಾಗಬೇಕು. ನಿಗದಿತ ಕಾಲಮಿತಿಯೊಳಗೆ ಈ ಸೇವೆಗಳನ್ನು ಒದಗಿಸುವ ಮೂಲಕ ನಾಗರಿಕರಿಗೆ ಸರ್ಕಾರಿ ಕಚೇರಿಗಳ ಮೇಲೆ ವಿಶ್ವಾಸ ಮೂಡಿಸಬೇಕು. ಭೂ ದಾಖಲೆಗಳ ನಿರ್ವಹಣೆಯಲ್ಲಿ ಡಿಜಿಟಲ್ ತಂತ್ರಜ್ಞಾನದ ಬಳಕೆಯು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಹಕಾರಿಯಾಗಲಿದೆ. ಸರ್ವೇ ಕಾರ್ಯಗಳು, ಪಹಣಿ ತಿದ್ದುಪಡಿ ಸೇರಿದಂತೆ ಕಂದಾಯ ಇಲಾಖೆಗೆ ಸಂಬಂಧಿಸಿದ ನಿತ್ಯದ ಕೆಲಸಗಳಲ್ಲಿ ಉಂಟಾಗುವ ವಿಳಂಬವನ್ನು ಕಡಿಮೆ ಮಾಡಲು ನಿರಂತರ ಮೇಲ್ವಿಚಾರಣೆ ಅತ್ಯಗತ್ಯ. ಅಧಿಕಾರಿಗಳು ಕೇವಲ ಕಚೇರಿಯಲ್ಲೇ ಕುಳಿತು ಕೆಲಸ ಮಾಡದೆ, ಕ್ಷೇತ್ರ ಮಟ್ಟದಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಸೂಚಿಸಿದರು.

Read More
Next Story